ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ನಾಡಿನಲ್ಲಿ ಸೌರ ದೀಪದ ಪ್ರಯೋಗ

Last Updated 18 ಜೂನ್ 2012, 6:20 IST
ಅಕ್ಷರ ಗಾತ್ರ

ಯಾದಗಿರಿ: ಬಿಸಿಲು ಪ್ರಖರವಾಗಿರುವ ಪ್ರದೇಶವಿದು. ನೈಸರ್ಗಿಕವಾಗಿ ಸಿಗುವ ಇಂಧನದ ಬಳಕೆಗೆ ಮುಂದಾಗಿರುವವರ ಸಂಖ್ಯೆ ಇಲ್ಲಿ ಕಡಿಮೆಯೇ. ಎಲ್ಲರೂ ವಿದ್ಯುತ್, ಅಡುಗೆ ಅನಿಲದ ಸಿಲಿಂಡರ್‌ಗಳನ್ನೇ ಅವಲಂಬಿಸಿ, ಜೀವನ ನಡೆಸುತ್ತಿದ್ದು, ಇಂತಹ ಸಂದರ್ಭದಲ್ಲಿ ಬಿಸಿಲಿನಿಂದ ಬೀದಿ ದೀಪಗಳನ್ನು ಉರಿಸುವ ಪ್ರಯೋಗಕ್ಕೆ ನಗರಸಭೆ ಮುಂದಾಗಿದೆ.

ನಗರದಾದ್ಯಂತ ಪ್ರತಿಯೊಂದು ವಾರ್ಡ್‌ನಲ್ಲಿ ಒಂದೊಂದು ಸೌರ ಬೀದಿ ದೀಪಗಳನ್ನು ಅಳವಡಿಸುವ ಯೋಜನೆಯನ್ನು ಆರಂಭಿಸಲಾಗಿದೆ. ಈಗಾಗಲೇ ಐದಾರು ವಾರ್ಡ್‌ಗಳಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯವೂ ಮುಗಿದಿದೆ. ಆರಂಭದಲ್ಲಿ ನಗರದ 28 ನೇ ವಾರ್ಡ್‌ನಲ್ಲಿ ಸೌರ ಬೀದಿ ದೀಪವನ್ನು ಅಳವಡಿಸಿದ್ದು, ವಿದ್ಯುತ್‌ನ ಬೀದಿ ದೀಪಕ್ಕೇನು ಕಮ್ಮಿ ಇಲ್ಲ ಎನ್ನುವಂತೆ ಹೊನಲು ಬೆಳಕು ಹರಿದಿದೆ. ಸ್ವತಃ ನಗರಸಭೆ ಅಧ್ಯಕ್ಷರು, ಆಯುಕ್ತರೂ ಈ ದೀಪವನ್ನು ನೋಡಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಸೌರ ಶಕ್ತಿಯನ್ನು ಬಳಕೆ ಮಾಡಿಕೊಂಡು ನಗರದಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಇದೇ ಮೊದಲ ಬಾರಿಗೆ ನಗರಸಭೆ ಜಾರಿಗೊಳಿಸಿದೆ. ನಗರದಲ್ಲಿ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗದಂತಹ ಪ್ರದೇಶದಲ್ಲಿ ಇಂತಹ ಸೌರ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಆ ಪ್ರದೇಶದ ಜನರಲ್ಲೂ ಸಂತಸ ಮೂಡಿದ್ದು, ನಗರಸಭೆಯ ವಿದ್ಯುತ್‌ನ ಉಳಿತಾಯವೂ ಆದಂತಾಗಿದೆ.

38 ಸಾವಿರ ವೆಚ್ಚ: ಪ್ರತಿಯೊಂದು ವಾರ್ಡ್‌ನಲ್ಲಿ ಇಂತಹ ಒಂದೊಂದು ಸೌರ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ನಗರದ 31 ವಾರ್ಡ್‌ಗಳಲ್ಲಿ ತಲಾ ಒಂದೊಂದು ಇಂತಹ ದೀಪಗಳ ಅಳವಡಿಕೆಗೆ ವೇದಿಕೆ ಸಿದ್ಧವಾಗಿದೆ. ಮೈಸೂರು ಮೂಲಕ ಕಂಪೆನಿಯೊಂದು ಈ ದೀಪಗಳನ್ನು ಅಳವಡಿಸುವ ಕಾಮಗಾರಿಯನ್ನು ಪಡೆದಿದೆ.

ಪ್ರತಿಯೊಂದು ಸೌರ ಬೀದಿ ದೀಪದ ಅಳವಡಿಕೆಗೆ ರೂ.38 ಸಾವಿರ ವೆಚ್ಚ ತಗುಲಲಿದೆ. ಇಂತಹ ದೀಪಗಳನ್ನು ಪ್ರತಿಯೊಂದು ವಾರ್ಡ್‌ನ ಬೀದಿ ದೀಪ ಇಲ್ಲದ ಪ್ರದೇಶಗಳಲ್ಲಿ ಅಳವಡಿಸುವ ಮೂಲಕ ಆ ಪ್ರದೇಶದಲ್ಲೂ ಬೆಳಕು ಹರಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಸದಸ್ಯ ಅಬ್ದುಲ್ ಕರೀಂ ತಿಳಿಸಿದ್ದಾರೆ.

ಬಡಾವಣೆಯಲ್ಲಿ ಜನರಿಂದ ಬೀದಿ ದೀಪಗಳಿಗಾಗಿ ಬೇಡಿಕೆ ಬರುತ್ತಲೇ ಇತ್ತು. ಆದರೆ ಇಕ್ಕಟ್ಟಾದ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕುವುದು ಹಾಗೂ ತಂತಿ ಎಳೆಯುವುದು ಕಷ್ಟದ ಕೆಲಸವಾಗಿತ್ತು. ಇಂತಹ ಪ್ರದೇಶಗಳಲ್ಲಿ ಸೌರ ದೀಪಗಳನ್ನು ಅಳವಡಿಸುವ ಮೂಲಕ ಅಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಹೇಳಿದ್ದಾರೆ.

ಒಂದೊಂದು ಸೌರ ಬೀದಿ ದೀಪದಲ್ಲಿ ಎರಡು ಬಲ್ಬ್‌ಗಳಿದ್ದು, ಸಾಕಷ್ಟು ಬೆಳಕು ನೀಡುತ್ತಿವೆ. ವಿದ್ಯುತ್‌ನ ಬೀದಿ ದೀಪಗಳಂತೆ ಪ್ರಖರವಾದ ಬೆಳಕನ್ನು ನೀಡುತ್ತವೆ. ಹಾಗಾಗಿ ಬಡಾವಣೆಗಳಲ್ಲಿನ ಕತ್ತಲೆಯ ಸಮಸ್ಯೆ ನಿವಾರಣೆ ಆದಂತಾಗಿದೆ ಎಂದು 28 ನೇ ವಾರ್ಡಿನ ನಿವಾಸಿ ಸೈಯ್ಯದ್ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಸೌರ ಶಕ್ತಿ ಬಳಕೆ ಸ್ವಾಗತಾರ್ಹ: ವಿದ್ಯುತ್‌ನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಂತೂ ನಾಲ್ಕೈದು ಗಂಟೆಗಳೂ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ಇನ್ನೂ ಕಷ್ಟದ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ನಗರಸಭೆಯು ಸೌರ ಶಕ್ತಿಯನ್ನು ಬಳಸಿಕೊಂಡು ಬೀದಿ ದೀಪಗಳನ್ನು ಅಳವಡಿಸಲು ಮುಂದಾಗಿರುವುದು ಸಂತಸದ ಸಂಗತಿ ಎನ್ನುತ್ತಾರೆ ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ.

ಈಗಾಗಲೇ ಅಭಿವೃದ್ಧಿ ಪಡಿಸಿದ ಹೈದರಾಬಾದ್ ರಸ್ತೆ, ಚಿತ್ತಾಪುರ ರಸ್ತೆ, ಸ್ಟೇಶನ್ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಅವೆಲ್ಲವೂ ವಿದ್ಯುತ್ ಚಾಲಿತವಾಗಿವೆ. ಇಲ್ಲಿಯೂ ಸೌರ ಶಕ್ತಿಯನ್ನು ಬಳಕೆ ಮಾಡಿಕೊಂಡಲ್ಲಿ ನಗರವು ಮಾದರಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳುತ್ತಾರೆ.

ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು, ಸ್ವತಃ ನಗರಸಭೆಯ ಸದಸ್ಯರೇ ಬಟ್ಟೆಯ ಚೀಲಗಳನ್ನು ತಯಾರಿಸಿ, ಉಚಿತವಾಗಿ ವಿತರಣೆ ಮಾಡುತ್ತಿದ್ದು, ಇದೀಗ ಸೌರ ಶಕ್ತಿ ಬಳಸಿ ಬೀದಿ ದೀಪಗಳನ್ನು ಅಳವಡಿಸುತ್ತಿರುವುದು ನಗರಸಭೆಯ ಮಾದರಿ ಕಾರ್ಯಕ್ಕೆ ಸಾಕ್ಷಿಯಾಗಿದೆ. ಇಂತಹ ಹಲವಾರು ಜನಪರ ಹಾಗೂ ಪರಿಸರ ಸ್ನೇಹಿ ಯೋಜನೆಗಳು ಜಾರಿಯಾಗಲಿ. ಅದಕ್ಕೆ ನಾಗರಿಕರ ಸಹಕಾರವೂ ದೊರೆಯಲಿದೆ ಎನ್ನುವುದು ಹಿರಿಯ ನಾಗರಿಕರ ಹಾಗೂ ಗ್ರಾಹಕರ ಹಿತರಕ್ಷಣಾ ಸಮಿತಿಯ ವಿಶ್ವನಾಥರಡ್ಡಿ ಕೊಯಿಲೂರ ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT