ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಯತ್ನಕ್ಕೆ ಸರ್ಕಾರದ ತಡೆ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾದ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ತೆರವುಗೊಳಿಸಲು ಮುಂದಾಗಿದ್ದ ಬಿಬಿಎಂಪಿ ಪ್ರಯತ್ನಕ್ಕೆ ಸರ್ಕಾರ `ಬ್ರೇಕ್~ ಹಾಕಿದೆ. ತೆರವು ಕಾರ್ಯದ ಬದಲಿಗೆ ಮುಂದಿನ ಎರಡು ತಿಂಗಳಲ್ಲಿ ಸಮೀಕ್ಷೆ ಕಾರ್ಯ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

`ನಗರದಲ್ಲಿ 18 ವಿವಿಧ ಕಂಪೆನಿಗಳು ಸುಮಾರು 40,000 ಕಿ.ಮೀ. ಉದ್ದದ ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸಿವೆ ಎಂಬ ಅಂದಾಜಿದೆ. ಆದರೆ, 12 ಕಂಪೆನಿಗಳು ಒಟ್ಟು 5,000 ಕಿ.ಮೀ. ಉದ್ದದ ಮಾರ್ಗದಲ್ಲಿ ಕೇಬಲ್ ಅಳವಡಿಸಿರುವುದಾಗಿ  ಘೋಷಿಸಿವೆ. ಹಾಗಾಗಿ ಅನಧಿಕೃತ ಕೇಬಲ್  ಮಾರ್ಗದ ಪತ್ತೆಗೆ ಚಾಲನೆ ನೀಡಲಾಗಿತ್ತು~ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಆ ಹಿನ್ನೆಲೆಯಲ್ಲಿ ಆಪ್ಟಿಕಲ್ ಟೈಮರ್ ಡೊಮೇನ್ ರೆಫ್ಲೆಕ್ಟರ್ ಮೀಟರ್ (ಒಟಿಡಿಆರ್) ಯಂತ್ರದ ಸಹಾಯದಿಂದ ಅನಧಿಕೃತ ಒಎಫ್‌ಸಿ ಪತ್ತೆ ಹಚ್ಚುವ ಕಾರ್ಯ ಆರಂಭವಾಗಿತ್ತು. ಅನಧಿಕೃತ ಕೇಬಲ್ ತೆರವು ಕಾರ್ಯವನ್ನು ಶನಿವಾರದಿಂದ ಕೈಗೊಳ್ಳಲು ನಿರ್ಧರಿಸಲಾಗಿತ್ತು~ ಎಂದರು.

`ಆದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದ್ಯಕ್ಕೆ ತೆರವು ಕಾರ್ಯ ಕೈಗೊಳ್ಳದಂತೆ ನಿರ್ಧರಿಸಲಾಯಿತು. ಹಾಗೆಯೇ ನಗರದಲ್ಲಿ ಅಳವಡಿಸಲಾದ ಕೇಬಲ್ ಮಾರ್ಗದ ಪ್ರಮಾಣ ಕುರಿತು ಸಮೀಕ್ಷೆ ನಡೆಸಬೇಕು. ಇದರಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ದೂರ ಸಂಪರ್ಕ ಕಂಪೆನಿಗಳ ಅಧಿಕಾರಿಗಳು ಇರಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ~ ಎಂದು ವಿವರಿಸಿದರು.

`ಅಲ್ಲದೇ ಕೇಬಲ್ ಅಳವಡಿಕೆ ಶುಲ್ಕ ಹಾಗೂ ಅನಧಿಕೃತವಾಗಿ ಅಳವಡಿಸಲಾದ ಕೇಬಲ್‌ಗೆ ವಿಧಿಸಲಾಗುವ ದಂಡ ಶುಲ್ಕ ಕುರಿತು ಸರ್ಕಾರವೇ ದರ ನಿಗದಿ ಮಾಡಲಿದೆ ಎಂಬುದಾಗಿಯೂ ಸೂಚನೆ ನೀಡಿದೆ~ ಎಂದು ಹೇಳಿದ್ದಾರೆ.

ಆ ಹಿನ್ನೆಲೆಯಲ್ಲಿ ಅನಧಿಕೃತ ಒಎಫ್‌ಸಿ ಕೇಬಲ್ ತೆರವು ಕಾರ್ಯವನ್ನು ಪಾಲಿಕೆ ಕೈಬಿಟ್ಟಿದೆ. ಸರ್ಕಾರದ ಸೂಚನೆ ಮೇರೆಗೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದೆ.

ಸಭೆಯಲ್ಲಿ ಪಾಲಿಕೆ ಆಯುಕ್ತ ಸಿದ್ದಯ್ಯ, ವಿಶೇಷ ಆಯುಕ್ತ ಕೆ.ಆರ್. ನಿರಂಜನ್, ಪ್ರಧಾನ ಎಂಜಿನಿಯರ್ ಬಿ.ಟಿ. ರಮೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT