ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ನಕಲಿ ಬಿಲ್ ಹಗರಣ: ಕಡತಗಳ ವರ್ಗಾವಣೆಗೆ ಸಿಐಡಿ ಒತ್ತಾಯ

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೃಹತ್ ಕಾಮಗಾರಿಗಳ ನಕಲಿ ಬಿಲ್‌ಗಳಿಗೆ ಸಂಬಂಧಿಸಿದ ಬಹುಕೋಟಿ ರೂಪಾಯಿಗಳ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾ ತಂಡಕ್ಕೆ ಅಗತ್ಯವಿರುವ ಕಡತಗಳ ಕೊರತೆ ಎದುರಾಗಿದೆ. ಇದರಿಂದ ತನಿಖೆ ವಿಳಂಬವಾಗುತ್ತಿದ್ದು, ಅಗತ್ಯ ಕಡತಗಳನ್ನು ವರ್ಗಾಯಿಸಬೇಕೆಂದು ಸಿಐಡಿ ಬಬಿಎಂಪಿಯನ್ನು ಒತ್ತಾಯಿಸಿದೆ.

ಬಿಬಿಎಂಪಿಯ ಬಹುಕೋಟಿ ರೂಪಾಯಿಗಳ ಹಗರಣದ ತನಿಖೆಗಾಗಿ ಅಗತ್ಯವಿರುವ 5,600 ಕಡತಗಳನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ ಈ ವರೆಗೆ 4,798 ಕಡತಗಳನ್ನು ಮಾತ್ರ ಸಿಐಡಿಗೆ ಒಪ್ಪಿಸಲಾಗಿದೆ. ಇನ್ನೂ ಅಗತ್ಯವಿರುವ ಕಡತಗಳಿಗಾಗಿ ಬಿಬಿಎಂಪಿಗೆ ತಿಳಿಸಿದ್ದರೂ, ಇದುವರೆಗೂ ಕಡತಗಳನ್ನು ಒಪ್ಪಿಸಿಲ್ಲ. ಇದರಿಂದ ಹೆಚ್ಚಿನ ತನಿಖೆ ಸಾಧ್ಯವಾಗುತ್ತಿಲ್ಲ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

`ತನಿಖೆಗೆ ಅಗತ್ಯವಿರುವ ಕಡತಗಳ ಸಂಖ್ಯೆ ಎಷ್ಟು ಎಂಬುದು ನಿರ್ದಿಷ್ಟವಾಗಿಲ್ಲ. ತನಿಖೆಗಾಗಿ ಹೆಚ್ಚಿನ ಕಡತಗಳನ್ನು ವರ್ಗಾಯಿಸುವಂತೆ ಬಿಬಿಎಂಪಿಗೆ ಕೋರಲಾಗಿದ್ದರೂ, ಹೊಸ ಕಡತಗಳ ವರ್ಗಾವಣೆಯಾಗಿಲ್ಲ~ ಎಂದು ಸಿಐಡಿ ಡಿಜಿಪಿ ರೂಪಕ್ ಕುಮಾರ್ ದತ್ತ ಹೇಳಿದ್ದಾರೆ.

ಆದರೆ ಸಿಐಡಿ ಹೊಸ ಕಡತಗಳಿಗಾಗಿ ಬೇಡಿಕೆ ಇಟ್ಟಿರುವ ವಿಚಾರ ತಮಗೆ ತಿಳಿದೇ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ ಪ್ರತಿಕ್ರಿಯಿಸಿದ್ದಾರೆ.

`ಅಗತ್ಯವಿರುವ ಕಡತಗಳನ್ನು ಸಿಐಡಿಗೆ ವರ್ಗಾಯಿಸುವಂತೆ ಪಾಲಿಕೆಯ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಆದರೆ ಸಿಐಡಿ ಹೊಸ ಕಡತಗಳಿಗಾಗಿ ಬೇಡಿಕೆ ಸಲ್ಲಿಸಿರುವ ವಿಚಾರ ನನಗೆ ತಿಳಿದಿಲ್ಲ. ಪಾಲಿಕೆಯ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಅವುಗಳ ಬಿಲ್‌ಗಳು ನಿಯಮ ರೀತಿಯೇ ಪಾವತಿಯಾಗಿವೆ~ ಎಂದು ಅವರು ತಿಳಿಸಿದ್ದಾರೆ.

ನಗರದ ರಾಜರಾಜೇಶ್ವರಿನಗರ, ಗಾಂಧಿನಗರ ಮತ್ತು ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಕೋಟಿ ರೂಪಾಯಿಗಳ ನಕಲಿ ಬಿಲ್‌ಗಳ ಹಗರಣ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬೆಳಕಿಗೆ ಬಂದಿತ್ತು.

2006 ರಿಂದ 2010 ರ ಅವಧಿಯಲ್ಲಿ ಪಾಲಿಕೆಯ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಕಾಮಗಾರಿಗಳ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಪಾಲಿಕೆಯಿಂದ ಹಣ ಪಾವತಿ ಮಾಡಿದ್ದರು.

ಪ್ರಕರಣದ ಸಂಬಂಧ ಇಲ್ಲಿಯವರೆಗೆ ಪಾಲಿಕೆಯ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರೂ ಸೇರಿದಂತೆ ಸಿಐಡಿ ಅಧಿಕಾರಿಗಳು ಹತ್ತು ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ರಾಜ್ಯ ಹೈಕೋರ್ಟ್‌ನಲ್ಲಿ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಬಹಳಷ್ಟು ಒತ್ತಡವಿದ್ದರೂ ರಾಜ್ಯ ಸರ್ಕಾರ ಈ ವರೆಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಚಿಂತನೆ ನಡೆಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT