ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದರೂರಿನ ಅಪರೂಪದ ಜೈನ ಬಸದಿ

Last Updated 20 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಹಿಂದೂ ಧರ್ಮವು ಹಲವಾರು ಧರ್ಮಗಳನ್ನು ತನ್ನೊಂದಿಗೆ ಸಲಹಿಕೊಂಡು ಬಂದಿದೆ. ಅಂತಹ ಧರ್ಮಗಳಲ್ಲಿ  ಜೈನಧರ್ಮವೂ ಒಂದು. ಕಾರ್ಗಲ್‌ನಿಂದ 4-5 ಕಿ.ಮೀಗಳ ದೂರದಲ್ಲಿ ನೂರಾರು ವರ್ಷಗಳಷ್ಟು ಪುರಾತನ ಜೈನ ಬಸದಿಯನ್ನು ಕಾಣಬಹುದು.ಸುಮಾರು 100-125 ಕುಟುಂಬಗಳು ವಾಸವಾಗಿರುವ ಕಾರ್ಗಲ್ ಸಮೀಪದ ಬಿದರೂರಿನಲ್ಲಿ ವರ್ಧಮಾನ ಮಹಾವೀರ, ಆದಿನಾಥ, ಶಾಂತಿನಾಥ ಇನ್ನಿತರ ಹಲವಾರು ಪಂಚಲೋಹದ ಹಾಗೂ ಬಳಪದ ಕಲ್ಲಿನ ಪುರಾತನ ವಿಗ್ರಹಗಳನ್ನೊಳಗೊಂಡ ಜೈನ ಬಸದಿ ಇದೆ. ವಂಶ ಪಾರಂಪರ್ಯವಾಗಿ ಬಸದಿಯ ಪೌರೋಹಿತ್ಯ ಮಾಡಿಕೊಂಡು ಬಂದಿರುವ ಪಿ.ಬಿ. ಸಿದ್ಧಾರ್ಥ ಇಂದ್ರ ಅವರು ತಮ್ಮದೇ ಆದ ಶೈಲಿಯಲ್ಲಿ ಬಸದಿಯ ಬಗ್ಗೆ ಮಾಹಿತಿ ನೀಡುವುದು ಹೀಗೆ...

‘ಶಿಸ್ತುಗಾರ ಶಿವಪ್ಪ ನಾಯಕನ ವಂಶಸ್ಥನಾಗಿದ್ದ ‘ರಾಮಾ ನಾಯ್ಕ’ ಎಂಬ ಪಾಳೇಗಾರನಿಗೆ ಈ ಭಾಗ ಸೇರಿತ್ತು. ಬಸದಿಯಲ್ಲಿರುವ ಕೆಲವು ವಿಗ್ರಹಗಳ ಮೇಲಿರುವ ಕೆತ್ತನೆಯಿಂದ ಈ ವಿಚಾರ ತಿಳಿದು ಬರುತ್ತದೆ. ಇಲ್ಲಿನ ಬಸದಿ ಸ್ಥಾಪನೆಯ ಬಗ್ಗೆ ನಿಖರ ಮಾಹಿತಿ ಇದುವರೆಗೆ ದೊರೆತಿಲ್ಲವಾದರೂ, ಇದರ ಜೀರ್ಣೋದ್ಧಾರದ ಬಗ್ಗೆ ಮಾಹಿತಿ ಇದೆ ಎನ್ನುತ್ತಾರೆ ಅವರು.

ಭಟ್ಕಳ ಸಮೀಪದ ಹಾಡುವಳ್ಳಿಯ ರಾಜ ಶ್ರೀಸಂಗೀರಾಯ ಒಡೆಯರ್ ಸುತ ಶ್ರೀ ಇಂದಗರಸ ಒಡೆಯರ್ ಅವರು ಈ ಬಸದಿಯ ಜೀರ್ಣೋದ್ಧಾರ ಮಾಡಿದರು ಎಂದು ತಾಮ್ರ ಶಾಸನದಿಂದ ತಿಳಿದು ಬರುತ್ತದೆ. ಮೊದಲು ಇಲ್ಲಿ ಮೂರು ಬಸದಿಗಳು ಇದ್ದವಂತೆ. ಮೊದಲನೆಯದು ಈಗಲೂ ಕಾಣಸಿಗುವ ವರ್ಧಮಾನ ಮಹಾವೀರ ಬಸದಿ. ಎರಡನೆಯದು ಆದಿನಾಥ ಸ್ವಾಮಿಯ ಬಸದಿ. ಮೂರನೆಯದು ಮಹಾವೀರ ಬಸದಿ. ಕಾಲಾಂತರದಲ್ಲಿ ಎರಡು ಮತ್ತು ಮೂರನೇ ಬಸದಿಗಳು ಶಿಥಿಲಗೊಂಡು ಅಲ್ಲಿದ್ದ ಮೂರ್ತಿಗಳನ್ನು ಸಹ ಈಗಿರುವ ಬಸದಿಗೆ ತಂದಿಡಲಾಗಿದೆ.

ನಿತ್ಯಪೂಜೆ ಸಲ್ಲುತ್ತದೆ.
ಇಂದ್ರ ಅವರು, ತಮ್ಮ ಮನೆಯಲ್ಲಿ ಪುರಾತನ ತಾಳೆಗರಿ, ಓಲೆಗರಿ ಗ್ರಂಥಗಳನ್ನು ಜತನದಿಂದ ಕಾಡಿಕೊಂಡು ಬಂದಿದ್ದಾರೆ. ‘ಹರಿವಂಶ ಪುರಾಣ’, ‘ಆದಿಪುರಾಣ’, ‘ಆಯುರ್ವೇದ ಶಾಸ್ತ್ರ’ ಹಾಗೂ ‘ಜ್ಯೋತಿಷ ಶಾಸ್ತ್ರ’ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇವು ನೀಡುತ್ತವೆ ಎನ್ನುತ್ತಾರೆ ಇಂದ್ರ.ಪುರಾತತ್ವ ಇಲಾಖೆ ಮತ್ತು ಹಲವು ವಿದ್ವಾಂಸರು ಇಲ್ಲಿಗೆ ಬಂದು ಬಸದಿ ಕುರಿತು ಮಾಹಿತಿ ಪಡೆದಿದ್ದಾರೆ. ಬಸದಿಯಲ್ಲಿ ಮಹಾವೀರ ಜಯಂತಿ, ದಶಲಕ್ಷಣ, ಜೀವದಯಾ ಅಷ್ಟಮಿ ಮತ್ತು ಜಿನರಾತ್ರಿಯಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. ಶ್ರವಣ ಬೆಳಗೊಳದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಕೆಲ ವಿದೇಶಿಯರು ಇಲ್ಲಿಗೂ ಭೇಟಿ ನೀಡುವುದುಂಟು. ರಾಜ್ಯವಲ್ಲದೇ, ಉತ್ತರ ಭಾರತ ಸೇರಿದಂತೆ ಇತರ ರಾಜ್ಯಗಳಿಂದಲ್ಲೂ ಇಲ್ಲಿಗೆ ಭಕ್ತರು ಬರುತ್ತಾರೆ.

ಇಷ್ಟೆಲ್ಲಾ ವಿಶೇಷಗಳನ್ನು ಹೊಂದಿದ್ದರೂ ಸಹ ಇಲ್ಲಿನ ಬಸದಿಗೆ ಇದುವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಅಲ್ಲದೇ, ಬಸದಿ ಮೂಲಸೌಕರ್ಯದಿಂದ ವಂಚಿತವಾಗಿದೆ. ಮುಖ್ಯರಸ್ತೆಯಿಂದ ಬಸದಿಯವರೆಗೆ ಡಾಂಬರ್ ರಸ್ತೆಯ ಅಗತ್ಯವಿದೆ. ಬಸದಿಯಲ್ಲಿ ಆಗಾಗ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಇಲ್ಲೊಂದು ಸಮುದಾಯ ಭವನದ ಆವಶ್ಯಕತೆ ಇದೆ ಎನ್ನುತ್ತಾರೆ ಸ್ಥಳೀಯರು. ಅರಳಗೋಡು ಗ್ರಾ.ಪಂ.ಗೆ ಸೇರಿರುವ ಬಿದರೂರಿನ ಜೈನ ಬಸದಿ ಕುರಿತು ಸಂಬಂಧಿಸಿದ ಇಲಾಖೆಯವರು ಗಮನಹರಿಸಿ ಅಭಿವೃದ್ಧಿಪಡಿಸಿದರೆ, ಇತಿಹಾಸಕ್ಕೆ ಸಾಕ್ಷಿಯಾಗಿರುವ ಬಸದಿಯನ್ನು ರಕ್ಷಿಸಿದಂತಾಗುತ್ತದೆ ಎನ್ನುತ್ತಾರೆ ಇತಿಹಾಸ ಪ್ರೇಮಿಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT