ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ ಬಳಿ ಬೆಂಗಳೂರು ಕಸ ಸುರಿಯಬೇಡಿ

ಗ್ರಾಮಸ್ಥರ ಆಕ್ರೋಶ, ರಾಮನಗರ ಜಿಲ್ಲಾಧಿಕಾರಿಗೆ ಮನವಿ
Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ರಾಮನಗರ: `ಬೆಂಗಳೂರಿನ ತ್ಯಾಜ್ಯವನ್ನು ಬಿಡದಿ ಸಮೀಪ ಕೊಡಿಯಾಲ ಕರೇನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸುರಿಯಲು ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಕೈ ಬಿಡಬೇಕು' ಎಂದು ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಬಿಡದಿ ಕೈಗಾರಿಕಾ ಘಟಕದ ಸಮೀಪದ ಊರುಗಳಾದ ಬೈರಮಂಗಲ, ಚೌಕಳ್ಳಿ, ಅಂಚಿಪುರ, ಜೋಗನಪಾಳ್ಯ, ತಾಳಕುಪ್ಪೆ, ಪರಸನಪಾಳ್ಯ, ಕೊಡಿಯಾಲ ಕರೇನಹಳ್ಳಿ ಸೇರಿದಂತೆ ಇನ್ನು ಕೆಲವು ಗ್ರಾಮಗಳ ಜನತೆಯ ಜೀವನವನ್ನು ಬೆಂಗಳೂರಿನ ಕೊಳಚೆ ನೀರು ಹಾಳು ಮಾಡಿದೆ. ಈ ಭಾಗದ ಕೆರೆ ಮತ್ತು ಅಂತರ್ಜಲವನ್ನು ಸಂಪೂರ್ಣ ಕಲುಷಿತಗೊಳಿಸಿದೆ. ಬಟ್ಟೆ ಒಗೆಯಲು ಯೋಗ್ಯವಲ್ಲದ ನೀರಾಗಿ ಅದು ಮಾರ್ಪಟ್ಟಿದೆ. ಇದರಿಂದ ಇಲ್ಲಿಯ ಜನರು ಹಲವು ರೋಗಗಳಿಗೆ ಈಡಾಗುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪ್ರಕಾಶ್ ರೈ ಜಿಲ್ಲಾಧಿಕಾರಿಗೆ ತಿಳಿಸಿದರು.

ಇದಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಗ್ರಾಮಸ್ಥರಿಂದ ಜಯ ಕರ್ನಾಟಕ ಸಂಘಟನೆ ಸಹಿ ಸಂಗ್ರಹಣೆ ಮಾಡಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪಿ.ಯೋಗೇಶ್ವರ್ ಅವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಸಚಿವರು ಮತ್ತು ಅಧಿಕಾರಿಗಳು ತಿಂಗಳೊಳಗೆ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಮನವಿ ಪತ್ರ ಸಲ್ಲಿಸಿ ಒಂದೂವರೆ ವರ್ಷ ಕಳೆದರು ಯಾರು ಕೂಡ ಸಮಸ್ಯೆಗೆ ಸ್ಪಂದಿಸದೆ ತಮಗೆ ಸಂಬಂಧವಿಲ್ಲ ಎಂಬಂತೆ ಕೈಕಟ್ಟಿ ಕುಳಿತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಬಿಡದಿಯ ಸುತ್ತಮುತ್ತಲಿನ ಫಲವತ್ತಾದ ಭೂಮಿಯನ್ನು ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ಇಲ್ಲಿ ಸ್ಥಾಪನೆಯಾಗಿರುವ ಕೈಗಾರಿಕೆಗಳಿಂದ ಬಡ ಜನರ ಆರೋಗ್ಯ ಹದಗೆಟ್ಟಿದೆ. ಸಾಲದು ಎಂಬಂತೆ ಬಿಬಿಎಂಪಿ ಒಳಸಂಚು ಮಾಡಿ ಬೆಂಗಳೂರಿನ ತ್ಯಾಜ್ಯವನ್ನು ಹಾಕಲು ಕೋಡಿಯಾಲ ಕರೇನಹಳ್ಳಿ ಸುತ್ತಮುತ್ತಲ ಪ್ರದೇಶ ಗುರುತಿಸಿ ರಾತ್ರೋ ರಾತ್ರಿ ರಸ್ತೆಗೆ ಡಾಂಬರು ಹಾಕಿಸಿದ್ದು ಅಕ್ರಮ ಅಲ್ಲವೆ ಎಂದು ಅವರು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು 15 ದಿನಗಳೊಳಾಗಾಗಿ ಸಮಸ್ಯೆಯನ್ನು ಬಗೆಹರಿಸದಿದ್ದರೆ ಈ ವಿಭಾಗದ ರೈತರು ಮತ್ತು ಗ್ರಾಮಸ್ಥರ ಪರವಾಗಿ ಜಯ ಕರ್ನಾಟಕ ಸಂಘಟನೆಯು ಬಿಡದಿಯ ಬೈರಮಂಗಲ ಕ್ರಾಸ್‌ನಲ್ಲಿ ಅನಿರ್ದಿಷ್ಟ ಕಾಲ ಬೆಂಗಳೂರು- ಮೈಸೂರು ಹೆದ್ದಾರಿ ತಡೆ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.ಇದೇ 22ರೊಳಗೆ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಇದೇ 28 ರಂದು ಜಯ ಕರ್ನಾಟಕ ಸಂಘಟನೆಯ ವತಿಯಿಂದ ಅನಿರ್ದಿಷ್ಟಾವಧಿ ರಸ್ತೆ ತಡೆ ಆರಂಭವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕುಡುಗೋಲು ಹಿಡಿದು ಎಚ್ಚರಿಕೆ
ರಾಮನಗರ: ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿ ಗ್ರಾಮದ ಬಳಿ ಕಸ ಸುರಿಯಲು ಯಾರಾದರೂ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದರು.ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ನಿಗದಿಪಡಿಸಿರುವ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕುಳಿತು, ಕೈಯಲ್ಲಿ ಕುಡುಗೋಲುಗಳನ್ನು ಹಿಡಿದು ಪ್ರತಿಭಟಿಸಿದರು.

`ನಮ್ಮ ಗ್ರಾಮದಲ್ಲಿ ಕಸ ಹಾಕಲು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಜಿ. ನಟರಾಜ್, ಕಾಂಗ್ರೆಸ್ ಮುಖಂಡರಾದ ದಿವಾಕರ್, ರೇಣುಕಪ್ಪ, ರೇಣುಕಾಪ್ರಸಾದ್ ಹಾಗೂ ಗ್ರಾಮಸ್ಥರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT