ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಿಜೆಪಿಯಿಂದ ವಿಕಾಸ; ಕಾಂಗ್ರೆಸ್‌ನಿಂದ ವಿನಾಶ'

Last Updated 4 ಡಿಸೆಂಬರ್ 2012, 9:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಚಿಂತಿಸುತ್ತಾ, ಜನಸಾಮಾನ್ಯರ ವಿಕಾಸಕ್ಕೆ ಬಿಜೆಪಿ ಪಣತೊಟ್ಟಿದೆ. ಆದರೆ, ಕಾಂಗ್ರೆಸ್ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ, ಲಕ್ಷಾಂತರ ಕೋಟಿ ರೂಪಾಯಿ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎಂ.ಕೆ.ಪ್ರಾಣೇಶ್ ಕಿಡಿಕಾರಿದರು.

ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ಆರಂಭಿಸಿ ರುವ ಬಿಜೆಪಿ ವಿಕಾಸಯಾತ್ರೆಗೆ ಸೋಮವಾರ ಮತ್ತಾವರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳು ಮತ್ತು ಅಡುಗೆ ಅನಿಲ ಬೆಲೆ ಏರಿಸುವ ಮೂಲಕ ಕಾಂಗ್ರೇಸ್ ನೇತೃತ್ವದ ಯುಪಿಎ ಸರ್ಕಾರ ಬಡವರ ಕೂಳಿಗೂ ಕತ್ತರಿ ಹಾಕಿದೆ. ಪಡಿತರ ಆಹಾರ, ಐ.ಪಿ.ಎಲ್, 2ಜಿ ಸ್ಪೆಕ್ಟ್ರಂ ಹಗರಣ ಸೇರಿದಂತೆ ಲಕ್ಷಾಂತರ ಕೋಟಿ ಹಣ ಲೂಟಿ ಮಾಡುವ ಮೂಲಕ ವಿದೇಶಿ ಬ್ಯಾಂಕ್‌ಗಳಲ್ಲಿ ಹಣದ ಗೋಪುರ ಹುದುಗಿಟ್ಟಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಮುಗ್ಧ ಜನರಿಗೆ ತಿಳಿಸುವ ಜತೆಗೆ ವ್ಯಕ್ತಿಗಿಂತ ದೇಶಮುಖ್ಯ ಎನ್ನುವ ವಚಾರಿಕತೆ ಹೊಂದಿರುವ ಬಿಜೆಪಿಯ ಮಹತ್ವವನ್ನು ಸಾರಲಾಗುತ್ತಿದೆ ಎಂದರು.

ರೈತರು, ಅಂಗವಿಕಲರು, ವೃದ್ಧರು, ವಿದ್ಯಾರ್ಥಿಗಳಿಗೂ ಸೌಲಭ್ಯ ಒದಗಿಸಿರುವ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ತಿಳಿಹೇಳಲು ಪಾದಯಾತ್ರೆ ನಡೆಸಲಾಗುತ್ತಿದೆ. ಜನಸಾಮಾನ್ಯರ ಬದುಕು ಕಟ್ಟಿಕೊಡಲು ಬಿಜೆಪಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಮಾತನಾಡಿ, ಕಳೆದ 60 ವರ್ಷಗಳ ಇತಿಹಾಸದಲ್ಲಿ ಕಂಡರಿಯದ ಅಭಿವೃದ್ಧಿ ಈ ಕ್ಷೇತ್ರದಲ್ಲಾಗಿದೆ. ಶಾಲೆ, ರಸ್ತೆ, ಸಮುದಾಯ ಭವನ ಸೇರಿದಂತೆ ವೈಯುಕ್ತಿಕ ಯೋಜನೆಗಳೇ ಅಭಿವೃದ್ಧಿಗೆ ಪ್ರತ್ಯಕ್ಷ ನಿದರ್ಶನ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕನಕರಾಜ ಅರಸ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಮುಖಂಡರಾದ ಆನಂದ್, ಉಮೇಶ್, ಈರಗಯ್ಯ, ಪಾಪಣ್ಣ, ನಂಜುಂಡೇಗೌಡ ಇನ್ನಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT