ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಬಿಎಸ್‌ವೈ: ಇನ್ನಷ್ಟು ವಿಳಂಬ

Last Updated 8 ಡಿಸೆಂಬರ್ 2013, 20:28 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ರಾಜ್ಯ­ಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯ ಬಿಜೆಪಿಯಲ್ಲಿಯೂ ಉತ್ಸಾಹದ ಅಲೆ ಎದ್ದಿದೆ. ಆದರೆ ಕೆಜೆಪಿ ಅಧ್ಯಕ್ಷ ಬಿ.ಎಸ್‌.­ಯಡಿಯೂರಪ್ಪ ಅವರ ಮರು­ಸೇರ್ಪಡೆ ಕುರಿತ ಪ್ರಕ್ರಿಯೆಗೆ ಇನ್ನಷ್ಟು ವಿಳಂಬ­ವಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಸ್ಪಷ್ಟ ಬಹುಮತ ಬಾರದೇ ಇರು­ವುದ­ರಿಂದ ಬಿಜೆಪಿ ವರಿಷ್ಠರು ಆ ಬಗ್ಗೆ ಹೆಚ್ಚು ಗಮನ ನೀಡಲಿದ್ದಾರೆ. ಪಕ್ಷವು ಗೆದ್ದುಬಂದ  ರಾಜ್ಯಗಳಲ್ಲಿ ಸರ್ಕಾರ ರಚನೆಯಾದ ನಂತರವೇ ಕರ್ನಾಟಕದ ಬಗ್ಗೆ ಅವರು ಸ್ಪಷ್ಟ ತೀರ್ಮಾನಕ್ಕೆ ಬರುತ್ತಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಭಾರವಾದ ಷರತ್ತು: ಲೋಕಸಭಾ ಚುನಾವಣೆ­ಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನಕ್ಕೆ ಬಿಜೆಪಿ ರಾಜ್ಯ ಘಟಕದ ಮುಖಂಡರು ಕೈಹಾಕಿದ್ದಾರೆ. ಆದರೆ, ಯಡಿಯೂರಪ್ಪ ಅವರು ಮುಂದಿಟ್ಟಿರುವ ಕೆಲವು ಷರತ್ತುಗಳು ಬಿಜೆಪಿ ಪಾಲಿಗೆ ತುಸು ಭಾರ ಆಗಿವೆ. ಈ ಷರತ್ತುಗಳಿಗೆ ಸಂಬಂಧಿಸಿದಂತೆ ಕಾದು ನೋಡಿ, ತೀರ್ಮಾನಕ್ಕೆ ಬರಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಸಿತುಪ್ಪವಾಗಿರುವ ಬೆಂಬಲಿಗರು: ಯಡಿಯೂರಪ್ಪ ಅವರ ಪಕ್ಷ ಸೇರ್ಪಡೆ ಕುರಿತು ಬಿಜೆಪಿ ರಾಜ್ಯ ಘಟಕದ ಪ್ರಮುಖ ನಾಯಕರು ಮುಕ್ತವಾಗಿದ್ದರೂ, ಷರತ್ತು­ಗಳಿಗೆ ಸಂಬಂಧಿಸಿದಂತೆ ಪೂರ್ಣ ಸಹಮತ ವ್ಯಕ್ತಪಡಿ­ಸಿಲ್ಲ. ಯಡಿಯೂರಪ್ಪ ಅವರಿಗೆ ಸೀಮಿತವಾದಂತೆ ಷರತ್ತು­ಗಳನ್ನು ಒಪ್ಪಿಕೊಳ್ಳಲು ಅವರು ಸಿದ್ಧವಾಗಿ­ದ್ದಾರೆ. ಆದರೆ, ಯಡಿಯೂರಪ್ಪ ಅವರು ತಮ್ಮ ಬೆಂಬಲಿಗ­ರಿಗೆ ಸಂಬಂಧಿಸಿದಂತೆ ಮುಂದಿಟ್ಟಿರುವ ಬೇಡಿಕೆಗಳು ಬಿಜೆಪಿ ಪಾಲಿಗೆ ಬಿಸಿತುಪ್ಪದಂತಾಗಿವೆ.

‘ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ತಕ್ಷಣ­ದಲ್ಲಿ ನಡೆಯುವ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಬೇಕು ಎಂಬ ಬೇಡಿಕೆಯನ್ನು ಯಡಿಯೂರಪ್ಪ ಅವರು ಬಿಜೆಪಿ ನಾಯಕರ ಮುಂದೆ ಇಟ್ಟಿದ್ದಾರೆ. ಅವರ ಜೊತೆ ಗುರು­ತಿಸಿ­ಕೊಂಡಿರುವ ವಿ.ಧನಂಜಯಕುಮಾರ್‌ ಮತ್ತು ಲೇಹರ್‌ ಸಿಂಗ್‌ ಅವರಿಗೆ ಪಕ್ಷದಲ್ಲಿ ಹಿಂದಿನಂತೆಯೇ ಪ್ರಮುಖ ಸ್ಥಾನಮಾನಗಳನ್ನು ನೀಡಬೇಕು ಎಂಬ ಷರತ್ತನ್ನೂ ಒಡ್ಡಿದ್ದಾರೆ. ಇವುಗಳನ್ನು ಒಪ್ಪಿಕೊಳ್ಳಲು ರಾಜ್ಯ ಬಿಜೆಪಿ ಪ್ರಮುಖರಿಗೆ ಇಷ್ಟವಿಲ್ಲ’ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿಧಾನಸಭೆ ಚುನಾವಣೆ ವೇಳೆ ಪಕ್ಷ ತೊರೆದು ಹೋದವರಿಗೆ ತಕ್ಷಣವೇ ವಿಧಾನ ಪರಿಷತ್‌ ಚುನಾವ­ಣೆ­ಯಲ್ಲಿ ಅವಕಾಶ ನೀಡುವುದು ಸಮಂಜಸವಲ್ಲ ಎಂಬ ಅಭಿಪ್ರಾಯವನ್ನು ರಾಜ್ಯ ಬಿಜೆಪಿಯ ಕೆಲ ಮುಖಂಡರು ವ್ಯಕ್ತಪಡಿ­ಸಿದ್ದಾರೆ. ಪಕ್ಷನಿಷ್ಠೆ ತೋರಿದ­ವರಿಗೆ ಪರಿಷತ್‌ ಚುನಾವಣೆಯಲ್ಲಿ ಅವಕಾಶ ನೀಡಬೇಕು ಎಂಬ ವಾದ ಪಕ್ಷದೊಳಗೆ ಇದೆ. ಈ ಕಾರಣದಿಂದ ಯಡಿಯೂರಪ್ಪ ಅವರ ಬೇಡಿಕೆಯನ್ನು ಸುಲಭವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ ಎಂದು ಮುಖಂಡರೊಬ್ಬರು ಹೇಳಿದರು.

ಧನಂಜಯಕುಮಾರ್‌ ಮತ್ತು ಲೇಹರ್‌ ಸಿಂಗ್‌ ವಿವಿಧ ಸಂದರ್ಭಗಳಲ್ಲಿ ಬಹಿರಂಗವಾಗಿ ನೀಡಿದ ಹೇಳಿಕೆಗಳು, ಬರೆದ ಪತ್ರಗಳಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸಿತ್ತು. ಇಬ್ಬರೂ ಪಕ್ಷದ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ ಕುಟುಂಬದ ವಿರುದ್ಧವೂ ಆರೋಪಗಳನ್ನು ಮಾಡಿದ್ದರು. ಅವರನ್ನು ಪಕ್ಷದೊಳಕ್ಕೆ ಸೇರಿಸಿಕೊಳ್ಳುವುದೇ ತಪ್ಪು ಎಂಬ ವಾದವನ್ನು ಪಕ್ಷ­ದಲ್ಲಿನ ಒಂದು ಗುಂಪು ವಾದಿಸುತ್ತಿದೆ. ಹೀಗಿರುವಾಗ ಅವರಿಗೆ ಸ್ಥಾನಮಾನ ನೀಡಬೇಕೆಂಬ ಬೇಡಿಕೆ­ಗಳನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆಯೂ ಪರಾಮರ್ಶಿಸಿ ವರಿಷ್ಠರು ನಿರ್ಧಾರಕ್ಕೆ ಬರ­ಬೇಕಿದೆ ಎನ್ನುತ್ತಾರೆ ಅವರು.

ಮುಂದಿನ ವಾರ ನಿರ್ಧಾರ: ನಾಲ್ಕು ರಾಜ್ಯಗಳ ವಿಧಾನ­ಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಮಿಜೋ­ರಾಂ­ನಲ್ಲಿ ಮತ ಎಣಿಕೆ ಸೋಮವಾರ ನಡೆ­ಯ­ಲಿದೆ. ಈ ಎಲ್ಲ ರಾಜ್ಯಗಳಿಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳು ಪೂರ್ಣಗೊಳ್ಳಬೇಕಿದೆ. ಆ ಬಳಿಕ ಯಡಿ­ಯೂರಪ್ಪ ಅವರ ವಿಷಯದ ಬಗ್ಗೆ ಹೈಕಮಾಂಡ್‌ ಗಮನ­ಹರಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ ಅವರ ಸೇರ್ಪಡೆಗೆ ಸಂಬಂಧಿಸಿ­ದಂತೆ ಬಿಜೆಪಿ ರಾಜ್ಯ ಘಟಕ ಈಗಾಗಲೇ ಪಕ್ಷದ ವರಿಷ್ಠ­ರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಮುಂದಿನ ನಿರ್ಣಯಗಳನ್ನು ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ. ಮುಂದಿನ ವಾರದ ಅಂತ್ಯದಲ್ಲಿ ಆ ಪ್ರಕ್ರಿಯೆಗೆ ಚಾಲನೆ ದೊರೆಯಬಹುದು’ ಎಂದರು.

ಇಂದು ಕೆಜೆಪಿ ಕಾರ್ಯಕಾರಿಣಿ: ಈ ಮಧ್ಯೆ ಸೋಮ­ವಾರ ಬೆಂಗಳೂರಿನಲ್ಲಿ ಕೆಜೆಪಿ ಕಾರ್ಯಕಾರಿಣಿ ಸಭೆ ನಡೆ­ಯ­ಲಿದೆ. ಪಕ್ಷದ ವರ್ಷಾಚರಣೆ ಮತ್ತು ಕಾರ್ಯ­ಕಾರಿಣಿ ಒಟ್ಟಿಗೆ ನಡೆಯಲಿದ್ದು, ಮುಂದಿನ ರಾಜಕೀಯ ಹೆಜ್ಜೆ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಕುರಿತು ಸೋಮವಾರದ ಸಭೆಯಲ್ಲಿ ನಿರ್ಣಯ ಕೈಗೊ­ಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಕೆಜೆಪಿ ಪ್ರಮುಖರು ಅದನ್ನು ನಿರಾ­ಕರಿಸಿದ್ದಾರೆ. ಸೋಮ­ವಾರದ ಸಭೆ ಕೇವಲ ವರ್ಷಾ­ಚರಣೆಗೆ ಸೀಮಿತವಾ­ಗಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT