ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ಸ್

Last Updated 25 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಆಟೊದಲ್ಲಿ ಓಡಾಡುವುದು ರೋಮಾಂಚನಕಾರಿ ಅನುಭವ. ಮೊದಲ ಬಾರಿ ಬೆಂಗಳೂರಿಗೆ ಹೋದವರಿಗಂತೂ ಆಟೊದಲ್ಲಿ ಕುಳಿತರೆ ಪ್ರಾಣ ಕುತ್ತಿಗೆಗೇ ಬರುತ್ತದೆ. ಈ ಅನುಭವ ಪಡೆದವರು ಹೊಸದೊಂದು ಪದಗುಚ್ಛವನ್ನೇ ಹುಟ್ಟು ಹಾಕಿದ್ದಾರೆ. `ಆಟೊ ಎಂಬ ಜಿರಳೆ~. ಅಚ್ಚರಿ ಅನ್ನಿಸುತ್ತಿದೆ ಅಲ್ಲವೆ.
 
ಆದರೆ ಇಲ್ಲಿ ಅಂಥಾ ಅಚ್ಚರಿಯ ಸಂಗತಿ ಏನೇನೂ ಇಲ್ಲ! ಜಿರಳೆಗೂ ಆಟೊಗೂ ಏನು ಸಂಬಂಧ? ಸಂಬಂಧ ಇದೆ. ಮನೆಯಲ್ಲಿ ಜಿರಳೆಯೊಂದನ್ನು ಕಂಡರೆ ಅದನ್ನು ಹಿಡಿಯುವುದು ಸುಲಭವೇ. ಕಷ್ಟಪಟ್ಟರೆ ಹೊಡೆದು ಹಾಕಬಹುದು. ಆದರೆ ಅಷ್ಟರಲ್ಲೇ ಅದು ಸಣ್ಣಪುಟ್ಟ ಸಂದುಗಳಲ್ಲಿ ನುಗ್ಗಿ, ಹರಿದಾಡಿ ಸಾಕಷ್ಟು ತರಲೆ ಮಾಡುತ್ತದೆ. ಜಿರಳೆಯ ತಲೆ ನುಗ್ಗಿಬಿಟ್ಟರೆ ಸಾಕು. ಎಂತಹ ಕಿರಿದಾದ ಜಾಗವೇ ಇದ್ದರೂ ಹೇಗೋ ನುಗ್ಗಿ ಜಾಗ ಮಾಡಿಕೊಂಡು ಒಳಹೋಗಿಬಿಡುತ್ತದೆ.

ಈ ಆಟೊ ಸಹ ಅಷ್ಟೇ. ಮೂರು ಚಕ್ರದ ಆಟೊರಿಕ್ಷಾದ ಸ್ಪೆಷಾಲಿಟಿಯೇ ಇದು. ಇದು ಜಿರಳೆಯಂತೆ ಚುರುಕು. ಎಂತಹ ಪುಟ್ಟ ಗಲ್ಲಿಯೇ ಇರಲಿ, ಮುಂದಿನ ಒಂದು ಚಕ್ರ ನುಗ್ಗಿಬಿಟ್ಟರೆ ಸಾಕು. ಹಿಂದಿನ ತನ್ನ ದೇಹವನ್ನು ನುಗ್ಗಿಸಿಕೊಂಡು ಹೊರಟೇ ಬಿಡುತ್ತದೆ. ಹಾಗಾಗೇ ಒಳಗೆ ಕುಳಿತವರದು ಜೀವ ಕೈಯಲ್ಲಿ ಹಿಡಿದು ಕೂರಬೇಕಾದ ಪರಿಸ್ಥಿತಿ.
 
ಇನ್ನು ಆಟೊದ ಮೀಟರ್ ಕತೆಯೂ ಅಷ್ಟೇ. ಪ್ರಯಾಣಿಕ ರಸ್ತೆಯನ್ನು ನೋಡುವುದೇ ಇಲ್ಲ. ನೋಡುವುದು ಮೀಟರ್‌ನ್ನು ಮಾತ್ರ! 20 ರೂಪಾಯಿಯಿಂದ ಜಂಪ್ ಆಗಲು ಶುರುವಾದರೆ ಅದು ನಿಲ್ಲುವುದೇ ಇಲ್ಲ! ಆಟೊ ನಿಂತಾಗಲೇ ಮೀಟರ್ ನಿಲ್ಲುವುದು. ಪಾಪಾ ಆಟೊವಾಲಾಗಳು ತಾನೆ ಏನು ಮಾಡಿಯಾರು? ಪೆಟ್ರೋಲ್ ಬೆಲೆ ಏರುತ್ತಿದ್ದಂತೆ ಅವರ ತಾಳ್ಮೆಯೂ ಹಾರಿ ಹೋಗುತ್ತಿರುತ್ತದೆ.

ಇಣಕಿ ನೋಡಲು ಮಿರರ್!:
ಜೋಡಿ ಹಕ್ಕಿಗಳಿಗೆ ಆಟೊ ಹೇಳಿ ಮಾಡಿಸಿದ್ದಂತೆ! ಹೀಗಂತ ಬ್ಲಾಗರ್‌ಗಳು ಬರೆದುಕೊಳ್ಳುತ್ತಾರೆ. ಫೇಸ್‌ಬುಕ್ ಮಾದರಿಯ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಈ ರೀತಿಯ ಮಾತುಗಳು ಹರಿದಾಡುತ್ತವೆ. ಏಕೆಂದರೆ ಜೋಡಿಗಳಿಗೆ ಹೇಳಿ ಮಾಡಿಸಿದಂತ ಸೀಟು ಆಟೊದಲ್ಲಿ ಇದೆ. ಆದರೆ ಆಟೊರಿಕ್ಷಾ ಚಾಲಕನಿಗೆ ಮಾತ್ರ `ಎಕ್ಸ್~ ರೇಟೆಡ್ ಸೀನ್ ಕಾಣುತ್ತಂತೆ. ಹೌದಾ! ಅದು ಹೇಗೆ.
 
ಏಕೆಂದರೆ, ಹಿಂಬದಿಯ ರಸ್ತೆ ನೋಡಲೆಂದು ಆಟೊರಿಕ್ಷಾದಲ್ಲಿರುವ ಎರಡು ಕನ್ನಡಿಗಳಲ್ಲಿ ಒಂದು ಹಿಂಬದಿಯ ಪ್ರಯಾಣಿಕರನ್ನು ನೋಡುತ್ತಿರುತ್ತದೆ. ರಸ್ತೆ ನೋಡುವ ಕಣ್ಣು ಹಿಂಬದಿ ಕುಳಿತ ಪ್ರಯಾಣಿಕರ ಮೇಲೆ ಇರುತ್ತದೆ.

ಹಾಗಾಗಿ ತನ್ನ ಪ್ರಯಾಣಿಕರು ಏನೇ ಮಾಡುತ್ತಿದ್ದರೂ ಅದು ರಿಕ್ಷಾ ಚಾಲಕನಿಗೆ ಕಾಣುತ್ತಿರುತ್ತದೆ. ಹಾಗಾಗಿ ಪ್ರಯಾಣಿಕ ಎಚ್ಚರಿಕೆ ವಹಿಸುವುದು ಒಳಿತು. ಸುಮ್ಮನೆ ಕೂರುವ ಬದಲು ಏನೇ ಕೀಟಲೆ ಮಾಡಿದರೂ, ರಿಕ್ಷಾವಾಲಾನ ಕಣ್ಣಿಗೆ ಗುರಿಯಾಗಬೇಕಾಗುತ್ತದೆ! -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT