ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ಜೋಳಕ್ಕೆ ಚಳಿ ಸಂಜೀವಿನಿ

Last Updated 18 ಜನವರಿ 2012, 5:45 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದಲ್ಲಿಯೇ ಗರಿಷ್ಠ ತಾಪಮಾನ ದಾಖಲಾಗುವ ಈ ಜಿಲ್ಲೆಯಲ್ಲಿ ಈ ವರ್ಷ  ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ! ಮೈ ಕೊರೆಯುವ ಚಳಿಗೆ ಜನತೆ ಥರಗುಟ್ಟುತ್ತಿದ್ದಾರೆ. ಆದರೆ, ಈ ಚಳಿಯು ಬಿಳಿಜೋಳದ ಬೆಳೆಗೆ `ಸಂಜೀವಿನಿ~ಯಾಗಿದೆ.

ಮಳೆ ಬಾರದುದರಿಂದ ಜಿಲ್ಲೆಯಲ್ಲಿ ಬಿಳಿ ಜೋಳ ಬಿತ್ತನೆ ಮಾಡಬೇಕಾದ ರೈತರು ಆಂತಕದಲ್ಲಿದ್ದರು. ಅನಿವಾರ್ಯವಾಗಿ ಬಿತ್ತನೆ ಮಾಡಿದ ಕೆಲ ರೈತರ ಹೊಲದಲ್ಲಿನ ಬೆಳೆ ಚೆನ್ನಾಗಿದ್ದರೆ ಮತ್ತೊಂದಿಷ್ಟು ರೈತರ ಹೊಲದಲ್ಲಿನ ಬೆಳೆ ಬೆಳೆಯುವ ಹಂತದಲ್ಲಿಯೇ ಒಣಗಿ ಹೋಗಿತ್ತು.

ಅಲ್ಪಸ್ವಲ್ಪ ತೇವಾಂಶ ಹೊಂದಿದ್ದ ಹೊಲದಲ್ಲಿ ಬೆಳೆಯಲಾದ ಬಿಳಿ ಜೋಳ ಇನ್ನೇನು ಒಣಗಿ ಹೋಗುತ್ತದೆ ಎಂಬಷ್ಟರಲ್ಲಿ `ಚಳಿ~ ಬೆಳೆ ರಕ್ಷಣೆಗೆ ಧಾವಿಸಿದೆ. ಒಂದು ತಿಂಗಳಿಂದ ಹಗಲು ಹೊತ್ತು ತಣ್ಣನೆಯ ಗಾಳಿ. ಸಂಜೆಯಿಂದ ಮುಂಜಾನೆಯವರೆಗೆ ಚಳಿ ಇರುವುದರಿಂದ ಬಿಳಿ ಜೋಳ ಬೆಳೆ ಸಮೃದ್ಧವಾಗಿ ಬೆಳೆದು ನಿಲ್ಲಲು ಸಹಕಾರಿಯಾಗಿದೆ.

ಮುಂಚಿತವಾಗಿ ಬಿತ್ತನೆ ಮಾಡಿದ, ತೇವಾಂಶ ಕೊರತೆ ಇರುವ ಪ್ರದೇಶದಲ್ಲಿ ಬೆಳೆದ ಬಿಳಿ ಜೋಳ ಒಣಗಿವೆ. ಆದರೆ, ಸ್ವಲ್ಪ ತೇವಾಂಶ ಹೊಂದಿರುವ ಗಟ್ಟಿ ಭೂಮಿಯಲ್ಲಿ ಬೆಳೆದ ಬಿಳಿ ಜೋಳ ಉತ್ತಮವಾಗಿ ಬೆಳೆದಿದೆ. ಜೋಳ ಬೆಳೆಯುವ ಪ್ರದೇಶವಾದ ವಿಜಾಪುರ, ಬಾಗಲಕೋಟೆ, ಗುಲ್ಬರ್ಗ, ರಾಯಚೂರು, ಬೀದರ್ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಈ ಪ್ರದೇಶದಲ್ಲಿ ಮಳೆ ಆಗದುದರಿಂದ ಈ ವರ್ಷ ಶೇ 60ರಷ್ಟು ಬಿಳಿ ಜೋಳ ಬಿತ್ತನೆ ಮಾಡಿರಲಿಲ್ಲ. ಇನ್ನು ಶೇ. 40ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ  ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಭಾಗದ ತಜ್ಞ ಡಾ. ಮಹದೇವರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

ಮಳೆ ಇಲ್ಲದಿರುವುದು ಮತ್ತು ತೇವಾಂಶ ಕೊರತೆಯಿಂದ ರೈತರ ನಿರೀಕ್ಷೆಯಂತೆ ಬೆಳೆ ಬಂದಿಲ್ಲ. ಸ್ವಲ್ಪ ತೇವಾಂಶ ಇರುವಲ್ಲಿ ಬೆಳೆದ ಬಿಳಿ ಜೋಳವು ಚಳಿಗೆ ಉತ್ತಮವಾಗಿ ಬೆಳೆದಿದೆ. ಕೈ ಬಿಟ್ಟು ಹೋಗುತ್ತಿದ್ದ ಬೆಳೆ ಚಳಿಯಿಂದ ಬದುಕಿದೆ. ಬೆಳೆ ಎಷ್ಟೇ ಚಿಕ್ಕದಾಗಿದ್ದರೂ ತೆನೆ ಆಗುತ್ತದೆ. ಸ್ವಲ್ಪ ಮೇವಿನ ಸಮಸ್ಯೆ ಆಗಬಹುದು ಎಂದು ಹೇಳಿದರು.

ಚಳಿ ಹೆಚ್ಚು ಇರುವುದರಿಂದ ಮಾವಿನ ಗಿಡಕ್ಕೆ ಜಿಗಿ ಹಾಗೂ ಬೂದು ರೋಗ ಹೆಚ್ಚಾಗುತ್ತದೆ. ಚಳಿಗೆ ಬಿಳಿ ಕುಸುಬೆ ಬೆಳೆಯು ಉತ್ತಮವಾಗಿ ಬರುತ್ತದೆ. ಆದರೆ, ಹೇನು ಕಾಟ ಜಾಸ್ತಿ. ಅವುಗಳ ನಿಯಂತ್ರಣಕ್ಕೆ ರೈತರು  ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಕೃಷಿ ಅಧಿಕಾರಿ ಹೇಳಿಕೆ: ಚಳಿ ಇದ್ದರೆ ಹಿಂಗಾರಿ ಬೆಳೆಗೆ ಉತ್ತಮ. ಅದು ಯಾವುದೇ ಬೆಳೆ ಇದ್ದರೂ ಚಳಿ ಇದ್ದರೆ ಒಳ್ಳೆಯದು. ಈಗ ಚಳಿ ಜಾಸ್ತಿ ಆಗಿದೆ. ಜಿಲ್ಲೆಯಲ್ಲಿ ಕೆಲ ಕಡೆ ಜೋಳ ಕೊಯ್ಲಿಗೆ ಬಂದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹನುಮಂತರೆಡ್ಡಿ ತಿಳಿಸಿದರು.

ರೈತರ ಹೇಳಿಕೆ: ಚಳಿ ಹೆಚ್ಚಾಗಿರುವುದು ಅಲ್ಪಸ್ವಲ್ಪ ಇರುವ ಬಿಳಿ ಜೋಳ ಬೆಳೆಗೆ ಸಹಾಯ ಆಗಬಹುದು. ಈಗಾಗಲೇ ಕೊಯ್ಲು ನಡೆಯುತ್ತಿದೆ. ಆದರೆ, ಉಳಿದಿರುವ ಹತ್ತಿ ಹಾಳಾಗುತ್ತಿದೆ. ನೀರಾವರಿ ಪ್ರದೇಶದಲ್ಲೂ ನೀರಿನ ಕೊರತೆ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT