ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಾಧನೆ ಅಲ್ಪ, ಪ್ರಚಾರವೇ ಹೆಚ್ಚು

Last Updated 4 ಸೆಪ್ಟೆಂಬರ್ 2013, 6:50 IST
ಅಕ್ಷರ ಗಾತ್ರ

ಕುಷ್ಟಗಿ: ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡದೆ ನೂರು ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ಸಾಧನೆ ಮಾಡಿದೆ. ಆದರೆ ಈ ಹಿಂದಿನ ಬಿಜೆಪಿ ಸರ್ಕಾರದ ಸಾಧನೆ ಅಲ್ಪವಾದರೂ ಪ್ರಚಾರ ಮಾತ್ರ ಜೋರಾಗಿತ್ತು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇದೆ, ಕಾರ್ಯಕರ್ತರು ಸದರಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ಐತಿಹಾಸಿ ನಿರ್ಧಾರಗಳು ಮತ್ತು ಜನಪರ ಯೋಜನೆಗಳನ್ನು ಜನರ ಮನೆಮನೆಗೆ ತಲುಪಿಸುವ ಕೆಲಸದಲ್ಲಿ ಮುತುವರ್ಜಿ ವಹಿಸಬೇಕಿದೆ ಎಂದರು.

ಈ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲ ಎಂಬ ಕಾರಣಕ್ಕೆ ಧೃತಿಗೆಡಬಾರದು, ಅಮರೇಗೌಡ ಬಯ್ಯಾಪುರ ಈಗ ಮತ್ತಷ್ಟು ಕ್ರಿಯಾಶೀಲರಾಗುವ ಮೂಲಕ ಕಾರ್ಯಕರ್ತರಲ್ಲಿನ ಅನಾಥಪ್ರಜ್ಞೆ ದೂರಮಾಡಿದ್ದಾರೆ. ತಾವೂ ಸಹ ಅವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಪಕ್ಷದ ಕಾರ್ಯಕರ್ತರನ್ನು ಖುದ್ದಾಗಿ ಭೇಟಿ ನೀಡಿ ಸಲಹೆಗಳನ್ನು ಪಡೆಯುತ್ತಿರುವುದಾಗಿ ಹೇಳಿದರು.

ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ, ರಸ್ತೆ ಮೂಲಸೌಲಭ್ಯಗಳನ್ನು ಕಲ್ಪಿಸುವ ವಿಷಯದಲ್ಲಿ ಹೆಚ್ಚಿನ ಆದ್ಯತೆ ನೀಡುವಂತಾಗಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಸಚಿವ ತಂಗಡಗಿ ಅವರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ.ಜನಾರ್ಧನ, ದೇವೇಂದ್ರಪ್ಪ ಬಳೂಟಗಿ, ಇಂದಿರಾ ಭಾವಿಕಟ್ಟಿ, ಶಾಹಮೀದ ದೋಟಿಹಾಳ, ವೈಜನಾಥ ಪಾಟೀಲ, ಎಂ.ಡಿ.ಅಸ್ಲಾಂ ಸೇರಿದಂತೆ ಅನೇಕ ಪ್ರಮುಖರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಭೋವಿ ಸಮಾಜ ಹಾಗೂ ಪಕ್ಷದ ಪುರಸಭೆ ಸದಸ್ಯರ ಪರವಾಗಿ ಸಚಿವ ತಂಗಡಗಿ ಅವರನ್ನು ಸನ್ಮಾನಿಸಲಾಯಿತು.

ಶಿವಶಂಕರಗೌಡ ಕಡೂರು, ಬಾಬುಸಾಬ್ ಮೆಣೆದಾಳ, ಶಕುಂತಲಮ್ಮ ಹಿರೇಮಠ, ರಹೀಂಸಾಬ್ ಮುಲ್ಲಾ, ಸಹದೇವಪ್ಪ ಅಬ್ಬಿಗೇರಿ, ದೊಡ್ಡಯ್ಯ ಗದ್ದಡಕಿ, ಮಹಾಂತೇಶ ಅಗಸಿಮುಂದಿನ, ಜೂಗನಗೌಡ ಕೋಳೂರು, ಯಲ್ಲಪ್ಪ ಬಾಗಲಿ ಮೊದಲಾದವರು ವೇದಿಕೆಯಲ್ಲಿದ್ದರು. ಕೇದಾರನಾಥ ತುರಕಾಣಿ ನಿರೂಪಿಸಿ ವಂದಿಸಿದರು.

ತಡವಾಗಿ ಬಂದ ತಂಗಡಗಿ
ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿನ ಸರ್ಕಾರಿ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ ಸಚಿವ ತಂಗಡಗಿ ಐದು ತಾಸು ತಡವಾಗಿ ಬಂದದ್ದರಿಂದ ವಿಳಂಬವಾಯಿತು.

ಸಚಿವರ ಪ್ರವಾಸಪಟ್ಟಿ ಪ್ರಕಾರ ಕಂದಕೂರು ಗ್ರಾಮಕ್ಕೆ ತೆರಳಬೇಕಿದ್ದ ಸಚಿವ, ಪಕ್ಷದ ಕಾರ್ಯಕ್ರಮಕ್ಕೆ ಹೆಚ್ಚು ಆದ್ಯತೆ ನೀಡಿದ್ದರಿಂದ ಕಾದು ಕಾದು ಸುಸ್ತಾದ ಕಂದಕೂರು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಸಚಿವರು ಎಷ್ಟು ಹೊತ್ತಿಗೆ ಬರುತ್ತಾರೆ, ಎಲ್ಲೆಲ್ಲಿಗೆ ಹೋಗುತ್ತಾರೆ ಎಂಬ ಮಾಹಿತಿ ಅಧಿಕಾರಿಗಳೇ ತಿಳಿದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT