ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ಬಂಗಾರದ ದಾಳಿಗೆ ನಲುಗಿದ ಕೆಂಪು ವಜ್ರ!

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಹಾವೇರಿ: `ಬಿಳಿ ಬಂಗಾರ~ವೆಂದೇ ಪ್ರಚಲಿತವಾಗಿರುವ `ಬಿಟಿ ಹತ್ತಿ~ ದಾಳಿಗೆ `ಕೆಂಪು ವಜ್ರ~ವೆಂದು ಖ್ಯಾತಿ ಹೊಂದಿದ `ಬ್ಯಾಡಗಿ ಮೆಣಸಿನಕಾಯಿ~ ನಲುಗಿ ಹೋಗಿದ್ದು, ಕೆಲವೇ ವರ್ಷಗಳಲ್ಲಿ ಕೆಂಪು ವಜ್ರ ತನ್ನ ಅಸ್ತಿತ್ವಕ್ಕಾಗಿ ಪರದಾಡುವಂಥ ಪರಿಸ್ಥಿತಿ ಎದುರಾಗಬಹುದು.

ಬ್ಯಾಡಗಿ ಕೆಂಪು ಮೆಣಸಿನಕಾಯಿ ಇಂದಿಗೂ ದೇಶದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲೂ ಖ್ಯಾತಿ ಗಳಿಸಿದೆ. ತನ್ನ ಬಣ್ಣ ಹಾಗೂ ರುಚಿಯಿಂದಲೇ ಹೆಸರುವಾಸಿಯಾಗಿರುವ ಈ ಮೆಣಸಿನಕಾಯಿ ಬೆಳೆಗೆ ಬೇಕಾದ ಮಣ್ಣು ಹಾಗೂ ಹವಾಮಾನ ಜಿಲ್ಲೆಯಲ್ಲಿದೆ. ಹೀಗಾಗಿ ಕೆಂಪು ಮಣಸಿನಕಾಯಿ ಬೆಳೆಯುವ ಕೆಲವೇ ಕೆಲವು ಜಿಲ್ಲೆಗಳಲ್ಲಿ ಹಾವೇರಿಯೂ ಒಂದಾಗಿತ್ತು. ಹೆಚ್ಚು ಮಣಸಿನಕಾಯಿ ಬೆಳೆಯುವುದರಿಂದಲೇ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮೆಣಸಿನಕಾಯಿ ಮಾರುಕಟ್ಟೆ ತಲೆ ಎತ್ತಿರುವುದು ಈಗ ಇತಿಹಾಸ.

ಆದರೆ ಕೆಲ ವರ್ಷಗಳ ಹಿಂದೆ ಜಿಲ್ಲೆಯ ರೈತರ ವಿರೋಧದ ನಡುವೆಯೂ ಬಿ.ಟಿ. ಹತ್ತಿ ಜಿಲ್ಲೆಗೆ ಕಾಲಿಟ್ಟಿತು. ಆರಂಭದಲ್ಲಿದ್ದ ವಿರೋಧ ಹಾಗೂ ಆ ಬೆಳೆಯ ಬಗ್ಗೆ ಯಾವುದೇ ಜ್ಞಾನ ಇಲ್ಲದ್ದರಿಂದ ಜಿಲ್ಲೆಯ ಮೂಲ ಹಾಗೂ ವಾಣಿಜ್ಯ ಬೆಳೆಯಾಗಿರುವ ಮೆಣಸಿನಕಾಯಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದೇ ಭಾವಿಸಲಾಗಿತ್ತು.ಕೇವಲ ಐದಾರು ವರ್ಷಗಳಲ್ಲಿ ಬಿಟಿ ಹತ್ತಿ ಮಾಡಿದ ಮೋಡಿ ಸಣ್ಣದೇನಲ್ಲ.

ಗಣನೀಯ ಇಳಿಕೆ: ಜಿಲ್ಲೆಯಲ್ಲಿ  ಈ ಹಿಂದೆ 40,000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು. ಬಿ.ಟಿ. ಹತ್ತಿ ಬೆಳೆಯುವ ಪ್ರದೇಶ ಹೆಚ್ಚಾದಂತೆ ಮೆಣಸಿನಕಾಯಿ ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆ ಕಡಿಮೆಯಾಗುತ್ತಲೇ ಸಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶ ಕಡಿಮೆ ಯಾಗಿದ್ದರೆ, ಸುಮಾರು 29 ಸಾವಿರ ಟನ್ ಮಾತ್ರ ಉತ್ಪಾದನೆಯಾಗಿದೆ. 2007-08 ನೇ ಸಾಲಿನಲ್ಲಿ 38,197 ಹೆಕ್ಟೇರ್ ಪ್ರದೇಶದಲ್ಲಿದ್ದ ಮೆಣಸಿನಕಾಯಿ ಬೆಳೆ, 2010-11 ರಲ್ಲಿ 26,212 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಈ ವರ್ಷ 20 ಸಾವಿರ ಹೆಕ್ಟೇರ್‌ಗೆ ಇಳಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ನಿರೀಕ್ಷೆ ಮೀರಿ ಏರಿಕೆ:  ಜಿಲ್ಲೆಯ ರೈತರಷ್ಟೇ ಅಲ್ಲದೇ ಕೃಷಿ ಇಲಾಖೆಯ ನಿರೀಕ್ಷೆ ಮೀರಿ ಬಿ.ಟಿ. ಹತ್ತಿ ಬೆಳೆಯಲಾಗುತ್ತಿದೆ. 2008 ರಲ್ಲಿ ಕೇವಲ 79 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬಿ.ಟಿ. ಹತ್ತಿ ಬೆಳೆಯುವ ಪ್ರದೇಶ 2011ನೇ ಸಾಲಿಗೆ 94,600 ಹೆಕ್ಟೇರ್‌ಗೆ ಏರಿಕೆಯಾಗಿದೆ. ಪ್ರಸಕ್ತ ವರ್ಷ ಸುಮಾರು 1.15 ಲಕ್ಷ ಹೆಕ್ಟೇರ್‌ನಲ್ಲಿ ಬಿ.ಟಿ. ಹತ್ತಿ ಬಿತ್ತನೆಯಾಗುವ ನಿರೀಕ್ಷೆಯಿದೆ. ಇದರ ದಾಳಿಗೆ ಶೇಂಗಾ, ಹೆಸರು, ಜೋಳದ ಬೆಳೆಗಳು ನಲುಗಿವೆ. ಆದರೆ ಹೆಚ್ಚಿನ ಹೊಡೆತ ಬಿದ್ದಿದ್ದು ಮಾತ್ರ ಮೆಣಸಿನಕಾಯಿಗೆ ಎಂದು ಹೇಳುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ರೋಗ, ಕೀಟಬಾಧೆ: ಮೆಣಸಿನಕಾಯಿ ಬೆಲೆಯಲ್ಲಾಗುವ ಏರುಪೇರು ಹಾಗೂ ಬೆಳೆಗೆ ರೋಗ ಹಾಗೂ ಕೀಟಗಳ ಕಾಟದಿಂದ ಬೇಸತ್ತು ರೈತ ಆ ಬೆಳೆಯಿಂದ ವಿಮುಖನಾಗಿದ್ದಾನೆ. ರೋಗ ಹಾಗೂ ಕೀಟ ನಿಯಂತ್ರಣಕ್ಕೆ ಕ್ರಿಮಿನಾಶಕಗಳ ಬಳಕೆ ಮಾಡುವುದರಿಂದ ವೆಚ್ಚವೂ ಹೆಚ್ಚು. ಹೀಗಾಗಿ ರೋಗದ ಹಾಗೂ ಕೀಟಗಳ ಕಾಟವೇ ಇಲ್ಲದೇ ಉತ್ತಮ ಇಳುವರಿ ಹಾಗೂ ಬೆಲೆ ಸಿಗುವ ಬಿ.ಟಿ. ಹತ್ತಿ ಬೆಳೆಯುವುದು ಸೂಕ್ತ ಎಂದು ಮೆಣಸಿನಕಾಯಿ ಬೆಳೆಯುವುದನ್ನು ಬಿಟ್ಟು ಬಿ.ಟಿ. ಹತ್ತಿ ಬೆಳೆಯುವ ಸವಣೂರಿನ ರೈತ ಮಹಾದೇವಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT