ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿಪಿಎಸ್ 2ನೇ ಘಟಕ: ಪ್ರಾಯೋಗಿಕ ಚಾಲನೆ

Last Updated 11 ಜನವರಿ 2012, 6:25 IST
ಅಕ್ಷರ ಗಾತ್ರ

ಬಳ್ಳಾರಿ: ತಾಲ್ಲೂಕಿನ ಕುಡಿತಿನಿ ಬಳಿಯಿರುವ ಬಳ್ಳಾರಿ ಶಾಖೋತ್ಪನ್ನ ಕೇಂದ್ರದ ಎರಡನೇ ಘಟಕದದಲ್ಲಿ ವಿದ್ಯುತ್ ಉತ್ಪಾದನೆಗೆ ದಿನಗಣನೆ ಆರಂಭವಾಗಿದ್ದು, ಸೋಮವಾರ ಟರ್ಬೈನ್‌ಗಳಿಗೆ ಚಾಲನೆ ನೀಡುವ ಕಾರ್ಯವನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ.

500 ಮೆಗಾವಾಟ್ ಸಾಮರ್ಥ್ಯದ ಈ ಘಟಕದಲ್ಲಿ ಇದೇ 15ರ ವೇಳೆಗೆ ಆಯಿಲ್ ಸಿಂಕ್ರನೈಸೇಷನ್ ಕಾರ್ಯವನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡು, ಮಾರ್ಚ್‌ನಲ್ಲಿ ಕೋಲ್ ಸಿಂಕ್ರನೈಸೇಷನ್ ಆರಂಭಿಸಿ ರಾಜ್ಯಕ್ಕೆ ವಿದ್ಯುತ್ ಪೂರೈಸಲಾಗುವುದು ಎಂದು ಘಟಕದ ಕಾರ್ಯನಿರ್ವಾಹಕ ನಿರ್ದೇಶಕಿ ರತ್ನಮ್ಮ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬಿಟಿಪಿಎಸ್‌ನ ಮೊದಲ ಘಟಕಕ್ಕೆ ಕಲ್ಲಿದ್ದಲಿನ ಕೊರತೆ ಇಲ್ಲ. ನಿತ್ಯವೂ  500 ಮೆಗಾವಾಟ್ ವಿದ್ಯುತ್ ಉತ್ಪಾದನೆ ನಿರಾತಂಕವಾಗಿ ಸಾಗಿದ್ದು, ಎರಡನೇ ಘಟಕಕ್ಕೂ ಕಲ್ಲಿದ್ದಲು ಪೂರೈಕೆಗೆ ಸೂಕ್ತ ವ್ಯವಸ್ಥೆ ಇದೆ.
 
ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ 500 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯ ಮೊದಲ ಹಂತವಾಗಿ ಇದೀಗ ಟರ್ಬೈನೆಗೆ ಚಾಲನೆ ನೀಡಲಾಗಿದ್ದು, ಉತ್ತಮವಾಗಿ ಕಾರ್ಯಾರಂಭ ಮಾಡುವ ಮೂಲಕ ಕೇಂದ್ರದ ಸಿಬ್ಬಂದಿಗೆ ಸಂತಸ ನೀಡಿದೆ ಎಂದ ಅವರು ಹೇಳಿದ್ದಾರೆ.

ಬಿಎಚ್‌ಇಎಲ್ ಸಂಸ್ಥೆಯು 2008ರಲ್ಲಿ 2ನೇ ಘಟಕದ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, 2011ರ ನವೆಂಬರ್ ವೇಳೆಗೆ ಪೂರ್ಣಗೊಳಿಸಬೇಕಿತ್ತು. ಇನ್ನೊಂದು ವಾರದೊಳಗೆ ಆಯಿಲ್ ಸಿಂಕ್ರನೈಸೇಷನ್ ಮೂಲಕ ವಿದ್ಯುತ್ ಉತ್ಪಾದನೆ ಆರಂಭಿಸಿ, ನಂತರದ ಒಂದು ತಿಂಗಳಲ್ಲಿ ಕಲ್ಲಿದ್ದಲು ಮೂಲಕ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.

ಇದೇ ಕೇಂದ್ರದಲ್ಲಿ 700 ಮೆಗಾವಾಟ್ ಸಾಮರ್ಥ್ಯದ 3ನೇ ಘಟಕದ ಕಾಮಗಾರಿಯೂ ಭರದಿಂದ ಸಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸುವ ಗುರಿಯನ್ನು ಹೊಂದಲಾಗಿದೆ  ಎಂದು ಅವರು ವಿವರ ನೀಡಿದ್ದಾರೆ.

ಪ್ರಸಕ್ತ ವರ್ಷ ರಾಜ್ಯದಲ್ಲಿ ಸಾಕಷ್ಟು ಮಳೆ ಆಗದೆ, ಜಲ ವಿದ್ಯುತ್ ಕೇಂದ್ರಗಳಿಂದ ಉತ್ಪಾದನೆ ಸಮಸ್ಯೆಯಾಗುತ್ತಿದ್ದು, ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ ಅಗತ್ಯ ಕಲ್ಲಿದ್ದಲು ದೊರೆಯದ ಕಾರಣ ರಾಜ್ಯ ಇದೀಗ ಎದುರಿಸುತ್ತಿರುವ ವಿದ್ಯುತ್ ಕ್ಷಾಮವನ್ನು ಬಳ್ಳಾರಿ ಘಟಕ ಕೊಂಚ ಪ್ರಮಾಣದಲ್ಲಿ ನೀಗುವ ವಿಶ್ವಾಸವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT