ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಿಕ್ಕಟ್ಟು: ಗಡ್ಕರಿಗೆ ದೂರು

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ರಾಜ್ಯ ಸರ್ಕಾರ ನೀಡಿರುವ ಪ್ರತಿಕ್ರಿಯೆಯಿಂದ ತೀವ್ರ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಬಳಿ ದೂರು ತೆಗೆದುಕೊಂಡು ಹೋಗಿದೆ.

ದಿಢೀರ್ ಬೆಳವಣಿಗೆಯಲ್ಲಿ ಯಡಿಯೂರಪ್ಪ ಬಣದ ಐವರು ಸಚಿವರು ಭಾನುವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ನಾಗ್ಪುರಕ್ಕೆ ತೆರಳಿ ಗಡ್ಕರಿ ಅವರ ಮುಂದೆ ತಮ್ಮ ಅತೃಪ್ತಿ ತೋಡಿಕೊಂಡಿದ್ದಾರೆ. ನಾಗ್ಪುರಕ್ಕೆ ತೆರಳಿದ್ದ ಸಚಿವರಾದ ಉಮೇಶ ಕತ್ತಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಮುರುಗೇಶ ನಿರಾಣಿ ಮತ್ತು ಎಂ.ಪಿ.ರೇಣುಕಾಚಾರ್ಯ ರಾತ್ರಿಯೇ ನಗರಕ್ಕೆ ವಾಪಸಾದರು.

`ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರೂ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಿಇಸಿ ನೀಡಿದ್ದ ನೋಟಿಸ್‌ಗೆ ಸಮರ್ಪಕ ಉತ್ತರ ನೀಡಿಲ್ಲ. ಅವರ ರಕ್ಷಣೆಗೆ ಪೂರಕವಾದ ಉತ್ತರವನ್ನು ಸರ್ಕಾರ ಸಲ್ಲಿಸಿದೆ. ನಮ್ಮದೇ ಸರ್ಕಾರ ಪ್ರತಿಪಕ್ಷಗಳ ಮುಖಂಡರನ್ನು ರಕ್ಷಿಸಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.

ಇಂತಹವರನ್ನು (ಸದಾನಂದಗೌಡ) ಇಟ್ಟುಕೊಂಡು ಸರ್ಕಾರ ನಡೆಸಿದರೆ ಭವಿಷ್ಯದಲ್ಲಿ ಪಕ್ಷ ಸದೃಢವಾಗಿ ಬೆಳೆಯಲು ಸಾಧ್ಯವೇ~ ಎಂದೂ ಈ ಸಚಿವರು ಗಡ್ಕರಿ ಮುಂದೆ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.
ಬಿಜೆಪಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೋರಿದರೆ ಕಡೆಗಣಿಸುತ್ತಾರೆ.

ಈ ವಿಷಯದಲ್ಲಿ ಪ್ರತಿಪಕ್ಷಗಳ ಶಾಸಕರಿಗೆ ಉದಾರವಾಗಿ ಸಹಾಯ ಮಾಡುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ನಾಯಕತ್ವ ಬದಲಾವಣೆಗೆ ಇದು ಸಕಾಲ. ಸಚಿವ ಜಗದೀಶ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮನವಿ ಮಾಡಿದರು ಎಂದು ಗೊತ್ತಾಗಿದೆ.

ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಯಡಿಯೂರಪ್ಪ ಅವರ ವಿರೋಧ ಇಲ್ಲ. ಇದಕ್ಕೆ ಶಾಸಕರ ಬೆಂಬಲ ಕೂಡ ಇದೆ. ಆದಷ್ಟು ಬೇಗ ಶಾಸಕಾಂಗ ಪಕ್ಷದ ಸಭೆ ಕರೆದು ಈ ಕುರಿತು ಅಭಿಪ್ರಾಯ ಸಂಗ್ರಹಿಸಬೇಕು ಎಂದೂ ಆಗ್ರಹಿಸಿದ್ದಾರೆ. ಸಚಿವರಿಂದ ವಿವರವಾಗಿ ಮಾಹಿತಿ ಪಡೆದ ಗಡ್ಕರಿ ಅವರು, ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಉದಾಸಿ ಮನೆಯಲ್ಲಿ ಸಭೆ: ಇದೇ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಮಂಗಳವಾರ ಶಾಸಕರ ಸಭೆ ಕರೆದಿದ್ದಾರೆ. ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ನಿವಾಸದಲ್ಲಿ ಈ ಬಾರಿ ಶಾಸಕರ ಸಭೆ ನಡೆಯಲಿದೆ. ಸಭೆಗೆ ಬರುವಂತೆ ದೂರವಾಣಿ ಕರೆಮಾಡಿ ಎಲ್ಲ ಶಾಸಕರಿಗೂ ಆಹ್ವಾನ ನೀಡಲಾಗುತ್ತಿದೆ. ಮಂಗಳವಾರ ಬೆಳಿಗ್ಗೆ ಉಪಾಹಾರ ಕೂಟದ ಸಭೆ ನಡೆಯಲಿದೆ ಎಂದು ಶಾಸಕರಿಗೆ ತಿಳಿಸಲಾಗುತ್ತಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಒಟ್ಟು 11 ಸ್ಥಾನಗಳಲ್ಲಿ ಆರು ಸ್ಥಾನಗಳು ಬಿಜೆಪಿಗೇ ಲಭ್ಯವಾಗಲಿವೆ. ಅದರಲ್ಲಿ ಕನಿಷ್ಠ 4 ಸ್ಥಾನ ತಾವು ಹೇಳಿದವರಿಗೇ ನೀಡಬೇಕು ಎಂಬುದು ಯಡಿಯೂರಪ್ಪ ಅವರ ಪಟ್ಟು. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸಭೆ ಆಯೋಜಿಸುತ್ತಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT