ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರ್ಲಾಗೆ ವಂಚನೆ: ಒಂಬತ್ತು ಮಂದಿ ಬಂಧನ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ದೇಶದ ಖ್ಯಾತ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಅವರ ಕ್ರೆಡಿಟ್‌ಕಾರ್ಡ್ ನಕಲಿ ಮಾಡಿ ವಸ್ತುಗಳನ್ನು ಖರೀದಿಸಿದ್ದ ಒಂಬತ್ತು ಮಂದಿ ಅಂತರರಾಷ್ಟ್ರೀಯ ಮಟ್ಟದ ಕ್ರೆಡಿಟ್‌ಕಾರ್ಡ್ ವಂಚಕರನ್ನು ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಕಾರ್ಡ್ ತಯಾರಿಕಾ ಯಂತ್ರ ವಶಪಡಿಸಿಕೊಳ್ಳಲಾಗಿದೆ. ಒಟ್ಟು 219 ನಕಲಿ ಕ್ರೆಡಿಟ್‌ಕಾರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ನಾಗದೇವನಹಳ್ಳಿಯ ಜಯಕುಮಾರ್ (39), ಮಹಾಲಕ್ಷ್ಮಿಲೇಔಟ್‌ನ ಪ್ರಕಾಶ್ (34), ಕಾಟನ್‌ಪೇಟೆಯ ವಾಸೀಂ ಪಾಷ (25), ಬಿಟಿಎಂ ಲೇಔಟ್‌ನ ಗೌತಮ್ (36), ರಾಜಾಜಿನಗರ ನಾಲ್ಕನೇ ಬ್ಲಾಕ್‌ನ ಲೋಕೇಶ್ (33), ಆನಂದಪುರದ ಮತೀನ್ ಅಹಮ್ಮದ್ (37), ಆರ್. ಆರ್.ಲೇಔಟ್‌ನ ಮೇಘರಾಜ್ (27) ಪಟ್ಟೇಗಾರಪಾಳ್ಯದ ರವಿ (29) ಮತ್ತು ಮೈಸೂರಿನ ಅಪ್ಸರ್ ರೆಹಮಾನ್ (21) ಬಂಧಿತರು.

ನಕಲಿ ಕಾರ್ಡ್ ತಯಾರಿಸುತ್ತಿದ್ದರು: ಇದೊಂದು ಅಂತರರಾಷ್ಟ್ರೀಯ ಮಟ್ಟದ ಜಾಲವಾಗಿದ್ದು ಜಯಕುಮಾರ್ ಈ ದಂಧೆಯ ರೂವಾರಿ. ಪದವೀಧರನಾದ ಆತ ಈ ಹಿಂದೆಯೂ ನಕಲಿ ಕ್ರೆಡಿಟ್‌ಕಾರ್ಡ್ ತಯಾರಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಶ್ರೀಲಂಕಾದಲ್ಲಿರುವ ಹರಿಪ್ರಕಾಶ್ ಎಂಬಾತ ಸ್ವತಃ ಭಾರತಕ್ಕೆ ಬಂದು ನಕಲಿ ಕ್ರೆಡಿಟ್‌ಕಾರ್ಡ್ ತಯಾರಿಸಿ ಜಯಕುಮಾರ್‌ಗೆ ಕೊಡುತ್ತಿದ್ದ. ಇದಕ್ಕಾಗಿ ಆತ ಹಣ ಪಡೆಯುತ್ತಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಡ್‌ಗಳನ್ನು ತಯಾರಿಸಿದ ನಂತರ ಅದನ್ನು ಬಳಸಬಹುದೇ ಎಂಬುದನ್ನು ಪರೀಕ್ಷಿಸುತ್ತಿದ್ದರು. ಇದಕ್ಕಾಗಿಯೇ ಅವರು ಯಂತ್ರವನ್ನು ಇಟ್ಟುಕೊಂಡಿದ್ದರು. ಬಳಕೆಗೆ ಯೋಗ್ಯ ಇದೆ ಎಂದು ಗೊತ್ತಾದ ಮೇಲೆ ಆರೋಪಿಗಳು ಆ ಕಾರ್ಡ್‌ಗಳನ್ನು ಬಳಸಿ ವಸ್ತುಗಳನ್ನು ಖರೀದಿಸುತ್ತಿದ್ದರು. ಚಿನ್ನದ ಆಭರಣಗಳನ್ನು ಹೆಚ್ಚಾಗಿ ಕೊಳ್ಳುತ್ತಿದ್ದರು ಎಂದರು.

ರಷ್ಯಾದಿಂದ ಕಾರ್ಡ್ ಸಂಖ್ಯೆ:  ರಷ್ಯಾ ಮೂಲದ ವ್ಯಕ್ತಿಗಳು ಅಂತರರಾಷ್ಟ್ರೀಯ ಬ್ಯಾಂಕ್‌ಗಳ ಕ್ರೆಡಿಟ್‌ಕಾರ್ಡ್‌ಗಳ ಸಂಖ್ಯೆಯನ್ನು ವೆಬ್‌ಸೈಟ್ ಮೂಲಕ ಹರಾಜು ಮಾಡುತ್ತಿದ್ದಾರೆ. ಈ ವೆಬ್‌ಸೈಟ್‌ನಲ್ಲಿ ಕ್ರೆಡಿಟ್‌ಕಾರ್ಡ್ ಖರೀದಿಸಿ ಆ ಸಂಖ್ಯೆಯ ನಕಲಿ ಕಾರ್ಡ್ ತಯಾರಿಸಲಾಗುತ್ತಿತ್ತು. ಇಂಗ್ಲೆಂಡ್‌ನ ಸ್ಟಾಂಡರ್ಡ್ ಚಾರ್ಟಡ್ ಬ್ಯಾಂಕ್, ಚೀನಾದ ಹಾಂಕಾಂಗ್ ಅಂಡ್ ಶಾಂಘೈ ಬ್ಯಾಂಕ್, ಉತ್ತರ ಅಮೆರಿಕದ ಸಿಟಿ ಬ್ಯಾಂಕ್ ಸೌತ್ ಡಕೊಟ, ಅಮೆರಿಕದ ಚೇಸ್ ಬ್ಯಾಂಕ್, ಸಿಟಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಸ್ಟೇಲಿಯ ಮತ್ತು ನ್ಯೂಜಿಲೆಂಡ್ ಬ್ಯಾಂಕ್‌ಗಳ ಖಾತೆದಾರರು ಬಳಸುವ ಕ್ರೆಡಿಟ್‌ಕಾರ್ಡ್‌ಗಳನ್ನು ನಕಲಿ ಮಾಡಿದ್ದಾರೆ ಎಂದು ಸಿದ್ದರಾಮಪ್ಪ ಮಾಹಿತಿ ನೀಡಿದರು.

ಉದ್ಯಮಿ ಕುಮಾರಮಂಗಲಂ ಅವರ ಕ್ರೆಡಿಟ್‌ಕಾರ್ಡ್ ಸಂಖ್ಯೆ ಪಡೆದು ನಕಲಿ ಕಾರ್ಡ್ ತಯಾರಿಸಲಾಗಿತ್ತು. ಅಪ್ಸರ್ ರೆಹಮಾನ್ ಈ ಕಾರ್ಡ್ ಬಳಸಿ ಬೆಂಗಳೂರು ಮತ್ತು ಮುಂಬೈನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದ. ಈ ಬಗ್ಗೆ ಮುಂಬೈಯಲ್ಲಿ ಪ್ರಕರಣ ದಾಖಲಾಗಿತ್ತು. ಜಾಲದ ಬಗ್ಗೆ ವಿದೇಶಿ ಬ್ಯಾಂಕ್‌ಗಳಿಗೆ ಮಾಹಿತಿ ನೀಡಲಾಗಿದ್ದು, ಅವರಿಂದ ಇನ್ನೂ ಉತ್ತರ ಬಂದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT