ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸಿನ ಮತದಾನ...

Last Updated 12 ಮೇ 2014, 9:51 IST
ಅಕ್ಷರ ಗಾತ್ರ

ನವದೆಹಲಿ: 16ನೇ ಲೋಕ­ಸಭಾ ಚುನಾ­ವಣೆಯ ಕಟ್ಟಕಡೆ­ಯ ಹಂತದ (ಒಂಬತ್ತನೇ ) ಮೂರು ರಾಜ್ಯಗಳ 41 ಸ್ಥಾನಗಳಿಗಾಗಿ ಸೋಮವಾರ ಬೆಳಿಗ್ಗೆಯಿಂದ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಆರಂಭಗೊಂಡಿರುವ ಮತದಾನವು ಶಾಂತಿಯುತವಾಗಿ ಬಿರುಸಿನಿಂದ ಸಾಗಿದೆ.

ಬಿಹಾರದಲ್ಲಿ 10 ಗಂಟೆ ವರೆಗಿನ ಅವಧಿಯಲ್ಲಿ ಶೇ.18 ರಷ್ಟು ಮತದಾನವಾಗಿದೆ. ಇನ್ನೂ ಉತ್ತರ ಪ್ರದೇಶದಲ್ಲಿ ಮತದಾನ ಆರಂಭವಾದ ಎರಡು ಗಂಟೆಗಳ ಅವಧಿಯಲ್ಲಿ ಶೇ.10 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ದಾಖಲೆಯ ಶೇ.41ರಷ್ಟು ಮತದಾನವಾಗಿದೆ.

ಕೊನೆಯ ಹಂತದ ಈ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿ­ವಾಲ್‌ ಮತ್ತು ಕಾಂಗ್ರೆಸ್‌ನ ಅಜಯ್‌ ರಾಯ್‌ ಅವರು ಪರಸ್ಪರ ಎದು­ರಾಳಿಗಳಾಗಿರುವ ವಾರಾ­ಣಸಿ, ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಕಣಕ್ಕಿ­ಳಿ­ದಿರುವ ಅಜಂಗಡ ಈ ಅಂತಿಮ ಹಂತದ ಗಮನ ಸೆಳೆದಿರುವ ಕ್ಷೇತ್ರಗಳಾಗಿವೆ.

35 ದಿನಗಳ ಸುದೀರ್ಘಾವಧಿಯ ಚುನಾವಣೆಯ ಇದುವರೆಗಿನ 8 ಹಂತ­ಗಳಲ್ಲಿ ಶೇ 66ರಷ್ಟು ಮತ­ದಾರರು ಹಕ್ಕು ಚಲಾಯಿಸಿರುವುದು ಒಂದು ದಾಖಲೆಯಾಗಿದೆ. ಅಲ್ಲದೇ, 13 ರಾಜ್ಯ­ಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ­ರುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ಕಡೆಯ ಹಂತದಲ್ಲೂ ಬಿರುಸಿನ ಮತದಾನ­ವಾಗುವ ನಿರೀಕ್ಷೆ ಇದೆ.

ತುರುಸಿನ ಪೈಪೋಟಿ: ರಾಷ್ಟ್ರ ರಾಜ­ಕಾರಣದ ಮುಖ್ಯ ಭೂಮಿಕೆ­­ಯೆಂದೇ ಹೆಸರಾದ ಉತ್ತರ ಪ್ರದೇಶದ 18 ಕ್ಷೇತ್ರಗಳಲ್ಲಿ ಸಮಾಜ­ವಾದಿ ಪಕ್ಷ, ಬಿಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತುರುಸಿನ ಪೈಪೋಟಿಯಲ್ಲಿವೆ.

ಪಶ್ಚಿಮ ಬಂಗಾಳದ 17 ಕ್ಷೇತ್ರಗಳಲ್ಲಿ ಟಿಎಂಸಿ ಪ್ರಾಬಲ್ಯವಿದ್ದು ಮತ್ತೊಮ್ಮೆ ಜನಬೆಂಬಲ ಪ್ರದರ್ಶಿಸುವ ಉತ್ಸಾಹ­ದಲ್ಲಿದೆ. ಬಿಹಾರದ 6 ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಯು ಮತ್ತು ಆರ್‌ಜೆಡಿ ಸೆಣಸುತ್ತಿವೆ.

ಕೇಂದ್ರ ಸಚಿವ ಅಧೀರ್‌ ರಂಜನ್‌ ಚೌಧರಿ (ಪಶ್ಚಿಮ ಬಂಗಾಳದ ಬೆಹ್ರಾಂ­ಪುರ), ಬಿಜೆಪಿಯ ಜಗ­ದಾಂಬಿಕಾ ಪಾಲ್‌ (ದೊಮರಿಯಾ­ಗಂಜ್‌, ಉ.ಪ್ರ), ಕೇಂದ್ರ ಸಚಿವ ಆರ್‌ಪಿಎನ್‌ ಸಿಂಗ್‌ (ಕುಷಿನಗರ್‌ – ಉ.ಪ್ರ), ಆರ್‌ಜೆಡಿ ಮುಖಂಡ ರಘುವಂಶ ಪ್ರಸಾದ್‌ ಸಿಂಗ್‌ (ವೈಶಾಲಿ– ಬಿಹಾರ) ಕಣದಲ್ಲಿರುವ ಪ್ರಮುಖರಾಗಿದ್ದಾರೆ.

ಮತ ಚಲಾವಣೆ ಪ್ರಕ್ರಿಯೆ ಅಂತಿಮಘಟ್ಟಕ್ಕೆ ಬರುವುದರೊಂದಿಗೆ ಈಗ ಎಲ್ಲರ ಕುತೂಹಲ ಮೇ 16ರ ಮತ ಎಣಿಕೆಯತ್ತ ನೆಟ್ಟಿದೆ.

ಮತಗಟ್ಟೆ ಸಮೀಕ್ಷೆ ಸಂಜೆ 6.30ರ ನಂತರ: ಮತಗಟ್ಟೆ ಸಮೀಪ ಸಮೀಕ್ಷೆಯ ಫಲಿತಾಂಶ­ಗಳನ್ನು ಸೋಮ­ವಾರ ಸಂಜೆ 6.30ರ ನಂತರವೇ ಪ್ರಸಾರ ಮಾಡು­­ವುದಕ್ಕೆ ಅವಕಾಶ ಇದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT