ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲಿ ಹಗರಣ: ಸಿಬಿಐ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿಗಳ ಹಗರಣದ ತನಿಖೆಯನ್ನು ಸಿಐಡಿ ಬದಲು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಪತ್ರಕರ್ತೆ ನಾಗಲಕ್ಷ್ಮಿಬಾಯಿ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಬಿಬಿಎಂಪಿ ಹಾಗೂ ಸಿಬಿಐಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಸೋಮವಾರ ಆದೇಶಿಸಿದೆ.

`ಪಾಲಿಕೆಯ ರಾಜರಾಜೇಶ್ವರಿ ನಗರ, ಗಾಂಧಿನಗರ ಹಾಗೂ ಮಲ್ಲೇಶ್ವರ ವಿಭಾಗಗಳಲ್ಲಿ 2008 ರಿಂದ ಈವರೆಗೆ ನಡೆದಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 10,109 ರಸೀದಿ (ಬಿ.ಆರ್) ದಾಖಲೆಗಳಿವೆ. ಆದರೆ ಈವರೆಗೆ ಲಭ್ಯ ಆಗಿರುವುದು 153 ದಾಖಲೆಗಳು ಮಾತ್ರ. ಪಾಲಿಕೆಯ ಎಲ್ಲ 29 ವಿಭಾಗಗಳ ಪೈಕಿ ಮೇಲೆ ತಿಳಿಸಿರುವ ಮೂರು ವಿಭಾಗಗಳಲ್ಲಿ ಮಾತ್ರ ತಪಾಸಣೆ ನಡೆದಿದೆ.

ಇದರಲ್ಲಿಯೇ ನೂರಾರು ಕೋಟಿ ಅವ್ಯವಹಾರ ಬೆಳಕಿಗೆ ಬಂದಿದೆ. ಒಂದು ವೇಳೆ ಎಲ್ಲ ವಿಭಾಗಗಳ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದರೆ 2-ಜಿ ಸ್ಪೆಕ್ಟ್ರಂ ಹಗರಣಕ್ಕಿಂತ ದೊಡ್ಡ ಹಗರಣ ಇದಾದರೆ ಅಚ್ಚರಿಯಿಲ್ಲ~ ಎನ್ನುವುದು ಅರ್ಜಿದಾರರ ವಾದ.

`ಈಗ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ಸಿಐಡಿಯಿಂದ ಪಾರದರ್ಶಕ ತನಿಖೆ ಸಾಧ್ಯವಾಗದೇ ಇರಬಹುದು. ಆದುದರಿಂದ ಸಿಬಿಐ ತನಿಖೆ ಅಗತ್ಯ ಇದೆ~ ಎಂದು ಅವರು ತಿಳಿಸಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ಆರ್ಥಿಕ ಹಿಂದುಳಿದವರಿಗೆ ಮನೆ
ಕೋರಮಂಗಲದ ಬಳಿ ಆರ್ಥಿಕವಾಗಿ ಹಿಂದುಳಿದವರಿಗೆ ನಿರ್ಮಿಸಲಾಗುತ್ತಿರುವ ಮನೆಗಳನ್ನು ಶೀಘ್ರದಲ್ಲಿ ಕಟ್ಟಿ ಮುಗಿಸುವಂತೆ ಮೆವರಿಕ್ ಸಂಸ್ಥೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

`ಈ ಭಾಗದಲ್ಲಿ 2003ರಲ್ಲಿ ನಮಗೆ ಮನೆ ನಿರ್ಮಾಣ ಮಾಡಿಕೊಡಲಾಗಿತ್ತು. ಆದರೆ ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದ ಹಿನ್ನೆಲೆಯಲ್ಲಿ 2007ರಲ್ಲಿ ಬಹುತೇಕ ಮನೆಗಳು ಕುಸಿದು ಬೀದಿಪಾಲಾಗಿದ್ದೇವೆ. ಆದರೆ ಇದುವರೆಗೂ ಮನೆ ಕಟ್ಟಿಕೊಟ್ಟಿಲ್ಲ. ಮನೆ ಕಟ್ಟಿಕೊಡುವ ಕಾರ್ಯವನ್ನು ಈ ಸಂಸ್ಥೆಗೆ ವಹಿಸಲಾಗಿದೆ. ಆದರೆ ನಿಧಾನಗತಿಯಿಂದಾಗಿ ತಮಗೆ ಸಮಸ್ಯೆ ಉಂಟಾಗಿದೆ. ಇದುವರೆಗೆ ಸೂಕ್ತ ಪರಿಹಾರವೂ ಸಿಕ್ಕಿಲ್ಲ~ ಎನ್ನುವುದು ಎಸ್.ಮೀನಾ ಹಾಗೂ ಇತರರ ದೂರು.

ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಬಿಬಿಎಂಪಿ, ಸಂಸ್ಥೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

ಬೀದಿನಾಯಿ ಹಾವಳಿ: ನೋಟಿಸ್

ನಗರದಲ್ಲಿ ಹೆಚ್ಚಿರುವ ಬೀದಿನಾಯಿ ಹಾವಳಿ ತಪ್ಪಿಸಲು ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ನಾಯಿ ದಾಳಿಗೆ ತುತ್ತಾಗಿರುವ ಯಲಹಂಕದ ಐದು ವರ್ಷದ ಬಾಲಕ ಜಿಷ್ಣು ಹಾಗೂ ಆತನ ಪೋಷಕರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಬಿಬಿಎಂಪಿ ಹಾಗೂ ಪ್ರಾಣಿಗಳಿಗೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆಗಳಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಸೋಮವಾರ ಆದೇಶಿಸಿದೆ.

2010ರ ಜುಲೈ 6ರಂದು ಸುಮಾರು 5-6 ನಾಯಿಗಳ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ. ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿಯೂ ಆತನ ಮೇಲೆ ಇದು ಪರಿಣಾಮ ಬೀರಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿ ಇವರು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಮ್ಮ ನೋವಿಗೆ ಪಾಲಿಕೆ ಸ್ಪಂದಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದ ಕಾರಣ, ಮಾಂಸದ ಅಂಗಡಿಗಳವರು ಕಾನೂನು ಪಾಲನೆ ಮಾಡದ ಹಿನ್ನೆಲೆಯಲ್ಲಿ ನಾಯಿ ಹಾವಳಿ ಹೆಚ್ಚಾಗಿದೆ ಎನ್ನುವುದು ಅರ್ಜಿದಾರರ ವಾದ. ಈ ನಿಟ್ಟಿನಲ್ಲಿ ಕ್ರಮಕ್ಕೆ ಆದೇಶಿಸುವಂತೆ ಹಾಗೂ ದಾಳಿಗೆ ತುತ್ತಾದವರಿಗೆ ಹೆಚ್ಚಿನ ಪರಿಹಾರ ನೀಡಲು ಪಾಲಿಕೆಗೆ ಸೂಚಿಸುವಂತೆ ಅವರು ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT