ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ

Last Updated 18 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಪ್ರಣಾಳಿಕೆಯೊಂದನ್ನು ಸಿದ್ಧಪಡಿಸಲು ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ಶುಕ್ರವಾರ ಸಭೆ ಸೇರಿದ್ದ ನಗರ ವ್ಯಾಪ್ತಿಯ ಬಿಜೆಪಿ ಸಂಸದರು, ಶಾಸಕರು ಮತ್ತು ಬಿಬಿಎಂಪಿ ಸದಸ್ಯರ ಸಭೆ ನಿರ್ಣಯ ಕೈಗೊಂಡಿತು.

`ಬೆಂಗಳೂರಿನ ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಅಭಿವೃದ್ಧಿಗೊಳಿಸಲು ರಾಜ್ಯ ಬಜೆಟ್‌ನಲ್ಲಿ ಅಧಿಕ ಮೊತ್ತವನ್ನು ಮೀಸಲಿಡಬೇಕು' ಎನ್ನುವ ಮನವಿಯನ್ನು ಮುಖ್ಯಮಂತ್ರಿ ಮುಂದಿಡಲೂ ಸಭೆ ನಿರ್ಧರಿಸಿತು.
ಸಭೆಯ ಬಳಿಕ ವಿವರ ನೀಡಿದ ಶಾಸಕ ಎಸ್.ಆರ್. ವಿಶ್ವನಾಥ್, `ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವ ಸಲುವಾಗಿಯೇ ಈ ಸಭೆ ಏರ್ಪಡಿಸಲಾಗಿತ್ತು. ನಮ್ಮ ಸರ್ಕಾರದ ಸಾಧನೆಗಳನ್ನು ಜನತೆ ಮುಂದಿಡಲು ಬೂತ್ ಮಟ್ಟದ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ತಕ್ಷಣ ಈ ಕಾರ್ಯಕ್ಕೆ ಚಾಲನೆ ಸಿಗಲಿದೆ' ಎಂದು ತಿಳಿಸಿದರು.

`ಸಚಿವರ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿದ್ದು, ಒಂದೊಂದು ತಂಡವೂ ನಿತ್ಯ ಮೂರು ಸಭೆ ನಡೆಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ' ಎಂದು ಹೇಳಿದರು.`ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಕ್ಷದ ಪರವಾಗಿ ಒಂದು ಮತ್ತು ಕ್ಷೇತ್ರದ ಅಭಿವೃದ್ಧಿ ವಿವರಿಸಲು ಶಾಸಕರ ವತಿಯಿಂದ ಮತ್ತೊಂದು ಸಾಧನಾ ಪುಸ್ತಕಗಳನ್ನು ಜನತೆಗೆ ಹಂಚಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಮನೆ-ಮನೆಗೆ ಬಿಜೆಪಿ ಅಭಿಯಾನ ನಡೆಯಲಿದೆ' ಎಂದು ವಿವರಿಸಿದರು.

`ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ ಗೆದ್ದ 17 ಸ್ಥಾನ ಉಳಿಸಿಕೊಳ್ಳುವ ಜೊತೆ ಇನ್ನಷ್ಟು ಹೆಚ್ಚಿನ ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ. ಸಂಸದರು ಮತ್ತು ಬಿಬಿಎಂಪಿ ಸದಸ್ಯರು ಅಗತ್ಯವಾದ ಎಲ್ಲ ಸಹಕಾರ ನೀಡಲಿದ್ದಾರೆ. ಫೆ. 15ರಿಂದ ಪ್ರಚಾರ ಸಭೆಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ' ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಆರ್. ಅಶೋಕ ಮತ್ತು ಕಾನೂನು ಸಚಿವ ಎಸ್.ಸುರೇಶಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಸಂಸದರಾದ ಡಿ.ಬಿ. ಚಂದ್ರೇಗೌಡ, ಪಿ.ಸಿ. ಮೋಹನ್ ಪಾಲ್ಗೊಂಡಿದ್ದರು. ಮತ್ತೊಬ್ಬ ಸಂಸದ ಅನಂತಕುಮಾರ್ ಗೈರು ಹಾಜರಾಗಿದ್ದರು.

ಹಾಲಿ ಶಾಸಕರ ಕ್ಷೇತ್ರ ಹೊರತುಪಡಿಸಿ ಮಿಕ್ಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಲು ಕೆಲ ಬಿಬಿಎಂಪಿ ಸದಸ್ಯರು ಒಲವು ವ್ಯಕ್ತಪಡಿಸಿದರು. ಅವರಿಗೆ ಶಾಸಕರಿಂದ ಬೆಂಬಲವೂ ವ್ಯಕ್ತವಾಯಿತು. ಕೆಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪೈಪೋಟಿ ತೀವ್ರವಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶೋಭಾ ಗೈರು
ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ನಡೆದ ಬಿಬಿಎಂಪಿ ವ್ಯಾಪ್ತಿಯ ಬಿಜೆಪಿ ಶಾಸಕರ ಸಭೆಗೆ ಗೈರು ಹಾಜರಾಗಿದ್ದರು. ಸಭೆಗೆ ಬಾರದ ಏಕೈಕ ಶಾಸಕಿ ಅವರಾದ ಕಾರಣ ಅವರ ಅನುಪಸ್ಥಿತಿ ಎದ್ದುಕಂಡಿತು. ನಗರದ 17 ಜನ ಬಿಜೆಪಿ ಶಾಸಕರ ಪೈಕಿ ಮಿಕ್ಕವರೆಲ್ಲ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾದ ಸಚಿವ ವಿ.ಸೋಮಣ್ಣ (ವಿಧಾನ ಪರಿಷತ್ ಸದಸ್ಯ) ಸಹ ಸಭೆಯಲ್ಲಿ ಭಾಗವಹಿಸಿದ್ದರು.

`ಶೋಭಾ ಅವರಿಗೂ ಆಮಂತ್ರಣ ಹೋಗಿತ್ತು. ಏಕೆ ಆಗಮಿಸಿಲ್ಲ ಎನ್ನುವುದು ಗೊತ್ತಿಲ್ಲ' ಎಂದು ಬಿಜೆಪಿ ಮುಖಂಡರು ತಿಳಿಸಿದರು. `ಶೋಭಾ ಕೆಜೆಪಿಯಿಂದ ಸ್ಪರ್ಧಿಸಲಿದ್ದು, ಯಶವಂತಪುರಕ್ಕೆ ಬೇರೆ ಅಭ್ಯರ್ಥಿ ಹಾಕಬೇಕು ಮತ್ತು ಆ ಕ್ಷೇತ್ರವನ್ನು ಉಳಿಸಿಕೊಳ್ಳಲು ತೀವ್ರ ಪೈಪೋಟಿ ಒಡ್ಡಬೇಕು ಎನ್ನುವ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು' ಎಂದು ಮೂಲಗಳು ತಿಳಿಸಿವೆ.

ಸೋಮಣ್ಣ ಗರಂ
ಸಭೆಯಿಂದ ಹೊರಬಂದ ಸಚಿವ ವಿ.ಸೋಮಣ್ಣ ಅವರನ್ನು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಮುತ್ತಿಗೆ ಹಾಕುತ್ತಿದ್ದಂತೆ ಅವರು ಟಿವಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹರಿಹಾಯ್ದರು.`ನನ್ನ ಅನುಭವವನ್ನೆಲ್ಲ ಕಡೆಗಣಿಸಿ, ಈ ಸೋಮಣ್ಣ ಏನೆಂಬುದನ್ನು ತಿಳಿಯದೆ ಗಾಳಿ ಸುದ್ದಿಯನ್ನು ಹಬ್ಬಿಸುತ್ತಿದ್ದೀರಿ. ಬಿಜೆಪಿ ನನ್ನ ಮನೆ. ಈ ಪಕ್ಷದಿಂದಲೇ ನಾನು ಶಾಸಕನಾಗಿದ್ದೇನೆ. ಇದೇ ಪಕ್ಷದಲ್ಲಿ ಇರುತ್ತೇನೆ. ನಾನು ಪಕ್ಷ ಬಿಡುತ್ತೇನೆ ಎಂದು ಹೇಳಿದ್ದಾದರೂ ಯಾರು' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT