ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು ಕಾಣದ ನಗರದ ಜನತೆ; ದೈನಂದಿನ ಕೆಲಸಕ್ಕೆ ಧಕ್ಕೆ

ಮಳೆ-ರಾಡಿಯ ನಡುವೆ ಸಂಕಷ್ಟದ ಸಂತೆ, ಮಾರುವುದೂ ಕಷ್ಟ, ಕೊಳ್ಳುವುದೂ ಕಷ್ಟ, ಮಾರುಕಟ್ಟೆ ತುಂಬೆಲ್ಲಾ ಕೆಸರು
Last Updated 25 ಜುಲೈ 2013, 6:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದ ಜನತೆ ಸೂರ್ಯನ ದರ್ಶನ ಮಾಡಿ ಒಂದು ವಾರವಾಗುತ್ತ ಬಂತು. ಆರು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ಸತತ ಮಳೆ ಸುರಿಯುತ್ತಿರುವುದರಿಂದಾಗಿ ಬಿಸಿಲು ಕಾಣದ ಕಾರಣ ಜನರ ನಿತ್ಯದ ಕೆಲಸಗಳಿಗೆ ತೊಂದರೆಯಾಗಿದೆ. ನಗರದಾದ್ಯಂತ ರಸ್ತೆಗಳಲ್ಲಿ ಕೆಸರು-ರಾಡಿ ತುಂಬಿದ್ದು ವಾಹನ ಸವಾರರು ಹರಸಾಹಸ ಮಾಡುತ್ತ ವಾಹನ ಓಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರದ ಸಂತೆಗಳಿಗೂ ಮಳೆಯ `ಬಿಸಿ' ತಟ್ಟಿದ್ದು ವ್ಯಾಪಾರಿಗಳು ಮತ್ತು ಕಾಯಿ ಪಲ್ಲೆ  ಕೊಳ್ಳುವವರು ರಾಡಿಯಲ್ಲಿ ಮೀಯಬೇಕಾಗಿ ಬಂದಿದೆ. ಬುಧವಾರ ನಡೆದ ಅಶೋಕ ನಗರ ಸಂತೆಯಲ್ಲಿ ರಾಡಿಯದ್ದೇ ಕಾರುಬಾರು. ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆದ ಸಂತೆಗೆ ದಿನವಿಡೀ ಮಳೆ ಕಾಡಿದ್ದರಿಂದ ಹೆಜ್ಜೆ ಹೆಜ್ಜೆಗೂ ರಾಡಿ ತುಂಬಿತ್ತು.

ಕೊಡೆ ಹಿಡಿದು ವ್ಯಾಪಾರ ನಡೆಸಿದವರು, ಟಾರ್ಪಲ್ ಅಡಿಯಲ್ಲಿ ತರಕಾರಿ ಮಾರಿದವರು, ಸೈಕಲ್‌ನಲ್ಲಿ ಸಂಬಾರ ಪದಾರ್ಥ ಮಾರಾಟ ಮಾಡಿದವರು ಎಲ್ಲರೂ ಮಳೆಯಲ್ಲಿ ನೆನೆಯಬೇಕಾಯಿತು. ಈ ಭಾಗದ ಸುಮಾರು ಹದಿನೈದು ಬಡಾವಣೆಗಳ ಜನರು ಇಲ್ಲಿ ಸಂತೆ ಮಾಡುತ್ತಾರೆ. ಬೆಂಗೇರಿಯಲ್ಲಿರುವಂತೆ ಸಿಮೆಂಟ್ ಹಾಸು ಸೌಲಭ್ಯ ಒದಗಿಸಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಬೇಡಿಕೆ. ಬುಧವಾರ ರಾಡಿಯಲ್ಲೇ ಓಡಾಡಿದವರು ಮತ್ತೆ ಈ ಬೇಡಿಕೆಯನ್ನು ಮುಂದಿಟ್ಟಿದ್ದು ಸಂಬಂಧಪಟ್ಟವರು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಯಿಪಲ್ಲೆ ತರಲು ಹಿಂದೆ ಜನತಾ ಬಜಾರ್‌ಗೆ ಹೋಗಬೇಕಾಗಿತ್ತು.ಬೇಡಿಕೆ ಮೇರೆಗೆ 2006ರಲ್ಲಿ ಸಂತೆಆರಂಭಿಸಲಾಯಿತು.  ಮೂಲಸೌಲಭ್ಯಗಳು  ಸಿಗಲಿವೆ ಎಂದು ಭರವಸೆ  ಕನಸು ಇನ್ನೂ ನನಸಾಗಲಿಲ್ಲ. ಬೇಸಿಗೆಯಲ್ಲಿ  ಹೇಗೋ ನಡೆಯುತ್ತದೆ. ಬೇಡಿಕೆ ಈಡೇರಿಸುವಂತೆ ಪ್ರತಿ ಮಳೆಗಾಲದಲ್ಲಿ ಜನರು ಮತ್ತು ವ್ಯಾಪಾರಿಗಳು ಮೊರೆ ಇಡುವುದು ಸಾಮಾನ್ಯವಾಗಿದೆ.

ಮಾಲು ಮಾರಲೇಬೇಕಲ್ಲ...
ಮಳೆಯೋ ರಾಡಿಯೋ ಸಂತೆಗೆ ಬಾರದಿದ್ದರೆ ನಮ್ಮ ಜೀವನ ನಡೆಯುವುದಾದರೂ ಹೇಗೆ? ಬೆಳಿಗ್ಗೆ ರಿಕ್ಷಾದಲ್ಲಿ ಮಾಲು ತುಂಬಿಕೊಂಡು ಬರುತ್ತೇವೆ. ಅದಕ್ಕೆ ಬಾಡಿಗೆ ಕೊಡಬೇಕು. ಇಲ್ಲಿ ಮಾರಾಟ ಮಾಡಿದ್ದಕ್ಕೆ ಜಾಗದ ಬಾಡಿಗೆ ಕೊಡಬೇಕು. ಕಾಯಿಪಲ್ಲೆ ಮಾರಾಟವಾಗದಿದ್ದರೆ ಹಾಳಾಗಿ ಹೋಗುತ್ತದೆ. ಅದರಿಂದಲೂ ನಷ್ಟವಾಗುತ್ತದೆ. ಆದ್ದರಿಂದ ಮಳೆ ಬಂದರೂ ರಾಡಿ ತುಂಬಿದರೂ ಅರ್ಧಕ್ಕೆ ಎದ್ದು ಹೋಗುವಂತಿಲ್ಲ. 
      -ಬೀಬಿ ಜಾನ್, ವ್ಯಾಪಾರಿ

ಸೌಲಭ್ಯಗಳು ಕೊಡಲೇಬೇಕು
ಸಾಕಷ್ಟು ಹೋರಾಟ ಮಾಡಿದ ನಂತರ ಸಂತೆ ಆರಂಭವಾಗಿದೆ. ಕಾಂಕ್ರಿಟ್ ಹಾಸು ಸೌಕರ್ಯ ಒದಗಿಸಿದರೆ ರಾಡಿಯಿಂದ ಮುಕ್ತಿ ಸಿಗಬಹುದು. ವಾಹನಗಳನ್ನು ಕಂಡಕಂಡಲ್ಲಿ ನಿಲ್ಲಿಸುವುದನ್ನು ತಪ್ಪಿಸಬೇಕಾದರೆ ಪಾರ್ಕಿಂಗ್ ಸೌಲಭ್ಯ ಒದಗಿಸಬೇಕು. ಸರಿಯಾಗಿ ಕುಳಿತುಕೊಂಡು ವ್ಯಾಪಾರ ಮಾಡಲು ವ್ಯಾಪಾರಿ ಗಳಿಗೂ ಯಾವುದೇ ತೊಂದರೆ ಇಲ್ಲದೆ ತರಕಾರಿ ಕೊಳ್ಳಲು ಗ್ರಾಹಕರಿಗೂ ಅನುಕೂಲವಾಗುವಂಥ ವಾತಾ ವರಣ ನಿರ್ಮಾಣವಾಗಬೇಕು.
ಅನುರಾಧಾ ಬೊಮ್ನಳ್ಳಿ, ಗ್ರಾಹಕಿ

ಕಾಂಕ್ರೀಟ್ ಹಾಸು ಬರಲಿ
ಅನೇಕ ಬಡಾವಣೆಗಳ ಜನರು ಇಲ್ಲಿಗೆ ಬರುತ್ತಾರೆ. ಬೆಳಿಗ್ಗೆಯಿಂದ ರಾತ್ರಿ 8-9 ಗಂಟೆಯ ವರೆಗೆ ನಡೆಯುವ ಜಾತ್ರೆಯಲ್ಲಿ ಸಾವಿರಾರು ರೂಪಾಯಿ ವ್ಯಾಪಾರವಾಗುತ್ತದೆ. ಇಂಥ ಜಾಗದಲ್ಲಿ ಮೂಲಸೌಲಭ್ಯಗಳು ಬೇಕೇಬೇಕು. ಕಾಂಕ್ರಿಟ್ ಹಾಸು ಸೌಲಭ್ಯ ಒದಗಿಸಿದರೆ ಸಂತೆಗೆ ಹೊಸ ಕಳೆ ಬರಲಿದೆ. ವ್ಯಾಪಾರ-ಖರೀದಿ ಸುಲಭವಾಗಲಿದೆ.
ಪ್ರಶಾಂತ, ಗ್ರಾಹಕ

ರಾಡಿ ತುಂಬಿದರೆ ವ್ಯಾಪಾರ ಇಲ್ಲ
ಕಾಯಿ-ಪಲ್ಲೆ ಮಾರಾಟ ಮಾಡಿ ಜೀವನ ನಡೆಸುವ ನಮ್ಮದು ಕಷ್ಟದ ಬದುಕು. ಸಂತೆ ನಡೆಯುವ ಜಾಗದಲ್ಲಿ ರಾಡಿ ಎದ್ದರೆ ಇನ್ನಷ್ಟು ಕಷ್ಟ. ರಾಡಿ ತುಂಬಿದರೆ ಗ್ರಾಹಕರು ಬರುವುದು ಕಡಿಮೆ. ಆದ್ದರಿಂದ ವ್ಯಾಪಾರದಲ್ಲಿ ನಷ್ಟವಾಗುತ್ತದೆ. ಜೀವನ ನಡೆಸಲು ಈ ವ್ಯಾಪಾರವೇ ಆಧಾರ.
ಗಫಾರ್ ಸಾಬ್, ವ್ಯಾಪಾರಿ

ತುಂಬಿದ ಕೆರೆಕಟ್ಟೆಗಳು
ಧಾರವಾಡ:
ಒಂದು ವಾರದಿಂದ ಸುರಿಯುತ್ತಿುವ ಮಳೆಯಿಂದಾಗಿ ವಿವಿಧ ಗ್ರಾಮದ ಕೆರೆಗಳು ತುಂಬಲಾರಂಭಿಸಿದ್ದು, ಹಳ್ಳ  ಭರ್ತಿಯಾಗಿ ತುಂಬಿಕೊಂಡು ನದಿಯನ್ನು ಸೇರುತ್ತಿವೆ.

ಮಳೆ ಬರೀ ನಗರ ಜೀವನವನ್ನಷ್ಟೇ ಅಲ್ಲದೇ ಹಳ್ಳಿಯ ಜನರ ಜೀವನವನ್ನು ಕಂಗೆಡಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್‌ಪಿಜಿ ಸಿಲಿಂಡರ್ ಇಲ್ಲದ ಹಳ್ಳಿಗರು ನೆಚ್ಚಿಕೊಂಡಿದ್ದ ಉರುವಲುಗಳು ತೊಯ್ದು ತೊಪ್ಪೆಯಾಗಿವೆ. ಒಲೆಯನ್ನು ಹಚ್ಚುವುದೇ ಕಷ್ಟವಾಗಿದೆ.

ನಿಗದಿಯಲ್ಲಿ ಯುವತಿಯೊಬ್ಬರು ಬೋರ್‌ವೆಲ್‌ನಿಂದ ಸಾಗಿಸುತ್ತಿದ್ದ ನೀರು ಪೈಪ್‌ಲೈನ್ ಬಳಿ ಸೋರಿಕೆಯಾಗುತ್ತಿದ್ದುದನ್ನೇ ತುಂಬುತ್ತಿದ್ದರು.

ತುಂಬಿದ ಕರೆಕಟ್ಟೆ: ಹೊಲ್ತಿಕೋಟಿ, ಮಾವಿನಕೊಪ್ಪ ಹಾಗೂ ನಿಗದಿ ಕೆರೆಗಳಲ್ಲಿ ವ್ಯಾಪಕವಾಗಿ ನೀರು ಸಂಗ್ರಹವಾಗಿದ್ದರೆ, ಡೋರಿ ಕೆರೆಯಲ್ಲಿ ನೀರಿನ ಪ್ರಮಾಣ ಅಷ್ಟೇನೂ ಹೆಚ್ಚಾಗಿಲ್ಲ.

ಮಳೆ ಎಂದಿನಂತೆ ಧಾರವಾಡದ ನಾಗರಿಕರ ಜನಜೀವನವನ್ನೂ ಅಸ್ತವ್ಯಸ್ತಗೊಳಿಸಿತು. ರಸ್ತೆಗಳಲ್ಲಿ ನಿಂತ ನೀರಲ್ಲೇ ವಾಹನಗಳು ಹಾಯ್ದು ಹೋಗುತ್ತಿರುವುದರಿಂದ ರಸ್ತೆಗಳು ಗುಂಡಿಗಳಾಗಿ ಬದಲಾಗಿದೆ.

ಪಿ.ಬಿ.ರಸ್ತೆ: ಅಲ್ಲಲ್ಲಿ ಗುಂಡಿ- ಸಂಚಾರ ದುಸ್ತರ
ಹುಬ್ಬಳ್ಳಿ:
ಹು-ಧಾ ಮಹಾನಗರವನ್ನು ಹಾದು ಹೋಗಿರುವ ಪಿ.ಬಿ.ರಸ್ತೆಯ ಚತುಷ್ಪಥ ಕಾಮಗಾರಿ ಒಂದೆಡೆ, ಇನ್ನೊಂದೆಡೆ ಹೊಂಡ ಬಿದ್ದ ರಸ್ತೆಗಳು. ಇವುಗಳಿಂದಾಗುವ  ನೇರ ಪರಿಣಾಮ ದಿನನಿತ್ಯ ಸಂಚರಿಸುವ ಸವಾರರಿಗೆ. ರಸ್ತೆಗುಂಡಿಗಳಿಂದಾಗಿ ಸವಾರರು ನರಕ ಸದೃಶ್ಯ ಅನುಭವ ಪಡೆಯುತ್ತಿದ್ದರೆ ಮುಗಿಯದ ರಸ್ತೆ ಕಾಮಗಾರಿಗಳು ಜನರಿಗೆ ಈ ಮಾರ್ಗ ಸಂಚಾರವನ್ನು ಇನ್ನಷ್ಟು ಕಷ್ಟಕ್ಕೊಳಪಡಿಸಿವೆ.

ಚತುಷ್ಪಥ ರಸ್ತೆ ಕಾಮಗಾರಿ 2010ರಿಂದಲೇ ಆರಂಭವಾಗಿದೆ. ಆದರೆ ಈಗಲೂ ಕೆಲಸ ಆಮೆಗತಿಯಲ್ಲಿ ನಡೆಯುತ್ತಲೇ ಇದೆ. ಅಷ್ಟಕ್ಕೂ ಕಳೆದ ಎರಡು ತಿಂಗಳಿನಿಂದ ಈ ಕಾಮಗಾರಿ ಸರಿಯಾಗಿ ನಡೆಯುತ್ತಲೂ ಇಲ್ಲ. ಹೀಗಾಗಿ ಬಹಳಷ್ಟು ಕಡೆಗಳಲ್ಲಿ ಹೊಂಡ ಬಿದ್ದ ಕಿರು ಮಾರ್ಗದಿಂದಾಗಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ರಾತ್ರಿಯಂತೂ ಈ ಮಾರ್ಗದಲ್ಲಿ ಸಂಚರಿಸುವುದು ಇನ್ನೂ ಕಷ್ಟಕರ, ಅಪಘಾತಕ್ಕೆ ಕಾರಣವಾಗುವ ಸವಾರಿ ಎನ್ನುವುದು ಬಹುತೇಕ ಸಾರ್ವಜನಿಕರ ಅಭಿಪ್ರಾಯ.

ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸಂಚರಿಸುವ ಮಾರ್ಗದಲ್ಲಿ ಎಲ್ಲೆಂದರಲ್ಲಿ ರಸ್ತೆ ಹೊಂಡಗಳದ್ದೇ ಕಾರುಬಾರು. ರಸ್ತೆ ಕಾಮಗಾರಿಗಳಿಂದಾಗಿ ಸನಾ ಕಾಲೇಜು ಬಳಿ ಮೊದಲ ಅಪಾಯಕಾರಿ ರಸ್ತೆ ತಿರುವು ಸಿಗುತ್ತದೆ. ಬಳಿಕ ಎಪಿಎಂಸಿ ಬಳಿ ಮತ್ತಷ್ಟು ಅಪಾಯಕರ ಹೊಂಡಗುಂಡಿಯ ರಸ್ತೆ ತಿರುವು ಸಿಗುತ್ತದೆ. ದಿನವೂ ಈ ಮಾರ್ಗದಲ್ಲಿ ಸಂಚರಿಸುವವರು ಹೇಗೂ ಈ  ಹೊಂಡಗುಂಡಿಯ ಮಾರ್ಗದಲ್ಲಿ ವಾಹನ ಚಲಾಯಿಸಿ ಪಾರಾಗುತ್ತಾರೆ.

ಆದರೆ ಮೊದಲ ಬಾರಿಗೇನಾದರೂ ಈ ಮಾರ್ಗದಲ್ಲಿ ವಾಹನ ಚಲಾಯಿಸುವವರು ಹೊಂಡಗುಂಡಿಯ ರಸ್ತೆಯಿಂದಾಗಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದು ಖಚಿತ. ಹಾಗೆಯೇ ನವನಗರ ಬಸ್‌ತಂಗುದಾಣದ ಬಳಿ ಇನ್ನಷ್ಟು ಪರಿಸ್ಥಿತಿ ಹದೆಗೆಟ್ಟಿದೆ. ಕೆಲವೆಡೆ ರಸ್ತೆಯ ಕಡಿದಾದ ಅಂಚು ಕೂಡ ಸವಾರರಿಗೆ ಅಪಘಾತಕ್ಕೆ ತಳ್ಳುತ್ತಿವೆ.

ಸನಾ ಕಾಲೇಜಿನಿಂದ ರಾಯಾಪುರದ ಇಸ್ಕಾನ್‌ವರೆಗೂ ಬಹಳಷ್ಟು ಕಡೆಗಳಲ್ಲಿ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಹಲವೆಡೆಗಳಲ್ಲಿ ಏಕಮುಖ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇತ್ತೀಚಿನ ಮಳೆಯಿಂದಾಗಿ ಇವೆಲ್ಲವೂ ಕಿತ್ತೆದ್ದು ಹೋಗಿದ್ದು ಸಂಚಾರಕ್ಕೆ ದುಸ್ತರವಾಗಿವೆ. ಹುಬ್ಬಳ್ಳಿ ಕಡೆಯಿಂದ ಸಾಗಿ ಸತ್ತೂರು ಬಳಿಯ ಎಸ್‌ಡಿಎಂ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಹೊಸ ಮತ್ತು ಹಳೆ ರಸ್ತೆಗಳ ನಡುವಣ ಅಂತರದಿಂದಾಗಿ  ಗಾಡಿ ಒಮ್ಮೇಲೆ ಧಡಕಿಯಾಗುವುದು ಖಚಿತ.ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಇಲ್ಲಿಯೂ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ.

ಗುತ್ತಿಗೆದಾರರೇ ಹೊಣೆ:  ಎಲ್ಲೆಲ್ಲಿ ಚತುಷ್ಪಥ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆಯೋ ಅಲ್ಲಿ ಕೂಡ ಮತ್ತೆ ಹೊಂಡ ಬಿದ್ದಿವೆ.

ಗುತ್ತಿಗೆದಾರರೇ ರಸ್ತೆ ಹೊಂಡಗಳನ್ನು ಮತ್ತೆ ತುಂಬಿಕೊಡಬೇಕು ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಅಧಿಕಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಹೊಂಡಗುಂಡಿ ರಸ್ತೆಯಲ್ಲಿ ಸವಾರರ ಸಂಚಾರ ಮಾತ್ರ ಕಷ್ಟಕರವಾಗಿಯೇ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT