ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಾದರೇನು...ಮಳೆಯಾದರೇನು

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬಿಸಿಲೂರು ವಿಜಾಪುರದಲ್ಲಿ ಪರಿಸರದ ಮುನಿಸು ಈ ಬಾರಿಯೂ ಮುಂದುವರಿದಿದೆ. ಜಿಲ್ಲೆಯ ಆಲಮಟ್ಟಿಯಲ್ಲೆಗ 40 ಡಿಗ್ರಿ ಸೆಲ್ಸಿಯಸ್ ಬಿಸಿಲು. ಜಿಲ್ಲೆಯ ಜೀವನಾಡಿ ಕೃಷ್ಣೆ ಬತ್ತಿದೆ. ಹಿನ್ನೀರು ಸಂಪೂರ್ಣ ಕಡಿಮೆಯಾಗಿದೆ. ಆದರೂ ಅಪರೂಪದ ಹಕ್ಕಿಗಳ ಚಿಲಿಪಿಲಿ ಮಾತ್ರ ಇಲ್ಲಿ ನಿಂತಿಲ್ಲ!

ಐದಾರು ವರ್ಷಗಳಿಂದ ಆಲಮಟ್ಟಿ ಹಿನ್ನೀರಿನ ಸುತ್ತಮುತ್ತ ಸಾಕಷ್ಟು ಪಕ್ಷಿಗಳು ಕಂಡು ಬರುತ್ತಿವೆ. ಆಲಮಟ್ಟಿ ದ್ವೀಪದಂತಿರುವ ಹಳೇ ಆಲಮಟ್ಟಿ, ಬೇನಾಳ, ಗೋನಾಳ, ಬೆನ್ನೂರ, ಚಿಕ್ಕ ಸಂಗಮ ಸೇರಿದಂತೆ ಮೊದಲಾದೆಡೆ ಈ ಪಕ್ಷಿಗಳು ಕಂಡು ಬರುತ್ತಿವೆ.

ರಾಜಹಂಸ ಪಕ್ಷಿಗಳ ಹಿಂಡು
ಬಹು ಅಪರೂಪದ ರಾಜಹಂಸ ಪಕ್ಷಿಗಳು ಮೇ ತಿಂಗಳಲ್ಲಿಯೂ ಇಲ್ಲಿಯ ಪಾರ್ವತಿ ಕಟ್ಟಾ ಸೇತುವೆ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿವೆ. ಬಹು ಅಪರೂಪದ ರಾಜಹಂಸ (ಲೆಸ್ಸರ್ ಫ್ಲೇಮಿಂಗ್) ಪಕ್ಷಿಗಳ ಹಿಂಡು ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಇಂತಹ ಕಡುಬೇಸಿಗೆಯಲ್ಲೂ ಮತ್ತೆ ಕಾಣಿಸಿಕೊಂಡಿದ್ದು ವಿಶೇಷ. ಆಕರ್ಷಕ ಮೈಬಣ್ಣದಿಂದ ಕೂಡಿದ ಈ ರಾಜಹಂಸ ಪಕ್ಷಿಗಳನ್ನು ನೋಡಿದರೇ ಎಂತಹವರ ಹೃನ್ಮನ ತಣಿಯುತ್ತದೆ. ಅವುಗಳು ಹಾರಿದರೇ ಅದರ ನೋಟ ಬಹು ಸುಂದರ.

ರಾಜಹಂಸ (ಲೆಸ್ಸರ್ ಫ್ಲೆಮಿಂಗ್) ಕರ್ನಾಟಕದಲ್ಲಿ ಕಂಡು ಬರುವುದು ಬಲು ಅಪರೂಪ. ಇದು ಹೆಚ್ಚಾಗಿ ಗುಜರಾತ್‌ನಲ್ಲಿ ಕಂಡು ಬರುತ್ತದೆ. ನೋಡಲು ಎತ್ತರವಾಗಿದ್ದು, ಹಾರುವಾಗ ಇದರ ರೆಕ್ಕೆಗಳ ಗುಲಾಬಿ ಬಣ್ಣ ನಿಜಕ್ಕೂ ಆಕರ್ಷಕ.

ಆಲಮಟ್ಟಿಗೇಕೆ ಪಕ್ಷಿಗಳು..?
ಕೃಷ್ಣೆಯ ಹಿನ್ನೀರು ಕಡಿಮೆಗೊಂಡ ಹಿನ್ನೆಲೆಯಲ್ಲಿ ಚಿಕ್ಕ ಚಿಕ್ಕ ಮೀನುಗಳು, ಕಪ್ಪೆ ಚಿಪ್ಪುಗಳನ್ನು ತಿನ್ನಲು ಹಕ್ಕಿಗಳು ಇಲ್ಲಿ ಸೇರುತ್ತವೆ. ಹಸಿರಿನಿಂದ ಕಂಗೊಳಿಸುತ್ತಿರುವ ವಿವಿಧ ಮರಗಳು, ದ್ವೀಪದಂತೇ ಇರುವ ಈ ಪ್ರದೇಶ ಅಪರೂಪದ ಹಕ್ಕಿಗಳಿಗೆ ಪ್ರಶಸ್ತ ಸ್ಥಾನವಾಗಿದೆ. ಆದ್ದರಿಂದ ಪ್ರತಿವರ್ಷವೂ ಇಲ್ಲಿಗೆ ಆಗಮಿಸುವ ಪಕ್ಷಿಗಳ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಜಲಾಶಯದ ಹಿನ್ನೀರಿನಲ್ಲಿ ಅಪರೂಪದ 70ಕ್ಕೂ ಅಧಿಕ ಪಕ್ಷಿಗಳ ಅಧ್ಯಯನ ನಡೆಸಿರುವ ಅರಣ್ಯ ಸಂರಕ್ಷಣಾಧಿಕಾರಿ ಶ್ರಿಕಾಂತ ಖಣದಾಳಿ.

ಮುಂದೆ ನೋಡುತ್ತಾ ಹೊರಟಂತೆ ಉದ್ದನೆಯ ಕುತ್ತಿಗೆಯ, ನೋಡಲು ಶಾಂತ ಸ್ವಭಾವದ ಹಾಗೆ ಕಾಣುವ ಸುಂದರವಾಗಿರುವ ಗ್ರೇ ಹೆರಾನ್, ಗುಬ್ಬಚ್ಚಿ ಆಕಾರದ ಆಕರ್ಷಕ ಚಿಕ್ಕ ಪ್ರೆಟಿನ್‌ಕೊಲ್, ಆಹಾರಕ್ಕೆ ಹೊಂಚುಹಾಕಿ ಕುಳಿತುಕೊಳ್ಳುವ `ವುಡ್ ಸ್ಯಾಂಡ್ ಪೈಪರ್' ಪಕ್ಷಿಗಳ ನೋಟ ಅದ್ಭುತ.

ಗುಲಾಬಿ ಬಣ್ಣದ ಉದ್ದನೆಯ ತೆಳ್ಳನೆಯ ಕಾಲು, ಹಳದಿ ಬಣ್ಣದ ಉದ್ದನೆಯ ಚುಂಚು, ವಿವಿಧ ವರ್ಣದ ಮೈಬಣ್ಣ ಹೊಂದಿರುವ `ಪೇಂಟೆಡ್ ಸ್ಟಾರ್ಕ್ಸ್' ಎಂಬ ಹಕ್ಕಿಗಳ ಹಿಂಡನ್ನು ನೋಡಿದರೇ ಮೈಮನ ತುಂಬುತ್ತದೆ. `ಬ್ಲಾಕ್ ಹೆಡೆಡ್ ಇಬಿಸ್' ಎಂಬ ಪಕ್ಷಿಗಳು ಚಿಕ್ಕ ಗಾತ್ರದಾಗಿದ್ದು, ಅವು ಹಿಂಡಿನಲ್ಲಿ ಹಾರಾಡುವ ರೀತಿಯೂ ಅದ್ಭುತ. ಅದರ ತಲೆ, ಚುಂಚು, ಕಾಲುಗಳು ಸಂಪೂರ್ಣ ಕಪ್ಪು ವರ್ಣದ್ದಾಗಿದ್ದು, ಗರಿಗಳು ಮಾತ್ರ ಸಂಪೂರ್ಣ ಬಿಳಿ ಬಣ್ಣದ್ದಾಗಿತ್ತು.

ಇಲ್ಲಿ ಕಂಡು ಬಂದಿರುವ ಪ್ರಮುಖ ವಾಟರ್ ಬರ್ಡ್ಸ್‌ಗಳು:- ಲೆಸ್ಸರ್ ಫ್ಲೇಮಿಂಗ್, ಬ್ರಾಹ್ಮಿನಿ ಡಕ್ (ಚಕೋರ), ಬಣ್ಣದ ಕೊಕ್ಕರೆ, ವರಟೆ (ಸ್ಪಾಟ್ ಬಿಲ್ ಡಕ್), ರಾತ್ರಿ ಬಕ (ಬ್ಲಾಕ್ ಕ್ರೌನ್ಡ್ ನೈಟ್ ಹೆರಾನ್), ಹೊಳೆ ಗಟುಕ (ಇಂಡಿಯನ್ ರಿವರ್ ಟೆರ್ನ್), ಕಿರು ಬೆಳ್ಳಕ್ಕಿ (ಲಿಟಲ್ ಇಗ್ರೆಟ್), ಗಲ್, ಬಿಳಿ ಹುಬ್ಬಿನ ಬಾಲಾಡಿ (ವೈಟ್ ಬ್ರೌಡ್ ವಾಗ್‌ಟೇಲ್), ಬಿಳಿ ಕಂಠದ ಮಿಂಚುಳ್ಳಿ (ವೈಟ್ ಥ್ರೋಟೆಡ್ ಕಿಂಗ್ ಫಿಶರ್),ವೈಟ್ ಬ್ರೇಸ್ಟೇಟ್ ವಾಟರ್ ಹೆನ್ (ನೀರು ಕೋಳಿ) ಮೊದಲಾದ 40ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳು ಕಂಡು ಬಂದಿವೆ.

ಆಲಮಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸರೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಮರದ ಮೇಲೆ ವಾಸಿಸುವ (ಎರಬೋರಿಯಲ್ ಮತ್ತು ಟೆರೆಸ್ಟ್ರೀಯಲ್ ಬರ್ಡ್ಸ್) ಅನೇಕ ಜಾತಿಯ ಅಪರೂಪದ ಪಕ್ಷಿಗಳು ಇವೆ. ಅದರಲ್ಲಿ ಮುಖ್ಯವಾದವುಗಳು ಕಾಜಾಣ (ಬ್ಲಾಕ್ ಡ್ರೋಂಗೊ), ಹಾಲಕ್ಕಿ (ಪ್ಯಾರಡೈಸ್ ಫ್ಲೈ ಕ್ಯಾಚರ್), ಅತ್ಯಂತ ಅಪರೂಪದ ಸುಂದರ ಸ್ವರ್ಣ ಪಕ್ಷಿ (ಗೋಲ್ಡನ್ ಓರೈಲ್), ಟಿಕೆಲ್ಸ್ ಬ್ಲ್ಯೂ ಫ್ಲೈಕ್ಯಾಚರ್ (ನೀಲಿ ಹುಳು ಹಿಡುಕ), ಹದ್ದು, ಹಳದಿ ಮುಂಗತ್ತಿನ ಗುಬ್ಬಚ್ಚಿ, ಬಿಳಿ ಗರುಡ (ಬ್ರಾಹ್ಮಿನಿ ಕೈಟ್), ನವಿಲುಗಳು, ಬದನಿಕೆ ಹಕ್ಕಿ, ಕಳ್ಳಿ ಪೀರ (ಸ್ಮಾಲ್ ಗ್ರೀನ್ ಬೀ ಈಟರ್) ಸೇರಿದಂತೆ ಇನ್ನಿತರ ಪಕ್ಷಿಗಳು ಕಂಡು ಬಂದಿವೆ.

ವಿದ್ಯುತ್ ಮಾರ್ಗ ಅಪಾಯಕಾರಿ
ಇಲ್ಲಿನ ಆಲಮಟ್ಟಿ ಹಿನ್ನೀರಿನ ಪಾರ್ವತಿ ಕಟ್ಟಾ ಸೇತುವೆ ಬಳಿ ಕೂಡಗಿ ಶಾಖೋತ್ಪನ್ನ ಕೇಂದ್ರಕ್ಕೆ ನೀರು ಒಯ್ಯುವ ಪಂಪಸೆಟ್ ಸ್ಥಾಪಿಸಿ ಅದಕ್ಕಾಗಿ 11 ಕೆವಿ ವಿದ್ಯುತ್ ಮಾರ್ಗ ರಚಿಸಲು ಉದ್ದೇಶಿಸಲಾಗಿದ್ದು, ಇದರಿಂದ ಹಿನ್ನೀರು ವ್ಯಾಪ್ತಿಯಲ್ಲಿ ಕಂಡು ಬರುವ ಅಪರೂಪದ ಪಕ್ಷಿ ಸಂಕುಲ ತೊಂದರೆಗೀಡಾಗಲಿದೆ. ಇಂತಹ ಪ್ರಶಾಂತ ಸ್ಥಳದಿಂದ ಈ ವಿದ್ಯುತ್ ಮಾರ್ಗ ಹಾಗೂ ಪಂಪಸೆಟ್ ಅಳವಡಿಸಿದರೆ ಈ ಅಪರೂಪದ ಪಕ್ಷಿಗಳು ವಲಸೆ ಹೋಗುವ ಸಾಧ್ಯತೆ ಇದೆ ಎಂಬ ಆತಂಕ ಪರಿಸರವಾದಿಗಳದ್ದು.

ಈ ಮಾರ್ಗ ಹಾಗೂ ನೀರು ಒಯ್ಯುವ ಪೈಪಲೈನ್ ಮಾರ್ಗವನ್ನು ಬೇರೆಡೆ ಬದಲಾಯಿಸಿದರೆ ಸಮಸ್ಯೆ ಪರಿಹಾರ ಕಾಣಬಹುದು. ಕೃಷ್ಣಾ ಭಾಗ್ಯ ಜಲ ನಿಗಮ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಪಕ್ಷಿ ಸಂರಕ್ಷಣಾ ವಿಭಾಗದವರು ಇತ್ತ ಗಮನ ಹರಿಸಿ ಅಪರೂಪದ ಪಕ್ಷಿಗಳ ಮಾಹಿತಿ ಫಲಕ, ವೀಕ್ಷಿಸಲು ಅನುವಾಗುವಂತೆ ವೀಕ್ಷಣಾ ಗೋಪುರ ನಿರ್ಮಿಸಬೇಕಿದೆ. ಜನತೆಗೆ ಮಾಹಿತಿಯನ್ನು ನೀಡಬೇಕಾಗಿದೆ.

ಚಿತ್ರಗಳು: ಶ್ರೀಕಾಂತ ಖಣದಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT