ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ ಯೋಜನೆಯ ವಿವಾದಾತ್ಮಕ ಟೆಂಡರ್‌ ರದ್ದು

ಅನಿಲ ಆಧಾರಿತ ವಿದ್ಯುತ್
Last Updated 12 ಸೆಪ್ಟೆಂಬರ್ 2013, 19:58 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಸ್ಪಿಟ್ಜರ್‌ಲ್ಯಾಂಡ್‌ ಮೂಲದ ಅಲ್ಸ್‌­ತೋಮ್‌ ಕಂಪೆನಿಗೆ ನೀಡಿದ್ದ ಬಿಡದಿಯ ಅನಿಲ ಆಧಾರಿತ ವಿದ್ಯುತ್ ಯೋಜನೆಯ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ.

ರಾಜ್ಯ ಸರ್ಕಾರದ ಸೂಚನೆಯಂತೆ ಕರ್ನಾಟಕ ವಿದ್ಯುತ್ ನಿಗಮವು  (ಕೆಪಿಸಿಎಲ್‌) ಅಲ್ಸ್‌ತೋಮ್‌ ಕಂಪೆನಿಗೆ ನೀಡಿದ್ದ ಗುತ್ತಿಗೆ ರದ್ದುಪಡಿಸಿ, ಹೊಸದಾಗಿ ಟೆಂಡರ್‌ ಕರೆದಿದೆ.

700 ಮೆಗಾವಾಟ್‌ ಸಾಮರ್ಥ್ಯದ ಈ ಯೋಜನೆಯ ಗುತ್ತಿಗೆಯನ್ನು ಅಲ್ಸ್ ತೋಮ್‌ ಕಂಪೆನಿಗೆ ನೀಡಿದ್ದ ಹಿಂದಿನ ಸರ್ಕಾರದ ಕ್ರಮ ವಿವಾದಕ್ಕೆ ಎಡೆಮಾಡಿ­ಕೊಟ್ಟಿತ್ತು.

ರೂ 2,184 ಕೋಟಿ   ಮೊತ್ತದ ಈ ಯೋಜನೆಯ ಗುತ್ತಿಗೆ ಪಡೆದಿರುವ ಅಲ್ಸ್‌ತೋಮ್‌ ಕಂಪೆನಿಯನ್ನು ವಿಶ್ವಬ್ಯಾಂಕ್‌ 2012ರ ಫೆಬ್ರುವರಿಯಲ್ಲೇ ಮೂರು ವರ್ಷಗಳ ಕಾಲ  ಕಪ್ಪುಪಟ್ಟಿಗೆ ಸೇರಿಸಿದೆ. ಅಂತಹ ಕಂಪೆನಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲ ಎಂದು ಟೆಂಡರ್‌ನಲ್ಲಿ ಭಾಗವಹಿಸಿದ್ದ ಇತರೆ ಕಂಪೆನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಅಲ್ಸ್‌ತೋಮ್‌ ಜೊತೆಗೆ ಸರ್ಕಾರಿ ಸ್ವಾಮ್ಯದ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌, ಎಲ್‌ ಅಂಡ್‌ ಟಿ – ಸೀಮನ್ಸ್‌, ಟಾಟಾ ಪ್ರಾಜೆಕ್ಟ್‌ ಲಿಮಿಟೆಡ್‌ ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದವು.

ಗುತ್ತಿಗೆಯಲ್ಲಿ ಅಕ್ರಮ ನಡೆದಿದ್ದು, ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಹುನ್ನಾರ ನಡೆದಿದೆ. ನಿರ್ದಿಷ್ಟ ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶ­ದಿಂದ ಟೆಂಡರ್‌ನ ಷರತ್ತುಗಳನ್ನು ಸಡಿಲಿಸಲಾಗಿದೆ. ಅತಿ ಕಡಿಮೆ ದರ ನಮೂದಿಸಿದ ದಾಖಲೆ ಸಿದ್ಧಪಡಿಸಿ ಅಲ್ಸ್‌ತೋಮ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ ಎಲ್‌ ಅಂಡ್‌ ಟಿಯ ಅನಿಲ ಆಧಾರಿತ ವಿದು್ಯತ್‌ ಯೋಜನೆಗಳ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕಮಲೇಶ್‌ ಗುಪ್ತ ಅವರು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು.

ಟೆಂಡರ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದ ಅವರು ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಕೋರ್ಟ್‌ ಮೊರೆ ಹೋದರೆ ಯೋಜನೆ ಅನುಷ್ಠಾನವಾಗುವುದು ಮತ್ತಷ್ಟು ತಡವಾಗುತ್ತದೆ ಎಂಬ ಉದ್ದೇಶದಿಂದ ಹಿಂದೆ ನೀಡಿದ್ದ ಗುತ್ತಿಗೆ  ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುತ್ತಿಗೆ ರದ್ದಾಗಿರುವುದನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ ಕೆಪಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್‌.ಕಾಂಬಳೆ, ಸರ್ಕಾರದ ಸೂಚನೆಯಂತೆ ಹೊಸದಾಗಿ ಟೆಂಡರ್‌ ಕರೆಯಲಾಗಿದೆ ಎಂದರು.

ಇ – ಟೆಂಡರ್‌ ಕರೆಯಲಾಗಿದ್ದು, ಡಿಸೆಂಬರ್ ವೇಳೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಜನವರಿ ವೇಳೆಗೆ ಕಾಮಗಾರಿ ಶುರುವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಜೆಪಿ ಸೇರುವ ಮುನ್ನ ತರಾತುರಿಯಲ್ಲಿ ಅಲ್ಸ್‌ತೋಮ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು.

ಈ ವರ್ಷದ ಜನವರಿ 4ರಂದು ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅಧ್ಯಕ್ಷತೆಯಲ್ಲಿ ನಡೆದ ಕೆಪಿಸಿಎಲ್‌ನ ಆಡಳಿತ ಮಂಡಳಿ ಸಭೆಯಲ್ಲಿ ಈ ಯೋಜನೆಯ ಗುತ್ತಿಗೆಯನ್ನು ಅಲ್ಸ್‌ ತೋಮ್‌ ಕಂಪೆನಿಗೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

30 ತಿಂಗಳಲ್ಲಿ ಪೂರ್ಣ: ಕಾಮಗಾರಿ ಶುರುವಾದ 30 ತಿಂಗಳಲ್ಲಿ ಯೋಜನೆ ಪೂರ್ಣವಾಗಲಿದೆ. ಗೇಲ್‌ ಸಂಸ್ಥೆ  ಈಗಾಗಲೇ ದಾಬೋಲ್‌ನಿಂದ ಬಿಡದಿವರೆಗೆ ಪೈಪ್‌ಲೈನ್‌ ಅಳವಡಿಸಿದ್ದು, ಅನಿಲ ಪೂರೈಕೆಗೆ ಯಾವುದೇ ತೊಂದರೆ ಇಲ್ಲ.

ಗೇಲ್‌ ಸಂಸ್ಥೆಯಿಂದಲೇ ಅನಿಲ ಖರೀದಿಸಬೇಕೇ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಅನಿಲ ಖರೀದಿಸ­ಬೇಕೇ ಎಂಬುದು ಇನ್ನೂ ನಿರ್ಧಾರ­ವಾಗಿಲ್ಲ. ಕಡಿಮೆ ದರಕ್ಕೆ ನೀಡುವು­ದಾದರೆ ಗೇಲ್‌ ಸಂಸ್ಥೆಯಿಂದಲೇ ಅನಿಲ ಖರೀದಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.

2011ರ ಜುಲೈ 5ರಂದು 1,400 ಮೆಗಾವಾಟ್‌ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿತ್ತು. ಅನಿಲವಿದ್ಯುತ್ ಯೋಜನೆಗೆ ಅಧಿಕ ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಮೊದಲ ಹಂತದಲ್ಲಿ 700 ಮೆಗಾವಾಟ್‌ ಸಾಮರ್ಥ್ಯದ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT