ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಕಿನ ಹಾದಿಯಲ್ಲಿ ಅಣ್ಣಾ ಹೋರಾಟ?

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜನ ಲೋಕಪಾಲ ಮಸೂದೆಗಾಗಿ ಮೊದಲ ಹಂತದ ಹೋರಾಟದಲ್ಲಿ ಯಶಸ್ವಿಯಾಗಿರುವ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಒಡಕಿನ ಹಾದಿ ಹಿಡಿದಿದೆಯೇ? ರಾಜಕೀಯೇತರ ಹೋರಾಟದ ಮಾತುಗಳನ್ನು ಆಡುತ್ತಿದ್ದ ಅಣ್ಣಾ ಬಳಗ `ಪಕ್ಷ ರಾಜಕೀಯ~ಕ್ಕೆ ಇಳಿದಿದೆಯೇ? ಹರಿಯಾಣದ ಹಿಸ್ಸಾರ್ ಲೋಕಸಭಾ ಕ್ಷೇತ್ರಕ್ಕೆ ಅ.13ರಂದು ನಡೆದ ಉಪ ಚುನಾವಣೆಯಲ್ಲಿ ಅದು ಮಾಡಿದ್ದು `ಪಕ್ಷ ರಾಜಕಾರಣ~ವೇ?

ಅಣ್ಣಾ ತಂಡದ ಇಬ್ಬರು ಸದಸ್ಯರಾದ `ಜಲ ಜಾಗೃತಿ~ ಆಂದೋಲನದ ಮುಖಂಡ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಮತ್ತು ಬುಡಕಟ್ಟು ಜನರ ಭೂಮಿ ಹಕ್ಕಿಗೆ ಹೋರಾಡುತ್ತಿರುವ ಪಿ.ವಿ.ರಾಜಗೋಪಾಲ್ ತಂಡದಿಂದ ಹೊರಬರುವುದರೊಂದಿಗೆ ಈ ಪ್ರಶ್ನೆಗಳಿಗೆ ಇದೀಗ ಹೆಚ್ಚಿನ ಕಾವು ಬಂದಿದೆ. `ಹಿಸ್ಸಾರ್ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ಕರೆ ನೀಡಿದ್ದು ನಾಗರಿಕ ಸಮಿತಿಯ ಕೇಂದ್ರ ಸಮಿತಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ. ತಂಡದ ಕೆಲವರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳಿಂದ ಬೇಸರವಾಗಿದೆ. ಹೀಗಾಗಿ ಸಮಿತಿಯಿಂದ ಹೊರಬರುತ್ತಿದ್ದೇನೆ~ ಎಂದು ರಾಜೇಂದ್ರ ಸಿಂಗ್ ಸ್ಪಷ್ಟವಾಗಿಯೇ ಹೇಳಿದ್ದಾರೆ. ಇದಕ್ಕೆ ಮುನ್ನ ಕರ್ನಾಟಕದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೂ ಸಮಿತಿ ಸದಸ್ಯರು ಹಿಸ್ಸಾರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಹಿಸ್ಸಾರ್ ನಿಲುವು ಕೇಂದ್ರ ಸಮಿತಿ ನಿರ್ಧಾರವಾಗಿರಲಿಲ್ಲ ಎಂಬುದರಲ್ಲಿ ಯಾವ ಅನುಮಾನವೂ ಕಾಣುತ್ತಿಲ್ಲ. ಅಣ್ಣಾ ಬಳಗದ ಯಾರೂ ಇದನ್ನು ಅಲ್ಲಗಳೆದಿಲ್ಲ. ಹಾಗೆ ನೋಡಿದರೆ, ಹಿಸ್ಸಾರ್‌ನಲ್ಲಿ ಕಾಂಗ್ರೆಸ್ ವಿರುದ್ಧದ ಪ್ರಚಾರಕ್ಕೆ ಸಮಿತಿಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ಅವರ ಉತ್ಸಾಹವೇ ಮುಖ್ಯ ಕಾರಣವಾದಂತಿದೆ. ಸ್ವತಃ ಕೇಜ್ರಿವಾಲ್ ಹಿಸ್ಸಾರ್ ಕ್ಷೇತ್ರದವರೆಂಬುದೂ ಗಮನಾರ್ಹ. ಒಂದು ಹಂತದಲ್ಲಿ ಇದಕ್ಕೆ ಅಣ್ಣಾ ಹಜಾರೆ ಕೂಡ  ಇದಕ್ಕೆ ಸಮ್ಮತಿ ಸೂಚಿಸಿರಬಹುದು.

ಆದರೆ, ಕೆಲವು ದಿನಗಳ ನಂತರ ಹಜಾರೆ, `ಜನಲೋಕಪಾಲ ಮಸೂದೆ ವಿಷಯದಲ್ಲಿ ಕಾಂಗ್ರೆಸ್ಸಿನ ನಿಲುವು ಏನೆಂಬುದನ್ನು ಚಳಿಗಾಲದ ಅಧಿವೇಶನ ಮುಗಿಯುವ ತನಕ ಕಾದು ನೋಡುತ್ತೇವೆ~ ಎಂದಿದ್ದರು. ಅಲ್ಲಿಯವರೆಗೆ ಕಾಯುವ ವ್ಯವಧಾನ ತೋರದ ಕೇಜ್ರಿವಾಲ್, ಬೇಡಿ ಕಾಂಗ್ರೆಸ್ ವಿರುದ್ಧ ಪ್ರಚಾರಕ್ಕೆ ಇಳಿದರು. ಬಳಗದ ಸದಸ್ಯರಲ್ಲಿ ಈ ಗೊಂದಲ, ಗೋಜಲು ಏಕೆ?

ಹಿಸ್ಸಾರ್ ಚುನಾವಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ  ಕೇಜ್ರಿವಾಲ್ ಮತ್ತು ಬೇಡಿ ಸಂಯಮ ಕಳೆದುಕೊಂಡರೇ? ಹೋರಾಟದ ಮೊದಲ ಹಂತದ ಯಶಸ್ಸು ಅವರ ವಿವೇಚನಾ ಶಕ್ತಿಗೆ ಮಂಕು ಕವಿಸಿತೇ? ಅಥವಾ ಚಳಿಗಾಲದ ಅಧಿವೇಶನ  ಹತ್ತಿರದಲ್ಲಿರುವುದರಿಂದ ಕಾಂಗ್ರೆಸ್ ಮೇಲೆ ಒತ್ತಡ ಹೇರುವ ಸಲುವಾಗಿ ಈ ತಂತ್ರ ಪ್ರಯೋಗಿಸಿದರೇ? ಒಂದು ವೇಳೆ ಈಗಲೂ ಮಸೂದೆ ಜಾರಿಯಾಗದಿದ್ದರೆ ಅದು ತಮಗಾಗುವ ಸೋಲು ಎಂದು ಆತಂಕಗೊಂಡರೆ? ಆಂದೋಲನದ ವೇಳೆ ಹೊತ್ತಿಗೊಂದು ಹೇಳಿಕೆ ನೀಡುತ್ತಾ `ಆಟ~ ಆಡಿಸಿದ ಕಾಂಗ್ರೆಸ್ ನಾಯಕರ ವರ್ತನೆ ಚೆನ್ನಾಗಿ ಗೊತ್ತಿದ್ದರಿಂದಲೇ ಹಾಗೆ ಮಾಡಿದರೆ?

ಈಗಿನ ಪರಿಸ್ಥಿತಿಯಲ್ಲಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಏನನ್ನೇ ಸಾಧಿಸಬೇಕೆಂದರೂ ಒತ್ತಡ ಹೇರಬೇಕೆಂದು ಪ್ರಭುತ್ವಗಳೇ ಬಯಸುತ್ತವೆ. ಗುರಿ ಈಡೇರಬೇಕಾದರೆ `ತೊಡೆ ತಟ್ಟಿ ಅಖಾಡಕ್ಕೆ ಇಳಿಯಬೇಕು~ ಎಂಬುದನ್ನು ಸರ್ಕಾರಗಳೇ ಕಲಿಸಿವೆ. ಇದು ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಕೂಡ ಕಂಡುಬರುತ್ತಿರುವ ಧೋರಣೆಯೂ ಆಗಿದೆ. `ಮನವರಿಕೆಯ~ ಭಾಷೆಗೆ ಆಳುವ ವ್ಯವಸ್ಥೆಗಳು ಕಿವುಡಾಗಿ ಎಷ್ಟೋ ದಶಕಗಳು ಉರುಳಿವೆ. ಎಲ್ಲವನ್ನೂ ಉತ್ಪ್ರೇಕ್ಷಿತ, ಅತಿರಂಜಿತ ನೆಲೆಗಳಲ್ಲೇ ಸುದ್ದಿಯಾಗಿಸಲು ಬಯಸುವ ಪ್ರಭಾವಿ ಮಾಧ್ಯಮಗಳೂ ಮನವರಿಕೆಯ ಭಾಷೆಗೆ ಬೆನ್ನು ತಿರುಗಿಸಿವೆ.

ಗಂಗಾ ನದಿಯುದ್ದಕ್ಕೂ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಹರಿದ್ವಾರದ ನಿಗಮಾನಂದ ಸ್ವಾಮೀಜಿ  ನಾಲ್ಕು ತಿಂಗಳು ಅನ್ನಾಹಾರ ತ್ಯಜಿಸಿ ಮೌನ ಪ್ರತಿಭಟನೆ ನಡೆಸಿದ್ದು ಯಾರಿಗೆ ಗೊತ್ತಾಯಿತು? ಯಾವ ಪಕ್ಷ  ಅವರೊಡನೆ ಮಾತುಕತೆ ನಡೆಸಿತ್ತು? ಅವರ ಮರಣಾ ನಂತರವೇ ಹೊರ ಜಗತ್ತಿಗೆ ವಿಷಯ ತಿಳಿಯಿತು. ಅದೇ ರೀತಿ ಮಣಿಪುರದಲ್ಲಿ ಸೈನಿಕರಿಗೆ ಶಸ್ತ್ರಾಸ್ತ್ರ ಬಳಕೆಗೆ ವಿಶೇಷಾಧಿಕಾರ ನೀಡಿರುವುದರ ವಿರುದ್ಧ ಶರ್ಮಿಳಾ ಇರೋಮ್ 11 ವರ್ಷಗಳಿಂದ ಉಪವಾಸ ಪ್ರತಿಭಟನೆ ನಡೆಸುತ್ತಿದ್ದರೂ ಅದು ಯಾರ ಕಣ್ಣಿಗೂ ಬಿದ್ದಿಲ್ಲವಲ್ಲ?

ಅಣ್ಣಾ ಬಳಗದ ವಿದ್ಯಮಾನಕ್ಕೆ ಬಂದರೆ, ಹಿಸ್ಸಾರ್ ಚುನಾವಣೆಯಂತಹ ಸೂಕ್ಷ್ಮ ವಿಷಯದ ಬಗ್ಗೆ ಕೇಂದ್ರ ಸಮಿತಿಯಲ್ಲಿ ನಿರ್ಧರಿಸದೇ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದು ಸೂಕ್ತ ನಿರ್ಧಾರ ಎನ್ನಲಾಗದು. ಮತ್ತೊಂದು ಪ್ರಶ್ನೆ, ಭ್ರಷ್ಟರಲ್ಲದವರನ್ನು ಚುನಾಯಿಸಿ ಎಂಬ ಅಣ್ಣಾ ತಂಡದ ನಿಲುವಿನ ಹಿನ್ನೆಲೆಯಲ್ಲಿ ಮೂಡುವಂತಹದ್ದು.

ಒಂದೆಡೆ, ಭ್ರಷ್ಟರಲ್ಲದವರನ್ನು ಆರಿಸಿ ಎನ್ನುವ ಸಮಿತಿಯವರು ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮತ ಹಾಕಲು ಕರೆ ನೀಡಿದ್ದು ಎಷ್ಟು ಸರಿ? ಕ್ರಿಮಿನಲ್ ಆರೋಪಗಳಿರುವ ಉಳಿದ ಇಬ್ಬರು ಪ್ರಮುಖ ಎದುರಾಳಿಗಳಿಗೆ ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಉತ್ತಮರಲ್ಲವೇ?-  ಎಂಬ ನೈತಿಕ ಜಿಜ್ಞಾಸೆ ಏಳುತ್ತದೆ. ಕಾಂಗ್ರೆಸ್ ಪಕ್ಷವೊಂದನ್ನೇ ಗುರಿಯಾಗಿಸಿಕೊಂಡಿದ್ದು ಏಕೆ? ಹಾಗಾದರೆ ಬೇರೆ ಪಕ್ಷಗಳ ಅಭ್ಯರ್ಥಿಗಳು ಪ್ರಾಮಾಣಿಕರಾಗಿದ್ದರೆ? ಎಂದೂ ಕೇಳಬೇಕಾಗುತ್ತದೆ.

ಅಣ್ಣಾ, ಕೇಜ್ರಿವಾಲ್, ಬೇಡಿ ಈ ಪ್ರಶ್ನೆಗಳ ಬಗ್ಗೆ ಹಲವು ಸಮರ್ಥನೆಗಳನ್ನು ನೀಡಿದರು. `ಜನಶಕ್ತಿ ಏನೆಂಬುದನ್ನು ತೋರಿಸಿ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ~ ಎಂದು ಅಣ್ಣಾ ಮೊದಲು ಹರಿಹಾಯ್ದರು. ನಂತರ, ಕೇಜ್ರಿವಾಲ್ `ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಕೋರುತ್ತೇವೆ, ಅಷ್ಟೆ. ಇಂಥವರಿಗೇ ಮತ ಹಾಕಿ ಎನ್ನುವುದಿಲ್ಲ. ಉಳಿದ 39 ಅಭ್ಯರ್ಥಿಗಳಲ್ಲಿ ಮತದಾರರು ಯಾರನ್ನಾದರೂ ಆಯ್ಕೆ ಮಾಡಬಹುದು. ಆದರೆ ನಮ್ಮ ಪ್ರಚಾರದಿಂದ ಕಾಂಗ್ರೆಸ್ಸೇತರ ಪಕ್ಷಗಳಿಗೆ ಲಾಭವಾದರೆ ಅದಕ್ಕೆ ನಾವು ಹೊಣೆಯಲ್ಲ~ ಎಂದರು. `ಜನಲೋಕಪಾಲ ಮಸೂದೆ ವಿಷಯದಲ್ಲಿ ಮಾಯಾವತಿ ಏನೂ ಮಾಡಲಾಗದು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮನಸ್ಸು ಮಾಡಿದರೆ ಕೆಲವೇ ಗಂಟೆಗಳಲ್ಲಿ ಅದು ಸಾಧ್ಯವಾಗಲಿದೆ. ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿಕೊಳ್ಳಲು ಇದೇ ಕಾರಣ~ ಎಂದೂ ವಿವರಿಸಿದರು. ಅಣ್ಣಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, `ಕಾಂಗ್ರೆಸ್ ಮಸೂದೆ ಜಾರಿಗೊಳಿಸಿದರೆ, ಆ ಪಕ್ಷದ ಪರ ರಾಷ್ಟ್ರಾದಾದ್ಯಂತ ಪ್ರಚಾರ ಮಾಡಲು ಸಿದ್ಧ~ ಎಂದರು.

ಹಿಸ್ಸಾರ್ ಚುನಾವಣೆ ಹಿನ್ನೆಲೆ ನೋಡಿದರೆ ಅಲ್ಲಿ ಕಾಂಗ್ರೆಸ್ ಸೋಲಿಗೆ ಅಣ್ಣಾ ಬಳಗದ ಪ್ರಚಾರವೇ ಕಾರಣ ಎನ್ನಲಾಗದು. 2009ರಲ್ಲಿ ನಡೆದಿದ್ದ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜೈ ಪ್ರಕಾಶ್ ಮೂರನೇ ಸ್ಥಾನಕ್ಕೆ ಇಳಿದಿದ್ದರು. ಆದರೆ ಆಗ ಠೇವಣಿ ಉಳಿಸಿಕೊಂಡಿದ್ದರು. ಈ ಬಾರಿ ಠೇವಣಿಯನ್ನೂ ಕಳೆದುಕೊಂಡಿರುವುದರಿಂದ ಪಕ್ಷಕ್ಕೆ ಮುಖಭಂಗವಾಗಿದೆ. ತಮ್ಮ ಅಭ್ಯರ್ಥಿು ಸೋಲಿಗೆ ಅಣ್ಣಾ ತಂಡದ ಪ್ರಭಾವ ಕಾರಣವಲ್ಲ ಎಂದು ಕಾಂಗ್ರೆಸ್ ಅವಲೋಕನ ಮಾಕೊಂಡಿರುವುದು ಸರಿಯಾಗಿಯೇ ಇದೆ. 

 ಹೀಗಾಗಿ, ಕಾಂಗ್ರೆಸ್ಸಿನ ಮತಗಳನ್ನು ಕಸಿದಿದ್ದಕ್ಕೆ ಅಣ್ಣಾ ತಂಡ ಖುಷಿ ಪಡಬಹುದೇ ಹೊರತು, ತಮ್ಮಿಂದಲೇ ಸೋಲಾಯಿತು ಎಂದು ಹೇಳಿಕೊಳ್ಳಲಾಗದು. ಹಾಗೆಯೇ, ಒಂದೊಮ್ಮೆ ಮಸೂದೆ ಜಾರಿಗೊಂಡರೆ ಅಣ್ಣಾ ಕೂಡ ಆ ಪಕ್ಷದ ಪರ ಪ್ರಚಾರ ನಡೆಸುವ ಅಗತ್ಯವೂ ಕಾಣುತ್ತಿಲ್ಲ.

ಅಣ್ಣಾ ತಂಡದಿಂದ ಸದಸ್ಯರಿಬ್ಬರು ಈಗ ಹೊರಬಂದಿದ್ದರೂ ಅಲ್ಲಿ ಸಣ್ಣಪುಟ್ಟ ಭಿನ್ನ ಅಭಿಪ್ರಾಯಗಳು ಮೊದಲಿನಿಂದಲೂ ಕೇಳಿಬರುತ್ತಿದ್ದವು. ಆಗಾಗ ಗೊಂದಲಗಳೂ ಕಾಣಿಸಿಕೊಂಡಿದ್ದವು. `ತಂಡದಲ್ಲಿ ಒಡಕಿಲ್ಲ. ಆದರೆ ಭಿನ್ನ ಅಭಿಪ್ರಾಯಗಳು ಇವೆ~ ಎಂಬುದನ್ನು ಕೇಜ್ರಿವಾಲ್ ಸಹ ಒಪ್ಪಿಕೊಂಡಿದ್ದರು.  ಆದರೆ ಅವನ್ನು ಬದಿಗಿರಿಸಿ, ಆತ್ಮಾವಲೋಕನ ಮಾಡಿಕೊಂಡು ನಿಶ್ಚಿತ ಗುರಿ ಮುಟ್ಟುವುದಕ್ಕಾಗಿ ಪುನಃ ಒಟ್ಟಾಗುವ ಗುಣವನ್ನು ಸಮಿತಿ ಸದಸ್ಯರು ಹಲವು ಸಲ ಪ್ರದರ್ಶಿಸ್ದ್ದಿದರು. ಸ್ವತಃ ಅಣ್ಣಾ ಅವರೇ ತಂಡದಲ್ಲಿ ಒಡಕಿಲ್ಲ ಎಂದು ನಾಲ್ಕು ದಿನಗಳ ಹಿಂದೆ ಸಮರ್ಥಿಸಿಕೊಂಡಿದ್ದರು. ಆದರೂ ರಾಜೇಂದ್ರ ಸಿಂಗ್ ಮತ್ತು ರಾಜಗೋಪಾಲ್ ಸಮಿತಿಯಿಂದ ಹೊರ ಬಂದಿರುವುದು ಈಗ ಸಂಶಯಗಳಿಗೆ ಪುಷ್ಟಿ ನೀಡಿದೆ. ಇದೇ ವೇಳೆ, ಕಿರಣ್ ಬೇಡಿ `ನಮ್ಮದು ಸ್ವಯಂ ಪ್ರೇರಕರ ತಂಡ. ಬರುವವರು ಬರಬಹುದು, ಹೋಗುವವರು ಹೋಗಬಹುದು~ ಎಂದಿರುವುದರ ಹಿಂದೆ ಉದ್ಧಟತನ ಇಣುಕುತ್ತಿರುವಂತೆ ತೋರುತ್ತದೆ.

ಈ ಬೆಳವಣಿಗೆ ಹಿಂದೆ ಕಾಂಗ್ರೆಸ್ ಚಿತಾವಣೆ ಇದೆ ಎನ್ನುವವರಿಗೇನೂ ಕಡಿಮೆ ಇಲ್ಲ. ನಾಗರಿಕ ಸಮಿತಿಯಲ್ಲಿ ಬಿರುಕು ಮೂಡಿಸಲು, ಹೋರಾಟಗಾರರ ಬಾಯಿ ಮುಚ್ಚಿಸಲು, ಚಳವಳಿಯನ್ನು ದಮನಿಸಲು ಕಾಂಗ್ರೆಸ್ ಹವಣಿಸುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.  ಆದರೆ,  ರಾಜೇಂದ್ರ ಸಿಂಗ್ ಮತ್ತು ರಾಜಗೋಪಾಲ್ ನಿರ್ಧಾರದ ಹಿಂದೆ ಆ ಪಕ್ಷದ ಪಾತ್ರವೇನೂ ಕಾಣದು.

ಹೋರಾಟಗಾರರಿಗೆ ಸಂಬಂಧಿಸಿದ ಸಣ್ಣಪುಟ್ಟ ಪ್ರಕರಣಗಳನ್ನು ಅಗತ್ಯಕ್ಕಿಂತ ಬೃಹತ್ತಾಗಿ ಬಿಂಬಿಸಲು ಅದು ಯತ್ನಿಸುತ್ತಲೇ ಇದೆ. ಆಂದೋಲನಕಾರರನ್ನು ಪ್ರಶ್ನಿಸುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದೇ. ಆದರೆ ಕಾಂಗ್ರೆಸ್ಸಿಗೆ ಸಮಾಜದ ಹಿತಕ್ಕಿಂತ ಚಳವಳಿಯ ಕಾಲು ಮುರಿಯಬೇಕೆಂಬುದೇ ಮುಖ್ಯವಾಗಿದೆ. ಅದೇನೇ ಇದ್ದರೂ, ಕಾಂಗ್ರೆಸ್ ಮಾಡುತ್ತಿರುವ ತೇಜೋವಧೆಯ ಪ್ರತಿ ಪ್ರಯತ್ನಕ್ಕೂ ಅಣ್ಣಾ ಬಳಗದವರು ವಿವರಣೆ ನೀಡಬೇಕಾಗಿದೆ. ಆದರೂ, ಸದ್ಯ ಕಾಂಗ್ರೆಸ್ ನಾಯಕರ `ಭಾಷೆ~ ದುರ್ಬಲವಾಗಿದ್ದರೆ ಹೋರಾಟಗಾರರ `ಭಾಷೆ~ ಸತ್ವ ತುಂಬಿರುವಂತೆ ಭಾಸವಾಗುತ್ತದೆ. ಹೀಗಾಗಿಯೇ ಹೋರಾಟದ ಪರ ಜನಬೆಂಬಲ ಗರಿಗಟ್ಟುತ್ತಿದೆ.

ಇದು ಸಾಲದೆಂಬಂತೆ, ಬಳಗದ ಪ್ರಮುಖ ಸದಸ್ಯರಾದ ಹೆಸರಾಂತ ವಕೀಲ ಪ್ರಶಾಂತ್ ಭೂಷಣ್ ಕಾಶ್ಮೀರ ಜನಮತ ಗಣನೆ ಕುರಿತು ನೀಡಿದ ಹೇಳಿಕೆ ಮತ್ತೊಂದು ವಿವಾದ ಎಬ್ಬಿಸಿದೆ. ಇದೇ ಕಾರಣಕ್ಕೆ ದೆಹಲಿಯಲ್ಲಿ ಅವರ ಮೇಲೆ ಹಲ್ಲೆ ನಡೆದಿದೆ. ಹಿಂದೆ ಕಾಶ್ಮೀರ ಯುದ್ಧದಲ್ಲಿ ಸ್ವತಃ ಪಾಲ್ಗೊಂಡಿದ್ದ ಅಣ್ಣಾ `ಕೆಲವರು ಕಾಶ್ಮೀರ ಕುರಿತು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಕಾಶ್ಮೀರಕ್ಕಾಗಿ ನಾನು ಈಗಲೂ ಯುದ್ಧಕ್ಕೆ ಇಳಿಯಲು ಸಿದ್ಧ~ ಎಂದು ಪರೋಕ್ಷವಾಗಿ ಭೂಷಣ್ ವಿರುದ್ಧ ಗುಡುಗಿದ್ದಾರೆ.  ಅಷ್ಟೇ ಅಲ್ಲ, ಭೂಷಣ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಕುರಿತು ಮುಂದೆ ನಡೆಯಲಿರುವ ಕೇಂದ್ರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದಿದ್ದಾರೆ. ಇದು ಏನಾಗುತ್ತದೆ ಎಂಬುದು ಗೊತ್ತಾಗಲು, ಸದ್ಯ ವಿದೇಶ ಪ್ರವಾಸದಲ್ಲಿರುವ ಪ್ರಶಾಂತ್ ಭೂಷಣ್ ವಾಪಸು ಬರುವ ತನಕ ಕಾಯಬೇಕಿದೆ. ತಂಡದಲ್ಲಿರುವ ಒಂದೇ ಕಾರಣಕ್ಕೆ ಯಾವ ವಿಷಯದ ಬಗ್ಗೆ ಯಾರೂ ಅಭಿಪ್ರಾಯ ವ್ಯಕ್ತಪಡಿಸಲೇಬಾರದು ಎಂದೇನೂ ಇಲ್ಲ. ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕೆಂಬುದು ಪ್ರಶಾಂತ್ ಭೂಷಣರ ವೈಯಕ್ತಿಕ ನಿಲುವು. ಆದರೆ ಮಾಜಿ ಯೋಧ ಅಣ್ಣಾ ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ವಿವಾದ ತಳಕು ಹಾಕಿಕೊಂಡಿದೆ.

ನಾಲ್ಕಾರು ದಿನಗಳಲ್ಲಿ  ಅಣ್ಣಾ ತಂಡದ ಮತ್ತೊಂದು ವಿಕೆಟ್ ಉರುಳಿದರೂ ಉರುಳಬಹುದು. ಹಾಗೆಂದ ಮಾತ್ರಕ್ಕೆ ಅಣ್ಣಾ ತಂಡ ಪತನದ ಹಾದಿ ಹಿಡಿಯಿತು ಎಂದು ಸರ್ಕಾರ ವಿರಮಿಸುವಂತಿಲ್ಲ. ಕೆಲವು ದಿನಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಸಣ್ಣಗೆ ಆರಂಭವಾದ `ವಾಲ್‌ಸ್ಟ್ರೀಟ್ ಮುತ್ತಿಗೆ~ ಇದೀಗ 80 ರಾಷ್ಟ್ರಗಳಿಗೆ ಪಸರಿಸಿದೆ. ಅರಬ್ ರಾಷ್ಟ್ರಗಳಲ್ಲಿ ಪ್ರಭುತ್ವದ ವಿರುದ್ಧ ದಂಗೆಯ ಕಾವು ಇನ್ನೂ ಆರಿಲ್ಲ. ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಗ್ರೀಕ್ ಸೇರಿದಂತೆ ಯೂರೋಪ್‌ನ ಹಲವು ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ವಿದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸು ತರಿಸಲು ಜರ್ಮನಿ ಮುಂದಾಗಿದೆ.

ಇದೇ ಸಂದರ್ಭದಲ್ಲಿ, ಜನಚೇತನ ಯಾತ್ರೆ ನಡೆಸುತ್ತಿರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮೊನ್ನೆ ನಾಗಪುರಕ್ಕೆ ಬಂದಾಗ, `ರಾಷ್ಟ್ರದ ರಾಜಕೀಯ ಸನ್ನಿವೇಶ ಬಲು ಸೂಕ್ಷ್ಮವಾಗಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಯಾರೂ ಊಹಿಸಲು ಆಗದ ಪರಿಸ್ಥಿತಿ ಇದೆ~ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಅಣ್ಣಾ ತಂಡದಲ್ಲಿ ಒಡಕು ಕಾಣಿಸಿಕೊಂಡಿದೆ. ಹಿಸ್ಸಾರ್ ಲೋಕಸಭಾ ಚುನಾವಣೆಯಲ್ಲಿ ಅಣ್ಣಾ ತಂಡ ತೆಗೆದುಕೊಂಡ ನಿಲುವು ವಿವಾದಕ್ಕೆ ಸಿಲುಕಿದೆ. ಆದರೂ ಈ ವಾತಾವರಣದಲ್ಲಿ, ಅಣ್ಣಾ ನೇತೃತ್ವದ ಚಳವಳಿ ಇಲ್ಲಿ ಮತ್ತೇನಕ್ಕೋ ನಾಂದಿ ಹಾಡಬಹುದು; ಬೇರೆ ದಿಕ್ಕಿಗೇ ಹೊರಳಬಹುದು: ಹೊಸ ಆಯಾಮವನ್ನೇ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT