ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿ ಬದನೆ ಮೇಲಿನ ನಿರ್ಬಂಧ ಸರಿಯಲ್ಲ

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಜೈವಿಕ ಆಹಾರ ಸುರಕ್ಷಿತವಲ್ಲ ಎನ್ನುವುದು ಆಧಾರರಹಿತ. ಅದಕ್ಕೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ. ಬಿಟಿ ಬದನೆಗೆ ನಿರ್ಬಂಧ ಹೇರುವ ವಿಚಾರದಲ್ಲಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕೇವಲ ಎನ್‌ಜಿಒಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ~ ಎಂದು ಪ್ರಮುಖ ಜೈವಿಕ ತಂತ್ರಜ್ಞರು ಹಾಗೂ ಸಮಾಜ ವಿಜ್ಞಾನಿಗಳು ಸೋಮವಾರ ಇಲ್ಲಿ ಆರೋಪಿಸಿದರು.

ಫೌಂಡೇಷನ್ ಫಾರ್ ಬಯೋ ಟೆಕ್ನಾಲಜಿ ಅವೇರ್‌ನೆಸ್ ಅಂಡ್ ಎಜುಕೇಷನ್ (ಫೇಬ್), ಅಸೋಸಿಯೇಷನ್ ಆಫ್ ಬಯೋಟೆಕ್ ಲೆಡ್ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಆಯೋಜಿಸಿದ್ದ `ಭಾರತದಲ್ಲಿ ಆಹಾರ ಭದ್ರತೆಗೆ ಜೈವಿಕ ತಂತ್ರಜ್ಞಾನದ ಬೆಳೆಗಳು~ ಕುರಿತ ವಿಚಾರ ಸಂಕಿರಣದ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಬಿಟಿ ಬದನೆಯ ವಾಣಿಜ್ಯ ಬಳಕೆಗಾಗಿ ಜಿಇಎಸಿ ಶಿಫಾರಸುಗಳನ್ನು ಕೇಂದ್ರ ಸರ್ಕಾರ ತಕ್ಷಣ ಒಪ್ಪಿಕೊಳ್ಳಬೇಕು. ಅಲ್ಲದೆ, ಇನ್ನೂ ವಿಳಂಬ ಮಾಡದೆ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಮಸೂದೆಯನ್ನು ಜಾರಿಗೊಳಿಸಬೇಕು~ ಎಂದು `ಫೇಬ್~ನ ಅಧ್ಯಕ್ಷ ಡಾ. ಶಾಂತು ಶಾಂತಾರಾಮ್ ಹಾಗೂ ಕಾರ್ಯದರ್ಶಿ ಡಾ.ಸಿ. ಕಾಮೇಶ್ವರರಾವ್ ಆಗ್ರಹಿಸಿದರು.

`ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ಯಾವುದೇ ವೈಜ್ಞಾನಿಕ ಕಾರಣಗಳನ್ನು ನೀಡದೆ ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಿಟಿ ಬದನೆಗೆ ಅವಕಾಶ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೈವಿಕ ಆಹಾರ ಸುರಕ್ಷಿತ ಎನ್ನುವ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಲು ನಾವು ಸಿದ್ಧ. ಭವಿಷ್ಯದ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸುವುದರ ಜತೆಗೆ, ಅಪೌಷ್ಟಿಕತೆ ನಿವಾರಿಸಲು ಹಾಗೂ ರೈತರು ಗುಣಮಟ್ಟದ ಬೆಳೆ ಬೆಳೆದು ಉತ್ತಮ ಬೆಲೆ ನಿರೀಕ್ಷಿಸಲು ಜೈವಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ~ ಎಂದು ಅವರು ಪ್ರತಿಪಾದಿಸಿದರು.

ಯಾವುದೇ ಅಡ್ಡ ಪರಿಣಾಮ ಬೀರದು:  `ಜೈವಿಕ ತಂತ್ರಜ್ಞಾನ ಆಧಾರಿತ ಬೆಳೆಗಳು ಮಾನವ, ಪ್ರಾಣಿ ಸಂಕುಲ ಅಥವಾ ಪರಿಸರದ ಮೇಲೆ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮ ಬೀರುವುದಿಲ್ಲ. ಇದಕ್ಕೆ ವಿಶ್ವದ ಸುಮಾರು 500 ವಿಜ್ಞಾನಿಗಳು ನಡೆಸಿದ 150 ಪ್ರಯೋಗಗಳಿಂದ ದೃಢಪಟ್ಟಿದೆ. ಅ್ಲ್ಲಲದೆ, ಬಿಟಿ ತಳಿಗಳ ಬಗ್ಗೆ ನಡೆದ ಸಂಶೋಧನೆಗೆ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ವಿಶ್ವದ ಏಳು ವೈಜ್ಞಾನಿಕ ಅಕಾಡೆಮಿಗಳಿಂದ ಮನ್ನಣೆ ಸಿಕ್ಕಿದೆ~ ಎಂದು ಅವರು ಸ್ಪಷ್ಟಪಡಿಸಿದರು.

`ವಿಜ್ಞಾನಿಗಳಲ್ಲಿ ಎರಡು ಗುಂಪು ಇರುವುದು ನಿಜ. ಒಂದು ಗುಂಪು ಜೈವಿಕ ತಂತ್ರಜ್ಞಾನ ಆಧರಿತ ಬೆಳೆಗಳನ್ನು ಬೆಂಬಲಿಸಿದರೆ, ಮತ್ತೊಂದು ಗುಂಪು ವಿರೋಧಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ವಿಜ್ಞಾನಿಗಳು ಒಮ್ಮತದ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಿದೆ~ ಎಂದರು.

ಇದೇ ಸಂದರ್ಭದಲ್ಲಿ `ಬೆಂಗಳೂರು ಘೋಷಣೆ~ ಅನಾವರಣಗೊಳಿಸಿದ ಅವರು, `ಭಾರತೀಯ ಕೃಷಿ ಜೈವಿಕ ತಂತ್ರಜ್ಞಾನದ ಸಂಶೋಧನೆ ಹಾಗೂ ಅಭಿವೃದ್ಧಿಗೆ ಅಡ್ಡಿಯಾಗಿರುವ ಅಸಮರ್ಥನೀಯ ಹಾಗೂ ಅನಿಯಂತ್ರಿತ ನಿಯಮಗಳನ್ನು ನಿವಾರಿಸಬೇಕು~ ಎಂದರು.
 
`ಈ ಸಂಬಂಧ 2009ರಿಂದ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸುತ್ತಿದ್ದರೂ ಪ್ರಧಾನಿ ಕಚೇರಿ ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಪ್ರಧಾನಿ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ರವಾನೆಯಾದರೂ ಪ್ರತಿಕ್ರಿಯೆ ಇಲ್ಲ. ಇದರ ಹಿಂದೆ ಎನ್‌ಜಿಒಗಳ ಕೈವಾಡ ಅಡಗಿದೆ~ ಎಂದು ಅವರು ಆರೋಪಿಸಿದರು.

`ಚೀನಾ ಕೃಷಿ ಬೆಳೆಗಳ ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರತಿ ವರ್ಷ ನಾಲ್ಕು ದಶಲಕ್ಷ ಡಾಲರ್ ಖರ್ಚು ಮಾಡುತ್ತಿದೆ. ಅದು ಬಿಟಿ ಅಕ್ಕಿಯನ್ನು ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡುವ ಸ್ಥಿತಿಯಲ್ಲಿರುವಾಗ ಭಾರತಕ್ಕೆ ಏನಾಗಿದೆ?~ ಎಂದು ಪ್ರಶ್ನಿಸಿದರು.

`ಬಿಟಿ ಕೃಷಿ ತಳಿಗಳ ಸಂಶೋಧನೆಗೆ ತಳಿಗಳ ಮೇಲೆ ಪ್ರಯೋಗ ಮಾಡುವುದಕ್ಕೇ ರಾಜ್ಯ ಸರ್ಕಾರಗಳು ಅನುಮತಿ ನೀಡುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಹೇಗೆ ಜನರಿಗೆ ಮನವರಿಕೆ ಮಾಡಲು ಸಾಧ್ಯವಾದೀತು?~ ಎಂದು ಅವರು ಕೇಳಿದರು.

`ವಿಶ್ವದ ಹಲವು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಹಸಿವು, ಅಪೌಷ್ಟಿಕತೆ ನಿವಾರಣೆಗೆ ಕೃಷಿ ಜೈವಿಕ ತಂತ್ರಜ್ಞಾನ ಬಳಸುತ್ತಿವೆ. ಆದರೆ, ಭಾರತದಲ್ಲಿ ಜನ ಅಪೌಷ್ಟಿಕತೆಯಿಂದ ಸಾಯುತ್ತಿದ್ದರೂ ಅದರ ಬಗ್ಗೆ ಚಕಾರವೆತ್ತುವವರಿಲ್ಲ. ಕೇವಲ ಆಹಾರ ಭದ್ರತೆ ಬಗ್ಗೆ ಪ್ರಸ್ತಾಪಿಸುವ ಜನಪ್ರತಿನಿಧಿಗಳು, ಅಪೌಷ್ಟಿಕತೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ~ ಎಂದು ಅವರು ವಿಷಾದಿಸಿದರು.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಿ ಪ್ರೊ. ರೊನಾಲ್ಡ್ ಹೆರ‌್ರಿಂಗ್, ಸ್ವಿಟ್ಜರ್ಲೆಂಡ್‌ನ ಬರ್ನ್ ಜೀವ ವೈವಿಧ್ಯ ವಿಶ್ವವಿದ್ಯಾಲಯದ ಗೌರವ ಪ್ರೊಫೆಸರ್ ಕ್ಲಾಸ್ ಅಮ್ಮನ್, ಹೈದರಾಬಾದ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ನ್ಯೂಟ್ರಿಷನ್‌ನ ನಿರ್ದೇಶಕ ಡಾ.ಬಿ. ಶಶಿಕಿರಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT