ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರಿದ ಜೆಡಿಎಸ್ ಅಭ್ಯರ್ಥಿ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಅವರು ಮಂಗಳವಾರ ತಮ್ಮ ಬೆಂಬಲಿಗರ ಜತೆ ಬಿಜೆಪಿ ಸೇರಿದರು.

ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಾಟೀಲ ಸೇರಿದಂತೆ ಗುಲ್ಬರ್ಗ ಮಹಾನಗರ ಪಾಲಿಕೆಯ ಇಬ್ಬರು ಜೆಡಿಎಸ್ ಸದಸ್ಯರೂ ಬಿಜೆಪಿ ಸೇರಿದರು. ಸಂಜೆ ಬಿಜೆಪಿ ಪ್ರಕಟಿಸಿದ 2ನೇ ಪಟ್ಟಿಯಲ್ಲಿ ದತ್ತಾತ್ರೇಯ ಅವರ ಹೆಸರು ಕೂಡ ಸೇರಿದೆ.

ದತ್ತಾತ್ರೇಯ ಅವರು ಜೆಡಿಎಸ್ ಶಾಸಕಿ ಅರುಣಾ ರೇವೂರ ಅವರ ಮಗ. ಅವರಿಗೇ ಟಿಕೆಟ್ ನೀಡಲು ಜೆಡಿಎಸ್ ತೀರ್ಮಾನಿಸಿ, ಹೆಸರನ್ನೂ ಇತ್ತೀಚೆಗೆ ಘೋಷಣೆ ಮಾಡಿತ್ತು. ಇದರ ಬಳಿಕ ಅವರನ್ನು ತನ್ನ ತೆಕ್ಕೆಗೆ ಸೆಳೆಯಲು ಹಲವು ದಿನಗಳಿಂದ ಬಿಜೆಪಿ ಪ್ರಯತ್ನ ನಡೆಸಿತ್ತು. ಮಂಗಳವಾರ ಬೆಳಿಗ್ಗೆ 10.30ಕ್ಕೆ ಅರುಣಾ ಜತೆಗೆ ದತ್ತಾತ್ರೇಯ ಕೂಡ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಮಧ್ಯಾಹ್ನ 12 ಗಂಟೆಯಾದರೂ ಯಾರೂ ಬಿಜೆಪಿ ಕಚೇರಿಯತ್ತ ತಲೆಹಾಕಲಿಲ್ಲ. ಇವರಿಗಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ಎಲ್ಲ ಮುಖಂಡರೂ ಕಾದು ಕುಳಿತರು. ಸ್ವಲ್ಪ ಸಮಯದ ನಂತರ ಬಂದಿದ್ದು ಕೂಡ ದತ್ತಾತ್ರೇಯ ಮಾತ್ರ. ಉಳಿದಂತೆ ಅವರ ತಾಯಿ ಅರುಣಾ ಬರಲೇ ಇಲ್ಲ. ಅವರು ಗುಲ್ಬರ್ಗದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಬಳಿಕ ಹೇಳಲಾಯಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ರಾಜ್ಯಸಭೆ ವಿರೋಧಪಕ್ಷದ ನಾಯಕ ಅರುಣ್ ಜೇಟ್ಲಿ, ಸಂಸದ ಅನಂತಕುಮಾರ್, ಉಪ ಮುಖ್ಯಮಂತ್ರಿ ಆರ್.ಅಶೋಕ ಸೇರಿದಂತೆ ಇತರರು ಅರುಣಾ ಬರುವಿಕೆಗಾಗಿ ಕಾದು ಕುಳಿತರು. ಕೊನೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT