ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಹೆಸರಿನಲ್ಲಿ ಫೋರ್ಜರಿ ದಾಖಲೆ ಬಳಕೆ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಚೇನಹಳ್ಳಿಯಲ್ಲಿ ಬಿಡಿಎ ಸ್ವಾಧೀನದಲ್ಲಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ಖರೀದಿಸುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರು, ಅಳಿಯ ಮತ್ತು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಫೋರ್ಜರಿ ದಾಖಲೆ ಬಳಸಿರುವುದು ಬೆಳಕಿಗೆ ಬಂದಿದೆ.

ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರಿನ ರಾಚೇನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಮುನ್ನವೇ ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ ಖರೀದಿಸಿದ್ದರು. ಬಳಿಕ ಅದನ್ನು 20 ಕೋಟಿ ರೂಪಾಯಿ ಮೊತ್ತಕ್ಕೆ ಗಣಿ ಕಂಪೆನಿಯೊಂದಕ್ಕೆ ಮಾರಾಟ ಮಾಡಿದ್ದರು.

ವಕೀಲರಾದ ಸಿರಾಜಿನ್ ಬಾಷಾ ಅವರು ಯಡಿಯೂರಪ್ಪ ವಿರುದ್ಧ ಸಲ್ಲಿಸಿದ್ದ ಮೊದಲನೇ ಖಾಸಗಿ ದೂರಿನಲ್ಲಿ ರಾಚೇನಹಳ್ಳಿಯ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಮತ್ತು ಅದನ್ನು ಯಡಿಯೂರಪ್ಪ ಅವರ ಪುತ್ರರೇ ಖರೀದಿಸಿರುವ ಬಗ್ಗೆ ಉಲ್ಲೇಖಿಸಿದ್ದರು.

ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ, ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಈ ಪ್ರಕರಣದಲ್ಲಿ ಫೋರ್ಜರಿ ದಾಖಲೆ ಬಳಕೆಯಾಗಿದೆ ಎಂಬ ಸಂಗತಿ ಲೋಕಾಯುಕ್ತ ಪೊಲೀಸರು ಇದೇ 4ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿದೆ.

ಎಲ್ಲವೂ ಶಂಕಾಸ್ಪದ: ಅರ್ಕಾವತಿ ಬಡಾವಣೆ ನಿರ್ಮಾಣ ಪ್ರಕ್ರಿಯೆ ಆರಂಭಿಸಿದ್ದ ಬಿಡಿಎ ಈ ಉದ್ದೇಶಕ್ಕಾಗಿ ರಾಚೇನಹಳ್ಳಿಯ ಸರ್ವೆ ನಂಬರ್ 52/2ರಲ್ಲಿ 1.12 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಿತ್ತು. 2004ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ, ಈ ಸ್ವತ್ತನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಆದರೆ, ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ನಿಯಮಗಳನ್ನು ಉಲ್ಲಂಘಿಸಿ `ಜನರಲ್ ಪವರ್ ಆಫ್ ಅಟಾರ್ನಿ~ (ಜಿಪಿಎ) ಮೂಲಕ ಈ ಭೂಮಿಯ ಮೇಲೆ ಹಕ್ಕು ಪಡೆದುಕೊಂಡಿದ್ದರು. 2006ರಲ್ಲಿ ಈ ಪೈಕಿ ಒಂದು ಎಕರೆಯನ್ನು ರಾಘವೇಂದ್ರ, ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಅಳಿಯ ಆರ್.ಎನ್.ಸೋಹನ್‌ಕುಮಾರ್ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಅಂಡ್ ಡೆವಲಪರ್ಸ್ ಕಂಪೆನಿಗೆ ಮಾರಾಟ ಮಾಡಲಾಗಿತ್ತು.

2008ರ ಮೇ ತಿಂಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನವೆಂಬರ್‌ನಲ್ಲಿ ಮೂಲ ಮಾಲೀಕರ ಹೆಸರಿನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದ ಕೃಷ್ಣಯ್ಯ ಶೆಟ್ಟಿ, ರಾಚೇನಹಳ್ಳಿಯ 1.12 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮನವಿ ಮಾಡಿದ್ದರು. ತಮ್ಮ ಕುಟುಂಬದ ಸದಸ್ಯರ ಒಡೆತನದಲ್ಲೇ ಇದ್ದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಯಡಿಯೂರಪ್ಪ 2008ರ ನವೆಂಬರ್‌ನಲ್ಲಿ ಆದೇಶ ಹೊರಡಿಸಿದ್ದರು.

1.12 ಎಕರೆಯಲ್ಲಿ ಒಂದು ಎಕರೆ ಧವಳಗಿರಿಗೆ ಸೇರಿದ್ದರೆ, 12 ಗುಂಟೆ ಕೃಷ್ಣಯ್ಯ ಶೆಟ್ಟಿ ಅವರ ಬಳಿಯೇ ಉಳಿಯಿತು. ಕೇವಲ 40 ಲಕ್ಷ ರೂಪಾಯಿಗೆ ಖರೀದಿಸಿದ ಭೂಮಿಯನ್ನು 2010ರಲ್ಲಿ ಧವಳಗಿರಿ ಡೆವಲಪರ್ಸ್ 20 ಕೋಟಿ ರೂಪಾಯಿಗೆ ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಗಣಿ ಕಂಪೆನಿಗೆ ಮಾರಾಟ ಮಾಡಿದ್ದು, 19.60 ಕೋಟಿ ರೂಪಾಯಿ ನಿವ್ವಳ ಲಾಭ ಮಾಡಿಕೊಂಡಿದೆ.

ಬಯಲಿಗೆ ಬಂತು ಫೋರ್ಜರಿ: ನ್ಯಾಯಾಲಯದ ಆದೇಶದಂತೆ ಈ ಪ್ರಕರಣದ ಬೆನ್ನುಹತ್ತಿದ ಲೋಕಾಯುಕ್ತ ಪೊಲೀಸರಿಗೆ ಅಚ್ಚರಿ ಕಾದಿತ್ತು. ಜೊತೆಯಲ್ಲೇ ಬಿಡಿಎ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಆಘಾತವೂ ಆಗಿತ್ತು. ಏಕೆಂದರೆ ಬಿಡಿಎ ವಶದಲ್ಲಿದ್ದ ಭೂಮಿಯನ್ನು ಖರೀದಿಸುವ ಸಂದರ್ಭದಲ್ಲಿ ಯಡಿಯೂರಪ್ಪ ಪುತ್ರರು, ಅಳಿಯ ಮತ್ತು ಕೃಷ್ಣಯ್ಯ ಶೆಟ್ಟಿ ಫೋರ್ಜರಿ ದಾಖಲೆಯೊಂದನ್ನು ಬಳಸಿರುವುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿತ್ತು.

ಕಾನೂನಿನ ಪ್ರಕಾರ ಸರ್ಕಾರದ ಯಾವುದೇ ಇಲಾಖೆ, ಪ್ರಾಧಿಕಾರ ಅಥವಾ ಸಂಸ್ಥೆಗಳು ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆ ನಡೆಸುವಂತಿಲ್ಲ. ಅಂತಹ ಸ್ವತ್ತುಗಳ ಮಾರಾಟ ಪ್ರಕ್ರಿಯೆಯನ್ನು ನೋಂದಣಿ ಮಾಡುವುದಕ್ಕೂ ಅವಕಾಶವಿಲ್ಲ.
 
ರಾಚೇನಹಳ್ಳಿಯ ಸ್ವತ್ತನ್ನು ಖರೀದಿಸುವ ಸಂದರ್ಭದಲ್ಲಿ ಧವಳಗಿರಿ ಡೆವಲಪರ್ಸ್, ಬಿಡಿಎ ಹೆಸರಿನಲ್ಲಿ ನಿರಾಕ್ಷೇಪಣಾ ಪತ್ರವೊಂದನ್ನು ಉಪ ನೋಂದಣಿ ಅಧಿಕಾರಿಗೆ ಸಲ್ಲಿಸಿತ್ತು. ಅದರ ಆಧಾರದಲ್ಲೇ ಕೃಷ್ಣಯ್ಯ ಶೆಟ್ಟಿ ಅವರಿಂದ ಒಂದು ಎಕರೆ ಭೂಮಿ ಧವಳಗಿರಿ ಡೆವಲಪರ್ಸ್ ಹೆಸರಿಗೆ ಪರಭಾರೆಯೂ ಆಗಿದೆ.

`ರಾಚೇನಹಳ್ಳಿಯ ಸರ್ವೆ ನಂಬರ್ 52/2ರ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿಲ್ಲ~ ಎಂಬ ಉಲ್ಲೇಖವುಳ್ಳ ಈ ಪತ್ರವನ್ನು ಬಿಡಿಎ `ಲೆಟರ್ ಹೆಡ್~ನಲ್ಲೇ ನೀಡಲಾಗಿದೆ.

ಈ ಪತ್ರದ ಮೂಲ ಕೆದಕುತ್ತಾ ಹೋದರೆ ಬಿಡಿಎ ಕಡತಗಳಲ್ಲಿ ಉಲ್ಲೇಖವೇ ಇಲ್ಲ. ನಿರಾಕ್ಷೇಪಣಾ ಪತ್ರ ನೀಡುವ ಅಧಿಕಾರವುಳ್ಳ ಯಾವುದೇ ಅಧಿಕಾರಿಯೂ ಅದಕ್ಕೆ ಸಹಿ ಮಾಡಿಲ್ಲ. ಈ ವಿಷಯವನ್ನು ಸ್ವತಃ ಬಿಡಿಎ ಅಧಿಕಾರಿಗಳೇ ಲೋಕಾಯುಕ್ತ ಪೊಲೀಸರ ಎದುರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT