ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ನಾಡಲ್ಲಿ ಶ್ರೀಸಾಮಾನ್ಯನ ಮನ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನಲ್ಲಿ ಚೂರುಪಾರು ಹಸಿರು ಕಾಣಿಸುವುದು ಹಲುವಾಗಲು ಆಸುಪಾಸಿನಲ್ಲಿ ಮಾತ್ರ. ಈ ಹಲುವಾಗಲು ಬಳಿಯ ಅಲಗಿಲವಾಡ ಗ್ರಾಮದ ರಸ್ತೆಯ್ಲ್ಲಲಿ ನಾಲ್ಕೈದು ಕಾರು ನಿಂತಿದ್ದವು. ಕೇಳಿದರೆ, `ವೋಟ್ ಕೇಳೋಕೆ ಬಂದವ್ರೆ' ಎಂದರು. ಊರೊಳಗೆ ಒಂದು ಹೆಂಚಿನ ಮನೆ. ಮನೆ ಮುಂದೆ ನಾಲ್ಕಾರು ಮುಖಂಡರು. ವಿಚಾರಿಸಿದರೆ, ಸಿರಾಜ್ ಷೇಕ್ ಕಡೆಯವರು ಎಂದರು.

ಸಿರಾಜ್ ಹರಪನಪಳ್ಳಿ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ. ನಾಲಗೆ ತುದಿಯಲ್ಲೇ ಕ್ಷೇತ್ರದ ಹಳ್ಳಿಗಳು, ತಾಂಡಾಗಳ ಲೆಕ್ಕ ಇತ್ತು. ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೂ ಬಿಡುವಿಲ್ಲದ ಪ್ರಚಾರ. 35 ವರ್ಷಗಳ ದೀರ್ಘ ಅವಧಿಯ ತಮ್ಮ ರಾಜಕೀಯ ಹಿನ್ನೆಲೆಯನ್ನು ಚುಟುಕಾಗಿ ವಿವರಿಸಿದರು. `ನಮ್ಮದು ಲೋ ಪ್ರೊಫೈಲ್ ಪ್ರಚಾರ. ದೊಡ್ಡ ಮುಖಂಡರು ಯಾರೂ ಇಲ್ಲ. ಜತೆಗಿರುವ ಕಾರ್ಯಕರ್ತರಲ್ಲಿ ಶೇಕಡ 90ರಷ್ಟು ಯುವಕರು' ಎಂದು ಹೇಳಿದರು.

ಅವರೆಲ್ಲ ಅಲ್ಲಿಂದ ಖಾಲಿಯಾದ ಕೂಡಲೇ ಮನೆ ಯಜಮಾನ ಪರಸಪ್ಪ ನಮ್ಮತ್ತ ನೋಡಿ ಮುಗುಳ್ನಗೆ ಸೂಸಿದರು. ವಯಸ್ಸು 45ರ ಆಸುಪಾಸು. ಗಟ್ಟಿ ಆಳು. ಸ್ನೇಹಮಯಿ. ವಿವರ ಹೇಳಿದ ಮೇಲೆ ಒಳಗೆ ಕರೆದು ಕೂರಿಸಿ ಬೇಡವೆಂದರೂ ಷರಬತ್ತು ಮಾಡಿಸಿಕೊಟ್ಟರು. ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದ ಕುಟುಂಬ.

ಚುನಾವಣೆಯಲ್ಲಿ ಶ್ರೀರಾಮುಲು ಪಕ್ಷವನ್ನು ಬೆಂಬಲಿಸ್ತೀರಾ ಎಂದು ಕೇಳಿದ್ದಕ್ಕೆ, `ನಾವು ಕಾಂಗ್ರೆಸ್‌ನೋರು. ಮನೆಯೊಳಗೆ ಬರ‌್ತೀವಿ ಎಂದರೆ ಬೇಡ ಎನ್ನಲಾದೀತೆ? ಜಾತಿ ಕಟ್ಟಿಕೊಂಡು ನಾವು ರಾಜಕೀಯ ಮಾಡೋರಲ್ಲ' ಎಂದುಬಿಟ್ಟರು. ಜಾತಿ ಕುರಿತು ನೇರವಾಗಿ ನಾವು ಪ್ರಸ್ತಾಪಿಸುವ ಮೊದಲೇ ಅವರ ಸುಪ್ತ ಮನಸ್ಸು ಜಾಗೃತಗೊಂಡಿತ್ತು. `ನಮ್ಮ ಹುಡುಗರೇ ಕೆಲವರು ಅವರ (ಸಿರಾಜ್) ಹಿಂದೆ ಓಡಾಡ್ತಿದಾರೆ. ಬುದ್ಧಿ ಹೇಳಿದರೆ ಸುಮ್ಮನಾಗ್ತಾರೆ' ಎಂದರು, ಅದೇನು ದೊಡ್ಡ ವಿಷಯ ಅಲ್ಲ ಎಂಬಂತೆ.

ಆ ಮನೆಯೊಳಗೆ ಬಂದ ಸಿರಾಜ್, ಬೆಳಗಿನ ಅತಿಥಿಯಂತೆ ಹೀಗೆ ಬಂದು ಹಾಗೆ ಹೋದರು. ಹೊರಗಿನಿಂದ ಬಂದು ಕ್ಷೇತ್ರ ಪ್ರತಿನಿಧಿಸಿರುವ ಶಾಸಕರೂ ಕ್ಷೇತ್ರದ ಜನರ ಮಟ್ಟಿಗೆ `ಅತಿಥಿ'ಯಾಗಿಯೇ ಉಳಿದಿದ್ದಾರೆ. ಮನೆಯ ಒಳಗಿನವರಾಗಿಲ್ಲ ಎಂಬುದು ಮತದಾರರ ಮಾತಿಗೆ ಕಿವಿಗೊಟ್ಟರೆ ಮನವರಿಕೆ ಆಗುತ್ತದೆ.

ಬಳ್ಳಾರಿಯವರ ಹಿಡಿತ: ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ಬೇರೆಯಾದರೂ `ಗಣಿ ದೂಳು' ಸುತ್ತುವರಿದೇ ಇದೆ. ಬಿಜೆಪಿಯಿಂದ ಪುನರಾಯ್ಕೆ ಬಯಸಿರುವ ಜಿ.ಕರುಣಾಕರ ರೆಡ್ಡಿ, ಕಾಂಗ್ರೆಸ್‌ನ ಎಂ.ಪಿ. ರವೀಂದ್ರ, ಸಿರಾಜ್ ಎಲ್ಲರೂ ಬಳ್ಳಾರಿ ಜಿಲ್ಲೆಯವರೇ. ಪ್ರಮುಖ ಪಕ್ಷಗಳಲ್ಲಿ ಕೆಜೆಪಿ ಮಾತ್ರ ಸ್ಥಳೀಯ ಮುಖಂಡರನ್ನು ಕಣಕ್ಕೆ ಇಳಿಸಿದೆ. ಆ ಪಕ್ಷದ ಉಮೇದುವಾರ ಎನ್.ಕೊಟ್ರೇಶ್ ತಾಲ್ಲೂಕಿನ ಅರಸೀಕೆರೆ ಗ್ರಾಮದವರು.

ಜನರ ಅನಿಸಿಕೆಗಳಿಗೆ ಕಿವಿಗೊಡುತ್ತಾ ಹೋದಂತೆ ಅವರ ಮಾತಿನಲ್ಲಿ ಒಂದು ಲಯಬದ್ಧತೆ ಇದ್ದಂತೆ ಗೋಚರಿಸಿತು. ಹೊರಗಿನವರ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದೆ ಅಂತ ಅನಿಸಿತು. ಇದೇ ರೀತಿ ಹೊರಗಿನವರ ಹಿಡಿತಕ್ಕೆ ಸಿಲುಕಿರುವ ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಲ್ಲೂ ಅತೃಪ್ತಿ ಮಡುಗಟ್ಟಿರುವುದನ್ನು ಗುರುತಿಸಬಹುದು. ಅದು ಆಕ್ರೋಶಕ್ಕೂ ತಿರುಗಿದೆ. ಮೀಸಲು ಪರಿಧಿಯಿಂದ ಹೊರಬರುತ್ತಲೇ ಈ ಎರಡೂ ಕ್ಷೇತ್ರಗಳಿಗೆ ಹೊರಗಿನವರು ಲಗ್ಗೆ ಇಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ.

ಶಾಸಕರ ಬಗ್ಗೆ ಕೇಳಿದರೆ, `ಪಾಪ, ರೆಡ್ಡಿ ಕೆಟ್ಟವರಲ್ಲ. ಕೆಲಸ ಮಾಡಿಸಿದ್ದಾರೆ' ಎನ್ನುತ್ತಾರೆ. ಕೂಡಲೇ ಅದಕ್ಕೊಂದು ಷರಾ ಸೇರಿಸುತ್ತಾರೆ- `ನಡುವ್ನೋರು ಸರಿಯಿಲ್ಲ'. ಕ್ಷೇತ್ರದ ಉದ್ದಕ್ಕೂ ಹೆಚ್ಚಿನವರು ಇದೇ ಅರ್ಥ ಬರುವಂತೆ ಪ್ರತಿಕ್ರಿಯಿಸಿದರು. ಯಾರು ಎತ್ತ ಎಂಬ ವಿವರಗಳನ್ನು ಕೊಡುವುದಿಲ್ಲ. ಮಗುಮ್ಮಾಗಿ ಮಾತನಾಡುತ್ತಾರೆ.

ಶಾಸಕರಿಗೂ ಮತ್ತು ಕ್ಷೇತ್ರದ ಜನರಿಗೂ ಇರಬೇಕಾದ ಅನ್ಯೋನ್ಯ ಸಂಬಂಧ ಇಲ್ಲ ಎಂಬುದು ಅವರ ಮಾತುಗಳಿಂದ ವ್ಯಕ್ತವಾಯಿತು. ಕುಂಚೂರು ರಸ್ತೆಯಲ್ಲಿ ರಾಮಚಂದ್ರಪ್ಪ ಅವರನ್ನು `ಚುನಾವಣೆಗೆ ಈ ಸಲ ಯಾರ‌್ಯಾರು ನಿಂತಿದ್ದಾರೆ' ಎಂದು ಪ್ರಶ್ನಿಸಿದಾಗ, `ನಮ್ಮ' ಕೊಟ್ರೇಶ್ ನಿಂತಿದ್ದಾರೆ ಎಂದರು. `ನಮ್ಮ ಕೊಟ್ರೇಶ್ ಅಂತಿದೀರಲ್ಲ, ಏನದು' ಎಂದು ಕೆದಕಿದಾಗ `ನಮ್ಮ ತಾಲ್ಲೂಕಿನವರಲ್ಲವಾ...ಅದಕೆ' ಎಂದು ನಾಚಿಕೊಂಡಂತೆ ಮಾಡಿದರು. ಹೊರಗಿನವರು, ಸ್ಥಳೀಯರು ಎಂಬ ಭೇದ ಜನರ ತಲೆಗೆ ಹತ್ತಿದೆ ಎಂಬುದನ್ನು ಇಂತಹ ಮಾತುಗಳು ದೃಢಪಡಿಸುತ್ತವೆ.

ವ್ಯಕ್ತಿ ನೆಲೆಯ ಸಂಬಂಧಗಳು: ಇಟ್ಟಿಗುಡಿಯ ನಾಗರಾಜ, ಚನ್ನಬಸಪ್ಪ ಹೆಸರಿನ ಯುವಕರೂ ಕೊಟ್ರೇಶ್ ಕುರಿತು ಒಲವು ತೋರಿದರು. ಊರಿಗೆ ಅವರ ಕೊಡುಗೆ ಏನಾದರೂ ಇದೆಯೇ ಎಂದು ಕೆದಕಿದಾಗ, `ಅದೇನೂ ಇಲ್ಲ. ವರ್ಷದಿಂದ ಬರ‌್ತಿದಾರೆ. ಮುಖ ಪರಿಚಯ ಇದೆ. ಎದುರಿಗೆ ಸಿಕ್ಕರೆ ಮಾತಾಡಿಸ್ತಾರೆ' ಎಂಬ ಉತ್ತರ ಅವರಿಂದ ಬಂತು. ಗುರುತಿಸುವುದು, ಮಾತನಾಡಿಸುವುದು, ಮುಗುಳ್ನಗೆ ಬೀರುವಂಥ ವ್ಯಕ್ತಿ ನೆಲೆಯ ಸಂಬಂಧಗಳು ಎಷ್ಟು ಮುಖ್ಯವಾಗುತ್ತವೆ ಎಂಬುದಕ್ಕೆ ಇವರ ಉತ್ತರವೇ ನಿದರ್ಶನ.

ಗ್ರಾಮೀಣ ಪ್ರದೇಶದಲ್ಲಿ ಇಂತಹ ಯುವ ಸಮೂಹ ಹೊಸಬರ ಹೆಗಲಿಗೆ ಹೆಗಲುಕೊಟ್ಟಿದೆ. ಜಾತಿ ವಿಷಯದಲ್ಲಿ ಪುಳಕಗಳೂ ಇದೇ ಯುವ ಜನತೆಯಲ್ಲಿ ಹೆಚ್ಚಿಗೆ ಕಾಣಿಸುತ್ತಿವೆ. ಹೆಚ್ಚು ಓದು-ಬರಹ ಇಲ್ಲದ ರೈತಾಪಿ ಜನರಲ್ಲಿ ಪಕ್ಷನಿಷ್ಠೆ, ವ್ಯಕ್ತಿನಿಷ್ಠೆ ಉಳಿದಿದೆ. ಕಾಲೇಜು ಮೆಟ್ಟಿಲು ತುಳಿದು ಬಂದ ಯುವಕರು ಜಾತಿ, ಹಣದ ಪ್ರಭಾವಗಳಿಗೆ ಒಳಗಾಗಿದ್ದಾರೆ ಎಂಬುದಕ್ಕೆ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ.

ಕ್ಷೇತ್ರದ ಭೌಗೋಳಿಕ ಗಡಿಗಳ ಕಾರಣದಿಂದ ಹುಟ್ಟಿದ ಭೇದ ಒಂದು ಕಡೆ ಇದ್ದರೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಮತ್ತೊಂದು ಆಯಾಮ ಪಡೆದುಕೊಂಡಿವೆ. ಹಿಂದುಳಿದವರು ಮತ್ತು ಮೇಲುವರ್ಗದ ನಡುವಣ ಸ್ಪರ್ಧೆ ಎಂದು ಬಿಂಬಿಸುವ ಪ್ರಯತ್ನಗಳೂ ನಡೆದಿವೆ. ಮತ ಯಾಚಿಸುವ ಸಂದರ್ಭದಲ್ಲಿ  ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರೇ ಕೆಲವರು ಈ ಬಗೆಯ ಘೋಷಣೆ ಕೂಗಿದರು. ಪ್ರತಿ ಚುನಾವಣೆ ಬೇರೆ ಬೇರೆ ರೀತಿಯಲ್ಲಿ ಹೀಗೆ ಒಡಕಿನ ಬೀಜಗಳನ್ನು ಬಿತ್ತುತ್ತಲೇ ಇರುತ್ತದೆ.

ಇದರ ಮಧ್ಯೆ, `ಈ ಸಲ ಬೀಜ-ಗೊಬ್ಬರಕ್ಕೆ ಸಾಲ ಮಾಡಬೇಕಾದ ತೊಂದರೆ ಇಲ್ಲ' ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ನೀಲಗುಂದದ ಬಳಿ ಮೂರು-ನಾಲ್ಕು ಜನ ಸೇರಿದ್ದರು. ಅವರನ್ನು ಮಾತಿಗೆ ಎಳೆದರೆ ಈ ಮಾಹಿತಿ ಹೊರಬಿತ್ತು. ಕಳೆದ ಸಲ ಅಭ್ಯರ್ಥಿಯೊಬ್ಬರ ಕಡೆಯವರು, ಮತದಾರರ ಪಟ್ಟಿ ಮುಂದಿಟ್ಟುಕೊಂಡು ವೋಟಿಗೆ ರೂ  500   ನೀಡಿದ್ದರಂತೆ. ಗ್ರಾಮ ಪಂಚಾಯ್ತಿ ಸದಸ್ಯರ ಉಸ್ತುವಾರಿಯಲ್ಲಿ ಈ ಹಂಚಿಕೆ ನಡೆಯಿತು ಎಂದು ಅನಂತನಹಳ್ಳಿಯಲ್ಲಿ ಕೆಲವು ಯುವಕರು ಹೇಳಿದರು. ಈ ಬಾರಿ ಪ್ರಮುಖ ಪಕ್ಷಗಳ ಹುರಿಯಾಳುಗಳೆಲ್ಲರೂ ಗಟ್ಟಿ `ಕುಳ'ಗಳೇ. ಹಣಾಹಣಿ ತುರುಸಾಗುವುದು ಖಚಿತವಾಗಿದೆ. ಈ ಸೂಚನೆಗಳನ್ನು ಅರಿತು ರೈತರು ಗೊಬ್ಬರದ ಖರ್ಚು ಹುಟ್ಟಬಹುದು ಎಂದು ಲೆಕ್ಕ ಹಾಕುತ್ತಿದ್ದಾರೆ. ಗೊಬ್ಬರ ಏನೋ ಆದೀತು. ಮಳೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT