ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಮಳೆಯಲ್ಲಿ ದೇವರಂತೆ ಬಂದವರು!

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಇದು ಐದು ವರ್ಷದ ಹಿಂದಿನ ಮಾತು. ನನ್ನ ಮಗಳಿಗೆ ಮೊದಲ ಗಂಡು ಮಗು ಆಗಿತ್ತು. ನಾವು ಬೊಮ್ಮನಹಳ್ಳಿಯಲ್ಲಿ ವಾಸವಿದ್ದೆವು. ನಮ್ಮ ಫ್ಯಾಮಿಲಿ ಡಾಕ್ಟರ್ ಆಡುಗೋಡಿಯಲ್ಲಿ ಇದ್ದಾರೆ.

ಪಾಪುಗೆ ಒಂಬತ್ತು ತಿಂಗಳು ತುಂಬಿದಾಗ ಇಂಜೆಕ್ಷನ್ ಹಾಕಿಸಲು ನಾನು ಮತ್ತು ನನ್ನ ಪತಿ ಮಗುವನ್ನು ಎತ್ತಿಕೊಂಡು ಸ್ಕೂಟರ್‌ನಲ್ಲಿ ಆಡುಗೋಡಿಗೆ ಹೋದೆವು.
ಆಗ ಸಾಯಂಕಾಲ ಆರು ಗಂಟೆಯಾಗಿತ್ತು. ಡಾಕ್ಟರ್ ಬಂದರು, ನಮ್ಮ ಸರದಿ ಬಂದ ಮೇಲೆ ಮಗುವಿಗೆ ಇಂಜೆಕ್ಷನ್ ಹಾಕಿಸಿಕೊಂಡು ಹೊರಗೆ ಬಂದೆವು.

ತುಂಬಾ ಮೋಡವಾಗಿತ್ತು, ಸಣ್ಣಗೆ ಮಳೆಯೂ ಶುರುವಾಗಿಬಿಟ್ಟಿತು. ಆದಷ್ಟು ಬೇಗನೆ ಮನೆ ಸೇರೋಣ ಅಂತ ಹೊರಟೆವು. ಚೆಕ್‌ಪೋಸ್ಟ್ ಹತ್ತಿರ ಬರುತ್ತಲೇ ಮಳೆ ಜೋರಾಯಿತು. ಆಗ ಅಲ್ಲೇ ಇದ್ದ ಒಂದು ಆಟೊ ಕರೆದು ನಾನು ಪಾಪೂನ ಎತ್ತಿಕೊಂಡು ಕುಳಿತೆ.

ನನ್ನ ಯಜಮಾನರು ಗಾಡಿಯಲ್ಲೇ ನಮ್ಮ ಹಿಂದೆ ಬರುತ್ತಿದ್ದರು. ಆಗ ಸಮಯ ಸುಮಾರು ಎಂಟೂ ಮುಕ್ಕಾಲು ಆಗಿತ್ತು. ಮಳೆ ನಿಲ್ಲುವ ಲಕ್ಷಣ ಇರಲಿಲ್ಲ. ಮಗುವಿಗೆ ಹೊದಿಸಿದ ಶಾಲು ಎಲ್ಲಾ ನೆನೆದುಹೋಗಿತ್ತು. ಮಳೆ ಇನ್ನೂ ನಿಲ್ಲಲೇ ಇಲ್ಲ ಮತ್ತಷ್ಟು ಜೋರಾಗಿತ್ತು ಜೋರಾಗಿ ಗಾಳಿಯೂ ಬೀಸುತ್ತಿತ್ತು.

ಮಗು ಅಳಲು ಪ್ರಾರಂಭಿಸಿತು. ಕತ್ತಲು ಬೇರೆ, ನಾನು ಮಗುವಿಗೆ ಎಷ್ಟೇ ಸಮಾಧಾನ ಮಾಡಿದರೂ ಸುಮ್ಮನಾಗಲಿಲ್ಲ. ನನ್ನ ಸೀರೆಯ ಸೆರಗಿನಿಂದ, ಟವಲ್‌ನಿಂದ ಎಷ್ಟೇ ಮುಚ್ಚಿದರೂ ನೀರು ಮಗುವಿನ ಮೇಲೆ ಬೀಳುತ್ತಿತ್ತು.

ನನ್ನ ಅಸಹಾಯಕತೆಯನ್ನು ಗಮನಿಸಿದ ಆಟೊ ಅಣ್ಣ, `ಏನೂ ಹೆದರಬೇಡಮ್ಮ ಮಗುವಿಗೆ ಇದನ್ನು ಹೊದಿಸು~ ಅಂತ ಅವರ ರೈನ್‌ಕೋಟ್ ಬಿಚ್ಚಿಕೊಟ್ಟರು. ಮಳೆ ಇನ್ನೂ ಜೋರಾಯಿತು ಜೊತೆಗೆ ಗಾಳಿ ಬೇರೆ ನನ್ನವರು ಗಾಡಿಯಲ್ಲೇ ನಮ್ಮ ಹಿಂದೆಯೇ ಬರುತ್ತಿದ್ದರು. ಅವರಿಗೆ ಏನಾಗುತ್ತೇನೊ ಅಂತ ಭಯ. ಕರೆಂಟು ಬೇರೆ ಇರಲಿಲ್ಲ. ಏನೂ ಸರಿಯಾಗಿ ಕಾಣುತ್ತಲೂ ಇರಲಿಲ್ಲ.

ನನಗೆ ಅಳುವೇ ಬಂತು. ನಾನು ಅಳುವುದನ್ನು ನೋಡಿ ಆಟೊ ಅಣ್ಣ  ಮತ್ತೆ ಸಮಾಧಾನಪಡಿಸಿದರು- `ಏನೂ ಆಗಲ್ಲಮ್ಮ, ಇಲ್ಲೇ ಆಟೊನ ನಿಲ್ಲಿಸಿ ನೋಡೋಣ ನಿಮ್ಮ ಯಜಮಾನರು ಹಿಂದೆ ಬರುತ್ತಿರಬಹುದು~ ಅಂತ ಆಟೊ ನಿಲ್ಲಿಸಿದರು. ಒಂದು ಹತ್ತು ನಿಮಿಷದಲ್ಲಿ ಇವರು ಬಂದರು, ಮತ್ತೆ ನಮ್ಮ ಪಯಣ ಸಾಗಿತು.

ಮಳೆ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ದಾರಿಯಲ್ಲಿ  ಎಲ್ಲಿಯಾದರೂ ನಿಲ್ಲೋಣವೆಂದರೆ ಯಾವ ಅಂಗಡಿ ಮುಂದೆಯೂ ಒಂದಿಂಚು ಜಾಗವೂ ಇರಲಿಲ್ಲ. ಮಗು ಹೆದರಿ ಅಳುತ್ತಿತ್ತು. ಆಟೊ ಅಣ್ಣ ನನಗೆ ಧೈರ್ಯ ಹೇಳುತ್ತಿದ್ದರು. `ನೀನು ಹೆದರಬೇಡಮ್ಮ ದೇವರಿದ್ದಾನೆ ಮಗುವಿಗೆ ಏನೂ ಆಗಲ್ಲ”.

ಹಾಗೂ ಹೀಗೂ ಸಿಲ್ಕ್ ಬೋರ್ಡ್ ಹತ್ತಿರ ಬರುವಷ್ಟರಲ್ಲಿ ಆಟೊ ಏಕಾಏಕಿ ಬಂದ್ ಬಿತ್ತು. ಏನು ಮಾಡಿದರೂ ಸ್ಟಾರ್ಟ್ ಆಗಲೇ ಇಲ್ಲ. ಆಗ ಆಟೋ ಅಣ್ಣ ನಮ್ಮ ಮನೆಯವರಿಗೆ `ನೀವು ಇಲ್ಲೇ ಆಟೊದಲ್ಲಿ ಕುಳಿತುಕೊಳ್ಳಿ ಸಾರ್ ನಾನೇ ಹೋಗಿ ಬೇರೆ ಆಟೊ ತರುತ್ತೇನೆ~ ಅಂತ ಹೇಳಿ ಆಚೆ ಹೋದವರು ಐದು ನಿಮಿಷದಲ್ಲೇ ಬೇರೆ ಆಟೊ ಕರೆದುಕೊಂಡು ಬಂದರು!

ನಾನು ಮಗೂನ ಎತ್ತಿಕೊಂಡು ಆಟೊ ಬದಲಾಯಿಸಿದೆ, ನಮ್ಮವರು ಆಟೊ ಅಣ್ಣನಿಗೆ `ನಿಮ್ಮಿಂದ ತುಂಬಾ ಉಪಕಾರವಾಯಿತು ಸಾರ್~ ಅಂತ ಹೇಳಿ ದುಡ್ಡುಕೊಟ್ಟರು. ನಾನು ಏನಾದರೂ ಹೇಳೋಣ ಅನ್ನುವಷ್ಟರಲ್ಲಿ ಆಟೊ ಮುಂದೆ ಹೋಗಿತ್ತು.

ಆ ರಾತ್ರಿಯಲ್ಲಿ ಅವರ ಮುಖಾನೂ ನಾನು ಗಮನಿಸಿರಲಿಲ್ಲ. ಆದರೆ ಅವರ ಧ್ವನಿ ಮಾತ್ರ ಕೇಳಿದ್ದೆ.  ಆ ರಾತ್ರಿ ಮನೆ ತಲುಪಿದ ಮೇಲೆ ನಮ್ಮವರಿಗೆ `ಅವರ ಹೆಸರು, ವಿಳಾಸ ಏನಾದ್ರೂ ಕೇಳಿದ್ರಾ~ ಅಂತ ಕೇಳಿದೆ. ಆದರೆ ಇವರೂ ಏನೂ ಕೇಳಿರಲಿಲ್ಲ. ಮಗುವಿನ ಚಿಂತೆಯಲ್ಲಿ ಹಾಗೇ ಮನೆಗೆ ಸೇರಿದೆವು. ಈ ಘಟನೆ ನಡೆದು ಐದು ವರ್ಷವಾದರೂ ಅದನ್ನು ನೆನೆಸಿಕೊಂಡರೆ ನಡುಕ ಬರುತ್ತದೆ.

ಈಗಲೂ ಆಟೊ ನೋಡಿದರೆ ಆ ಅಣ್ಣ ನೆನಪಿಗೆ ಬರುತ್ತಾರೆ. ಆ ಆಟೊ ಅಣ್ಣ ಮತ್ತೆ ಸಿಗಲೇ ಇಲ್ಲ. ಈಗ ನಮ್ಮ ಪಾಪುವಿಗೆ ಐದು ವರ್ಷ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT