ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಎಂ ಅಧಿಕಾರಿ, ವಾರ್ಡನ್ ಅಮಾನತಿಗೆ ಸೂಚನೆ

Last Updated 6 ಸೆಪ್ಟೆಂಬರ್ 2013, 20:30 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆ (ಬಿಸಿಎಂ)ಯ ಹಾಸ್ಟೆಲ್‌ಗೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಸ್ಟೆಲ್ ಅವ್ಯವಸ್ಥೆ ಹಾಗೂ ಕಳಪೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ತಾಲ್ಲೂಕು ಬಿಸಿಎಂ ಅಧಿಕಾರಿ ಆರ್.ಐ.ಶೇಖ್ ಹಾಗೂ ಹಾಸ್ಟೆಲ್ ವಾರ್ಡನ್ ನಾಗರತ್ನಾ ಅವರನ್ನು ಅಮಾನತುಗೊಳಿಸಲು ಸೂಚಿಸಿದರು.

ಸಚಿವರು ಹಾಸ್ಟೆಲ್ ಪ್ರವೇಶಿಸುತ್ತಿದ್ದಂತೆಯೇ ವಿದ್ಯಾರ್ಥಿನಿಯರು ಹಲವು ಸಮಸ್ಯೆಗಳನ್ನು ಹೇಳಲು ಮುಂದಾದರು. ಅದರಲ್ಲಿ ಮುಖ್ಯವಾಗಿ ಹೇಳಿದ್ದು, ವಾರ್ಡನ್ ಅವರ ವರ್ತನೆಯನ್ನು.

`ನಾವು ಯಾರಿಗೇ ಫೋನ್ ಮಾಡಿದರೂ ವಾರ್ಡನ್ ಅವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ತೆಗಳುತ್ತಾರೆ. ತಾವು ಮಾತ್ರ ಒಳ್ಳೆಯ ಅಡುಗೆ ಮಾಡಿಸಿಕೊಂಡು ತಿನ್ನುತ್ತಾರೆ. ನಮಗೆ ಕಳಪೆ ಅಕ್ಕಿ-ಬೇಳೆಯಿಂದ ತಯಾರಿಸಿದ ಊಟವನ್ನೇ ನೀಡುತ್ತಾರೆ. ರಾತ್ರಿ ಹುಷಾರಿಲ್ಲದೇ ಮಲಗಿದ್ದರೂ ವಿದ್ಯಾರ್ಥಿನಿಯರಿಗೆ ಸೂಕ್ತ ಚಿಕಿತ್ಸೆ ನೀಡುವ ಬದಲು ಬೆಳಿಗ್ಗೆ ಡಾಕ್ಟರನ್ನು ಕರೆದುಕೊಂಡು ಬರುತ್ತೇವೆ ಎಂದು ಅಸಡ್ಡೆಯಿಂದ ಮಾತನಾಡುತ್ತಾರೆ' ಎಂದು ದೂರಿದರು.

`ಕೊಠಡಿಗಳು ಮಳೆಯಿಂದಾಗಿ ಸೋರುತ್ತಿದ್ದರೂ ಬಿಸಿಎಂ ಇಲಾಖೆಯ ತಾಲ್ಲೂಕು ಅಧಿಕಾರಿ ಅದನ್ನು ರಿಪೇರಿ ಮಾಡಿಸುವ ಗೊಡವೆಗೆ ಹೋಗಿಲ್ಲ. ಕಳಪೆ ಆಹಾರದ ಬಗ್ಗೆ ದೂರುಗಳಿದ್ದರೂ ಯಾವ ಕ್ರಮ ಕೈಗೊಂಡಿಲ್ಲ' ಎಂದರು.

ವಿದ್ಯಾರ್ಥಿನಿಯರೊಂದಿಗೆ ನೆಲದ ಮೇಲೆಯೇ ಕುಳಿತ ಸಚಿವ ಲಾಡ್, ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆಂದು ತಯಾರಿಸಿದ ಚಪಾತಿ, ಪಲ್ಯ, ಸಾಂಬಾರ್ ಸೇವಿಸಿದರು.

ವಿದ್ಯಾರ್ಥಿನಿಯರಲ್ಲಿ ಭಯ ಹುಟ್ಟಿಸಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಆರ್.ಐ.ಶೇಖ್ ಹಾಗೂ ನಾಗರತ್ನಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT