ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ಹೆಲ್ಮೆಟ್ ಸಿಂಡ್ರೋಮ್

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

ಹೆಲ್ಮೆಟ್ ಹಾಕಿಕೊಳ್ಳದೆ ಹೋಗುವ ಸ್ಕೂಟರ್ ಮತ್ತು ಮೋಟರ್ ಸೈಕಲ್ ಚಾಲಕರನ್ನು ಪೊಲೀಸರು ಹಿಡಿದು ದಂಡಿಸುವುದು ಸಾಮಾನ್ಯ. ಹೆಲ್ಮೆಟ್‌ನಂತೆ ಕಾಣುವ ಟೋಪಿಗಳನ್ನು ತಲೆಯ ಮೇಲೆ ಇಟ್ಟುಕೊಂಡು ಪೊಲೀಸರಿಗೆ ಟೋಪಿ ಹಾಕಲು ಹವಣಿಸುತ್ತಿರುವವರನ್ನೂ ನಿಲ್ಲಿಸಿ ದಂಡ ಕಟ್ಟಿಸಿಕೊಳ್ಳುವುದನ್ನು ನೀವು ನೋಡಿರಬಹುದು.

ನಾವು ಉಪಯೋಗಿಸುವ ಹೆಲ್ಮೆಟ್ ಐಎಸ್‌ಐ ಗುಣಮಟ್ಟದ್ದಾಗಿರಬೇಕು ಎಂದು ನಿಯಮ. ಕಣ್ಣು, ದವಡೆ, ಬುರುಡೆಯನ್ನು ರಕ್ಷಿಸುವ, ಇಷ್ಟೇ ಗಟ್ಟಿತನದ ಹೆಲ್ಮೆಟನ್ನು ಧರಿಸಬೇಕೆಂದು ನಿಖರವಾದ ಕಾನೂನಿದೆ.

ಆದರೆ ಈ ನಿಯಮಕ್ಕೆ ಅಪವಾದವೆಂದರೆ ಪೊಲೀಸರು. ಅವರು ಧರಿಸುವ ಹೆಲ್ಮೆಟ್ ಗಮನಿಸಿದ್ದೀರಾ? ಅರ್ಧ ತಲೆಯನ್ನು ಮಾತ್ರ ಮುಚ್ಚುವ, ಬಾಣಲಿ ಆಕಾರದ ಆ ಬಿಳಿಯ ಹೆಲ್ಮೆಟ್ ಸಾಮಾನ್ಯರಿಗೆ ನಿಗದಿ ಪಡಿಸಿರುವ ಫುಲ್ ಫೇಸ್ ಹೆಲ್ಮೆಟ್‌ನಷ್ಟು ಸುರಕ್ಷಿತವಾಗಿರುವುದಿಲ್ಲ. ಇಂಥ ಹೆಲ್ಮೆಟ್ ದ್ವಿಚಕ್ರ ವಾಹನದ ಚಾಲಕರು -ಅವರು ಯಾರೇ ಆಗಿರಲಿ- ಧರಿಸಲು ಅನುಮತಿಯಿಲ್ಲ. ಎಲ್ಲರಿಗೂ ಒಂದೇ ಕಾನೂನಿರುವಾಗ ಪೊಲೀಸರಿಗೆ ಮಾತ್ರ ಅದೇನು ರಿಯಾಯಿತಿ ಎನ್ನುವುದು ಮೊದಲ ಪ್ರಶ್ನೆ. ಆದರೆ, ನಾನು ಹೇಳಹೊರಟಿರುವುದು ಇನ್ನೊಂದು ವಿಷಯವನ್ನು.

ಬಿಳಿ ಹೆಲ್ಮೆಟ್ ತಲೆಯ ಮೇಲೆ ಇಟ್ಟುಕೊಂಡು ಹೋಗುತ್ತಿರುವ ಕೆಲವರನ್ನು ಗಮನಿಸಿ. ಅವರು ಪಟ್ಟಿಯನ್ನು ಬಿಗಿ ಮಾಡಿಕೊಂಡಿರುವುದಿಲ್ಲ. ಸ್ಟ್ರಾಪ್ ತೂಗಾಡುತ್ತಲೇ ಗಾಡಿ ಓಡಿಸುತ್ತಿರುತ್ತಾರೆ. ಹೀಗೆ ಬಿಳಿ ಹೆಲ್ಮೆಟ್ ಧರಿಸುವ ಹಲವರು ಪೊಲೀಸರಾಗಿರುವುದಿಲ್ಲ. ಯೂನಿಫಾರ್ಮ್ ಇಲ್ಲದ, ಪೊಲೀಸರೂ ಅಲ್ಲದ ದ್ವಿಚಕ್ರ ಚಾಲಕರು ಅಂಥ ಬಾಣಲಿ ಹೆಲ್ಮೆಟ್ ಧರಿಸಿ ಅರ್ಧ ಗತ್ತಿನಲ್ಲಿ, ಅರ್ಧ ಕಳ್ಳರಂತೆ ಸಾಗುತ್ತಿರುತ್ತಾರೆ. ಅವರ ಬುದ್ಧಿವಂತಿಕೆ ಏನಪ್ಪಾ ಅಂದರೆ: ಪೋಲೀಸರಂತೆ ಕಂಡರೆ, ಯಾವುದೇ ಸಂಚಾರಿ ನಿಯಮ ಮುರಿದರೂ ಯಾರೂ ಅವರನ್ನು ತಡೆಯುವುದಿಲ್ಲ.
 
ಇಂಥವರು ಎಲ್ಲೆಂದರಲ್ಲಿ `ಪಾರ್ಕ್~ ಮಾಡುತ್ತಿರುತ್ತಾರೆ, ರಾಂಗ್‌ಸೈಡಲ್ಲಿ ರಾಜಾರೋಷವಾಗಿ ಹೋಗುತ್ತಿರುತ್ತಾರೆ. ಸಂಚಾರಿ ಕಾನೂನು ಮುರಿಯಲು ಪೊಲೀಸ್ ವೇಷ ಧರಿಸುವ ಈ ಚಾಳಿ ಒಂದು ಥರ ವಿಚಿತ್ರವಲ್ಲವೇ? ಅದು ರೋಗವೋ ಅಥವಾ ರೋಗದ ಶಾಶ್ವತತೆಯನ್ನು ಇನ್ನೂ ಗಿಟ್ಟಿಸಿಕೊಳ್ಳದ ಸಿಂಡ್ರೋಮೋ ಇರಬೇಕು.

ಭ್ರಷ್ಟಾಚಾರ, ಶ್ರೀಮಂತರ ಕುರುಡು ಆರಾಧನೆ ಮುಂತಾದ ಮನೋರೋಗಗಳ ಜೊತೆಗೆ ನಮ್ಮ ನಗರವನ್ನು ಕಾಡುವ ಇಂಥ ತಮಾಷೆಯ, ದುರಂತಮಯ ವಿಲಕ್ಷಣಗಳನ್ನು ನೀವು ಗಮನಿಸಿರಬಹುದು. ಪತ್ರಕರ್ತ ಸ್ನೇಹಿತರೊಬ್ಬರು ಇಂಥದೇ ಒಂದು ಅನುಭವ ಹೇಳಿದರು.

ಅವರು ಕೊಂಡ ಸೆಕಂಡ್ ಹ್ಯಾಂಡ್ ಎನ್‌ಫೀಲ್ಡ್ ಬುಲ್ಲೆಟ್ ಅವರಿಗೆ ಇದ್ದಕ್ಕಿದ್ದಂತೆ ಪೋಲೀಸರ ಸಲ್ಯೂಟ್ ಸುರಿಮಳೆ ತಂದಿತು. ಅದರ ಬಣ್ಣ ಪೊಲೀಸರ ಗಾಡಿಯಂತೆಯೇ ಬಿಳಿ. ಅವರ `ಮೆಕ್ಯಾನಿಕ್~ಗಂತೂ ಈ ಗಾಡಿ ಓಡಿಸುವುದು ತುಂಬಾ ಖುಷಿಯ ವಿಷಯವಾಗಿಹೋಗಿತ್ತು. `ಇದರ ಖದರ‌್ರೇ ಬೇರೆ ಬಿಡಿ ಸಾರ್~ ಎಂದು ಹೊಗಳುತ್ತಿದ್ದ. ತಮ್ಮದೇ ಇಲಾಖೆಯ ಬೈಕ್ ಇರಬಹುದೆಂಬ ಅನುಮಾನದಿಂದ ಯಾವುದಕ್ಕೂ ಇರಲಿ ಅಂತ ಪೊಲೀಸರು ಸಲಾಂ ಹೊಡೆದದ್ದನ್ನು ಅರ್ಥಮಾಡಿಕೊಳ್ಳಬಹುದೇನೋ.

ಆದರೆ, ಟಿವಿಎಸ್- 50ಯಂಥ ಚಿಕ್ಕ ವಾಹನದಲ್ಲಿ ಹೋಗುವವರೂ ಈ ಬಿಳಿ ಹೆಲ್ಮೆಟ್ ಟ್ರಿಕ್ ಪ್ರಯೋಗ ಮಾಡುತ್ತಿರುತ್ತಾರೆ. ನಮ್ಮಂಥ ಸಾಮಾನ್ಯರಿಗೆ ಗೊತ್ತಾಗುವ ಈ ಮಾರುವೇಷ ಪೊಲೀಸರಿಗೆ ಗೊತ್ತಾಗುವುದಿಲ್ಲವೆ? ಅಥವಾ `ನಿಮ್ಮ ಹೆಲ್ಮೆಟ್ ನಮ್ಮದ್ದಕ್ಕಿಂತ ಹೇಗೆ ಉತ್ತಮ?~ ಎಂದು ಪಾಪದ ಪ್ರಜೆಗಳು ಕೇಳಿಬಿಡುತ್ತಾರೆ ಅನ್ನುವ ಭಯವೇ?

ಸುರ್ ಸಾಗರ್ ಸಂಸ್ಥೆಯ ಘರಾಣ ಪರಿಚಯ
ನೀವು ಹಿಂದೂಸ್ತಾನಿ ಸಂಗೀತ ಕೇಳುವವರ ಪೈಕಿ ಆಗಿದ್ದರೆ ಸುರ್ ಸಾಗರ್ ಸಂಸ್ಥೆಯ ಬಗ್ಗೆ ಕೇಳಿರುತ್ತೀರಿ. ಅವರು 30 ವರ್ಷದಿಂದ ಸಂಗೀತ ಕಛೇರಿಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈ 31ನೇ ವರ್ಷ ನಾಲ್ಕು ಘರಾಣಗಳನ್ನೂ ಸಂಗೀತ ಪ್ರೇಮಿಗಳಿಗೆ ವಿವರವಾಗಿ ಪರಿಚಯಿಸುವ ಕಾರ್ಯಕ್ರಮವನ್ನು ಫೆಬ್ರುವರಿ 4ರಿಂದ ಹಮ್ಮಿಕೊಂಡಿದ್ದಾರೆ.

ಆಗ್ರಾ, ಕಿರಾನಾ ಮತ್ತು ಗ್ವಾಲಿಯರ್ ಘರಾಣಗಳ ಗುರು-ಶಿಷ್ಯರನ್ನು ಜೊತೆಗೂಡಿಸಿ ದೊಡ್ಡ ಸಂಭ್ರಮದ `ಲಿಸ್ಟ್~ ತಯಾರಿಸಿದ್ದಾರೆ. ಹಾಗೆಯೇ ಸಿತಾರ್ ಬಗ್ಗೆಯೂ ಒಂದು ಗೋಷ್ಠಿಯನ್ನು ಏರ್ಪಡಿಸಿದ್ದಾರೆ. ಬರೀ ಕಛೇರಿ ಕೇಳುವುದಕ್ಕಿಂತ ಇಂಥ ಪ್ರಾತ್ಯಕ್ಷಿಕೆಗಳಲ್ಲಿ ಕೂತು ಸಂಗೀತ ಕೇಳುವುದು ಬೇರೆ ಅನುಭವವನ್ನೇ ನೀಡುತ್ತದೆ. ಕೇಳುಗರ ಗ್ರಹಿಕೆ ಹೆಚ್ಚುತ್ತದೆ. ಕುಮಾರ ಗಂಧರ್ವರ ಹೆಂಡತಿ, ಮಗಳು, ಮೊಮ್ಮಗನೂ ಸೇರಿದಂತೆ ಹಲವಾರು ಪ್ರತಿಭೆಗಳ ಮಿಲನವನ್ನು ಈ ವರ್ಷವಿಡೀ ನಡೆಯುವ ಕಾರ್ಯಕ್ರಮದಲ್ಲಿ ನೋಡಬಹುದು. 

ಪಿಕೋ ಅಯ್ಯರ್ ಬರೆದ ಪ್ರಬಂಧ
ಮುಂದಿನ ದೊಡ್ಡ ಪ್ರಾಡಕ್ಟ್ ಯಾವುದು? ಈ ಪ್ರಶ್ನೆಯನ್ನು ಉದ್ಯಮಿಗಳೂ, ದೊಡ್ಡ ಪ್ರಮಾಣದಲ್ಲಿ ದುಡ್ಡು ಹೂಡುವವರೂ ಕೇಳಿಕೊಳ್ಳುತ್ತಿದ್ದಾರೆ. ಅವರಿಗೆ ಬರುತ್ತಿರುವ ಉತ್ತರ: ನಿಶ್ಶಬ್ದ. ನಮ್ಮ ಸುತ್ತಲ್ಲೂ ಇರುವ `ಗ್ಯಾಡ್ಜೆಟ್~ಗಳಿಂದ ತಪ್ಪಿಸಿಕೊಂಡು ಬದುಕಲು ಅನುವು ಮಾಡಿಕೊಡುವ ಪ್ರಾಡಕ್ಟ್‌ಗಳಿಗೆ ಇನ್ನು ಮುಂದೆ ಹೆಚ್ಚಿನ ಬೇಡಿಕೆ ಇರುತ್ತದಂತೆ.

ಪಿಕೋ ಅಯ್ಯರ್ ಎಂಬ ಭಾರತೀಯ ಮೂಲದ ಬರಹಗಾರ `ನ್ಯೂಯಾರ್ಕ್ ಟೈಮ್ಸ~ನಲ್ಲಿ ಬರೆದಿರುವ ಪ್ರಬಂಧ `ದಿ ಜಾಯ್ ಆಫ್ ಕ್ವಯೆಟ್~ನ ಪ್ರಕಾರ, ಬ್ಲಾಕ್‌ಹೋಲ್ ರೆಸಾರ್ಟ್‌ಗಳು ಅಂದರೆ ಟೀವಿ ಮತ್ತು ಇಂಟರ್ನೆಟ್ ಇರದಂತಹ ರೆಸಾರ್ಟ್‌ಗಳಿಗೆ ಈಗಾಗಲೇ ಬೇಡಿಕೆ ಹೆಚ್ಚಾಗಿದೆಯಂತೆ. ಒಂದು ರಾತ್ರಿ ಇಂಥ ಸ್ಥಳದಲ್ಲಿ ಕಳೆಯಲು ಒಂದೂಕಾಲು ಲಕ್ಷ ರುಪಾಯಿ ಕೊಟ್ಟು ರೂಮ್ ಬಾಡಿಗೆಗೆ ತೆಗೆದುಕೊಳ್ಳಲು ಅಮೆರಿಕನ್ ಪ್ರಜೆಗಳು ಹಿಂದೆ ಮುಂದೆ ನೋಡುತ್ತಿಲ್ಲವಂತೆ. ಪಿಕೋ ಅಯ್ಯರ್‌ನ ಪ್ರಬಂಧ ಅದ್ಭುತವಾದ ಸತ್ಯಗಳನ್ನು ಗುರುತಿಸುತ್ತಾ ಸಾಗುತ್ತದೆ.

ಆದರೆ ಬೆಂಗಳೂರಿನ ಜನಕ್ಕೆ ಈ ಗ್ಯಾಡ್ಜೆಟ್ ವ್ಯಾಮೋಹ ಅಷ್ಟು ಬೇಸರವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಭಾರತದಲ್ಲಿ ಯಾವುದೇ ಹೊಸ ಪ್ರಾಡಕ್ಟ್ ಬಿಡುಗಡೆ ಮಾಡಬೇಕಾದರೂ ಬೆಂಗಳೂರಿನಲ್ಲೇ ಮೊದಲು ಟೆಸ್ಟ್ ಮಾಡುವುದು ಸುಮಾರು ವರ್ಷದಿಂದ ನಡೆದು ಬಂದಿರುವ ಪದ್ಧತಿ. ನಮಗೆ ಹೊಸದರ ಆಕರ್ಷಣೆ ಇರುವುದರಿಂದ ನಮ್ಮನ್ನು ಜಾಗತಿಕ ಸಂಸ್ಥೆಗಳು `ಮಾರ್ಕೆಟಿಂಗ್ ಗಿನಿ ಪಿಗ್ಸ್~ ಮಾಡಿಕೊಂಡಿವೆ ಅನ್ನೋದು ನಿಜ. ಆ ಕಾರಣಕ್ಕೇ ತುಂಬಾ ದುಬಾರಿಯಾದ ಬ್ಲಾಕ್‌ಹೋಲ್ ರೆಸಾರ್ಟ್‌ಗಳು ಬೆಂಗಳೂರಿನ ಹತ್ತಿರವೇ ಮೊದಲು ಬರಬಹುದು!     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT