ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಝಳ: ಎಳನೀರಿಗೆ ಬೇಡಿಕೆ ಹೆಚ್ಚಳ

Last Updated 13 ಫೆಬ್ರುವರಿ 2012, 8:30 IST
ಅಕ್ಷರ ಗಾತ್ರ

ಚಾಮರಾಜನಗರ: ಶಿವರಾತ್ರಿ ಹಬ್ಬದ ವೇಳೆಗೆ ಚಳಿ ಕಡಿಮೆಯಾಗುತ್ತದೆಂಬುದು ಜನರ ನಂಬಿಕೆ. ಆದರೆ, ಜಿಲ್ಲಾ ಕೇಂದ್ರದ ವ್ಯಾಪ್ತಿ ಈಗ ಬಿಸಿಲಿನ ಝಳ ಹೆಚ್ಚಿದೆ. ಪ್ರತಿನಿತ್ಯವೂ ಉಷ್ಣಾಂಶ ಹೆಚ್ಚುತ್ತಿರುವ ಪರಿಣಾಮ ನಾಗರಿಕರು ದೇಹ ತಂಪು ಮಾಡಿಕೊಳ್ಳಲು ಎಳನೀರು ಸೇರಿದಂತೆ ಕಲ್ಲಂಗಡಿ, ತಂಪುಪಾನೀಯಗಳತ್ತ ಮುಖ ಮಾಡಿದ್ದಾರೆ.

ನಗರದ ವ್ಯಾಪ್ತಿ ಎಳನೀರು ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮುಂಭಾಗ, ಡಿವೈಎಸ್‌ಪಿ ಕಚೇರಿಯ ಅಕ್ಕಪಕ್ಕ, ಸಂತೇಮರಹಳ್ಳಿ ವೃತ್ತ ಹಾಗೂ ಗುಂಡ್ಲುಪೇಟೆ ವೃತ್ತದಲ್ಲಿ ಎಳನೀರು ಮಾರಾಟ ಉಂಟು. ಕೆಲವು ವ್ಯಾಪಾರಿಗಳು ಒಂದೆಡೆ ಎಳನೀರು ಸಂಗ್ರಹಿಸಿ ಕೊಂಡು ಮಾರಾಟ ಮಾಡುತ್ತಾರೆ. ಮತ್ತೆ ಕೆಲವರು ಬೈಸಿಕಲ್‌ಗಳಲ್ಲಿ ಎಳನೀರಿನ  ಗೊನೆ ಕಟ್ಟಿಕೊಂಡು ಮಾರಾಟದಲ್ಲಿ ತೊಡಗಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ನಿತ್ಯವೂ ಸಾವಿರಾರು ಎಳನೀರು ಮಾರಾಟವಾಗುತ್ತಿದ್ದರೂ, ಬೆಲೆ ಮಾತ್ರ ಕಡಿಮೆಯಾಗಿಲ್ಲ. ಗಾತ್ರಕ್ಕೆ ಅನುಗುಣವಾಗಿ ಧಾರಣೆ ನಿಗದಿಪಡಿಸಲಾಗಿದೆ. ಕನಿಷ್ಠ ಮುಕ್ಕಾಲು ಲೀಟರ್ ಎಳನೀರಿಗೆ 12 ರೂ ಬೆಲೆ ಇದೆ. 1 ಲೀಟರ್‌ನಷ್ಟು ಎಳನೀರು ಕೂಡ ಸಿಗುತ್ತವೆ. ಇವುಗಳಿಗೆ 15 ರೂ ಬೆಲೆ ನಿಗದಿಪಡಿಸಲಾಗಿದೆ.

ಜಿಲ್ಲೆಯ ಚಂದಕವಾಡಿ, ಉಡಿಗಾಲ, ವೆಂಕಟಯ್ಯನಛತ್ರ, ಆಲೂರು ಭಾಗದಿಂದ ನಗರಕ್ಕೆ ಎಳನೀರು ಪೂರೈಕೆ ಯಾಗುತ್ತಿದೆ. ರೈತರ ತೋಟಗಳಿಗೆ ನೇರವಾಗಿ ಹೋಗಿ ವ್ಯಾಪಾರಿಗಳು ಖರೀದಿ ಮಾಡುತ್ತಾರೆ. ರೈತರಿಗೆ ಒಂದು ಎಳನೀರಿಗೆ 6.50 ರೂನಿಂದ 7 ರೂ ನೀಡಬೇಕಿದೆ.

ಜತೆಗೆ, ತೆಂಗಿನ ಮರದಿಂದ ಎಳನೀರು ಇಳಿಸುವ ಕಾರ್ಮಿಕರಿಗೂ ಪ್ರತ್ಯೇಕವಾಗಿ ಹಣ ನೀಡಬೇಕು. ತೋಟಗಳಿಂದ ನಗರಕ್ಕೆ ಸರಕು ಸಾಗಣೆ ಆಟೋಗಳ ಮೂಲಕ ತರಬೇಕಿದೆ. ಹೀಗಾಗಿ, ದುಬಾರಿ ಸಾಗಣೆ ವೆಚ್ಚ ಭರಿಸಬೇಕಿದೆ. ಅಲ್ಲದೇ, ನಮ್ಮ ಕೂಲಿಯನ್ನೂ ಸೇರಿಸಿಕೊಂಡರೆ ಸ್ವಲ್ಪ ಲಾಭ ಗಿಟ್ಟುತ್ತದೆ ಎಂಬುದು ವ್ಯಾಪಾರಿಗಳ ಹೇಳಿಕೆ.

ಬೆಂಗಳೂರು, ಬಳ್ಳಾರಿಯ ವ್ಯಾಪಾರಿಗಳು ಕೂಡ ಜಿಲ್ಲೆಗೆ ಬಂದು ಎಳನೀರು ಖರೀದಿಸುತ್ತಾರೆ. ರೈತರ ತೋಟಗಳಿಂದ ಎಳನೀರು ಸಂಗ್ರಹಿಸಿ ಲಾರಿಗಳ ಮೂಲಕ ತಮ್ಮೂರಿಗೆ ತೆಗೆದುಕೊಂಡು ಹೋಗುವುದು ಉಂಟು.

ಜತೆಗೆ, ಇಲ್ಲಿಂದ ನೆರೆಯ ತಮಿಳುನಾಡಿಗೂ ಎಳನೀರು ಪೂರೈಕೆಯಾಗುತ್ತದೆ. ಕಳೆದ ವರ್ಷವೂ ಎಳನೀರಿಗೆ 12 ರೂ ಧಾರಣೆ ಇತ್ತು. ಜಿಲ್ಲೆಯಿಂದ ವಿವಿಧೆಡೆಗೆ ಎಳನೀರು ಸರಬರಾಜಾಗುವ ಪರಿಣಾಮ ಬೇಸಿಗೆ ಆರಂಭವಾದರೆ ಪೂರೈಕೆ ಕಡಿಮೆಯಾಗಲಿದೆ. ಇದರಿಂದ ಬೆಲೆಯೂ ಹೆಚ್ಚಳವಾಗಲಿದೆ ಎಂಬುದು ಗ್ರಾಹಕರ ಆತಂಕ.

ಇಳುವರಿ ಕುಸಿತ: ಪ್ರಸ್ತುತ ಜಿಲ್ಲೆಯಲ್ಲಿ ಕಪ್ಪುತಲೆ ಹುಳುಬಾಧೆ ಮತ್ತು ನುಸಿಪೀಡೆಯಿಂದ ತೆಂಗಿನ ಇಳುವರಿಯೂ ಕುಸಿತವಾಗಿದೆ. ವೆಂಕಟಯ್ಯನಛತ್ರ, ಹರವೆ ಭಾಗಕ್ಕೆ ತೆರಳಿದರೆ ತೆಂಗಿನಮರಗಳು ಅಸ್ಥಿಪಂಜರದಂತೆ ಗೋಚರಿಸುತ್ತವೆ. ಇದರಿಂದ ನೊಂದ ಕೆಲವು ರೈತರು ತೆಂಗಿನಮರಗಳಿಗೆ ಕೊಡಲಿ ಪೆಟ್ಟು ನೀಡಿದ್ದಾರೆ.

ತೆಂಗಿನ ತೋಟಗಳು ಕಪ್ಪುತಲೆ ಹುಳುಬಾಧೆಗೆ ಹೆಚ್ಚಾಗಿ ತುತ್ತಾಗಿವೆ. ಇದರ ಪರಿಣಾಮ ಜಿಲ್ಲೆಯಲ್ಲಿ ಪ್ರತಿವರ್ಷವೂ ಎಳನೀರು, ತೆಂಗಿನಕಾಯಿಯ ಇಳುವರಿ ಕುಂಠಿತಗೊಳ್ಳುತ್ತಿದೆ. ರೈತರಿಗೆ ಸಕಾಲದಲ್ಲಿ ಸೂಕ್ತ ಮಾಹಿತಿ ನೀಡಿ ಹುಳುಬಾಧೆ ಹತೋಟಿಗೆ ಕ್ರಮಕೈಗೊಳ್ಳಲು ತೋಟಗಾರಿಕೆ ಇಲಾಖೆಯೂ ಮುಂದಾಗಿಲ್ಲ. ಜತೆಗೆ, ರಾಜ್ಯ ಸರ್ಕಾರ ಕೂಡ ತೆಂಗು ಬೆಳೆಗಾರರ ಹಿತಕಾಯಲು ಮುಂದಾಗಿಲ್ಲ ಎಂಬುದು ರೈತರ ಅಳಲು.

`ಕಪ್ಪುತಲೆ ಹುಳುಬಾಧೆಯಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ತೆಂಗಿನ ತೋಟ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಹುಳುಬಾಧೆ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಂಡಿದ್ದರೆ ಎಳನೀರಿನ ಇಳುವರಿಯೂ ಹೆಚ್ಚುತ್ತಿತ್ತು. ಇದರಿಂದ ಬೆಲೆಯೂ ಕಡಿಮೆಯಾಗಿ ಗ್ರಾಹಕರು ಕಷ್ಟ ಅನುಭವಿಸುವುದು ತಪ್ಪುತ್ತಿತ್ತು~ ಎನ್ನುತ್ತಾರೆ ರೈತ ಮಹದೇವಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT