ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ದೂರ ಇದ್ದವರು ಮರಳಿ ಮನೆಗೆ!

ಹಾಲಾಡಿ ಬೆಂಬಲಿಗರ ಬೆಂಬಲ: ವಿಶ್ವಾಸ
Last Updated 24 ಮಾರ್ಚ್ 2014, 10:06 IST
ಅಕ್ಷರ ಗಾತ್ರ

ಕುಂದಾಪುರ: ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರ ಗುಂಪಿನಲ್ಲಿ ಸಕ್ರಿಯರಾಗಿದ್ದ ಬಿಜೆಪಿಯ 5 ಮಂದಿ ಜಿಲ್ಲಾ ಪಂಚಾ­ಯಿತಿ ಸದಸ್ಯರು, ಕುಂದಾಪುರ ಹಾಗೂ ಉಡುಪಿ ತಾಲ್ಲೂಕು ಪಂಚಾಯಿತಿ ಸದಸ್ಯರು, ಕುಂದಾಪುರ ಪುರಸಭೆ ಹಾಗೂ ಸಾಲಿ-­ಗ್ರಾಮ ಪಟ್ಟಣ ಪಂಚಾಯಿತಿಯ ಸದಸ್ಯರು ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುತ್ತಾರೆ ಎಂದು ಚಿಕ್ಕಮಗಳೂರು-–ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಗೆ ಮನೆ ಮಗನಿದ್ದಂತೆ, ಕೆಲವು ಕಾರಣಗಳಿಂದ ಅವರು ಪಕ್ಷವನ್ನು ಬಿಡಬೇಕಾದ ಸನ್ನಿವೇಶ­ಗಳು ನಿರ್ಮಾಣವಾಗಿದ್ದವು. ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದಾಗ ಬಿಜೆಪಿಯಿಂದ ಆಯ್ಕೆಯಾಗಿದ್ದ ವಿವಿಧ ಸ್ತರದ ಹೆಚ್ಚಿನ ಜನಪ್ರತಿ­ನಿಧಿಗಳು ಅವರನ್ನು ಬೆಂಬಲಿಸಿ ದಾಖಲೆಯ ಮತಗಳ ಅಂತರದಿಂದ ಅವರನ್ನು ಆಯ್ಕೆ ಮಾಡಿದ್ದರು.

ಇದೀಗ ಮೋದಿ­ಯವರನ್ನು ಪ್ರಧಾನಿ ಮಾಡಬೇಕು ಎನ್ನುವ ಕಾರಣದಿಂದ ಹಾಲಾಡಿಯನ್ನು ಬೆಂಬಲಿಸಿದ ಪ್ರಮುಖರು, ಯುವ ನಾಯಕ ಕಿರಣ್‌ಕುಮಾರ್‌ ಕೊಡ್ಗಿಯವರ ನೇತೃತ್ವದಲ್ಲಿ ಪಕ್ಷದ ಗೆಲುವಿಗೆ ದುಡಿಯಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಕೃಷಿಕರನ್ನು ಕಾಡುತ್ತಿರುವ ಹಳದಿ ರೋಗಕ್ಕೆ ₨1,400 ಕೋಟಿ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ ಎನ್ನುವ ಭರವಸೆಯನ್ನು ನೀಡಿರುವ ಕೇಂದ್ರ ಸಚಿವ ಮೊಯಿಲಿ ಹಾಗೂ ಸಂಸದ ಹೆಗ್ಡೆ ತಮ್ಮ ಭರವಸೆಯಂತೆ ನಡೆದುಕೊಂಡಿಲ್ಲ. ಅಡಿಕೆ ನಿಷೇಧ ಕುರಿತು ಕಾಂಗ್ರೆಸ್ ಮುಖಂಡರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.

ರಾಜ್ಯದ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ರಾಜ್ಯದ ಒಟ್ಟು 7 ಲಕ್ಷ ಎಕ್ರೆ ಭೂಮಿ ಪ್ರದೇಶದ ಒತ್ತುವರಿದಾರರನ್ನು ತೆರವು ಮಾಡುವ ಕುರಿತು ತಿಳಿಸಿದ್ದಾರೆ. ಒಂದು ವೇಳೆ ಸರ್ಕಾರ ಇದರಂತೆ ನಡೆದುಕೊಂಡರೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆಗಳಿವೆ ಎಂದು ಹೇಳಿದ ಅವರು ಈ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಲೋಕಸಭೆಯಲ್ಲಿ ಸಮರ್ಥವಾಗಿ ಧ್ವನಿ ಎತ್ತುವ ಜನಪ್ರತಿನಿಧಿ ಬೇಕು ಎನ್ನುವ ಕಾರಣದಿಂದ ತಾನು ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಮಾತನಾಡಿದ ಕಿರಣ್‌ಕುಮಾರ ಕೊಡ್ಗಿ, ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ವಿವಿಧ ಸ್ತರದ ಜನಪ್ರತಿನಿಧಿಗಳು ತಾಂತ್ರಿಕವಾಗಿ ಪಕ್ಷದಲ್ಲಿಯೇ ಉಳಿದುಕೊಂಡಿ­ರುವುದರಿಂದ ಸೇರ್ಪಡೆ ಎನ್ನುವ ಪ್ರಶ್ನೆಯೇ ಉದ್ಭವಾಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಹಾಲಾಡಿಯವರನ್ನು ಬೆಂಬಲಿಸಿದ್ದ ನಾವೆಲ್ಲ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲು ತೀರ್ಮಾನಿಸಿ­ರುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ್‌ ಹೆಗ್ಡೆ, ರಾಜ್ಯ ಮೀನುಗಾರ ಕೋಶದ ಪ್ರಮುಖ ಕಿಶೋರಕುಮಾರ ಬಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೇಶ್ ಕಾವೇರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಕುಂದಾಪುರ ಪುರಸಭಾ ಉಪಾಧ್ಯಕ್ಷ ನಾಗರಾಜ್ ಕಾಮಧೇನು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಆರ್. ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಣಪತಿ ಟಿ ಶ್ರೀಯಾನ್, ಪ್ರಕಾಶ್ ಮೆಂಡನ್, ರಶ್ವಥ್ ಶೆಟ್ಟಿ, ಸುನೀತಾ ರಾಜಾರಾಮ್ ಮತ್ತಿತರರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT