ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಬಿಎಸ್‌ಆರ್‌ಸಿ–ಕೆಜೆಪಿ ಬಲ ನೀಡಿತೇ?

Last Updated 21 ಮಾರ್ಚ್ 2014, 8:22 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿರುವ ರಾಜಕೀಯ ಪಕ್ಷಗಳು ಮತ್ತೆ ಮತ ಗಳಿಕೆಯ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ. ಹೀಗಾಗಿ ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯತ್ತ ನಾವೂ ತಿರುಗಿ ನೋಡೋಣ.

2013ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಒಟ್ಟು ಮತ ಗಳಿಕೆಯಲ್ಲಿ ಬಹುತೇಕ ಸಮಬಲ ಸಾಧಿಸಿವೆ. ಆದರೆ, ಬಿಜೆಪಿಯಿಂದ 5 ಶಾಸಕರು ಆಯ್ಕೆಯಾದರೆ, ಕಾಂಗ್ರೆಸ್‌ ಎರಡಕ್ಕೇ ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಕುಡಚಿ (ಎಸ್‌ಸಿ) ಕ್ಷೇತ್ರದಲ್ಲಿ ತನ್ನ ಖಾತೆಯನ್ನು ತೆರೆದಿದೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3, ಕಾಂಗ್ರೆಸ್‌ 4 ಹಾಗೂ ಜೆಡಿಎಸ್‌ 1 ಸ್ಥಾನ ಗಳಿಸಿತ್ತು. ಆದರೆ, ಬಳಿಕ ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಹುಕ್ಕೇರಿ ಶಾಸಕ ಉಮೇಶ ಕತ್ತಿ, ಬಿಜೆಪಿ ಕೈ ಹಿಡಿದರು. ಇದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಉಮೇಶ ಕತ್ತಿ ಗಲುವು ಸಾಧಿಸಿದ್ದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ಸಮಬಲ ಸಾಧಿಸಿತ್ತು.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಲೆ ಎದ್ದಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತಾದರೂ ಈ ಭಾಗದಲ್ಲಿ ಪಕ್ಷವು ನಿಪ್ಪಾಣಿ ಹಾಗೂ ಕುಡಚಿ ಕ್ಷೇತ್ರವನ್ನು ಕಳೆದುಕೊಂಡಿತು. ನಿಪ್ಪಾಣಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಬಿಜೆಪಿಯು ಬಡ್ತಿ ಪಡೆಯಿತು.

ಕೆಜೆಪಿ ಅಭ್ಯರ್ಥಿಗಳು ಅಡ್ಡಗಾಲು ಹಾಕಿದ್ದರೂ ಬಿಜೆಪಿ ಐದು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಹುಕ್ಕೇರಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರೆ, ಚಿಕ್ಕೋಡಿ–ಸದಲಗಾ ಹಾಗೂ ಯಮಕನಮರಡಿ (ಎಸ್‌ಟಿ) ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯಾಗಿದ್ದರು. ಕುಡಚಿ ಕ್ಷೇತ್ರ ಬಿಎಸ್‌ಆರ್‌ ಕಾಂಗ್ರೆಸ್‌ಗೆ ಒಲಿದಿತ್ತು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಚಲಾವಣೆಗೊಂಡ ಮತಗಳ ಪೈಕಿ ಬಿಜೆಪಿ ಶೇ. 37.63

ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ ಶೇ. 37.20 ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಜೆಡಿಎಸ್‌ ಶೇ. 8.20 ಮತ, ಕೆಜೆಪಿ ಶೇ. 2.56 ಮತ ಹಾಗೂ ಬಿಎಸ್‌ಆರ್‌ಸಿ ಶೇ. 6.92 ಮತ ಮತ್ತು ಬಿಎಸ್‌ಪಿ ಶೇ. 2.24 ಮತ ಗಳಿಸಿದ್ದವು.

ಚುನಾವಣೆಗೂ ಮುನ್ನ ಬಿಜೆಪಿಯಿಂದ ಹೊರ ಬಂದು ಸ್ವತಂತ್ರ ಪಕ್ಷವಾದ ಕೆಜೆಪಿ ಹಾಗೂ ಬಿಎಸ್‌ಆರ್‌ಸಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಕಾಗವಾಡ (8,788 ಮತ) ಹಾಗೂ ರಾಯಬಾಗ (3,983 ಮತ) ಕ್ಷೇತ್ರಗಳಲ್ಲಿ ಕೆಜೆಪಿಯು ಮತಗಳನ್ನು ಒಡೆದಿದ್ದರಿಂದ ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸುವಂತಾಗಿತ್ತು. ಕುಡಚಿ ಕ್ಷೇತ್ರದಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಪಿ. ರಾಜೀವ್‌ (71,057 ಮತ) ಕಾಂಗ್ರೆಸ್‌ ಜೊತೆಗೆ ಬಿಜೆಪಿಯ ಮತಗಳನ್ನೂ ಕಿತ್ತುಕೊಂಡು ಗೆಲುವಿನ ನಗೆ ಬೀರಿದ್ದರು.

ಇದೀಗ ಕೆಜೆಪಿ ಬಿಜೆಪಿಯಲ್ಲಿ ವಿಲೀನಗೊಂಡಿದೆ. ಬಿಎಸ್‌ಆರ್‌ ಕಾಂಗ್ರೆಸ್‌ ಸ್ಥಾಪಕ ಬಿ. ಶ್ರೀರಾಮುಲು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ಪರ ಪ್ರಚಾರ ನಡೆಸುವುದಾಗಿಯೂ ಘೋಷಿಸಿದ್ದಾರೆ. ಆದರೆ, ಇಲ್ಲಿನ ಶಾಸಕ ರಾಜೀವ್‌ ಅವರು ಇನ್ನೂ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರಾಜೀವ್‌ ಅವರ ಮನ ಒಲಿಸುವ ಯತ್ನವನ್ನು ಬಿಜೆಪಿಯ ಸ್ಥಳೀಯ ನಾಯಕರು ಮುಂದುವರಿಸಿದ್ದಾರೆ.

ಬಿಎಸ್‌ಆರ್‌ ಕಾಂಗ್ರೆಸ್‌ ಬಲವೂ ಬಿಜೆಪಿಗೆ ಸಿಕ್ಕರೆ, ಕಾಂಗ್ರೆಸ್‌ನ ಒಟ್ಟು ಮತಗಳಿಗಿಂತ ಬಿಜೆಪಿ ಶೇ. 10ರಷ್ಟು ಹೆಚ್ಚು ಪಡೆದಂತಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಮತ ಗಳಿಕೆಯಲ್ಲಿ ಸಿಕ್ಕ ಮುನ್ನಡೆಯನ್ನು ಈ ‘ಮಹಾ ಚುನಾವಣೆ’ಯಲ್ಲೂ ಕಾಯ್ದುಕೊಳ್ಳಲು ಬಿಜೆಪಿ ಹೊಂಚು ಹಾಕುತ್ತಿದೆ. ಮತದಾರ ಪ್ರಭುವನ್ನು ತನ್ನತ್ತ ಓಲೈಸಿಕೊಳ್ಳಲು ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ಶೇ. 8.20 ಮತ ಗಳಿಸಿದ್ದ ಜೆಡಿಎಸ್‌ ಈಗ ಪಡೆಯುವ ಮತಗಳು ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ. ಆದರೆ, ಮತದಾನಕ್ಕೆ ಇನ್ನೂ 27 ದಿನಗಳು ಬಾಕಿ    ಇರುವುದರಿಂದ ಮತದಾರರು ಯಾರ ಕಡೆಗೆ ಮುಖ ಮಾಡಲಿದ್ದಾರೆ ಎಂಬುದನ್ನು ಈಗಲೇ ಹೇಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT