ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಬಿಡಿ ಇದ್ದೂ ಇಡಿಯಾಗಿ

Last Updated 28 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು ಆರ್ಟ್ ಫೌಂಡೇಶನ್, ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ `ಕಲಾ ಸಂಸ್ಕಾರ~ ಪ್ರದರ್ಶನದಲ್ಲಿ 80 ಕಲಾವಿದರ ಚಿತ್ರಕಲಾಕೃತಿಗಳು ಪ್ರದರ್ಶನಗೊಂಡಿವೆ.

ಜಾಗತಿಕ ತಾಪಮಾನ, ಹೆಣ್ಣು-ಗಂಡಿನ ನಡುವಿನ ಸಂಬಂಧಗಳು, ಸತ್ಯ-ಮಿಥ್ಯೆ, ಮನಸ್ಸಿನಲ್ಲಿ ನಿತ್ಯ ಸರಿದಾಡುವ ವಾಂಛೆಗಳು, ಅಮೂರ್ತ ಭಾವಗಳು, ಮಾತೃ ವಾತ್ಸಲ್ಯ, ರಾಗ ದ್ವೇಷಗಳು ಇವೆಲ್ಲವೂ ಕಲಾವಿದರ ಕುಂಚದಲ್ಲಿ ಅನಾವರಣಗೊಂಡಿವೆ.
ಕಾಂತರಾಜ್ ಬೆಂಗಳೂರಿನ ಕಲಾವಿದ. ಇವರ `ಇನ್‌ಸಫರಬಲ್~ ಕಲಾಕೃತಿ ಒಂದಕ್ಕೊಂದು ವಿಚಾರದ ನಡುವೆ ಇರುವ ಕೊಂಡಿಯನ್ನು ಕುರಿತು ತಿಳಿಸುತ್ತದೆ. ಈ ಕಲಾಕೃತಿಯಲ್ಲಿ ಇರುವ ಬೀಗದಕೈ ಕೊಂಡಿಯ ಪ್ರತಿನಿಧಿ. ಯಾವುದೇ ವಿಚಾರವನ್ನು ಬಿಡಿಬಿಡಿಯಾಗಿ ನೋಡದೆ ಇಡಿಯಾಗಿ ನೋಡಬೇಕೆಂಬುದರ ಸಂಕೇತವದು. ಹಸು-ಕರು, ಗಂಡ ಹೆಂಡತಿ, ಒಲವು-ನಲಿವು, ರಾಗ-ದ್ವೇಷ ಹೀಗೆ ಅನೇಕ ಭಾವನೆಗಳು ಒಂದರೊಳಗೊಂದು ಮಿಳಿತಗೊಂಡಿರುತ್ತವೆ. ಹಾಗಾಗಿ ಅವುಗಳನ್ನು ಇಡಿಯಾಗಿ ನೋಡುವ, ವಿಶ್ಲೇಷಿಸುವ ಗುಣ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಅವುಗಳನ್ನು ಬೇರೆಯಾಗಿ ನೋಡಬಾರದು ಎಂಬುದು ಇದರ ಸಂದೇಶ.
 

ಖ್ಯಾತ ಕಲಾವಿದರಾದ ಜ್ಯೋತಿ ಸಿ.ಸಿಂಗ್ ದೇವ್, ಪ್ರಶಾಂತ್ ವರ್ಮಾ, ಸಚಿನ್ ಜಲ್‌ತಾರೆ, ಪದ್ಮಜಾ ವರ್ಮಾ, ಯಶವಂತ್ ಶಿರ್ವಾಡ್‌ಕರ್ ಅವರ ಅಪರೂಪದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಫೆ.29ರವರೆಗೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಿನೈಸೆನ್ಸ್ ಗ್ಯಾಲರಿಯಲ್ಲಿ ನಡೆಯಲಿದೆ.

ಇಲ್ಲಿ ಈ ಐದೂ ಜನ ಕಲಾವಿದರ ಇತ್ತೀಚಿನ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಮಾಹಿತಿಗೆ: 2220 2232.

ಶೀತಲ್ ಕೂಡ ಬೆಂಗಳೂರಿನವರು. ಇವರ ಕಲಾಕೃತಿ ಮನುಷ್ಯ ಸಂಬಂಧಕ್ಕೆ ಹೊಸ ವ್ಯಾಖ್ಯಾನ ಕೊಡಲೆತ್ನಿಸುತ್ತದೆ. ಭೂಮಿಗೆ ಬಿದ್ದ ಬೀಜವೊಂದು, ಮಣ್ಣಿನ ಒಳ ಹೊಕ್ಕು, ಅಲ್ಲೇ ಕುಡಿಯೊಡೆದು ಚಿಗುರಿ ಫಲ ನೀಡುವಂತೆ ಮನುಷ್ಯನ ಭಾವನೆಗಳು ಕೂಡ ಇದೇ ಮಾದರಿಯಲ್ಲಿ ವಿಕಸನಗೊಳ್ಳುತ್ತವೆ. ಅದಕ್ಕೆ ಅವರು `ಸೀಡ್ ಎಮೋಶನ್ಸ್~ ಎಂದು ಕರೆದಿದ್ದಾರೆ. ತಾಯಿ ಮತ್ತು ಮಗುವಿನ ನಡುವಿನ ವಾತ್ಸಲ್ಯದ ಸಂಕೇತದಂತೆ ಗೋಚರಿಸುವ ಇವರ ಕಲಾಕೃತಿಯು ರಾಜ್ಯ ಪ್ರಶಸ್ತಿಗೂ ಕೂಡ ಆಯ್ಕೆಯಾಗಿದೆ.

ಸ್ವಾತಿ ಧಾರವಾಡದ ಕಲಾವಿದೆ. ಇವರ `ದಿ ಅರ್ಥ್~ ಕಲಾಕೃತಿ ಜಾಗತಿಕ ತಾಪಮಾನ ಕುರಿತದ್ದು. ದಿನೇದಿನೇ ಏರುತ್ತಿರುವ ತಾಪಮಾನ ಏನೆಲ್ಲಾ ದುಷ್ಪರಿಣಾಮ ಬೀರಬಲ್ಲದು ಎಂಬುದನ್ನು ಇವರ ಕಲಾಕೃತಿ ಕಟ್ಟಿಕೊಡುತ್ತದೆ. ಈಗಲೇ ಜಾಗತಿಕ ತಾಪಮಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸದಿದ್ದರೆ ಉಂಟಾಗುವ ಅನರ್ಥಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಕಲಾವಿದ ಸಂತೋಷ್ ಪಿನ್ ಒಂದರ ತುದಿಯಲ್ಲಿ ಚಪ್ಪಲಿಯನ್ನು ಸಿಕ್ಕಿಸಿರುವ ಕಲಾಕೃತಿ ನೋಡುಗರ ಮನಸೆಳೆಯುತ್ತದೆ. ಇದು ಬೀದಿ ಬದಿಯಲ್ಲಿ ಬದುಕುವ ಜನರ ಜೀವನಕ್ಕೆ ಕನ್ನಡಿ ಹಿಡಿಯುತ್ತದೆ. ಅವರ ನಿತ್ಯದ ಬದುಕು ಅಡಕತ್ತರಿಯಲ್ಲಿ ಸಿಕ್ಕಿ ನರಳುತ್ತಿದೆ ಎಂಬುದನ್ನು ಸೂಚಿಸುತ್ತದೆ. ಮತ್ತೊಂದು ಶೀರ್ಷಿಕೆ ರಹಿತ ಕಲಾಕೃತಿ ಹೆಣ್ಣಿನ ಭಾವನೆಗಳಿಗೆ ಸಂಬಂಧಿಸಿದ್ದು. ಹೆಣ್ಣಿನ ಮನಸ್ಸಿನಲ್ಲಿ ಗುಪ್ತಗಾಮಿನಿ ಆಗಿರುವ ಭಾವನೆಗಳೆಲ್ಲವೂ ಇಲ್ಲಿ ಲಹರಿಯಾಗಿ ಹರಿದಿದೆ.

ಅಭಿಲಾಶ್, ಅಶೋಕ್, ಸಯ್ಯದ್ ಪಾಷಾ, ರೂಪಾ, ಶಿವಯೋಗಿ ಆರ್.ಅಣ್ಣನವರ್, ಯೋಗೀಶ್ ಎಸ್.ನಾಯಕ್ ಹೀಗೆ ಒಟ್ಟು 80 ಯುವ ಹಾಗೂ ಹಿರಿಯ ಕಲಾವಿದರ ಕಲಾಕೃತಿಗಳು ಗ್ಯಾಲರಿಯಲ್ಲಿ (ಫೆ.29) ಪ್ರದರ್ಶನಗೊಳ್ಳಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT