ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲಿ ಕಾಣದಂತೆ ಮಾಯವಾದರು!

Last Updated 7 ಏಪ್ರಿಲ್ 2013, 20:01 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಮೇಯರ್ ಆಯ್ಕೆ ವಿಷಯವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿರುವ ಬಿಬಿಎಂಪಿ ಸದಸ್ಯರು, ಕಳೆದ 15 ದಿನಗಳಿಂದ ವಿಧಾನಸಭಾ ಚುನಾವಣೆ ಕಾರ್ಯದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದಾರೆ. ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಅವರೆಲ್ಲ ಬಿಬಿಎಂಪಿ ಕಡೆಗೆ ತಲೆ ಹಾಕುವುದನ್ನೇ ನಿಲ್ಲಿಸಿದ್ದಾರೆ.

ಪೂರ್ವನಿಗದಿಯಂತೆ ಏಪ್ರಿಲ್ 30ರೊಳಗೆ ಹೊಸ ಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು. ಈ ಮಧ್ಯೆ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. `ಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಬೇಕೇ ಇಲ್ಲವೆ ನಿಗದಿಯಂತೆ ನಡೆಸಬೇಕೇ' ಎಂಬ ವಿಷಯವಾಗಿ ನಿರ್ದೇಶನ ಕೋರಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆಯೋಗ ಸೋಮವಾರ ತನ್ನ ನಿರ್ಧಾರವನ್ನು ತಿಳಿಸಲಿದೆ.

`ಚುನಾವಣಾ ಪ್ರಕ್ರಿಯೆ ಮುಗಿಯುವತನಕ ಮೇಯರ್ ಆಯ್ಕೆಯನ್ನು ಮುಂದಕ್ಕೆ ಹಾಕುವ ಸಾಧ್ಯತೆಗಳು ನಿಚ್ಚಳವಾಗಿವೆ' ಎಂದು ಹೇಳಲಾಗಿದೆ. ಮೇಯರ್ ಹುದ್ದೆ ಆಕಾಂಕ್ಷಿಗಳಲ್ಲಿ ಎಂಎಲ್‌ಎ ಚುನಾವಣೆ ನಿರುತ್ಸಾಹ ಮೂಡಿಸಿದೆ.

`ಬಿಬಿಎಂಪಿ ಕಚೇರಿಯಲ್ಲಿ ಇತ್ತೀಚೆಗೆ ಕಾಣುತ್ತಲೇ ಇಲ್ಲವಲ್ಲ' ಎನ್ನುವ ಪ್ರಶ್ನೆಯನ್ನು ಯಾವ ಸದಸ್ಯರ ಮುಂದಿಟ್ಟರೂ ಸಿಗುವ ಸಿದ್ಧ ಉತ್ತರ  ಒಂದೇ: `ಯಾವ ಫೈಲ್‌ಗಳೂ ಮೂವ್ ಆಗಲ್ಲ. ಫೀಲ್ಡ್ ಕೆಲಸವೂ ಬಹಳ ಇದೆ. ಅಲ್ಲಿಗೆ ಬಂದು ಹೋಗಲು ಟೈಮ್ ಇಲ್ಲ'
`ಮುಂದೆ ನಮ್ಮದೂ ಚುನಾವಣೆ ಇದೆ. ಈಗ್ಲೇ ಕೆಲ್ಸ ಶುರು ಮಾಡ್ಕೊಂಡ್ರೆ ಆಗ ಸುಲಭ ಆಗುತ್ತೆ. ಈಗಿನ ನಮ್ ಕೆಲ್ಸ ನೋಡ್ಕೊಂಡು ತಾನೆ ಮುಂದೆ ಶಾಸಕರು ಸಹಾಯ ಮಾಡೋದು. ಆದ್ದರಿಂದಲೇ ನಮ್ ವಾರ್ಡ್‌ನಲ್ಲಿ ಓಡಾಡ್ತಾ ಇದೀವಿ' ಎಂದು ಸದಸ್ಯರೊಬ್ಬರು ಹೇಳುತ್ತಾರೆ. `ವಾರ್ಡಿನ ಕಾಮಗಾರಿಗಳಿಗೂ ಚುನಾವಣೆ ಭೀತಿ ಆವರಿಸಿದೆ. ಯಾವ ಕೆಲಸವೂ ಆಗುತ್ತಿಲ್ಲ' ಎಂದು ಗೊಣಗುತ್ತಾರೆ.

`ಮೇಯರ್ ಚೇಂಬರ್‌ಗೆ ಬೀಗ, ಪಕ್ಷದ ನಾಯಕ ಕಚೇರಿಗೆ ಬೀಗ, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಗೆ ಬೀಗ. ಫೈಲ್ ಹಿಡಿದುಕೊಂಡು ಅಧಿಕಾರಿಗಳ ಬಳಿಗೆ ಹೋದರೆ ಅವರು ಸಿಗುವುದಿಲ್ಲ. ಸಿಕ್ಕರೂ ನೀತಿ ಸಂಹಿತೆ ಕಡೆಗೆ ಬೆರಳು ತೋರುತ್ತಾರೆ. ಈಗೇನಿದ್ದರೂ ಅವರದ್ದೇ ದರ್ಬಾರು. ಅಲ್ಲಿಗೆ ಬಂದು ತಾನೆ ಏನು ಮಾಡುವುದು' ಎಂದು ಅವರು ಕೇಳುತ್ತಾರೆ.

ಮತ್ತೊಬ್ಬ ಸದಸ್ಯರನ್ನು ಮಾತಿಗೆ ಎಳೆದರೆ, `ಸರ್, ದಯವಿಟ್ಟು ಒಂದು ತಿಂಗಳು ಏನನ್ನೂ ಕೇಳವುದು ಬೇಡ. ನನ್ನ ತಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅದರ ಸಿದ್ಧತೆಗಾಗಿ ನಮಗೆ ಸಮಯವೇ ಸಾಲುತ್ತಿಲ್ಲ. ಬಿಬಿಎಂಪಿಯಲ್ಲಿ ಏನು ನಡೆದಿದೆಯೋ ಗೊತ್ತಿಲ್ಲ' ಎಂದು ಹೇಳುತ್ತಾರೆ.

ಪಕ್ಷಗಳ ಕಚೇರಿ ಮುಂದೆ ಸರದಿ: ಬಿಬಿಎಂಪಿ ಪಡಸಾಲೆಯಿಂದ ವಿಧಾನಸಭಾ ಮೊಗಸಾಲೆಗೆ ಜಿಗಿಯುವ ಯತ್ನ ನಡೆಸಿರುವ ಕೆಲವು ಸದಸ್ಯರು ತಮ್ಮ ಪಕ್ಷದ ಕಚೇರಿ ಮುಂದೆ ಉಳಿದ ಆಕಾಂಕ್ಷಿಗಳ ಜತೆ ಸರದಿಯಲ್ಲಿ ಅರ್ಜಿ ಹಿಡಿದು ನಿಂತಿದ್ದಾರೆ. ಮೂರೂ ಪ್ರಮುಖ ಪಕ್ಷಗಳು ನಗರದ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸದೇ ಇರುವುದು ಅವರ ಆಸೆಗೆ ನೀರೆದಿದೆ.
ಮೇಯರ್ ಆಯ್ಕೆ ವಿಷಯ ಸದಸ್ಯರಿಗೆ ಅಷ್ಟೊಂದು `ದೊಡ್ಡ'ದಾಗಿ ಕಾಣುತ್ತಿಲ್ಲ. ಚುನಾವಣೆ ಮುಗಿದ ಮೇಲೆ ನಡೆಸಿದರೆ ಒಳ್ಳೆಯದು ಎಂದು ಬಹುತೇಕರು ಅಭಿಪ್ರಾಯಪಟ್ಟರೆ, ಆ ಸ್ಥಾನದ ಆಕಾಂಕ್ಷಿಗಳು ಮಾತ್ರ ನಿಗದಿಯಂತೆ ಚುನಾವಣೆ ನಡೆಸಬೇಕು ಎನ್ನುತ್ತಿದ್ದಾರೆ.

ಮೇಯರ್ ಸ್ಥಾನಕ್ಕೆ ಮೊದಲು ನಿಗದಿಯಾಗಿದ್ದ ಮಹಿಳಾ ಮೀಸಲಾತಿ ಬದಲಾವಣೆ ಮಾಡಿ, ಸಾಮಾನ್ಯ ಪುರುಷ ವರ್ಗಕ್ಕೆ ಮರು ನಿಗದಿ ಮಾಡಲಾಗಿದೆ. ಪಕ್ಷದ ಮುಖಂಡರ ಈ ನಡೆ ಬಿಜೆಪಿ ಮಹಿಳಾ ಸದಸ್ಯೆಯರನ್ನು ಕೆರಳಿಸಿತ್ತು. ಮುಖಂಡರ ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದರು. ಆಗಿರುವ ತಾರತಮ್ಯವನ್ನು ಮುಂದಿನ ಅವಧಿಯಲ್ಲಿ ನಿವಾರಣೆ ಮಾಡಲಾಗುವುದು ಎನ್ನುವ ಭರವಸೆ ಸಿಕ್ಕ ಮೇಲೆ ಅವರು ತಣ್ಣಗಾಗಿದ್ದರು.

ಬೆಂಗಳೂರು ನಗರ ಜಿಲ್ಲೆಯ ವಿಧಾನಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿದ್ದರಿಂದ ಮೊದಲೇ ತಲೆ ಕೆಡಿಸಿಕೊಂಡ ಬಿಜೆಪಿ ಮುಖಂಡರಿಗೆ ಮೇಯರ್ ಚುನಾವಣೆ ಮತ್ತಷ್ಟು ಚಿಂತೆ ಉಂಟುಮಾಡಿದೆ. ಸಾಮಾನ್ಯ ಪುರುಷ ವರ್ಗಕ್ಕೆ ಮೇಯರ್ ಸ್ಥಾನ ಮೀಸಲಿರುವ ಕಾರಣ, ಪಕ್ಷದ ಎಲ್ಲ ಪುರುಷ ಸದಸ್ಯರೂ ತಮ್ಮ ಆಸೆಯನ್ನು ಮುಖಂಡರ ಮುಂದಿಟ್ಟಿದ್ದಾರೆ. ಪ್ರತಿ ಸಲ ದಕ್ಷಿಣ ಭಾಗದ ಅಭ್ಯರ್ಥಿಗಳಿಗೇ ಮನ್ನಣೆ ನೀಡುವುದೇಕೆ ಎನ್ನುವ ಪ್ರಶ್ನೆಯನ್ನು ಉಳಿದ ಭಾಗದ ಸದಸ್ಯರು ಎತ್ತಿದ್ದಾರೆ. ಹಿರಿಯ ಸದಸ್ಯರೊಬ್ಬರಿಗೆ ಆ ಸ್ಥಾನವನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT