ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಸಿವಂತಿ ಆದಿತ್ಯನ್ ಇನ್ನಿಲ್ಲ

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ, ಐಎಎನ್‌ಎಸ್): ಭಾರತೀಯ ಒಲಿಂಪಿಕ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಸಿವಂತಿ ಆದಿತ್ಯನ್ (76) ಅವರು ಶುಕ್ರವಾರ ರಾತ್ರಿ ಚೆನ್ನೈಯಲ್ಲಿ ನಿಧನರಾದರು.

ಭಾರತದಲ್ಲಿ ದಕ್ಷ ಕ್ರೀಡಾಡಳಿತಗಾರರಾಗಿ ನಾಲ್ಕು ದಶಕಗಳ ಕಾಲ ಸಾಕಷ್ಟು ಕೆಲಸ ಮಾಡಿರುವ ಇವರು ಭಾರತ ವಾಲಿಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. 1978ರ ಏಷ್ಯನ್ ಕ್ರೀಡಾಕೂಟದಲ್ಲಿ ಇವರು ಭಾರತ ತಂಡದ ಚೆಫ್ ಡಿ ಮಿಷನ್ ಆಗಿ ಪಾಲ್ಗೊಂಡಿದ್ದರು.

ತಮಿಳು ದಿನಪತ್ರಿಕೆ `ದಿನ ತಂತಿ', ಸಂಜೆ ಪತ್ರಿಕೆ `ಮಲೈ ಮಲರ್', ಸುದ್ದಿವಾಹಿನಿ `ತಂತಿ ಟೀವಿ'ಗಳ ಮಾಧ್ಯಮ ಗುಂಪಿನ ಮಾಲೀಕರಾಗಿದ್ದ ಇವರು `ಸನ್ ಪೇಪರ್ ಮಿಲ್' ಸೇರಿದಂತೆ ಕೆಲವು ಉದ್ದಿಮೆ ಸಂಸ್ಥೆಗಳನ್ನು ನಡೆಸುತ್ತಿದ್ದರು. ವಾಲಿಬಾಲ್ ಕ್ರೀಡೆಯ ಬಗ್ಗೆ ಅಪಾರ ಒಲವು ಇರಿಸಿಕೊಂಡಿದ್ದ ಇವರು ತಮಿಳುನಾಡಿನ ತಿರುಚೆಂಡೂರಿನಲ್ಲಿ ವಾಲಿಬಾಲ್‌ಗಾಗಿ ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದ್ದಾರೆ. ಭಾರತ ತಂಡಕ್ಕೆ ತರಬೇತಿ ನೀಡಲು ಇದೇ ಕ್ರೀಡಾಂಗಣವನ್ನು ಬಳಸಲಾಗುತ್ತದೆ.

ಹಿಂದೆ ತಮಿಳುನಾಡಿನ ವಿಧಾನ ಸಭೆಯ ಸ್ಪೀಕರ್ ಎಸ್.ಬಿ.ಆದಿತ್ಯನ್ ಅವರ ಕಿರಿಯ ಪುತ್ರರಾದ ಇವರು ರಾಜಕೀಯ ರಂಗದತ್ತ ಒಲವು ತೋರಲಿಲ್ಲ. ಆದರೆ ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಲ್ಲದೆ ತಮಿಳುನಾಡಿನಾದ್ಯಂತ ಕಬಡ್ಡಿ, ವಾಲಿಬಾಲ್ ಸೇರಿದಂತೆ ಹತ್ತು ಹಲವು ಕ್ರೀಡೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಹೀಗಾಗಿ ತಮಿಳುನಾಡಿನಲ್ಲಿ ಇವರ ಹೆಸರಿನಲ್ಲಿಯೇ ಹಲವು ಕ್ರೀಡಾ ಕ್ಲಬ್‌ಗಳಿವೆ. ಭಾರತದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಗಮನಿಸಿದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು 1995ರಲ್ಲಿ ಇವರಿಗೆ ಒಲಿಂಪಿಕ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಅಂತರರಾಷ್ಟ್ರೀಯ ವಾಲಿಬಾಲ್ ಫೆಡರೇಷನ್ 1989ರಲ್ಲಿ ಇವರಿಗೆ ಬಂಗಾರದ ಪದಕ ನೀಡಿತ್ತು. ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ.

ಕಳೆದ ಒಂದು ತಿಂಗಳಿಂದ ಸಿವಂತಿ ಅವರು ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ.ಕರುಣಾನಿಧಿ ಸೇರಿದಂತೆ ನೂರಾರು ಮಂದಿ ಸಿವಂತಿ ಅವರ ಅಂತಿಮ ದರ್ಶನ ಪಡೆದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಮನಮೋಹನ ಸಿಂಗ್, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಸಿವಂತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅಂತ್ಯಕ್ರಿಯೆ: ಶನಿವಾರ ಸಂಜೆ ಚೆನ್ನೈಯ ಪಯಸ್ ಗಾರ್ಡನ್‌ನಲ್ಲಿರುವ ನಿವಾಸದಿಂದ ಬೆಸೆಂಟ್ ನಗರದ ವಿದ್ಯುತ್ ಚಿತಾಗಾರದವರೆಗೆ ಭಾರಿ ಮೆರವಣಿಗೆಯಲ್ಲಿ ಅವರ ಮೃತದೇಹವನ್ನು ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಐಎನ್‌ಎಸ್ ಸಂತಾಪ
ನವದೆಹಲಿ (ಪಿಟಿಐ): `ಭಾರತದಲ್ಲಿ ಮುದ್ರಣ ಮಾಧ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿ.ಎಸ್.ಆದಿತ್ಯನ್ ಅವರ ಕೊಡುಗೆ ಅಪಾರ. ಅವರನ್ನು ಕಳೆದು ಕೊಂಡ ಮಾಧ್ಯಮ ಕ್ಷೇತ್ರ ಬಡವಾಯಿತು' ಎಂದು ದಿ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್)ಯ ಅಧ್ಯಕ್ಷ ಕೆ.ಎನ್.ತಿಲಕ್ ಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

`ಐಎನ್‌ಎಸ್ ಸಂಸ್ಥೆಗೆ ಹಿಂದೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಸಿವಂತಿ ಅವರು ಹಲವು ವರ್ಷಗಳ ಕಾಲ ಅದರ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಭಾರತದ ಕ್ರೀಡಾ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ' ಎಂದೂ ತಿಲಕ್ ಕುಮಾರ್ ಅವರು ಹೇಳಿದ್ದಾರೆ.

ಐಒಎ ಕಂಬನಿ: ಭಾರತೀಯ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿಜಯ ಕುಮಾರ್ ಮಲ್ಲೋತ್ರಾ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ `ಸಿವಂತಿ ಆದಿತ್ಯನ್ ಅವರ ಮಾರ್ಗದರ್ಶನ ಪಡೆಯುವುದರಿಂದ ಭಾರತ ಕ್ರೀಡಾರಂಗ ವಂಚಿತವಾಯಿತು. ಅವರು ಭಾರತ ಕ್ರೀಡಾಡಳಿತ ಕಂಡ ಅಪರೂಪದ ಮಹಾನ್ ವ್ಯಕ್ತಿ' ಎಂದು ಕಂಬನಿಗರೆದಿದ್ದಾರೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯ ರಣಧೀರ ಸಿಂಗ್ ಅವರು ಮಾತನಾಡುತ್ತಾ `ಭಾರತದ ಕ್ರೀಡಾರಂಗದಲ್ಲಿ ನಾನು ಕಂಡ ಅತ್ಯಂತ ಸಜ್ಜನ ನಡವಳಿಕೆಯ ಗೌರವಾನ್ವಿತ ವ್ಯಕ್ತಿ ಸಿವಂತಿ. ಈ ದೇಶದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಂತರರಾಷ್ಟ್ರೀಯ ಎತ್ತರದಲ್ಲಿ ಕಳಸದ ಸ್ವರೂಪದಲ್ಲಿ ಕಾಣಬೇಕೆಂದು ಅವರು ಕನಸು ಕಾಣುತ್ತಿದ್ದರು. ಅವರಿಲ್ಲದ ಕೊರತೆಯನ್ನು ತುಂಬಲು ಅಸಾಧ್ಯ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT