ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ಜಾಲಿಕಾಯಿ ಕುರಿ, ಮೇಕೆಗಳಿಗೆ ಮಾರಕ

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿದೆ. ಕುರಿ, ಆಡುಗಳು ಎಲ್ಲ ಸಸ್ಯಗಳನ್ನು ತಿನ್ನುತ್ತವೆ. ಆದರೆ ಕೆಲವು ಮರಗಳ ಸೊಪ್ಪು ಅಥವಾ ಕಾಯಿಗಳು ಆಡು ಮತ್ತು ಕುರಿಗಳಿಗೆ ವಿಷವಾಗಿ ಪರಿಣಮಿಸುವ ಸಾಧ್ಯತೆ ಇದೆ. ಬಿಳಿ ಜಾಲಿಮರದ ಕಾಯಿಗಳನ್ನು ತಿಂದ ಆಡು ಮತ್ತು ಕುರಿಗಳು ಸಾಯುವ ಸಾಧ್ಯತೆ ಇರುತ್ತದೆ. ಬಿಳಿ ಜಾಲಿಗೆ ಟಪಾಲು ಕಾಯಿ, ನಾಯಿ ಬೇಲ, ಸಾರಾಯಿ ಬೇಲ, ಕಾಡು ಹುರುಳಿಕಾಯಿ, ತೊಪಾಲೆ ಎಂಬ ಹೆಸರುಗಳಿವೆ.

ಆಡು, ಕುರಿ ಅಥವಾ ದನಕರುಗಳು ವಿಷಕಾರಿ ಸಸ್ಯಗಳನ್ನು ಗುರುತಿಸಿ ಅವನ್ನು ತಿನ್ನದೇ ಇರುವ ಸ್ವಭಾವವನ್ನು  ಸಹಜವಾಗಿಯೇ ಬೆಳೆಸಿಕೊಂಡಿರುತ್ತವೆ. ಆದರೆ ಅದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಕೆಲವು ವಿಷಕಾರಿ ಸಸ್ಯಗಳು ಕಟು ಒಗರಾಗಿರುವುದರಿಂದ ಪ್ರಾಣಿಗಳು ತಿನ್ನುವುದಿಲ್ಲ.

ಇದಕ್ಕೆ ಉದಾಹರಣೆ ಕಾಸರಕ ಗಿಡ. ಇದರ ಎಲೆ ಮತ್ತು ಇತರ  ಭಾಗಗಳು ಕಟು ಒಗರಾಗಿರುವುದರಿಂದ ದನಗಳು ಮತ್ತು ಕುರಿಗಳು ಅದನ್ನು ತಿನ್ನುವುದಿಲ್ಲ. ಆದರೆ ಇದರ ಬೀಜಗಳಲ್ಲಿ ವಿಷದ ಅಂಶ ಹೇರಳವಾಗಿದೆ. ಬೀಜಗಳ ಹೊರಪದರ ತುಂಬಾ ಗಟ್ಟಿ. ಕಾಸರಕದ ಹಣ್ಣು ತಿಂದರೂ   ಬೀಜಗಳ ಒಳಗೆ ಇರುವ ವಿಷ ಹೊಟ್ಟೆಗೆ ಸೇರುವುದಿಲ್ಲ. ಹೀಗಾಗಿ ಹಣ್ಣು ವಿಷಕಾರಿಯಲ್ಲ.

ಕೆಲ ಸಸ್ಯಗಳು ದುರ್ವಾಸನೆಯಿಂದ ಕೂಡಿರುವುದರಿಂದ ಅವು ಕುರಿ, ಮೇಕೆ, ದನಕರುಗಳಿಗೆ ಇಷ್ಟವಾಗುವುದಿಲ್ಲ.  ಲಂಟಾನಾ ಇದಕ್ಕೆ ಉತ್ತಮ ಉದಾಹರಣೆ. ಬೇರೆ ಮೇವು ಸಿಕ್ಕದಿದ್ದಾಗ ಅಥವಾ ಬರಗಾಲದಲ್ಲಿ ಆಡು, ಕುರಿಗಳು ಲಂಟಾನ ಗಿಡಗಳನ್ನೂ ತಿನ್ನುತ್ತವೆ. ಲಂಟಾನಾ ತಿಂದ ಕುರಿಗಳು ಮೃತಪಟ್ಟ ಉದಾಹರಣೆಗಳಿವೆ ಎನ್ನುತ್ತಾರೆ ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ವಿಷಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ  ಡಾ.ಎನ್.ಬಿ.ಶ್ರೀಧರ್.

ಬಿಳಿ ಜಾಲಿ ಗಿಡದ ಎಲೆಗಳನ್ನು ಆಡು ಮತ್ತು ಕುರಿಗಳು ತಿನ್ನುತ್ತವೆ. ಆದರೆ ಕಾಯಿಯಲ್ಲಿ ನೀರಿನ ಅಂಶ ಕಡಿಮೆಯಾಗಿ ಒಣಗುತ್ತಾ ಬಂದಂತೆ ವಿಷದ ಸಾಂದ್ರತೆ ಹೆಚ್ಚುತ್ತ ಹೋಗುತ್ತದೆ. ಇಂತಹ 4-5  ಕಾಯಿಗಳನ್ನು ತಿಂದರೆ ಆಡು, ಕುರಿ ಸಾಯುವುದು ಖಚಿತ. ಕಾಯಿಗಳಲ್ಲಿ ಸೈನೆಡ್ ಅಂಶ ಇರುವುದೇ ಇದಕ್ಕೆ ಕಾರಣ. ಆಡುಗಳು ಈ ಕಾಯಿಯನ್ನು ತಿಂದಾಗ ಶರೀರದ ಜೀವಕೋಶಗಳಿಗೆ ಆಮ್ಲಜನಕದ ಕೊರತೆಯಾಗಿ ಮೆದುಳಿನ ಜೀವಕೋಶಗಳು ನಿಷ್ಕ್ರಿಯಗೊಂಡು ಸಾಯುತ್ತವೆ.

ವರ್ಷದ ಎಲ್ಲಾ ಋತುಗಳಲ್ಲಿ ಈ ಗಿಡದ ತೊಪ್ಪಲು ಮತ್ತು ಸೊಪ್ಪನ್ನು ಆಡುಗಳು ತಿಂದರೂ ಸಹ ಗಿಡದ ಒಣಗಿದ ಕಾಯಿಗಳನ್ನು ತಿಂದಾಗ ಮಾತ್ರ ಸಮಸ್ಯೆಯಾಗುತ್ತದೆ.  ಕುರಿ,ಮೇಕೆಗಳನ್ನು ಮೇಯಿಸುವ ರೈತರು ಎಚ್ಚರ ವಹಿಸಿದಲ್ಲಿ ಇಂತಹ ಅಪಾಯ ತಡೆಯಬಹುದು. ಸೂಕ್ತ   ಸಮಯದಲ್ಲಿ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದರೆ ಬಿಳಿ ಜಾಲಿ ಕಾಯಿಗಳನ್ನು ತಿಂದ  ಕುರಿ -ಆಡುಗಳನ್ನು ಬದುಕಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT