ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಸಿ.ರೋಡ್: ಪ್ರಯಾಣಿಕರಿಗೆ `ಕೆಸರಿನ ಲೇಪ'

ದುರಸ್ತಿ ಇಲ್ಲದೆ ಸರ್ವಿಸ್ ರಸ್ತೆಗೆ ಕೋಪ
Last Updated 26 ಜುಲೈ 2013, 11:02 IST
ಅಕ್ಷರ ಗಾತ್ರ

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಸಂಪರ್ಕ ಕೊಂಡಿಯಾಗಿರುವ ಬಿ.ಸಿ.ರೋಡ್ ಪೇಟೆಯಲ್ಲಿ ಐದು ವರ್ಷಗಳಿಂದ ಒಂದಿಲ್ಲೊಂದು ಕಾರಣಕ್ಕೆ ಪಾದಚಾರಿಗಳನ್ನು ಎಗ್ಗಿಲ್ಲದೆ ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತಾಲ್ಲೂಕಿನ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿ  ರುವ ಬಿ.ಸಿ.ರೋಡ್ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಮತ್ತು ಮೇಲ್ಸೇತುವೆ ನೆಪದಲ್ಲಿ ಐದು ವರ್ಷಗಳಿಂದಲೂ ಇಲ್ಲಿನ ಬಡಪಾಯಿ ಪಾದಚಾರಿಗಳು ಮತ್ತು ಸ್ಥಳೀಯ ವರ್ತಕರಿಗೆ ನಿರಂತರವಾಗಿ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.

ಈ ರಸ್ತೆ ಚತುಷ್ಪಥಗೊಂಡು ಮಧ್ಯೆ ಎರಡು ರಸ್ತೆಯಲ್ಲಿ ಎಕ್ಸ್‌ಪ್ರೆಸ್ ವಾಹನಗಳು ಸರಾಗವಾಗಿ ಚಲಿಸಿ, ಉಳಿದ ಎರಡೂ ಬದಿ ರಸ್ತೆಯಲ್ಲಿ ಬಿ.ಸಿ.ರೋಡ್ ಬಸ್‌ತಂಗುದಾಣ ಮತ್ತು ಪೇಟೆ ಮತ್ತಿತರ ಕಡೆಗಳಿಗೆ ತೆರಳಲು ಅನುಕೂಲಕರವಾಗಲಿದೆ ಎಂಬ ಭರವಸೆ ಇಲ್ಲಿನ ಜನರಲ್ಲಿ ಮೂಡಿಸಿತ್ತು.

ಆದರೆ ಚತುಷ್ಪಥ ರಸ್ತೆಗಾಗಿ ಅಲ್ಲಲ್ಲಿ ಅಗೆದು ಹಾಕುತ್ತಾ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ಕಂಡು ನಾಗರಿಕರು ಹಲವು ಬಾರಿ ಪ್ರತಿಭಟನೆ ಮೂಲಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಡುವೆ ಇದು ಸಾಲದೆಂಬಂತೆ ಅದ್ಯಾರಿಗೋ `ಲಾಭ' ಮಾಡಿಸಿ ಕೊಡುವ ಸಲುವಾಗಿ ಸ್ಥಳೀಯರ     ಭಾರಿ ವಿರೋಧದ ನಡುವೆಯೇ ನೂರಾರು ಕೋಟಿ ಮೊತ್ತದ `ಮೇಲ್ಸೇತುವೆ ಕಾಮಗಾರಿ'ಗೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಇದನ್ನೂ ಸುವ್ಯವಸ್ಥಿತವಾಗಿ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಕಳೆದ ವರ್ಷ ಮೇಲ್ಸೇತುವೆ ಒಂದು ಬದಿಯಲ್ಲಿ ನಿರ್ಮಿಸಲಾಗಿರುವ ಸರ್ವಿಸ್ ರಸ್ತೆ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹೊಂಡಮಯವಾಗಿ ಪರಿವರ್ತನೆಗೊಂಡಿದೆ.

ಮಂಗಳೂರು ಕಡೆಗೆ ಹೋಗುವ ಪ್ರಯಾಣಿಕರು ಬಸ್ ಕಾಯುವುದಕ್ಕಾಗಿ ಇದೇ ಕೆಸರು ಗುಂಡಿಯಲ್ಲಿ ಕಾದು ನಿಲ್ಲಬೇಕಿದೆ. ಇನ್ನೊಂದೆಡೆ ಪಾದಚಾರಿಗಳಿಗೆ ಸಂಚರಿಸಲು ಇಲ್ಲಿ `ಫುಟ್‌ಪಾತ್' ವ್ಯವಸ್ಥೆಯಿಲ್ಲದೆ ರಸ್ತೆ ನಡುವೆ ಅಥವಾ ಕೆಸರಿನಲ್ಲಿ ನಡೆದಾಡುವ ದುಃಸ್ಥಿತಿ ಎದುರಾಗಿದೆ.

ಇಲ್ಲಿನ ತಾಲ್ಲೂಕು ಕಚೇರಿ, ನ್ಯಾಯಾಲಯ, ಪೊಲೀಸ್ ಠಾಣೆ, ತಾಲ್ಲೂಕು ಪಂಚಾಯಿತಿ, ತೋಟಗಾರಿಕೆ, ಕೃಷಿ ಇಲಾಖೆ, ಮೆಸ್ಕಾಂ,  ಉಪನೋಂದಣಾಧಿಕಾರಿ ಕಚೇರಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ರಕ್ತೇಶ್ವರಿ, ಅನ್ನಪೂರ್ಣೇಶ್ವರಿ, ಚಂಡಿಕಾಪರಮೇಶ್ವರಿ ದೇವಾಲಯ ಮತ್ತಿತರ ಕಡೆಗೆ ಹೋಗಲು ಶುಭ್ರವಸ್ತ್ರ ಧರಿಸಿ ಬರುವ ನೂರಾರು ಮಂದಿ ನಾಗರಿಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಸಾಕಷ್ಟು ಬಾರಿ ಕೆಸರಿನ ಲೇಪ ಮೆತ್ತಿಕೊಂಡಿದೆ.

ಈ ದುಃಸ್ಥಿತಿ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆ ವಹಿಸಿಕೊಂಡಿರುವ ಇರ್ಕಾನ್ ಸಂಸ್ಥೆ ಮತ್ತು ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಇಲ್ಲಿನ ನಾಗರಿಕರಿಂದ ಕೇಳಿ ಬಂದಿದ್ದು, ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT