ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬೆಳೆಸಿದ್ದೇ ಜೆಡಿಎಸ್- ಖರ್ಗೆ

Last Updated 20 ಸೆಪ್ಟೆಂಬರ್ 2011, 8:55 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸಿದ್ದೇ ಜೆಡಿಎಸ್. ಬಿಜೆಪಿ ಮರವಾಗಿ ಬೆಳೆದ ನಂತರ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆರೋಪಿಸುವುದು ಸರಿಯಲ್ಲ ಎಂದು ಕೆಂದ್ರ ಕಾರ್ಮಿಕ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ದೂರಿದರು.

ಅವರು ನಗರದಲ್ಲಿ ಸೋಮವಾರ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯನ್ನು ಇಷ್ಟು ಮಟ್ಟಕ್ಕೆ ಬೆಳೆಯಲು ಕಾರಣವಾಗಿರುವ ಜೆಡಿಎಸ್, ಈ ಸಂಬಂಧ ಕಾಂಗ್ರೆಸ್ಸನ್ನು ದೂರು ಬದಲು ರಾಜ್ಯದ ಜನತೆಗೆ ಸಮರ್ಪಕ ಉತ್ತರ ನೀಡಬೇಕು. ವಿಷ ಬೀಜ ಬಿತ್ತಿ ಒಳ್ಳೆಯ ಫಲ ಬಯಸಿದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಉತ್ತಮ ಆಳ್ವಿಕೆಯ ರಾಜ್ಯ ಎಂಬ ಹಣೆಪಟ್ಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಬಿಜೆಪಿಯೇ ಇದಕ್ಕೆ ಕಾರಣ. ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಹೀಗಾಗಿ ಭ್ರಷ್ಟ ಸರ್ಕಾರ ಕಣಕ್ಕಿಳಿಸಿರುವ ಅಭ್ಯರ್ಥಿಯನ್ನು ಕೊಪ್ಪಳ ಮತಕ್ಷೇತ್ರದ ಜನತೆ ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದಾಗಿ ಸಂಗಣ್ಣ ಕರಡಿ ಹೇಳಿದ್ದಾರೆ. ಈಗ ಯಡಿಯೂರಪ್ಪ ಅಧಿಕಾರದಲ್ಲಿ ಇಲ್ಲ. ಇದಕ್ಕೆ ಸಂಗಣ್ಣ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸುದರ್ಶನ ಚಕ್ರ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಈ ಉಪಚುನಾವಣೆಯಿಂದಲೇ ಸುದರ್ಶನ ಚಕ್ರ ಹೊರಡಲಿದೆ. ಶಿಶುಪಾಲನ ವಧೆಯಾದಂತೆ ಭ್ರಷ್ಟರು ಹಾಗೂ ದುಷ್ಟರಿಗೆ ಈ ಸುದರ್ಶನ ಚಕ್ರ ತಕ್ಕ ಉತ್ತರ ನೀಡಲಿದೆ ಎಂದು ಕೇಂದ್ರದ ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.

ಸಮುದ್ರ ಮಥನದಲ್ಲಿ ಮೊದಲು ವಿಷವೇ ಬಂದು ಕೊನೆಗೆ ಅಮೃತ ಸಿಗುತ್ತದೆ. ಅದೇ ರೀತಿ ಇದುವರೆಗೂ ಬಿಜೆಪಿ ಎಂಬ ವಿಷ ನೋಡಿದ್ದಾಗಿದೆ. ಈ ಉಪಚುನಾವಣೆ ಎಂಬ ಮಥನದಲ್ಲಿ ಕಾಂಗ್ರೆಸ್ ಗೆಲುವೆಂಬ ಅಮೃತ ಹೊರಹೊಮ್ಮಲಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಎಐಸಿಸಿ ಕಾರ್ಯದರ್ಶಿ ಹನುಮಂತರಾವ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಸಚಿವ ಎಚ್.ಕೆ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT