ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಭದ್ರನೆಲೆ ಕರಾವಳಿಗೆ ಅನ್ಯಾಯ

Last Updated 13 ಜುಲೈ 2012, 7:50 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿಯ ಶಕ್ತಿ ಕೇಂದ್ರ ಎಂದೇ ಪರಿಗಣಿಸಲಾಗುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯದ ನೂತನ ಸಂಪುಟದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಅಸಮಾಧಾನದ ಬಿರುಗಾಳಿ  ಇಲ್ಲೂ ಜೋರಾಗಿ ಬೀಸುವ ಲಕ್ಷಣ ಕಾಣಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನರಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಗಳನ್ನು ಬಿಟ್ಟು ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿರುವುದಕ್ಕೆ ಸಹಜವಾಗಿಯೇ ಈ ಜನಪ್ರತಿನಿಧಿಗಳು ಮಾತ್ರವಲ್ಲದೆ ಜನಸಾಮಾನ್ಯರಲ್ಲೂ ಅಸಮಾಧಾನ ವ್ಯಕ್ತವಾಗಿದೆ.
 
ಅದು ಮುಂದಿನ ದಿನಗಳಲ್ಲಿ ತೀವ್ರಗೊಳ್ಳುವ ಲಕ್ಷಣಗಳೂ ಕಾಣಿಸಿವೆ. ಬಿಲ್ಲವ ಸಮುದಾಯದ ಪ್ರಾತಿನಿಧ್ಯ ಕೊರತೆ ನಿವಾರಿಸಲು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅವಕಾಶ ನೀಡಿದರೂ, ಇನ್ನೊಂದು ಸಚಿವ ಸ್ಥಾನ ಏಕೆ ಕೊಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿತ್ತು, ಕೊನೆ ಕ್ಷಣದಲ್ಲಿ ಅದನ್ನು ತೆಗೆದು ಹಾಕಲಾಗಿದೆ ಎಂಬ ಮಾತು ಕೇಳಿಬಂದಿದ್ದು, ಒಟ್ಟಾರೆ ಕರಾವಳಿ ಭಾಗದ ಶಾಸಕರು ಕೆರಳುವಂತಾಗಿದೆ. ಈಗಾಗಲೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇನ್ನಷ್ಟು ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಕಂಡುಬಂದಿದೆ.

ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದ ಸನ್ನಿವೇಶದಲ್ಲೂ ಜಿಲ್ಲೆ ನಿರ್ಲಿಪ್ತವಾಗಿತ್ತು. ಕೊನೆ ಕ್ಷಣದಲ್ಲಿ ತಮ್ಮ ಬಲ ತೋರಿಸಲು ಹೊರಟ ಸದಾನಂದ ಗೌಡರಿಗೆ ದಕ್ಕಿದ್ದು ಮಾತ್ರ ಏನೂ ಇಲ್ಲ. ಅವರ ಪ್ರಭಾವದಿಂದಲಾದರೂ ಉಡುಪಿ ಮತ್ತು ದ.ಕ.ಜಿಲ್ಲೆಗಳ ಒಬ್ಬೊಬ್ಬ ಶಾಸಕರಿಗೆ ಮಂತ್ರಿ ಪದವಿ ಸಿಗಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಸದಾನಂದ ಗೌಡರ ಮೇಲಿನ ರಾಜಕೀಯ ಕೋಪದಿಂದಾಗಿ ಯಡಿಯೂರಪ್ಪ ಅವರು ಈ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂಬ ಆಕ್ರೋಶ ಕೇಳಿಬಂದಿದೆ.

ದಬ್ಬಾಳಿಕೆ
ಪ್ರತಿ ಸಾರಿಯೂ ಸಂಪುಟದಲ್ಲಿ ಕನಿಷ್ಠ ಒಂದು ಸ್ಥಾನವನ್ನಾದರೂ ಪಡೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಈ ಬಾರಿ ಸಂಪೂರ್ಣ ಕಡೆಗಣಿಸಲಾಗಿದೆ. ಇದು ಒಂದು ರೀತಿಯಲ್ಲಿ ಕರಾವಳಿಯ ನಾಯಕತ್ವದ ಮೇಲಿನ ದಬ್ಬಾಳಿಕೆ ಎಂದು ಪಕ್ಷಭೇದ ಮರೆತು ಮಾತನಾಡುವ ಇಲ್ಲಿನ ನಾಗರಿಕರೂ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಗೆ ಪ್ರಾತಿನಿಧ್ಯ ದಕ್ಕದೆ ಇರುವ ವಿಷಯವನ್ನು ವಿರೋಧ ಪಕ್ಷಗಳ ನಾಯಕರೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಂಬಿಕೆ ಇದೆ: `ಕರಾವಳಿ ಭಾಗದ ಬಿಜೆಪಿ ಯಾವ ಬಣಕ್ಕೂ ಸೇರಿಲ್ಲ. ಪಕ್ಷ, ಚಿಹ್ನೆಗಷ್ಟೇ ಬೆಲೆ ಕೊಡುತ್ತ ಬಂದವರು ನಾವು. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಪಕ್ಷದ ವರಿಷ್ಠರ ಬಗ್ಗೆ ನಮಗೆ ಇನ್ನೂ ನಂಬಿಕೆ ಇದೆ. ಪಕ್ಷದ ಭದ್ರ ನೆಲೆಯಾಗಿರುವ ಕರಾವಳಿ ಭಾಗವನ್ನು ಅವರು ಕಡೆಗಣಿಸುವುದಿಲ್ಲ ಎಂಬ ವಿಶ್ವಾಸ ಇಟ್ಟಿದ್ದೇವೆ~ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ `ಪ್ರಜಾವಾಣಿ~ಗೆ ತಿಳಿಸಿದರು.

`ಕೋಟ ಶ್ರೀನಿವಾಸ ಪೂಜಾರಿ ಅವರು ಉಭಯ ಜಿಲ್ಲೆಗಳಿಗೂ ಸಂಬಂಧಪಟ್ಟವರು. ಬಿಲ್ಲವ-ಈಡಿಗ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದಲೂ ಅವರಿಗೆ ಸಚಿವ ಸ್ಥಾನ ನೀಡಿರಬಹುದು. ಇದು ಸಂತೋಷವೇ. ಆದರೆ ಪಕ್ಷದ ಭದ್ರ ನೆಲೆಯ ವಿಧಾನಸಭಾ ಸದಸ್ಯರಿಗೂ ಸಂಪುಟದಲ್ಲಿ ಅವಕಾಶ ನೀಡಬೇಕಿತ್ತು~ ಎಂದು ಅವರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಿ ಕರಾವಳಿ ಭಾಗದ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸುವ ಯತ್ನ ನಡೆಯಲಿದೆಯೇ? ಪಕ್ಷದ ಜಿಲ್ಲಾ ಘಟಕದಿಂದ ಅದಕ್ಕೆ ಉತ್ತರ ಇದ್ದಂತಿಲ್ಲ.

ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ. ಅದನ್ನು ಸಮರ್ಥವಾಗಿ ತೋರಿಸುವ ಎದೆಗಾರಿಕೆಯನ್ನು ಉಡುಪಿ ಭಾಗದ ಶಾಸಕರು ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯವರು ಅದರಲ್ಲೂ ಹಿಂದೆ ಬಿದ್ದಿದ್ದಾರೆ. ನಾಲ್ಕು ಬಾರಿ ಆಯ್ಕೆಯಾದ ಅಂಗಾರ ಅವರಾಗಲೀ, ಯೋಗೀಶ್ ಭಟ್ ಅವರಾಗಲೀ ಸಾರ್ವಜನಿಕವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸುವ ಶಕ್ತಿಯನ್ನೇ ಕಳೆದುಕೊಂಡಿರುವುದು ಜಿಲ್ಲೆಯ ಕಾರ್ಯಕರ್ತರ ಅಸಹನೆ ಹೆಚ್ಚುವಂತೆ ಮಾಡಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರಿಗೆ ಬಂಟ್ವಾಳದಲ್ಲಿ ಟಿಕೆಟ್ ಸಿಗದೆ ಇರುವ ಆತಂಕ ಇದೆ. ಅದೇ ಕಾರಣಕ್ಕೆ ಅವರು ಈ ಸಂದರ್ಭವನ್ನು ಬಳಸಿಕೊಂಡು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ವದಂತಿ ಇದೆ. `ಭೂತ ಬಂದಾಗಲೇ ಕಡಿದುಕೊಳ್ಳಬೇಕು~ ಎಂಬ ಅವರ ಧೋರಣೆಗೆ ಪಕ್ಷದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

`ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ಟಿವಿಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ ಅವರ ರಾಜೀನಾಮೆ ಪತ್ರ ನನಗಂತೂ ಬಂದಿಲ್ಲ. ಈ ಮೊದಲು ಸಹ ರಾಜೀನಾಮೆ ಸಲ್ಲಿಸಿದವರು ಬಳಿಕ ನನ್ನ ಗಮನಕ್ಕೆ ಬಾರದಂತೆ ರಾಜೀನಾಮೆ ಪತ್ರ ಹಿಂಪಡೆದುಕೊಂಡರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಲ್ಲೇ ಮುಂದುವರಿದರು. ಅವರ ನಡೆಗಳೇ ನನಗಂತೂ ಅರ್ಥವಾಗುತ್ತಿಲ್ಲ~ ಎಂಬ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಮಾತಿನಲ್ಲಿ ಇರುವ ಒಳಸುಳಿಯನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯದ ಮಾತಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT