ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಾರ್ಡ್ ಘಟಕದ ಅಧ್ಯಕ್ಷರ ಹತ್ಯೆ

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಕೊಟ್ಟಿಗೆಪಾಳ್ಯ ವಾರ್ಡ್ ಘಟಕದ ಅಧ್ಯಕ್ಷ ಹಾಗೂ ಸಿವಿಲ್ ಗುತ್ತಿಗೆದಾರ ನಾಗರಾಜ್ (36) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಾಗರಬಾವಿಯಲ್ಲಿ ಶುಕ್ರವಾರ ಹಾಡಹಗಲೇ ನಡೆದಿದೆ.

ರಾಜಗೋಪಾಲನಗರ ಸಮೀಪದ ಕೆಂಪೇಗೌಡಲೇಔಟ್ ನಿವಾಸಿಯಾದ ನಾಗರಾಜ್ ಅವರು ನಾಗರಬಾವಿ ಎರಡನೇ ಹಂತದ ಆರನೇ ಅಡ್ಡರಸ್ತೆಯಲ್ಲಿ ಕೈಗೊಂಡಿದ್ದ ರಸ್ತೆ ದುರಸ್ತಿ ಕಾಮಗಾರಿಯ ಸ್ಥಳಕ್ಕೆ ಬಂದಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶೈಲೇಶ್, ರಾಜೇಂದ್ರಪ್ರಸಾದ್, ಸಾಬಯ್ಯ ಮತ್ತು ಮಧು ಎಂಬ ಕೂಲಿ ಕಾರ್ಮಿಕರಿಂದ ಆರನೇ ಅಡ್ಡರಸ್ತೆಯಲ್ಲಿ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿಗಳು ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೈ ಮತ್ತು ತಲೆಗೆ ಹೊಡೆದಿದ್ದಾರೆ. ಈ ಹಂತದಲ್ಲಿ ಅವರ ರಕ್ಷಣೆಗೆ ಧಾವಿಸಿದ ಕೂಲಿ ಕಾರ್ಮಿಕರ ಮೇಲೂ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ನಾಗರಾಜ್ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಸಾಬಯ್ಯ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್ ಒಂದನ್ನು ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಆ ಬೈಕ್‌ನ ನೋಂದಣಿ ಸಂಖ್ಯೆ (ಕೆಎ-02, ಇಎಫ್-3008) ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

`ನಾವೆಲ್ಲ ಕೆಲಸದಲ್ಲಿ ನಿರತರಾಗಿದ್ದೆವು. ಈ ವೇಳೆ ಏಳು ಯುವಕರು ಕೆಲಸದ ಸ್ಥಳಕ್ಕೆ ಬಂದು ನಾಗರಾಜ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಅವರನ್ನು ರಕ್ಷಿಸುವ ಉದ್ದೇಶದಿಂದ ದುಷ್ಕರ್ಮಿಗಳ ಮೇಲೆ ಕಲ್ಲು ತೂರಿದೆವು. ಆದರೆ, ದುಷ್ಕರ್ಮಿಗಳು ನಮ್ಮ ಮೇಲೂ ಹಲ್ಲೆ ನಡೆಸಿ ಪರಾರಿಯಾದರು~ ಎಂದು ಘಟನೆಯ ಪ್ರತ್ಯಕ್ಷದರ್ಶಿ ರಾಜೇಂದ್ರಪ್ರಸಾದ್ ಹೇಳಿದರು.

ಕೊಲೆ ಬೆದರಿಕೆ:  `ಸಮಾಜಕ್ಕೆ ಒಳ್ಳೆಯದು ಮಾಡಲು ಹೋಗಿ ಸಹೋದರ ಬಲಿಯಾಗಿದ್ದಾನೆ.

ಕೆಂಪೇಗೌಡಲೇಔಟ್‌ನ ನಾಣಿ ಮತ್ತು ದಿಲೀಪ್ ಎಂಬುವರು ಹಣಕ್ಕಾಗಿ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದರು. ಅಲ್ಲದೇ ಯುವತಿಯರನ್ನು ಚುಡಾಯಿಸುತ್ತಿದ್ದರು ಮತ್ತು ಮಹಿಳೆಯರ ಸರಗಳನ್ನು ದೋಚುತ್ತಿದ್ದರು. ಈ ಸಂಬಂಧ ನನ್ನ ತಮ್ಮ ಪೊಲೀಸರಿಗೆ ದೂರು ಕೊಟ್ಟಿದ್ದ. ಈ ಕುರಿತು ಅವರಿಬ್ಬರೂ ನನ್ನ ತಮ್ಮನ ಜತೆ ನಾಲ್ಕು ತಿಂಗಳ ಹಿಂದೆ ಜಗಳವಾಡಿ ಕೊಲೆ ಬೆದರಿಕೆ ಹಾಕಿದ್ದರು~ ಎಂದು ನಾಗರಾಜ್ ಅವರ ಅಣ್ಣ ವೆಂಕಟೇಶ್‌ಬಾಬು `ಪ್ರಜಾವಾಣಿ~ಗೆ ತಿಳಿಸಿದರು.

`ಆ ಸಂದರ್ಭದಲ್ಲಿ ಪೊಲೀಸರು ನಾಣಿ ಮತ್ತು ಸಹಚರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಈ ಕಾರಣಕ್ಕಾಗಿ ನಾಣಿ ಮತ್ತು ಸಹಚರರು ಸಹೋದರನನ್ನು ಕೊಲೆ ಮಾಡಿದ್ದಾರೆ~ ಎಂದು ಆರೋಪಿಸಿದರು.
ರಾಜಕೀಯ ದ್ವೇಷ: `ಪಕ್ಷದ ವತಿಯಿಂದ ಪುರಭವನದ ಬಳಿ ಆಯೋಜಿಸಿದ್ದ ಪ್ರತಿಭಟನೆಗೆ ಬರುವುದಾಗಿ ನಾಗರಾಜ್ ಹೇಳಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಕೆಲಸವಿದೆ ಎಂದು ಹೇಳಿ ನಾಗರಬಾವಿಗೆ ಹೋಗಿದ್ದರು. ಪ್ರತಿಭಟನೆಗೆ ಬಂದಿದ್ದರೆ ಬದುಕುಳಿಯುತ್ತಿದ್ದರು~ ಎಂದು ಪಾಲಿಕೆಯ ಕೊಟ್ಟಿಗೆಪಾಳ್ಯ ವಾರ್ಡ್‌ನ ಸದಸ್ಯ ಎಸ್.ವೆಂಕಟೇಶ್‌ಬಾಬು ಅಭಿಪ್ರಾಯಪಟ್ಟರು.

`ನಾರಾಯಣ ಅಲಿಯಾಸ್ ನಾಣಿ, ಪಾಲಿಕೆ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಅವರ ಬೆಂಬಲಿಗ. ನಾಗರಾಜ್ ನನಗೆ ತುಂಬಾ ಆಪ್ತ. ರಾಜಕೀಯ ದ್ವೇಷಕ್ಕಾಗಿ ಈ ಕೊಲೆ ಮಾಡಿರುವ ಸಾಧ್ಯತೆ ಇದೆ~ ಎಂದು ದೂರಿದರು.

ಶಿವಕುಮಾರಿ ಎಂಬುವರನ್ನು ವಿವಾಹವಾಗಿದ್ದ ನಾಗರಾಜ್ ಅವರಿಗೆ, ಚರಣ್ ಮತ್ತು ರುಚಿತಾ ಎಂಬ ಮಕ್ಕಳಿದ್ದಾರೆ. ಬಿಜೆಪಿ ಶಾಸಕ ಎಂ.ಶ್ರೀನಿವಾಸ್ ಅವರು ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT