ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಿರ್ಧಾರಕ್ಕೆ ಒಕ್ಕಲಿಗರ ಆಕ್ರೋಶ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಂದ ರಾಜೀನಾಮೆ ಪಡೆಯುವ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಒಕ್ಕಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯ 18 ಒಕ್ಕಲಿಗ ಶಾಸಕರು ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಈ ನಡುವೆ, `ಒಕ್ಕಲಿಗರ ಸಂಘ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ~ ಎಂದು ದಾಸರಹಳ್ಳಿ ಶಾಸಕ ಮುನಿರಾಜು, ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಬದಲಾವಣೆ ವಿರೋಧಿಸಿ ರಾಜ್ಯ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಜನಜಾಗೃತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಸಿಎಂ ರಾಜೀನಾಮೆ ಪಡೆಯುವ ಕ್ರಮವನ್ನು ವಿರೋಧಿಸಿ ಒಕ್ಕಲಿಗರ ಸಂಘದಿಂದ ಪುರಭವನದವರೆಗೆ ಮೆರವಣಿಗೆಯಲ್ಲಿ ಸಾಗಿದ ಒಕ್ಕಲಿಗ ಮುಖಂಡರು ಅಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ `ಶಕ್ತಿ ಪ್ರದರ್ಶನ~ ನಡೆಸಿದರು. ಇದರಿಂದಾಗಿ ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು.

ಬಳಿಕ ಪುರಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ತೆರಳಿ ರಾಜ್ಯಪಾಲರು ಹಾಗೂ ಡಿ.ವಿ. ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಲು ಮುಂದಾದರು. ಇದಕ್ಕೆ ಪೊಲೀಸರು ಆರಂಭದಲ್ಲಿ ಅವಕಾಶ ನಿರಾಕರಿಸಿದರು.

ಆದರೆ, ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಕೊನೆಗೆ `ಕುಮಾರಕೃಪಾ~ದ ವರೆಗೆ ಮೆರವಣಿಗೆಯಲ್ಲಿ ತೆರಳಲು ಅವಕಾಶ ಕಲ್ಪಿಸಲಾಯಿತು. ಇದೇ ವೇಳೆ ಶಾಸಕ ಶಂಕರಲಿಂಗೇಗೌಡ ಅವರು ಪ್ರತಿಭಟನಾನಿರತರನ್ನು ಸೇರಿಕೊಂಡರು. ಸದಾನಂದಗೌಡ ಅವರನ್ನು ಭೇಟಿ ಮಾಡಿದ ಮುಖಂಡರು ಮುಖ್ಯಮಂತ್ರಿ ಸ್ಥಾನ ತ್ಯಜಿಸದಂತೆ ಮನವಿ ಸಲ್ಲಿಸಿದರು. 

`ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲಿ ಒಕ್ಕಲಿಗರನ್ನು ಹೀನಾಯ ನಡೆಸಿಕೊಳ್ಳಲಾಗುತ್ತಿದ್ದು, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಮಂಗಳವಾರ ಭೇಟಿ ಮಾಡಿ ಹೋರಾಟಕ್ಕೆ ಸ್ಪಷ್ಟ ದಿಕ್ಕು ನೀಡಲು ತೀರ್ಮಾನಿಸಲಾಗಿದೆ. ಬಿಜೆಪಿಯ ಎಲ್ಲಾ ಒಕ್ಕಲಿಗ ಶಾಸಕರು ಈ ಸಭೆಗೆ ಹಾಜರಿರಬೇಕು. ಸಭೆಗೆ ಗೈರು ಹಾಜರಾದವರನ್ನು ಒಕ್ಕಲಿಗರೇ ಅಲ್ಲ ಎಂಬುದಾಗಿ ತೀರ್ಮಾನಿಸುತ್ತೇವೆ~ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಸಿದರು.

`10 ದಿನಗಳ ಹಿಂದೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದಿಲ್ಲ ಎಂಬುದಾಗಿ ಭರವಸೆ ನೀಡಿತ್ತು. ಈಗ ಹೈಕಮಾಂಡ್ ವಚನಭ್ರಷ್ಟ ಆಗಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಾರದೆಂದು ಆಗ್ರಹಿಸಿ ಒಕ್ಕಲಿಗರ ಸಂಘದ ಸದಸ್ಯರು ಸೋಮವಾರ ಸಂಜೆ ಗೃಹ ಕಚೇರಿ `ಕೃಷ್ಣಾ~ದಲ್ಲಿ ಡಿ.ವಿ. ಸದಾನಂದ ಗೌಡರಿಗೆ ಮನವಿ ಸಲ್ಲಿಸಿದರು.
ಈ ಮಧ್ಯೆ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ, ಶಾಸಕ ಸುರೇಶ್‌ಗೌಡ ವಿರುದ್ಧ ಒಕ್ಕಲಿಗ ಮುಖಂಡರು ಸಭೆಯಲ್ಲಿ ಕಿಡಿಕಾರಿ ವಿರುದ್ಧ ಘೋಷಣೆ ಕೂಗಿದರು.

 ನಮ್ಮ ಕಡೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ರಾಜೀನಾಮೆ ಪಡೆಯುವಾಗಲೂ ಇಷ್ಟು ಹೀನಾಯವಾಗಿ ನಡೆಸಿಕೊಳ್ಳುವುದಿಲ್ಲ. ಬಿಜೆಪಿ ಹೈಕಮಾಂಡ್ ಮಾಡಿರುವ ತಪ್ಪನ್ನು ತಿದ್ದಿಕೊಂಡು ಸದಾನಂದಗೌಡರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಬೇಕು~ ಎಂದು ಅವರು ಆಗ್ರಹಿಸಿದರು.

`ಒಕ್ಕಲಿಗರಿಗೆ ದಶಾವತಾರ ತೋರಿಸಲು ಗೊತ್ತಿದೆ. ಇತ್ತೀಚೆಗೆ ಸಮಾವೇಶ ನಡೆಸುವ ಮೂಲಕ ಒಂದು ಅವತಾರ ತೋರಿಸಲಾಗಿದೆ. ವಿಶ್ವರೂಪ ದರ್ಶನ ಬಾಕಿ ಇದೆ. ಬಿಜೆಪಿ ಹೈಕಮಾಂಡ್ ಹುಡುಗಾಟಿಕೆ ಮುಂದುವರಿಸಿದರೆ ವಿಶ್ವರೂಪ ದರ್ಶನ ತೋರಿಸುತ್ತೇವೆ~ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

`ಒಕ್ಕಲಿಗರನ್ನು ಈ ರೀತಿಯಾಗಿ ಹೀನಾಯವಾಗಿ ನಡೆಸಿಕೊಳ್ಳಲು ಒಕ್ಕಲಿಗರೇ ಕಾರಣ. ಈಗ ಯಾರನ್ನೂ ದೂರುವುದು ಬೇಡ. ಕಾಲವೇ ಅವರಿಗೆ ತಕ್ಕ ಉತ್ತರ ನೀಡುತ್ತದೆ. ಒಕ್ಕಲಿಗರು ಈಗ ಭಾವಾವೇಶದಿಂದ ಕೂಗಾಡುತ್ತಾರೆ ಎಂಬುದಾಗಿ ಭಾವಿಸಿದ್ದಾರೆ. ಎರಡು-ಮೂರು ದಿನಗಳಿಂದ ಒಕ್ಕಲಿಗರ ಅಖಂಡತೆಯನ್ನು ಒಡೆಯುವ ಕೆಲಸ ಒಕ್ಕಲಿಗ ಮುಖಂಡರಿಂದಲೇ ಆಗಿದೆ. ಬಿಜೆಪಿ ಹೈಕಮಾಂಡ್ ದಲಿತ ಮುಖಂಡರನ್ನು ಮುಖ್ಯಮಂತ್ರಿ ಮಾಡಬೇಕಿತ್ತು~ ಎಂದು ಅವರು ಅಭಿಪ್ರಾಯಪಟ್ಟರು.

 ಒಕ್ಕಲಿಗರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ: `ನಾನೊಬ್ಬ ಸಾಮಾನ್ಯ ಯುವಕನಾಗಿದ್ದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದೆ. ಒಕ್ಕಲಿಗರಿಂದಾಗಿ ನಾನು ಶಾಸಕನಾದೆ. ನಾವೇನು ಹೇಡಿಗಳಲ್ಲ. ಒಕ್ಕಲಿಗರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ. ಒಕ್ಕಲಿಗರ ಸಂಘ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ~ ಎಂದು ಶಾಸಕ ಮುನಿರಾಜು ಸ್ಪಷ್ಟಪಡಿಸಿದರು.

`ಡಿ.ವಿ. ಸದಾನಂದ ಗೌಡ ಅವರು ಪ್ರಾಮಾಣಿಕರು. ಯಾವ ತಪ್ಪೂ ಮಾಡದ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಬ್ಲ್ಯಾಕ್‌ಮೇಲ್ ಮಾಡುವವರಿಗೆ ಹೈಕಮಾಂಡ್ ಮಣೆ ಹಾಕಿದೆ. ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಬೆಲೆ ನೀಡಿದರೆ ಅವರು ಮಾಡಿದ್ದೆಲ್ಲಾ ಸರಿ ಎಂದಾಗುತ್ತದೆ.

ನಮಗೆಲ್ಲ ಅವಮಾನ ಮಾಡಲಾಗಿದ್ದು, ಅವಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾವು ರಾಜಕೀಯ ಸ್ಥಾನಮಾನಕ್ಕಾಗಿ ಆಸೆ ಪಟ್ಟವರಲ್ಲ. ರಾಜೀನಾಮೆ ನೀಡಬೇಕು ಎಂದು ಸಂಘ ತಿಳಿಸಿದರೆ ಅದಕ್ಕೂ ಸಿದ್ಧ~ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಕೂಡ ಪ್ರಕಟಿಸಿದರು.

ಸಿದ್ದರಾಮ ಚೈತನ್ಯ ಸ್ವಾಮೀಜಿ ಹಾಗೂ ಶಾಂತಿನಾಥ ಸ್ವಾಮೀಜಿ ಅವರು `ಒಕ್ಕಲಿಗರು ಒಗ್ಗಟ್ಟು ಪ್ರದರ್ಶಿಸಬೇಕು. ಸಮುದಾಯದ ಶಾಸಕರೆಲ್ಲ ರಾಜೀನಾಮೆ ನೀಡಬೇಕು~ ಎಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಬಿಜೆಪಿ ಹೈಕಮಾಂಡ್ ಕ್ರಮವನ್ನು ಖಂಡಿಸಿ ಮಾತನಾಡಿದರು.

`ಬೆಂಗಳೂರು ಬಂದ್, ಕಪ್ಪು ಬಾವುಟ ಪ್ರದರ್ಶನ~

`ಡಿ.ವಿ. ಸದಾನಂದ ಗೌಡ ಅವರಿಂದ ರಾಜೀನಾಮೆ ಪಡೆದ ಕ್ರಮವನ್ನು ವಿರೋಧಿಸಿ ಬೆಂಗಳೂರು ಬಂದ್ ನಡೆಸಬೇಕು. ಜಗದೀಶ ಶೆಟ್ಟರ ಅವರು ಪ್ರಮಾಣವಚನ ಸ್ವೀಕರಿಸುವಾಗ ಕಪ್ಪು ಬಾವುಟ ಹಾರಿಸಬೇಕು. ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಮಂಡಿಸಬೇಕು~ ಎಂದು ಒಕ್ಕಲಿಗ ಮುಖಂಡರು ಸಭೆಯಲ್ಲಿ ಸಲಹೆ ನೀಡಿದರು.

 

ಒಕ್ಕಲಿಗ ಮುಖಂಡ ಕಾಳೇಗೌಡ ಮಾತನಾಡಿ, `ಜಗದೀಶ ಶೆಟ್ಟರ ಪ್ರಮಾಣವಚನದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಬೇಕು~ ಎಂದರು. ಡಾ. ಅಪ್ಪಾಜಿಗೌಡ ಮಾತನಾಡಿ, `ಅಂದು ಒಕ್ಕಲಿಗರ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಿ ಜನಜಾಗೃತಿ ಸಭೆ ನಡೆಸಬೇಕು~ ಎಂದು ಸಲಹೆ ನೀಡಿದರು. `ಬೆಂಗಳೂರು ಬಂದ್ ನಡೆಸಬೇಕು~ ಎಂದು ಮುಖಂಡ ಮುನಿಯಪ್ಪ ಸೇರಿದಂತೆ ಹಲವರು ಸಲಹೆ ನೀಡಿದರು.  `ಬೆಂಗಳೂರು ಬಂದ್‌ಗೆ ಕರೆ ನೀಡಲು ಸಿದ್ಧ. ಒಕ್ಕಲಿಗ ಮುಖಂಡರು ಅಂಗಡಿಗಳಿಗೆ ಬಾಗಿಲು ಹಾಕಿಸಬೇಕು~ ಎಂದು ನಂಜಾವಧೂತ ಸ್ವಾಮೀಜಿ ಕಿವಿಮಾತು ಹೇಳಿದರು.

ಅಶೋಕ, ಸುರೇಶ್‌ಗೌಡ ವಿರುದ್ಧ ಕಿಡಿ

ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ, ಶಾಸಕ ಸುರೇಶ್‌ಗೌಡ ವಿರುದ್ಧ ಒಕ್ಕಲಿಗ ಮುಖಂಡರು ಸಭೆಯಲ್ಲಿ ಕಿಡಿಕಾರಿ ಅವರ ವಿರುದ್ಧ ಘೋಷಣೆ ಕೂಗಿದರು. `ನಾವ್ಯಾರು ಅಶೋಕ ಅವರ ವಿರೋಧಿಗಳಲ್ಲ. ಅವರು ಮುಖ್ಯಮಂತ್ರಿಗಳಾಗಬೇಕು ಎಂಬುದು ನಮ್ಮ ಆಶಯ.
 
ಆದರೆ, ಅವರು ಗ್ರಾಮ ಕರಣಿಕ ಆಗಬೇಕು ಎಂದು ಬಯಸುತ್ತಿರುವುದು ಸರಿಯಲ್ಲ~ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.  `ಒಕ್ಕಲಿಗರ ಬಗ್ಗೆ ಗೌರವಯುತವಾಗಿ ಮಾತನಾಡಬೇಕು. ಸುರೇಶ್‌ಗೌಡ ಮಾತನಾಡುವುದನ್ನು ಮನೆಯೊಳಗೆ ಮಾತನಾಡಲಿ. ಇನ್ನು ಮುಂದೆ ಅವಹೇಳನಕಾರಿಯಾಗಿ ಮಾತನಾಡಿದರೆ ಸೂಕ್ತ ಉತ್ತರ ನೀಡುತ್ತೇವೆ~ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದರು.

`ಒಕ್ಕಲಿಗ ಶಾಸಕರೆಲ್ಲ ಡಿ.ವಿ. ಸದಾನಂದಗೌಡ ಪರ  ಹೋರಾಟ ಮಾಡಿದ್ದರೆ ರಾಜೀನಾಮೆ ಪ್ರಮೇಯ ಎದುರಾಗುತ್ತಿರಲಿಲ್ಲ. ಈಗಿನ ಹೋರಾಟಕ್ಕೆ ಒಕ್ಕಲಿಗರೆಲ್ಲ ಬೆಂಬಲ ನೀಡಬೇಕು~ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ವಿನಂತಿಸಿದರು. `ಒಕ್ಕಲಿಗರ ಸಂಘದ ನಿರ್ದೇಶಕರಾಗಿರುವ ಶಾಸಕ ಸುರೇಶ್‌ಗೌಡ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಬೇಕು~ ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT