ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲಿ ವರ್ಗಾವಣೆ: ಸಿ.ಎಂ.ಗಿಲ್ಲ ಅಧಿಕಾರ

ಹೈಕೋರ್ಟ್‌ ಸ್ಪಷ್ಟೋಕ್ತಿ
Last Updated 15 ಡಿಸೆಂಬರ್ 2013, 19:36 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ನಗರಾಡಳಿತ ಸಂಸ್ಥೆಯಿಂದ ಇನ್ನೊಂದು ನಗರಾಡಳಿತ ಸಂಸ್ಥೆಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಆದರೆ, ಬೃಹತ್‍ ಬೆಂಗಳೂರು ಮಹಾನಗರ ಪಾಲಿಕೆ ಯ (ಬಿಬಿಎಂಪಿ) ಆಂತರಿಕ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಮುಖ್ಯಮಂತ್ರಿಗೂ ಇಲ್ಲ, ಸಂಪುಟದ ಇತರ ಮಂತ್ರಿಗಳಿಗೂ ಇಲ್ಲ ಎಂದು ಹೈಕೋರ್ಟ್‍ ಸ್ಪಷ್ಟಪಡಿಸಿದೆ.

ಕರ್ನಾಟಕ ನಗರಾಡಳಿತ ಸಂಸ್ಥೆಗಳ ಕಾಯ್ದೆ 1976 ಅನ್ವಯ, ಬಿಬಿಎಂಪಿಯ ಆಂತರಿಕ ವರ್ಗಾವಣೆಯ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುವುದು ಆಯುಕ್ತರು ಅಥವಾ ಅವರಿಂದ ನಿಯೋಜನೆಗೊಂಡ ಅಧಿಕಾರಿಗೆ ಮಾತ್ರ ಎಂದು ನ್ಯಾಯಮೂರ್ತಿ ಎಚ್‍.ಜಿ. ರಮೇಶ್‍ ಅವರು ಇತ್ತೀಚೆಗೆ ನೀಡಿರುವ ಆದೇಶದಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಯುಕ್ತರಿಗೆ ನೀಡಿದ ಲಿಖಿತ ಸೂಚನೆ ಆಧರಿಸಿ, ಬಿ.ಟಿ. ಮೋಹನ್‍ ಕೃಷ್ಣ ಅವರನ್ನು ಬಿಬಿಎಂಪಿಯ ದಕ್ಷಿಣ ಭಾಗದ ನಗರ ಯೋಜನಾ ವಿಭಾಗದ ಉಪ ನಿರ್ದೇಶಕ ಸ್ಥಾನದಿಂದ ವರ್ಗಾವಣೆಗೊಳಿಸಿ, ಸೆ.6ರಂದು ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮೋಹನ್‍ ಕೃಷ್ಣ ಅವರು ಹೈಕೋರ್ಟ್‌ಗೆ  ಅರ್ಜಿ ಸಲ್ಲಿಸಿದ್ದರು. ಟಿ.ಪಿ. ಪಂಚಾಕ್ಷರಯ್ಯ ಎಂಬುವರಿಗೆ ಅನುಕೂಲ ಮಾಡಿಕೊಡಲು ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ಮೋಹನ್‍ ಕೃಷ್ಣ ಅರ್ಜಿಯಲ್ಲಿ ದೂರಿದ್ದರು.

ಪಂಚಾಕ್ಷರಯ್ಯ ಅವರನ್ನು ಮೋಹನ್‍ ಕೃಷ್ಣ ಅವರಿದ್ದ ಜಾಗಕ್ಕೆ ವರ್ಗಾವಣೆ ಮಾಡಬೇಕು ಎಂದು ಸೂಚಿಸಿ ಸಿದ್ದರಾಮಯ್ಯ ಅವರು ಪಾಲಿಕೆ ಆಯುಕ್ತರಿಗೆ ಜುಲೈ 24ರಂದು ಪತ್ರ ಬರೆದಿದ್ದರು. ಈ ಕೋರಿಕೆಯೊಂದಿಗೆ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಅವರೂ ಜುಲೈ 25ರಂದು ಮುಖ್ಯಮಂತ್ರಿಯವರಿಗೆ ಒಂದು ಪತ್ರ ಬರೆದಿದ್ದರು. ಆದರೆ ಆಗಸ್ಟ್‌ 9ರಂದು ಆಯುಕ್ತರಿಗೆ ಇನ್ನೊಂದು ಪತ್ರ ಬರೆದ ಸಿದ್ದರಾಮಯ್ಯ ಅವರು ಮೋಹನ್‍ ಕೃಷ್ಣ ಅವರನ್ನು ಹಾಲಿ ಹುದ್ದೆಯಲ್ಲೇ ಮುಂದುವರಿಸಬೇಕು ಎಂಬ ಸೂಚನೆ ನೀಡಿದರು.

‘ಬಿಬಿಎಂಪಿಯ ಆಂತರಿಕ ವರ್ಗಾವಣೆ ವಿಚಾರದಲ್ಲಿ ಕೂಡ ಮುಖ್ಯಮಂತ್ರಿಯವರು ನಡೆಸುವ ಹಸ್ತಕ್ಷೇಪ ವನ್ನು ಈ ಪತ್ರಗಳು ತೋರಿಸುತ್ತಿವೆ. ರಾಜ್ಯದ ಆಡಳಿತ ಮತ್ತು ಜನರ ಹಿತದೃಷ್ಟಿಯಿಂದ ಇಂಥ ಹಸ್ತಕ್ಷೇಪ ಗಳನ್ನು ಆದಷ್ಟು ಬೇಗ ತಡೆಯಬೇಕು. ಮುಖ್ಯಮಂತ್ರಿ ಯವರ ನಿರ್ದೇಶನ ಆಧರಿಸಿ, ಮೋಹನ್‍ ಕೃಷ್ಣ ಅವರ ವರ್ಗಾವಣೆಗೆ ಹೊರಡಿಸಿದ ಆದೇಶವನ್ನು ಮಾನ್ಯ ಮಾಡಲಾಗದು. ಅದನ್ನು ರದ್ದುಪಡಿಸಲಾಗಿದೆ’ ಎಂದು ನ್ಯಾ. ರಮೇಶ್‍ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಮುಖ್ಯಮಂತ್ರಿಯವರ ನಿರ್ದೇಶನ ಅಥವಾ ಯಾವುದೇ ಸಚಿವರ ಸೂಚನೆ ಆಧರಿಸಿ ಬಿಬಿಎಂಪಿ ಯಲ್ಲಿ ನಡೆದಿರುವ ಆಂತರಿಕ ವರ್ಗಾವಣೆಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಮುಖ್ಯಮಂತ್ರಿ ಅಥವಾ ಮಂತ್ರಿಗಳ ಶಿಫಾರಸು ಆಧರಿಸಿ ನಡೆದಿರುವ ಎಲ್ಲ ವರ್ಗಾವಣೆಗಳನ್ನು ಆಯುಕ್ತರು ರದ್ದು ಮಾಡಬೇಕು. ಸಿಬ್ಬಂದಿಯ ಪ್ರಾಮಾಣಿಕತೆ, ಬದ್ಧತೆಯನ್ನು ಪರಿಗಣಿಸಿ ಅವರಿಗೆ ಸೂಕ್ತ ಹುದ್ದೆ ನೀಡಬೇಕು. ಆದೇಶದ ಪ್ರತಿ ದೊರೆತ ಎರಡು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳ್ಳಬೇಕು’ ಎಂದು ನ್ಯಾ. ರಮೇಶ್‌ ಅವರು ಆದೇಶದಲ್ಲಿ ಹೇಳಿದ್ದಾರೆ.

ಕಾಯ್ದೆಯ ಸೆಕ್ಷನ್‍ ಎಸ್‍.69ರ ಪ್ರಕಾರ, ಪಾಲಿಕೆಯ ಆಂತರಿಕ ವರ್ಗಾವಣೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಆಯುಕ್ತರಿಗೆ ಮಾತ್ರ ಇದೆ. ಒಂದು ಪಾಲಿಕೆಯಿಂದ ಇನ್ನೊಂದು ಪಾಲಿಕೆಗೆ ಸಿಬ್ಬಂದಿ ವರ್ಗಾವಣೆ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ಇದೇ ಕಾಯ್ದೆಯ ಸೆಕ್ಷನ್‍ 69ಎ ಮೂಲಕ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT