ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಪ್ರಜಾಪ್ರಭುತ್ವ ಕಗ್ಗೊಲೆ: ಮುನಿಯಪ್ಪ

Last Updated 21 ಜನವರಿ 2011, 8:45 IST
ಅಕ್ಷರ ಗಾತ್ರ

ಬಂಗಾರಪೇಟೆ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ. ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ತಿರುಚಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಆರೋಪಿಸಿದರು.

ಪಟ್ಟಣದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತ ಈ ಗಾಲಿಗಳಾಗಿವೆ. ಭೂಹಗರಣ ಕುರಿತು ಕ್ರಿಮಿನಲ್ ಮೊಕದ್ದಮೆ ಹೂಡುವುದಕ್ಕೆ ತೀರ್ಮಾನ ತೆಗೆದುಕೊಳ್ಳದಂತೆ ಬಂದ್ ನಡೆಸುವ ಬೆದರಿಕೆ ನೀಡುತ್ತಿದೆ. ಇಂದಿಗೂ ಬೀದಿಯಲ್ಲಿರುವ ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ನೀಡದ ಈ ಸರ್ಕಾರ ರಾಜ್ಯ ಜನತೆಗೆ ನೆಮ್ಮದಿ, ಸಂತೃಪ್ತಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಂಗಾರಪೇಟೆಯ ಕಾಂಗ್ರೆಸ್ ಶಾಸಕರಿಂದ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುವ ಕೃತ್ಯಕ್ಕೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ವಾಸಿಯಾಗದ, ಓಡಾಡಲು ಸಾಧ್ಯವಾಗದ ರೋಗ ಬಂದಿದ್ದರೆ, ಹುಚ್ಚು ಹಿಡಿದಿದ್ದರೆ, ಕೊಲೆ, ಕಳ್ಳತನದಂತಹ ಹೀನ ಕೃತ್ಯ ಮಾಡಿದ್ದರೆ, ಕಾನೂನಿಗೆ ವಿರುದ್ಧವಾದ ಕೆಲಸ ಮಾಡಿ ಸುಪ್ರೀಂಕೋರ್ಟ್ ಆದೇಶಿಸಿದ್ದರೆ ಶಾಸಕರ ರಾಜೀನಾಮೆ ಪಡೆದು ಮರು ಚುನಾವಣೆ ನಡೆಸಲಾಗುತ್ತದೆ. ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲ ಹುದ್ದೆ ನೀಡುವಂತಿದ್ದರೆ, ರಾಯಭಾರಿಯಂಥ ಜವಾಬ್ದಾರಿಯುತ ಹುದ್ದೆ ನೀಡುವಂತಿದ್ದರೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿರುವಲ್ಲಿ ಅರ್ಥವಿರುತ್ತಿತ್ತು. ಆದರೆ ಅವರಿಗೆ ಮಾತನಾಡಿದಂತೆ ಹಣವೂ ಸಿಕ್ಕಿರಲಿಲ್ಲ. ಅಧಿಕಾರವೂ ಹೋಯಿತು, ಅವಕಾಶವೂ ಇಲ್ಲದಾಗಿದೆ. ಬಿಜೆಪಿ ಆಮಿಷಗಳ ಬೆನ್ನತ್ತಿ ಹೋದವರಿಗೆ ಸಿಗುವ ದುರ್ಗತಿಗೆ ಅವರೇ ಸಾಕ್ಷಿ’ ಎಂದರು.

ಪಕ್ಷದ ನೀತಿ, ನಾಯಕತ್ವ ಸರಿಯಿಲ್ಲದಿದ್ದರೆ ಸ್ಥಳೀಯ ನಾಯಕ, ಮುಖಂಡರನ್ನು ಸೇರಿಸಿ ಮಾತನಾಡಿ, ಪಕ್ಷಾಂತರ ಮಾಡಬಹುದಿತ್ತು. ಆದರೆ ಚುನಾಯಿಸಿ ಕಳುಹಿಸಿದ ಜನತೆಗೆ ಮೋಸ ಮಾಡಿ ಅಳಿಯನ ಮನೆ, ಮಗಳ ಮನೆ, ಧರ್ಮಸ್ಥಳ ಎಂದು ತಲೆ ಮರೆಸಿಕೊಂಡರು. ಅಂಥವರಿಗೆ ಜನತೆಯೇ ಚುನಾವಣೆಯಲ್ಲಿ ತಕ್ಕ ಶಿಕ್ಷೆ ನೀಡಬೇಕು ಎಂದರು.

ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮಾತನಾಡಿ,  ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ತಿಂದ ಮನೆಗೆ ಎರಡು ಬಗೆದಿದ್ದಾರೆ. ಅವರಿಗೆ ಕ್ಷೇತ್ರ ಜನತೆ ತಕ್ಕ ಪಾಠ ಕಲಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ,  ಡಿ.ಸಿ.ಸಿ. ಅಧ್ಯಕ್ಷ ಅನಿಲ್‌ಕುಮಾರ್, ವಿಧಾನಪರಿಷತ್ ಸದಸ್ಯ ವಿ.ಆರ್.ಸುದರ್ಶನ್, ಮಾಜಿ ಶಾಸಕ ನಿಸಾರ್ ಅಹ್ಮದ್, ಶಾಸಕ ಅಂಬರೀಶ್, ಕೆ.ಪಿ.ಸಿ.ಸಿ ಸದಸ್ಯ ಅಶೋಕ್ ಕೃಷ್ಣಪ್ಪ ಮಾತನಾಡಿದರು.

ಕ್ಷೇತ್ರದ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರು ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಹೊಸಕೋಟೆ ಶ್ರೀರಾಮ್, ವೆಂಕಟೇಶಪ್ಪ, ಬೂದಿಕೋಟೆ ವರದರಾಯಪ್ಪ, ನಾಗರಾಜ್ ಸೇರ್ಪಡೆಯಾದವರಲ್ಲಿ ಪ್ರಮುಖರು.ಸಭೆಗೆ ಯುವ ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ಕೃಷ್ಣಭೈರೇಗೌಡ, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಗೈರುಹಾಜರಿ ಎದ್ದು ಕಾಣುತ್ತಿತ್ತು.

ರೆಸಾರ್ಟ್ ಮಾಲೀಕ, ಕಾಂಗ್ರೆಸ್ ಮುಖಂಡ ಕೆ.ಎಂ.ನಾರಾಯಣಸ್ವಾಮಿ ಸಭೆ ಉಸ್ತುವಾರಿ ವಹಿಸಿದ್ದರು. ಚಂದ್ರಶೇಖರ್, ಜಿ.ಪಂ.ಮಾಜಿ ಸದಸ್ಯರಾದ ಕೃಷ್ಣಸಿಂಗ್, ರಾಮಚಂದ್ರ, ಮುನಿರಾಜು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮಾಜಿ ಶಾಸಕ ಸಿ.ವೆಂಕಟೇಶಪ್ಪ, ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಅಧ್ಯಕ್ಷ ಶಂಶುದ್ದೀನ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ರೈಲ್ವೇ ಸಲಹಾ ಸಮಿತಿ ಸದಸ್ಯ ಕಿಶೋರ್‌ಕುಮಾರ್, ಕೆ.ವಿ.ವೆಂಕಟಕೃಷ್ಣ, ಜೆ.ಸಿ.ಬಿ.ನಾರಾಯಣಪ್ಪ, ಚಿ.ವಿ.ಕೃಷ್ಣಪ್ಪ, ಎಂ.ಸಿ.ವೇಣುಗೋಪಾಲ್, ರಷೀದ್‌ಖಾನ್, ರಘುನಾಥ್, ಅಕ್ರಂ, ಶ್ರೀನಿವಾಸ್, ಗೋಪಾಲ್, ಆ.ಮು.ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT