ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಉಲ್ಲಾಸ, ಉಳಿದ ಪಕ್ಷಗಳಿಗೆ ಆತಂಕ

ಉತ್ತರ ಪ್ರದೇಶ: ಮತಗಟ್ಟೆ ಸಮೀಪ ಸಮೀಕ್ಷೆ
Last Updated 13 ಮೇ 2014, 19:30 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಮತಗಟ್ಟೆ ಸಮೀಕ್ಷೆಗಳ ಅಂಕಿಅಂಶಗಳು ಬಿಜೆಪಿಗೆ ಉಲ್ಲಾಸದಾಯಕವಾಗಿದ್ದರೆ, ಇತರ ಪಕ್ಷಗಳನ್ನು ಆತಂಕಕ್ಕೆ ದೂಡಿದೆ. ಸಮೀಕ್ಷೆಗಳ ಅಂಕಿಅಂಶಗಳನ್ನು ಬಿಜೆಪಿಯೇತರ ಪಕ್ಷಗಳು ತಳ್ಳಿಹಾಕಿವೆಯಾದರೂ ಆ ಪಕ್ಷಗಳ ಮುಖಂಡರ ಮುಖದಲ್ಲಿನ ಆತಂಕದ ಗೆರೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಕಾಂಗ್ರೆಸ್‌, ಸಮಾಜವಾದಿ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷಗಳ (ಬಿಎಸ್‌ಪಿ) ಕಚೇರಿಗಳು ಮಂಗಳವಾರ ಬಿಕೋ ಎನ್ನುತ್ತಿದ್ದು, ಆ ಪಕ್ಷಗಳ ಚಿಂತೆಯನ್ನು ಪ್ರತಿಫಲಿಸುವಂತಿದ್ದವು.

ವಿವಿಧ ಮತಗಟ್ಟೆ ಸಮೀಪ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದೇ ಅಭಿಪ್ರಾಯಪಟ್ಟಿವೆ. ಬಹುತೇಕ ಸಮೀಕ್ಷೆಗಳು 46ರಿಂದ 54 ಕ್ಷೇತ್ರಗಳಲ್ಲಿ  ಬಿಜೆಪಿ ಗೆಲ್ಲುತ್ತದೆ ಎಂದಿವೆ. ಒಂದು ಸಮೀಕ್ಷೆ ಮಾತ್ರ ಬಿಜೆಪಿಗೆ 70 ಸ್ಥಾನಗಳು ದೊರಕಲಿದೆ ಎಂದು ಅಂದಾಜಿಸಿದೆ.

ಸಮೀಕ್ಷೆಗಳ ಅಂಕಿಅಂಶದಿಂದ ಉಬ್ಬಿಹೋಗಿರುವ ರಾಜ್ಯದ ಬಿಜೆಪಿ ಮುಖಂಡರು, ‘ಇದು ಮೋದಿ ಅಲೆ ಇರುವುದನ್ನು ಸಾಬೀತು ಮಾಡಿದೆ’ ಎಂದು ಬೀಗುತ್ತಿದ್ದಾರೆ.

‘ರಾಜ್ಯದಲ್ಲಿ ಫಲಿತಾಂಶ ಅಚ್ಚರಿದಾಯಕವಾಗಿರುತ್ತದೆ ಎಂಬ ನಮ್ಮ ಅಭಿಪ್ರಾಯವನ್ನು ಮತಗಟ್ಟೆ ಸಮೀಪ ಸಮೀಕ್ಷೆಗಳು ದೃಢಪಡಿಸಿವೆ’ ಎಂದ ಬಿಜೆಪಿ ಮುಖಂಡ ವಿಜಯ್‌ ಬಹದೂರ್‌ ಪಾಠಕ್‌, 60 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮೀಕ್ಷೆಗಳ ಅಭಿಪ್ರಾಯಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಕಾಂಗ್ರೆಸ್‌, ‘ಇದು ಅವೈಜ್ಞಾನಿಕ’ ಎಂದಿದೆ.
‘ಚುನಾವಣಾ ಪೂರ್ವ ಇಲ್ಲವೆ ನಂತರದ ಸಮೀಕ್ಷೆಗಳ ಬಗ್ಗೆ ನಮಗೆ ನಂಬಿಕೆ ಇಲ್ಲ. ನಾವು ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಸತ್ಯದೇವ್‌ ತ್ರಿಪಾಠಿ ಹೇಳಿದರು.

ಸಮೀಕ್ಷೆಗಳ ಅಂಕಿಅಂಶವನ್ನು ‘ತ್ಯಾಜ್ಯ’ ಎಂದಿರುವ ಸಮಾಜವಾದಿ ಪಕ್ಷ,  ರಾಜ್ಯದಲ್ಲಿ ಪಕ್ಷವು ಅತಿಹೆಚ್ಚು ಸ್ಥಾನಗಳಿಸಲಿದೆ. ತೃತೀಯರಂಗವೇ ಹೊಸ ಸರ್ಕಾರ ರಚಿಸಲಿದೆ ಎಂದಿದೆ.

‘2012ರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಕುರಿತ ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದೇ ಹೇಳಿದ್ದವು. ಆದರೆ, ನಮ್ಮ ಪಕ್ಷ ಸ್ಪಷ್ಟ ಬಹುಮತ ಗಳಿಸಿತು. ಈ ಸಾರಿಯೂ ಸಮೀಕ್ಷೆಗಳ ಅಂಕಿಅಂಶಗಳು ಸರಿಯಲ್ಲ ಎನ್ನುವುದು ಇನ್ನೆರಡು ದಿನಗಳಲ್ಲಿ ಸಾಬೀತಾಗಲಿದೆ’ ಎಂದು  ಎಸ್‌ಪಿ ಮುಖಂಡರು ತಿಳಿಸಿದರು.

ಈ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮವಾದ ಫಲಿತಾಂಶ ದೊರಕಲಿದೆ ಮತ್ತು ಕೇಂದ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಬಿಎಸ್‌ಪಿ ಮುಖಂಡರು ಹೇಳಿಕೊಂಡರು.

1977ರ ದಾಖಲೆ ಮುರಿದ ಮತದಾರರು
(ಐಎಎನ್‌ಎಸ್‌ ವರದಿ):
ಉತ್ತರ ಪ್ರದೇಶದಲ್ಲಿ ಈ ಸಾರಿ ಚುನಾವಣೆಯಲ್ಲಿ  ಆಗಿರುವ ಮತದಾನದ ಪ್ರಮಾಣವು (ಶೇ 58.29) ತುರ್ತು ಪರಿಸ್ಥಿತಿ ನಂತರ ನಡೆದ 1977ರ ಚುನಾವಣೆಯ ಮತದಾನದ (ಶೇ 56.44) ಮಟ್ಟವನ್ನು ಮೆಟ್ಟಿ ನಿಂತಿದೆ.

ಸಹಾರನಪುರ್‌ ಜಿಲ್ಲೆಯಲ್ಲಿ ಶೇ 73.75ರಷ್ಟು ಮತದಾನ ನಡೆದಿದ್ದು, ಇದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಶೇ 70ಕ್ಕಿಂತ ಹೆಚ್ಚು ಮತದಾನ ಆಗಿದ್ದರೆ, ಒಂಬತ್ತು ಕ್ಷೇತ್ರಗಳಲ್ಲಿ ಶೇ 65ಕ್ಕೂ ಹೆಚ್ಚು ಮತದಾನ ನಡೆದಿದೆ. ರಾಜ್ಯದಲ್ಲಿ ಒಟ್ಟು 13.88 ಕೋಟಿ ಮತದಾರರಿದ್ದು, ಇವರಲ್ಲಿ 8.97 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಏಪ್ರಿಲ್‌ 10, 17, 24, 30, ಮೇ 7 ಮತ್ತು 12ರಂದು ಚುನಾವಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT