ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಿಜೆಪಿ,ಕೆಜೆಪಿಗೆ ರೈತರ ಮತ ಕೇಳುವ ಹಕ್ಕಿಲ್ಲ'

Last Updated 25 ಏಪ್ರಿಲ್ 2013, 7:12 IST
ಅಕ್ಷರ ಗಾತ್ರ

ಹಾವೇರಿ: `ರೈತರ ಹೆಸರಿನ ಮೇಲೆ ಅಧಿಕಾರ ಸ್ವೀಕರಿಸಿ ಅದೇ ರೈತರ ಮೇಲೆ ಗೋಲಿಬಾರ್ ಮಾಡಿ ಇಬ್ಬರು ರೈತರನ್ನು ಬಲಿತೆಗೆದುಕೊಂಡ ರಾಜ್ಯ ಬಿಜೆಪಿ ಹಾಗೂ ಕೆಜೆಪಿ ನಾಯಕರಿಗೆ ರೈತರ ಮತ ಕೇಳುವ ಯಾವುದೇ ನೈತಿಕತೆ ಇಲ್ಲ' ಎಂದು ಜಾತ್ಯತೀತ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಹಾಗೂ ದುರಾಡಳಿತದ ಬಗ್ಗೆ ಹೇಳುತ್ತಾ ಹೋದರೆ, ಇದೊಂದು ಚುನಾವಣೆಯಲ್ಲ, ಇಂತಹ ಹತ್ತು ಚುನಾವಣೆಗಳು ಬಂದರೂ ಮುಗಿಯುವುದಿಲ್ಲ. ಅದನ್ನು ಮಾತನಾಡಿ ನಮ್ಮ ಬಾಯಿ ನಿಮ್ಮ ಕಿವಿ ಹೊಲಸು ಮಾಡುವುದಕ್ಕಿಂತ 20 ತಿಂಗಳ ಅಧಿಕಾರವಧಿಯಲ್ಲಿ ನಾವು ಮಾಡಿದ ಅಭಿವೃದ್ಧಿ ಬಗ್ಗೆ ಮಾತನಾಡುವುದೇ ಲೇಸು ಎಂದರು.

ರೈತರಿಗೆ, ಬಡವರಿಗೆ, ಜನಸಾಮಾನ್ಯರ ಬೇಡಿಕೆಗಳಿಗೆ ಸ್ಪಂದಿಸದೇ ದ್ರೋಹ ಬಗೆದಿರುವ ರಾಜ್ಯ ಬಿಜೆಪಿ ನಾಯಕರು ಈಗ ಕೆಜೆಪಿ ಹೆಸರಲ್ಲಿ ಮತದಾರರ ಮುಂದೆ ಬರುತ್ತಿದ್ದಾರೆ. ಅವರ ಮಾತಿಗೆ ಮರಳಾಗಿ ಮತ್ತೈದು ವರ್ಷ ಪರಿತಪಿಸುವ ಬದಲು ಈಗಲೇ ಅವರನ್ನು ಬೇರು ಸಮೇತ ಕಿತ್ತು ಹಾಕಲು ನಿರ್ಧರಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು.

ರಾಜ್ಯ ಪ್ರವಾಸಕ್ಕೆ ಬಂದ ರಾಹುಲ್ ಗಾಂಧಿಯವರು ಗಣಿ ಹಗರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅಕ್ರಮ ಗಣಿಗಾರಿಕೆಗೆ ದಾರಿ ಮಾಡಿಕೊಟ್ಟಿದ್ದೆ ಕಾಂಗ್ರೆಸ್ ಎಂಬುದನ್ನು ಮರೆತು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಆರೋಪಿಸಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತ, ಅಲ್ಪಸಂಖ್ಯಾತ, ನೇಕಾ ಹಾಗೂ ರೈತರ ಎರಡು ಲಕ್ಷ ರೂ.ವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಿದ್ದೇವೆ. ನೀರಾವರಿ ಯೋಜನೆಗಳಿಗೆ ಐದು ಸಾವಿರ ಕೋಟಿ ರೂ. ಮೀಸಲಿಡಲಿದ್ದೇವೆ. ಕ್ಯಾನ್ಸರ್, ಹೃದಯ ಕಾಯಿಲೆ ಹೊಂದಿದವರಿಗೆ ಎರಡು ಲಕ್ಷ ರೂ.ವರೆಗೆ ಧನಸಹಾಯ ನೀಡಲಾಗುವುದು ಎಂದ ಅವರು, ವೃದ್ಧರಿಗೆ, ವಿಧವೆಯವರಿಗೆ, ಮದುವೆ ವಯಸ್ಸು ಮೀರಿದ ಹೆಣ್ಣುಮಕ್ಕಳಿಗೆ ತಿಂಗಳಿಗೆ 1,500 ರೂ. ಮಾಸಾಶನ, ಅನಾಥ ವೃದ್ಧರಿಗೆ ತಿಂಗಳಿಗೆ ಐದು ಸಾವಿರ ರೂ. ಮಾಸಾಶನ ನೀಡಲಿದ್ದೇವೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಬಸವರಾಜ ಹೊರಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ. ಗಾಜೀಗೌಡ್ರ, ಹಾವೇರಿ ಅಭ್ಯರ್ಥಿ ಪರಮೇಶಪ್ಪ ಮೇಗಳಮನಿ, ರಾಣೆಬೆನ್ನೂರ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣವರ, ಬ್ಯಾಡಗಿ ಅಭ್ಯರ್ಥಿ ಕಾರಗಿ ಹಾಗೂ ಹಿರೇಕೆರೂರ ಅಭ್ಯರ್ಥಿ ಡಿ.ಎಂ. ಸಾಲಿ ಇತರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT