ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಿರು ನಂಬಿದವರ ಬದುಕು ಅತಂತ್ರದಲ್ಲಿ..

ಅಕ್ಷರ ಗಾತ್ರ

ಚಿಕ್ಕೋಡಿ: ಆಧುನಿಕತೆಯ ಈ ದಿನಗಳಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮತ್ತು ಫೈಬರ್ ಪಾತ್ರೆಗಳ ಬಳಕೆಯಿಂದ ಸಾಂಪ್ರದಾಯಿಕ ಸಿಂಧಿ ಅಥವಾ ಬಿದಿರಿನ ಬುಟ್ಟಿ ಮಾಯವಾಗುತ್ತಿದೆ. ಇದರಿಂದ ಬಿದಿರು ನಂಬಿದವರ ಬದುಕು ಅಂತಂತ್ರವಾಗುತ್ತಿದೆ.  ಕುಶಲಕರ್ಮಿಗಳು ಹೊಟ್ಟೆಪಾಡಿಗಾಗಿ ಹೆಣಗಾಡಬೇಕಾಗಿದೆ.

ದಶಕಗಳ ಆಚೆ ರೈತರು ಕೃಷಿ ಚಟುವಟಿಕೆಗಳಿಗಾಗಿ ಅಥವಾ ಗೃಹ ಬಳಕೆಗಾಗಿ ಬಿದಿರಿನ ಅಥವಾ ಸಿಂಧಿ ಕಾಂಡಗಳಿಂದ ಹೆಣೆದ ಬುಟ್ಟಿ, ಮೊರಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಇಂದು ಗ್ರಾಮೀಣ ಪ್ರದೇಶದಲ್ಲೂ ಪ್ಲಾಸ್ಟಿಕ್, ಫೈಬರ್ ಉತ್ಪನ್ನಗಳು ದಾಂಗುಡಿ ಇಟ್ಟಿವೆ. ನಗರ ಪ್ರದೇಶಗಳಲ್ಲಂತೂ ಮದುವೆ ಮೊದಲಾದ ಮಂಗಳ ಕಾರ್ಯಗಳಲ್ಲಿ ಬಳಕೆಗೆ ಮಾತ್ರ ಈ ಬಿದಿರಿನ ಮೊರ, ಬುಟ್ಟಿಗಳು ಸೀಮಿತವಾಗಿವೆ.

`ತಲೆಮಾರುಗಳಿಂದ ಜೀವನೋಪಾಯಕ್ಕಾಗಿ ಈ ಬುಟ್ಟಿ ಹೆಣಿಕೆಯನ್ನೇ ನೆಚ್ಚಿಕೊಂಡು ಬಂದಿರುವ ನಾವು ಇತ್ತೀಚಿನ ವರ್ಷಗಳಲ್ಲಿ ಬಿದಿರಿನ ಬುಟ್ಟಿಗಳಿಗೆ ಬೇಡಿಕೆ ಕುಗ್ಗಿರುವ ಹಿನ್ನೆಲೆಯಲ್ಲಿ ಹಂದಿ ಸಾಕಾಣಿಕೆ ಮತ್ತು ಮದುವೆ ಮುಂಜಿಗಳಲ್ಲಿ ಬ್ಯಾಂಡ್ ಬಾರಿಸುವ ಕೆಲಸ ಮಾಡುತ್ತಿದ್ದೇವೆ~ ಎನ್ನುತ್ತಾರೆ ಸದಲಗಾ ಪಟ್ಟಣದ ವಸಂತ ಕೊರವಿ.

`ಎಂಟು ಜನರ ತುಂಬು ಸಂಸಾರದ ನಮ್ಮದು. ವಂಶಪಾರಂಪರ್ಯವಾಗಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದೇವೆ. ಆದರೆ, ಇಂದು ಹೆಣೆದ ಬುಟ್ಟಿಗಳನ್ನು ಮಾರಾಟ ಮಾಡುವುದೇ ಸವಾಲಾಗಿದೆ. ಮನೆ ಮಂದಿಯೆಲ್ಲಾ ಸೇರಿ ತಯಾರಿಸುವ ಬುಟ್ಟಿಗಳನ್ನು ಊರೂರು ಸುತ್ತಿ, ಸಂತೆಗಳಲ್ಲಿ ಮಾರಾಟಕ್ಕಿಟ್ಟರೂ ಒಮ್ಮಮ್ಮೆ ಒಂದೂ ಬುಟ್ಟಿ ಮಾರಾಟವಾಗುವುದಿಲ್ಲ. ಇದರಿಂದ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳ ಭವಿಷ್ಯ ರೂಪಿಸುವುದೇ ಚಿಂತೆಯಾಗಿದೆ. ಅನಿವಾರ್ಯವಾಗಿ  ಐಸ್‌ಕ್ರೀಂ ಮಾರಾಟದ ಮೊರೆ ಹೋಗಬೇಕಾಗಿದೆ~ ಎನ್ನುತ್ತಾರೆ ಹಿರೇಕೋಡಿಯ ದುಂಡಪ್ಪ ಭಜಂತ್ರಿ.

 ಚಿಕ್ಕೋಡಿ ತಾಲ್ಲೂಕಿನಲ್ಲಿ ತಯಾರಿಸುವ ಬುಟ್ಟಿ ಅಥವಾ ಮರಗಳಿಗೆ ಮಹಾರಾಷ್ಟ್ರದಲ್ಲಿ ಬೇಡಿಕೆ ಇದೆ. ಪಂಡರಪುರ, ಜತ್ತ, ಬಾರ್ಸಿ, ಇಚಲಕರಂಜಿ ಮುಂತಾದ ಕಡೆಗಳ ವ್ಯಾಪಾರಸ್ಥರು ಇಲ್ಲಿಂದ ಸಗಟು ದರದಲ್ಲಿ ಹೆಣೆದ ಬುಟ್ಟಿ, ಮೊರ, ಕರಂಡೆ, ತಟ್ಟಿ ಮೊದಲಾದ ವಸ್ತುಗಳನ್ನು ಖರೀದಿಸುತ್ತಾರೆ. ಅಲ್ಲದೇ ಸ್ಥಳೀಯ ಮಾರುಕಟ್ಟೆ, ಜಾತ್ರೆ, ಉತ್ಸವಗಳಲ್ಲೂ ಬಿದಿರಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಬಿದಿರಿನ ಬೊಂಬು ಸೇರಿದಂತೆ ಇತರ ಕಚ್ಚಾವಸ್ತುಗಳನ್ನು ಬೇರೆ ಕಡೆಗಳಿಂದ ತರಿಸಿಕೊಳ್ಳಬೇಕಾಗುತ್ತದೆ. ದಿನವಡೀ ಮೈಮರಿದು ದುಡಿದರೂ ಒಬ್ಬರಿಗೆ 60 ರಿಂದ 80 ರೂ.ಆದಾಯ ಸಿಗುತ್ತದೆ.

`ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದಂತೆಯೇ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಕುಗ್ಗುತ್ತಿರುವುದು ನಿಜ. ಅದರಂತೆ ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಕುಶಲಕರ್ಮಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅನಿವಾರ್ಯವಾಗಿ ಅನ್ಯ ಉದ್ಯೋಗಗಳತ್ತ ಒಲವು ತೋರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಇಂದು ಬಿದಿರಿನ ಉತ್ಪನ್ನಗಳಿಗೆ ಬೇಡಿಕೆ ಬಂದರೂ ಹೆಣೆಯುವ ಕುಶಲಕರ್ಮಿಗಳ ಕೊರತೆ ಇದೆ~ ಎನ್ನುತ್ತಾರೆ ಚಿಕ್ಕೋಡಿಯ ಅಪ್ಪಯ್ಯ ಬುರುಡ.

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಬುಟ್ಟಿ ಹೆಣೆಯುವ ಯುವಕರಿಗೆ ಇಂದಿನ ಜೀವನಶೈಲಿಗೆ ಬಳಕೆಯಾಗುವ ಬಿದಿರಿನ ಪೀಠೋಪಕರಣ ಅಥವಾ ಗೃಹಾಲಂಕಾರಿಕ ವಸ್ತುಗಳ ತಯಾರಿಕೆ ಬಗ್ಗೆ ತರಬೇತಿ ಮತ್ತು ಅಂತಹ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎನ್ನುವುದು ಅವರ ಅಭಿಪ್ರಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT