ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಹೊಸ ಸಾರಥಿ?

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಂಧಾನದ ಬಾಗಿಲು ಬಂದ್ ಮಾಡಿರುವ ಬಿಜೆಪಿ ಹೈಕಮಾಂಡ್, ಪಕ್ಷದ ರಾಜ್ಯ ಘಟಕಕ್ಕೆ ಹೊಸ  ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಕರೆ ಮೇರೆಗೆ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದರಾದ ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲು ಸೋಮವಾರ ದೆಹಲಿಗೆ ತೆರಳಿ ಅಧ್ಯಕ್ಷರ ಆಯ್ಕೆ ಸಂಬಂಧ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದರು. ಎರಡು-ಮೂರು ದಿನಗಳಲ್ಲಿ ಹೊಸ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸುವ ಎಲ್ಲ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಳಿನ್ ಕುಮಾರ್ ಕಟೀಲು ಮತ್ತು ಪ್ರಹ್ಲಾದ ಜೋಶಿ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬಂದಿವೆ. ಇಬ್ಬರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆ ಹೊಂದಿರುವವರು. ನಳಿನ್, ಜೋಶಿ ಮತ್ತು ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ವರಿಷ್ಠರು, ಹೊಸ ಅಧ್ಯಕ್ಷರನ್ನು ಕೂಡಲೇ ನೇಮಿಸುವ ಮೂಲಕ ಪಕ್ಷದಲ್ಲಿನ ಗೊಂದಲಗಳಿಗೆ ತೆರೆ ಎಳೆಯಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉತ್ತರ ಕರ್ನಾಟಕ ಭಾಗದವರಾಗಿರುವುದರಿಂದ ಇದೇ ಭಾಗಕ್ಕೆ ಸೇರಿದ ಜೋಶಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ. ಅಂತಿಮವಾಗಿ ನಳಿನ್ ಅವರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಹೆಚ್ಚಾಗಿದೆ.

 ಕಟೀಲು ಮತ್ತು ಜೋಶಿ ಅವರಿಗೆ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಕಷ್ಟ ಎಂಬ ಅಭಿಪ್ರಾಯ ವರಿಷ್ಠರಲ್ಲಿ ಮೂಡಿದರೆ, ಉಪಮುಖ್ಯಮಂತ್ರಿ ಸ್ಥಾನ ತೊರೆದು ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿಯುವಂತೆ ಈಶ್ವರಪ್ಪ ಅವರಿಗೆ ಸೂಚಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.  ಈ ಮಧ್ಯೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಣ ತೆರೆಮರೆಯಲ್ಲಿ ಯಡಿಯೂರಪ್ಪ ಪರ ಲಾಬಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

`ನನಗೆ ಅಧ್ಯಕ್ಷ ಸ್ಥಾನವನ್ನು ತಕ್ಷಣ ನೀಡಬೇಕು, ಚುನಾವಣೆ ಬಳಿಕ ಬಹುಮತ ದೊರೆತರೆ ನನ್ನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಿಸಬೇಕು ಎಂಬ ಬೇಡಿಕೆಗಳನ್ನು ಯಡಿಯೂರಪ್ಪ ಅವರು ವರಿಷ್ಠರ ಮುಂದಿಟ್ಟಿದ್ದರು. ವರಿಷ್ಠರು ಎರಡೂ ಬೇಡಿಕೆಗಳನ್ನು ತಳ್ಳಿಹಾಕಿದ್ದಾರೆ~ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು, ಹೆಸರು ಬಹಿರಂಗಗೊಳಿಸಬಾರದು ಎಂಬ ಷರತ್ತಿನ ಮೇಲೆ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2004ರಲ್ಲಿ ಸಂಸದ ಅನಂತಕುಮಾರ್ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗ, ಯಡಿಯೂರಪ್ಪ ಅವರಿಗೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈ ಬಾರಿಯೂ ಅದೇ  ಸ್ಥಾನ ನೀಡುವುದಾಗಿ ಅವರಿಗೆ ತಿಳಿಸಲಾಗಿದೆ.

ತಮ್ಮ ಇಚ್ಛೆಯಂತೆ ತೀರ್ಮಾನ ತೆಗೆದುಕೊಳ್ಳಲು ಅವರು ಸ್ವತಂತ್ರರಾಗಿದ್ದಾರೆ. ಅವರು ಪಕ್ಷ ತೊರೆದರೆ ಬಿಜೆಪಿಗೆ ಹಾನಿಯಾಗುವುದಿಲ್ಲ. ಅವರು ಹೊರಗೆ ಹೋಗುತ್ತಲೇ ಬೇರೆ ಪಕ್ಷಗಳಿಂದ ಹಲವರು ಬಿಜೆಪಿ ಸೇರಲಿದ್ದಾರೆ~ ಎಂದು ವಿಶ್ಲೇಷಿಸಿದರು.

ನಿಗಮ- ಮಂಡಳಿಗೆ ನೇಮಕ:
ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಹೆಚ್ಚುವರಿಯಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಅಭಿವೃದ್ಧಿ ಮಂಡಳಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ನೀಡಲು ಹಾಗೂ ವಾರದಲ್ಲಿ ವಿವಿಧ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ತೀರ್ಮಾನಿಸಿದೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಖಾಲಿ ಇರುವ ನಿಗಮ - ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಹಾಗೂ ಹಾಲಿ ಇರುವ ಕೆಲ ನಿಗಮ- ಮಂಡಳಿಗಳ ಅಧ್ಯಕ್ಷರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯಬಯಸುವವರು ನಿಗಮ-ಮಂಡಳಿಗಳ ಅಧ್ಯಕ್ಷರಾಗಿದ್ದರೆ, ಅಂತಹವರನ್ನು ಬದಲಾಯಿಸುವುದಿಲ್ಲ. ಉಳಿದಂತೆ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಮಾಡಲಾಗುವುದು. ಖಾಲಿ ಇರುವ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಶಾಸಕರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು ಎಂದರು.

ಶಿಸ್ತುಕ್ರಮ: ಮುಖ್ಯಮಂತ್ರಿ, ಪಕ್ಷ ಹಾಗೂ ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿರುವ ಕೇಂದ್ರದ ಮಾಜಿ ಸಚಿವ ವಿ.ಧನಂಜಯ ಕುಮಾರ್ ಅವರು ನೋಟಿಸ್‌ಗೆ ನೀಡುವ ಉತ್ತರವನ್ನು ಆಧರಿಸಿ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಅವರು ಕ್ಷಮೆ ಯಾಚಿಸಿದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ. ಸಮರ್ಥನೆಗೆ ಇಳಿದರೆ ಪಕ್ಷದಿಂದ ಅಮಾನತು, ಇಲ್ಲವೆ ಉಚ್ಚಾಟನೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಬಿಜೆಪಿಗೆ 60 ರಿಂದ 70 ಸ್ಥಾನ
ರಾಜ್ಯದಲ್ಲಿ ಪಕ್ಷಕ್ಕಿರುವ ಜನಬೆಂಬಲ ಕುರಿತು ಬಿಜೆಪಿ ವರಿಷ್ಠರು ಆಂತರಿಕ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಯ ಪ್ರಕಾರ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 60ರಿಂದ 70 ಸ್ಥಾನ ಗಳಿಸಲಿದೆ. ಬಿ.ಎಸ್. ಯಡಿಯೂರಪ್ಪ ಅವರು ಹೊಸ ಪಕ್ಷ ಸ್ಥಾಪಿಸಿದರೆ, ಆ ಪಕ್ಷ ಗರಿಷ್ಠ ಹತ್ತು ಸ್ಥಾನಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಪಕ್ಷದ ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ಸಂಘಟನೆಯನ್ನು ಬಲಪಡಿಸುವುದು, ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷದ ವರಿಷ್ಠರು ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಈಗಿನಿಂದಲೇ ಚುನಾವಣಾ ಕಾರ್ಯದ ಸಿದ್ಧತೆಯಲ್ಲಿ ತೊಡಗಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಗುಜರಾತ್ ಚುನಾವಣೆ ಮುಗಿದ ಬಳಿಕ ಪಕ್ಷದ ವರಿಷ್ಠರು, ರಾಜ್ಯದಲ್ಲೇ ಠಿಕಾಣಿ ಹೂಡಿ ಚುನಾವಣೆ ಎದುರಿಸಲು ರಣತಂತ್ರ ರೂಪಿಸಲಿದ್ದಾರೆ. ಯಡಿಯೂರಪ್ಪ ನಿರ್ಗಮನ ಕುರಿತು ತಲೆಕೆಡಿಸಿಕೊಳ್ಳದೆ, ಸಂಘಟನೆಯನ್ನು ಬಲಪಡಿಸುವ ಮೂಲಕ ಚುನಾವಣೆಯತ್ತ ಗಮನಹರಿಸಲು ವರಿಷ್ಠರು ನಿರ್ಧರಿಸಿದ್ದಾರೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳು, ಕಲ್ಲಿದ್ದಲು ಹಗರಣ, 2 `ಜಿ~ ತರಂಗಾಂತರ ಹಗರಣ, ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಆಗಿರುವ ಹಗರಣಗಳನ್ನು ಬೂತ್ ಮಟ್ಟದಿಂದಲೇ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ಕೆ ಪಕ್ಷ ಈಗಾಗಲೇ ಚಾಲನೆ ನೀಡಿದೆ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದರು.

ಹಾಲಿ ಶಾಸಕರಿಗೆ ಟಿಕೆಟ್ ಖಚಿತ
ಸ್ಪೀಕರ್ ಕೆ.ಜಿ.ಬೋಪಯ್ಯ ಸೇರಿ ವಿಧಾನಸಭೆಯಲ್ಲಿ ಬಿಜೆಪಿಯ ಹಾಲಿ ಸಂಖ್ಯಾಬಲ 119. ಈ ಪೈಕಿ ಗರಿಷ್ಠ ಹತ್ತು ಮಂದಿ ಶಾಸಕರು ಯಡಿಯೂರಪ್ಪ ಅವರೊಂದಿಗೆ ಹೊಸ ಪಕ್ಷಕ್ಕೆ ಹೋಗುವ ಸಾಧ್ಯತೆ ಇದೆ. ಉಳಿದಂತೆ ಬಹುತೇಕ ಎಲ್ಲ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ಪಕ್ಷದ ಪ್ರಭಾವಿ ಮುಖಂಡರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`110 ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಸ್ಪರ್ಧಿಸಲಿದ್ದಾರೆ. ಉಳಿದಂತೆ 124 ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದಷ್ಟೇ ನಮ್ಮ ಮುಂದಿರುವ ಪ್ರಶ್ನೆ. ಕಳೆದ ಬಾರಿ ಸೋತಿರುವ ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಕೆಲವು ಕಡೆ ಟಿಕೆಟ್‌ಗಾಗಿ ಇಬ್ಬರು-ಮೂವರ ಪೈಪೋಟಿ ಇದೆ~ ಎಂದರು.

ಯಡಿಯೂರಪ್ಪ ಪಕ್ಷ ತೊರೆದರೆ ಬಿಜೆಪಿಗೆ ಬರುವುದಾಗಿ ಬೇರೆ ಪಕ್ಷಗಳ ಕೆಲವು ಮುಖಂಡರು ಹೇಳಿದ್ದಾರೆ. ಅಂತಹವರಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ಸ್ಪಷ್ಟ ಭರವಸೆ ನೀಡಿಲ್ಲ. ಯಡಿಯೂರಪ್ಪ ಅವರ ನಡೆ ಆಧರಿಸಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಗುಂಡ್ಲುಪೇಟೆಗೆ ಬಿಎಸ್‌ವೈ ವಲಸೆ?
ಬಿ.ಎಸ್.ಯಡಿಯೂರಪ್ಪ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುವ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ.

ಯಡಿಯೂರಪ್ಪ ತಮ್ಮ ಆಪ್ತ ಸಿದ್ಧಲಿಂಗಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ತುಸು ವಿಚಲಿತರಾಗಿರುವ ಸಿದ್ದರಾಮಯ್ಯ, ಶಿಕಾರಿಪುರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಏರ್ಪಡಿಸುವ ಮೂಲಕ ಯಡಿಯೂರಪ್ಪ ವಿರುದ್ಧ ಸಮರ ಸಾರುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಇದರ ಸುಳಿವು ಅರಿತ ಯಡಿಯೂರಪ್ಪ, ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಆಪ್ತರೊಂದಿಗೆ ಚರ್ಚಿಸಿದ್ದಾರೆ. ಶಿಕಾರಿಪುರದಲ್ಲಿ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಶೋಭಾ ಅವರು ಯಶವಂತಪುರ ಕ್ಷೇತ್ರ ತೊರೆಯುವುದು ಖಚಿತವಾಗಿದೆ. ಬಿಜೆಪಿಯಲ್ಲೇ ಮುಂದುವರಿಯುವುದಾದರೆ, ತವರು ಜಿಲ್ಲೆ ದಕ್ಷಿಣ ಕನ್ನಡದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಯಡಿಯೂರಪ್ಪ ಅವರ ಜೊತೆಯಲ್ಲೇ ಪಕ್ಷ ತೊರೆಯುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕಳೆದ ಬಾರಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದ ಸೋಮಣ್ಣ ಈ ಬಾರಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದಾರೆ. ಈ ಮಧ್ಯೆ ಅವರು ಮರಳಿ ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂಬ ಗುಸುಗುಸು ಕೂಡ ಹಬ್ಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT