ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಗಿ, ಕಾನಸೂರಿನಲ್ಲಿ ನೆಮ್ಮದಿ ಕೇಂದ್ರ: ಕಾಗೇರಿ

Last Updated 15 ಡಿಸೆಂಬರ್ 2012, 8:31 IST
ಅಕ್ಷರ ಗಾತ್ರ

ಸಿದ್ದಾಪುರ: `ತಾಲ್ಲೂಕಿನ ಬಿಳಗಿ ಮತ್ತು ಕಾನಸೂರಿನಲ್ಲಿ ಹೊಸದಾಗಿ ನೆಮ್ಮದಿ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮನಬೈಲ್ ಸೇತುವೆಯ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿದರು. `ತಾಲ್ಲೂಕಿನಲ್ಲಿ ಈಗಾಗಲೇ ಮೂರು ನೆಮ್ಮದಿ ಕೇಂದ್ರಗಳಿವೆ. ಈ ಎರಡು ಹೊಸ ನೆಮ್ಮದಿ ಕೇಂದ್ರಗಳು ಸೇರಿ ಒಟ್ಟು ಐದು ನೆಮ್ಮದಿ ಕೇಂದ್ರಗಳಾಗುತ್ತವೆ. ಇದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದರು.

`ನೆಮ್ಮದಿ ಕೇಂದ್ರಗಳು ನಮ್ಮ ನಿಮ್ಮ ನೆಮ್ಮದಿ ಕೆಡಿಸುತ್ತಿವೆ. ಈ ನೆಮ್ಮದಿ ಕೇಂದ್ರಗಳ ಹೆಸರು ಬದಲಾಯಿಸುತ್ತಿದ್ದೇವೆ. ನೆಮ್ಮದಿ ಕೇಂದ್ರಗಳನ್ನು ಇನ್ನು ಮುಂದೆ `ಅಟಲ್‌ಜಿ ಜನಸ್ನೇಹಿ ಕೇಂದ್ರ' ಎಂದು ಕರೆಯಲಾಗುತ್ತದೆ.  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಸಂದರ್ಭ (ಡಿ. 20)ದಲ್ಲಿ  ನೆಮ್ಮದಿ ಕೇಂದ್ರಗಳಿಗೆ ಹೊಸ ಹೆಸರು ಬರಲಿದೆ' ಎಂದರು.

`ದೇಶದಲ್ಲಿ ಕಳೆದ ಎಷ್ಟೋ ವರ್ಷಗಳಿಂದ ಬೆಳೆದಿರುವ ಅಧಿಕಾರಿಶಾಹಿಯಿಂದ ಎಲ್ಲರಿಗೂ ತೊಂದರೆಯಾಗಿದೆ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಸರ್ಕಾರದ ವಸತಿ ಮನೆಗಳು ಅತಿಕ್ರಮಣದಾರರಿಗೆ ದೊರೆಯದ ಪರಿಸ್ಥಿತಿ ಇತ್ತು.

ಇದನ್ನು ಸರಿಪಡಿಸಲು 2-3 ವರ್ಷ ಸತತ ಪ್ರಯತ್ನ ಮಾಡಬೇಕಾಯಿತು.ಈಗ ಈ ಮನೆಗಳನ್ನು ಪಡೆಯಲು ನೋಂದಣಿ ಅಗತ್ಯವಿಲ್ಲ.  ಮನೆ ನಂಬರ್, ರೇಷನ್ ಕಾರ್ಡ್ ಹೊಂದಿದ್ದರೆ ಅಥವಾ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಸರ್ಕಾರದ ಮನೆ ಪಡೆಯಲು ಸಾಧ್ಯವಾಗುವಂತೆ ಸಚಿವ ಸಂಪುಟ ನಿರ್ಣಯಕೈಗೊಂಡಿದೆ' ಎಂದರು.

`ಗ್ರಾಮೀಣ ಭಾಗಕ್ಕೆ ರಸ್ತೆ, ಬಾಂದಾರ, ಸೇತುವೆ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ  ಎಲ್ಲ ಪ್ರಯತ್ನ ಮಾಡಿದೆ. ಹೆಮ್ಮನಬೈಲ್ ಮತ್ತು ಕಟ್ಟೆಕೈ ಸೇತುವೆಗಳು ಅನುಕ್ರಮವಾಗಿ ರೂ 1.40 ಕೋಟಿ ಮತ್ತು ರೂ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಬರುವ ಮಳೆಗಾಲಕ್ಕೆ ಪೂರ್ವದಲ್ಲಿ ಈ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಪ್ರಯತ್ನ ಮಾಡಲಾಗುತ್ತದೆ' ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾ ನಾಯ್ಕ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಸನ್ನ ಹೆಗಡೆ, ಸೋವಿನಕೊಪ್ಪ ಪಂಚಾಯಿತಿ ಅಧ್ಯಕ್ಷೆ  ಕಲಾ ಭಟ್ಟ, ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಎಂ.ವಿ.ಭಟ್ಟ ತಟ್ಟಿಕೈ ಮತ್ತಿತರರು ಉಪಸ್ಥಿತರಿದ್ದರು.
ಕಟ್ಟೆಕೈ ಸೇತುವೆ: ಇದಕ್ಕೂ ಮೊದಲು ಕಟ್ಟೆಕೈ ಸೇತುವೆಯ ಶಂಕುಸ್ಥಾಪನೆಯನ್ನು ಸಚಿವ ಕಾಗೇರಿ ನೆರವೇರಿಸಿದರು. ಬಿಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆದರ್ಶ ಪೈ, ಸ್ಥಳೀಯ ಧುರೀಣ ಪರಮ ಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT