ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸಿನಿಂದ ನಡೆದ ಭತ್ತ ಕಟಾವು

Last Updated 7 ಡಿಸೆಂಬರ್ 2013, 6:46 IST
ಅಕ್ಷರ ಗಾತ್ರ

ಕಾರಟಗಿ: ದರ ಏರಿಕೆಯ ಮಧ್ಯೆಯೂ ಭತ್ತ ಕಟಾವು ಕಾರ್ಯ ಭರದಿಂದ ಸಾಗಿದೆ. ರೈತರ ಮಧ್ಯೆ ಪೈಪೋಟಿ ಹಾಗೂ ಕಟಾವು ಯಂತ್ರಗಳ ಕೊರತೆ­ಯಿಂದಾಗಿ ಕಟಾವು ದರ ಏರಿಕೆಯಾ­ಗಿದೆ. ರೈತರು ಅನಿವಾರ್ಯವಾಗಿ ಕಟಾವು ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಹಿಂದೆ ಭತ್ತದ ಕಟಾವು ಸಮಯ­ದಲ್ಲಿ ಆಂಧ್ರದ ಗದ್ವಾಲ್ ಭಾಗದ ಸಾವಿ­ರಾರು ಕೃಷಿ ಕಾರ್ಮಿಕರು  ಬರುತ್ತಿದ್ದರು. ಇದರ ಜೊತೆಗೆ ಸ್ಥಳೀಯ ಕೃಷಿ ಕಾರ್ಮಿಕರ ತಂಡಗಳು ಭತ್ತದ ಕಟಾವಿಗೆ ಸನ್ನದ್ಧರಾಗುತ್ತಿದ್ದರು. ಯಂತ್ರದ ಮೂಲಕ ಕಟಾವು ಮಾಡಿ­ಸಿದರೆ ಭತ್ತ ತುಂಡಾಗುವುದು, ದರ ಪ್ರತಿ ಚೀಲಕ್ಕೆ ರೂ 15ರಿಂದ 20  ಕಡಿಮೆ ಆಗಿರುತ್ತಿತ್ತು. ಇದರಿಂದಾಗಿ ಕೃಷಿ ಕಾರ್ಮಿಕರಿಂದಲೆ ಕಟಾವು ಕಾರ್ಯ ಅಧಿಕ ಪ್ರಮಾಣದಲ್ಲಿ ನಡೆಯುತ್ತಿತ್ತು.

ಈಚೆಗೆ ವರ್ಷಗಳಲ್ಲಿ ಗದ್ವಾಲ್ ಭಾಗದ ಕೃಷಿ ಕಾರ್ಮಿಕರು ಬರುತ್ತಿಲ್ಲ. ಸ್ಥಳೀಯ ಕೃಷಿ ಕಾರ್ಮಿಕರ ತಂಡಗಳು ಕಟಾವು ಕಾರ್ಯವನ್ನೆ ಕೈಬಿಟ್ಟಿದ್ದಾರೆ. ಕೃಷಿ ಕಾರ್ಮಿಕರಿಂದ ಕಟಾವು ನಡೆ­ಯುವುದು ಅಪರೂಪ ಎನ್ನುವಂತಾಗಿದೆ.

ಭತ್ತದ ಕಟಾವು ಆರಂಭವಾದರೆ ಸಾಕು, ತಮಿಳುನಾಡು ರಾಜ್ಯದಿಂದ ಕಟಾವು ಯಂತ್ರಗಳು ಅಧಿಕ ಪ್ರಮಾಣ­ದಲ್ಲಿ ಬರುತ್ತವೆ. ಯಂತ್ರದ ಕಟಾವು ನಡೆಯುವುದು ಮಧ್ಯವರ್ತಿಗಳ ಮೂಲಕವೆ. ಕಟಾವು ದರ ಪ್ರತಿ ತಾಸಿಗೆ ಕಳೆದ ಹಂಗಾಮಿನಲ್ಲಿ ರೂ1800 ಇತ್ತು, ಈ ಹಂಗಾಮಿನಲ್ಲಿ ರೂ 2500ಕ್ಕಿಂತ ಅಧಿಕ. ಬೇಕಾಬಿಟ್ಟಿ ಏರಿಕೆಗೆ ಕೆಲ ಗ್ರಾಮಗಳ ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ ಘರ್ಷಣೆ, ಹಲ್ಲೆಯ ಘಟನೆಗಳು ನಡೆದಿದ್ದವು. ಬಳಿಕ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಂಧಾನ ನಡೆದು ತಾಸಿಗೆ ರೂ 2200 ನಿಗದಿಯಾಗಿತ್ತು.

ಗಲಾಟೆಯ ಸುದ್ದಿಯಿಂದ ಇನ್ನೂ ಬರಬೇಕಿದ್ದ ಕಟಾವು ಯಂತ್ರಗಳು ಬಾರದೆ ಇರುವ ಕಟಾವು ಯಂತ್ರ­ದವರು ಸಂಧಾನದ ದರಕ್ಕಿಂತ ಅಧಿಕ ದರ ನೀಡಿದರೆ ಮಾತ್ರ ಕಟಾವಿಗೆ ಬರುತ್ತಿದ್ದಾರೆ ಎಂದು ಗುಡೂರ ಭಾಗದ ರೈತರಾದ ಯಂಕಣ್ಣ, ಸೋಮಣ್ಣ ಹೇಳುತ್ತಾರೆ.

ಇರುವ ಕಟಾವು ಯಂತ್ರಗಳಿಂದಲೆ ಕಟಾವು ಮಾಡಿಸಬಹುದು. ಆದರೆ ರೈತರು ಕಟಾವಿಗೆ ಪೈಪೋಟಿ ಮಾಡು­ತ್ತಿರುವುದರಿಂದ ಯಂತ್ರದವರು ಅಧಿಕ ಬೆಲೆ ನಿಗದಿ ಮಾಡುತ್ತಿದ್ದಾರೆ. ರೈತರು ಸಹನೆಯಿಂದ ಕಟಾವಿಗೆ ಮುಂದಾ­ಗಬೇಕು ಎಂದು ಸೋಮನಾಳ ಗ್ರಾಮದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಪ್ಪ ಹೂಗಾರ್, ಸಜ್ಜನ್ ಶರಣಬಸಪ್ಪ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT