ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲೂ ಚುನಾವಣಾ ರಂಗು

Last Updated 5 ಏಪ್ರಿಲ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇನ್ನು ಮೂರು ದಿನಗಳು ಬಾಕಿ ಉಳಿದಿದ್ದು, ಬಿಬಿಎಂಪಿ ಎಲ್ಲ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಶುಕ್ರವಾರ ನೂಕುನುಗ್ಗಲು ಕಂಡುಬಂತು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಗಮನಸೆಳೆಯಿತು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳುವಂತೆ ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಸ್ವಯಂಸೇವಾ ಸಂಸ್ಥೆಗಳು ವ್ಯಾಪಕ ಪ್ರಚಾರ ಮಾಡುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

`ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಹತ್ತು ಲಕ್ಷ ಮತದಾರರನ್ನು ನೋಂದಣಿ ಮಾಡಿಕೊಂಡಿದ್ದೇವೆ. ಏಪ್ರಿಲ್‌ನಲ್ಲಿ ಇದುವರೆಗೆ ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಇನ್ನೂ ಮೂರು ದಿನ ಅರ್ಜಿ ಸ್ವೀಕರಿಸುತ್ತೇವೆ. ಅವುಗಳ ವಿಲೇವಾರಿಗೆ ನಮಗೆ ಕನಿಷ್ಠ 15 ದಿನಗಳ ಕಾಲಾವಕಾಶ ಬೇಕಾಗಿದೆ' ಎಂದು ಅವರು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದರಿಂದ ಯುವಕರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಿದ್ದಾರೆ.

ಹೋರ್ಡಿಂಗ್‌ಗಳ ಎತ್ತಂಗಡಿ: ನಗರದ ವಿವಿಧ ಬಡಾವಣೆಗಳಲ್ಲಿ ಹಾಕಲಾದ ರಾಜಕೀಯ ಹೋರ್ಡಿಂಗ್‌ಗಳು, ಭಿತ್ತಿಪತ್ರಗಳು, ಕಟೌಟ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಬಿಬಿಎಂಪಿ ಶುಕ್ರವಾರ ತೀವ್ರಗೊಳಿಸಿದೆ. ಕಾಮರಾಜ ರಸ್ತೆಯಲ್ಲಿ ಅಂಟಿಸಿದ್ದ ಭಿತ್ತಿಪತ್ರಗಳನ್ನು ಬಿಬಿಎಂಪಿ ಸಿಬ್ಬಂದಿ ಹರಿದು ಹಾಕಿದರು. ದೊಡ್ಡ ಕಟೌಟ್‌ಗಳನ್ನು ತೆಗೆದುಕೊಂಡು ಹೋದರು.

ಶನಿವಾರ ಪ್ರತಿಭಟನೆ:  ಚುನಾವಣಾ ಕೆಲಸದ ವಿಪರೀತ ಒತ್ತಡದಿಂದ ಬಿಬಿಎಂಪಿ ಸಿಬ್ಬಂದಿಯಾದ ಗಂಗಾಧರಯ್ಯ ಮತ್ತು ಮೋಹನ್ ಎಂಬುವವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದು, ನೌಕರರ ಮೇಲೆ ಹೇರುತ್ತಿರುವ ಒತ್ತಡ ವಿರೋಧಿಸಿ ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಬಿಎಂಪಿ ಕಾರ್ಮಿಕರ ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT