ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಸದಸ್ಯನ ಕಗ್ಗೊಲೆ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಗಾಂಧಿನಗರ ವಾರ್ಡ್ ಕಾಂಗ್ರೆಸ್ ಸದಸ್ಯ ಎಸ್.ನಟರಾಜ್ (45) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಮಲ್ಲೇಶ್ವರ ಪೊಲೀಸ್ ಠಾಣೆ ಸಮೀಪವೇ ಶನಿವಾರ ಹಾಡಹಗಲೇ ನಡೆದಿದೆ.

ಕುಮಾರಪಾರ್ಕ್‌ನ ಅಪ್ಪರ್ ಪೈಪ್‌ಲೈನ್ ನಿವಾಸಿಯಾದ ಅವರು ಕೆಲಸದ ನಿಮಿತ್ತ ಬೆಳಿಗ್ಗೆ 11.30ರ ಸುಮಾರಿಗೆ ಮಲ್ಲೇಶ್ವರ ಮಾರುಕಟ್ಟೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಲ್ಲೇಶ್ವರ ವೃತ್ತದ ಬಳಿ ಅವರನ್ನು ಅಡ್ಡಗಟ್ಟಿ ಮಚ್ಚು, ಲಾಂಗ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಲೆ, ಎದೆಗೆ ಹೊಡೆದ ದುಷ್ಕರ್ಮಿಗಳು ಕಾರಿನಲ್ಲೇ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಅವರು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ತೀವ್ರವಾಗಿ ಗಾಯಗೊಂಡಿದ್ದ ನಟರಾಜ್ ಅವರನ್ನು ಕೂಡಲೇ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು.

ಅಲ್ಲಿಂದ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಿಸಿದ ಸ್ವಲ್ಪ ಸಮಯದಲ್ಲೇ ಅವರು ಮೃತಪಟ್ಟರು. ನಾಲ್ಕು ಮಂದಿ ಯುವಕರು ಈ ಕೃತ್ಯ ಎಸಗಿದ್ದಾರೆ. ಕಾರನ್ನು (ಸಿಕೆಎಚ್-4362) ವೈಯಾಲಿಕಾವಲ್ ಸಮೀಪ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳದಲ್ಲಿ ಆತಂಕ: ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ನಡೆದ ಕೊಲೆಯಿಂದಾಗಿ ಮಲ್ಲೇಶ್ವರದ ಜನ ಬೆಚ್ಚಿಬಿದ್ದರು. ಘಟನೆ ನಡೆದಾಗ ವಾಹನ ದಟ್ಟಣೆಯೂ ಹೆಚ್ಚಾಗಿತ್ತು. ಕಣ್ಣೆದುರೇ ವ್ಯಕ್ತಿಯೊಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದನ್ನು ಕಂಡ ಜನರು ಭಯಭೀತರಾದರು.

ಮೊದಲ ಬಾರಿಗೆ ಪಾಲಿಕೆ ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾಗಿದ್ದ ನಟರಾಜ್ ಅವರು ಮಲ್ಲೇಶ್ವರ ಮಾರುಕಟ್ಟೆಯ ವರ್ತಕರ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರು ಹುಟ್ಟುಹಬ್ಬ ಸಮಾರಂಭದಲ್ಲಿ ಬಡ ವ್ಯಾಪಾರಿಗಳಿಗೆ 42 ತಳ್ಳು ಗಾಡಿಗಳನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿತ್ತು. ತಳ್ಳು ಗಾಡಿ ನಿರ್ಮಾಣ ಮಾಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ನಟರಾಜ್, ಗಾಡಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದ್ದನ್ನು ನೋಡಿಕೊಂಡು ಬರಲು ಹೋಗುತ್ತಿದ್ದಾಗ ಕಿಡಿಗೇಡಿಗಳಿಗೆ ಬಲಿಯಾದರು.
ಪೊಲೀಸರೇನು ಮಾಡುತ್ತಿದ್ದರು: ನಟರಾಜ್ ಅವರ ಪತ್ನಿ ದೇವಿಕಾ.

ಅವರಿಗೆ ಹನ್ನೆರಡು ವರ್ಷದ ದರ್ಶನ್ ಎಂಬ ಮಗನಿದ್ದಾನೆ. ಇಂದ್ರಾಣಿ, ಮಲ್ಲಿಕಾ, ಸೆಲ್ವರಾಜ್ ಸಹೋದರ- ಸಹೋದರಿಯರು.

ಮರಣೋತ್ತರ ಪರೀಕ್ಷೆ ನಡೆದ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದ ಮಲ್ಲಿಕಾ ಅವರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. `ಆಲದ ಮರದ ರೀತಿ ಇದ್ದ ಅಣ್ಣ ಯಾರಿಗೂ ತೊಂದರೆ ನೀಡಿಲ್ಲ. ಅಂತಹ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಮಲ್ಲೇಶ್ವರ ಪೊಲೀಸ್ ಠಾಣೆ ಸಮೀಪವೇ ಕೊಲೆ ನಡೆದಿದೆ. ಪೊಲೀಸರು ಏನು ಮಾಡುತ್ತಿದ್ದರು~ ಎಂದು ಅವರು ಅಳುತ್ತಿದ್ದರು. ಆರೋಪಿಗಳನ್ನು ಬಂಧಿಸುವಂತೆಯೂ ಅವರು ಒತ್ತಾಯಿಸಿದರು.

ವೈಫಲ್ಯ: `ನಟರಾಜ್ ಅವರು ರಿಯಲ್ ಎಸ್ಟೇಟ್ ಅಥವಾ ಬಡ್ಡಿ ವ್ಯವಹಾರದಲ್ಲಿ ತೊಡಗಿರಲಿಲ್ಲ. ರಾಜಕೀಯ ಉದ್ದೇಶದಿಂದಲೇ ಈ ಕೊಲೆಯಾಗಿದೆ. ಉಪ ಚುನಾವಣೆ ಮಾಡಲು ಈ ಕೃತ್ಯ ಎಸಗಲಾಗಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಿದ್ದರೆ ಕೆಲಸ ಮಾಡುವುದಾದರೂ ಹೇಗೆ~ ಎಂದು ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

`ಮಲ್ಲೇಶ್ವರದ ಹೋಟೆಲ್ ಬಳಿ ನಿಂತಿದ್ದ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಅವರ ಮೇಲೆ ಗುಂಪೊಂದು ಕೆಲ ತಿಂಗಳುಗಳ ಹಿಂದೆ ಮಾರಕಾಸ್ತ್ರಗಳಿಂದ ದಾಳಿ ಮಾಡಿತ್ತು. ಪೊಲೀಸರು ಆ ಪ್ರಕರಣದ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ. ಎಲ್ಲರೂ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಪೊಲೀಸ್ ವೈಫಲ್ಯವೇ ಈ ಘಟನೆಗೆ ಕಾರಣ~ ಎಂದು ಅವರು ಆರೋಪಿಸಿದರು.

ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ, ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಮತ್ತು ಮ್ಲ್ಲಲೇಶ್ವರ ಉಪ ವಿಭಾಗದ ಎಸಿಪಿ ಎಸ್.ಎನ್.ಗಂಗಾಧರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಉಪ ಮೇಯರ್ ಎಸ್.ಹರೀಶ್ ಮುಂತಾದವರು ಆಸ್ಪತ್ರೆ ಬಳಿ ಬಂದಿದ್ದರು. ಪಾಲಿಕೆಯ ಜೆಡಿಎಸ್ ಸದಸ್ಯ ರೌಡಿ ಪಟ್ಟಿಯಲ್ಲಿದ್ದ ಮಹಮ್ಮದ್ ಆಲಿ ಉರುಫ್ ದಿವಾನ್ ಆಲಿ (37) ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಮತ್ತು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಘಟನೆ ಬನಶಂಕರಿ ಎರಡನೇ ಹಂತದ ಯಾರಬ್‌ನಗರದಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT